Home ಅಂಕಣ ಬೊಗಸೆಗೆ ದಕ್ಕಿದ್ದು-70 : ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯೇ? ಕೇಂದ್ರದ ಏಜೆಂಟರೆ?

ಬೊಗಸೆಗೆ ದಕ್ಕಿದ್ದು-70 : ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯೇ? ಕೇಂದ್ರದ ಏಜೆಂಟರೆ?

0

“..ರಾಜ್ಯಪಾಲರ ಕಚೇರಿಯು ರಾಜ್ಯಗಳಲ್ಲಿ  ಕೇಂದ್ರದ ಪ್ರಾಬಲ್ಯ ಸ್ಥಾಪನೆಗೆ ಒಂದು ಸಾಧನವಾಗಿ ಮುಂದುವರಿದರೆ, ಅದು ಕೇವಲ “ವಿವಾದಾತ್ಮಕ ಪಾತ್ರ”ವಾಗುವುದಿಲ್ಲ – ಅದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸಮಾಧಿಯಾಗಿರುತ್ತದೆ” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಸಂವಿಧಾನ ಸಭೆಯ ಪವಿತ್ರ ಸ್ಥಳದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜ್ಯಪಾಲರನ್ನು “ಸಾಂಕೇತಿಕ” ಮುಖ್ಯಸ್ಥ – ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಬೆಳ್ಳಿ ಸೇತುವೆ ಎಂದು ಕಲ್ಪಿಸಿಕೊಂಡರು. ಅಂತೆಯೇ ಸಂವಿಧಾನವು ವಿಧಿಸಿದೆ. ಅಲ್ಲಿಂದ ನೇರವಾಗಿ ನಾವು ಕಳೆದ ದಶಕಕ್ಕೆ ಬಂದಾಗ, ಆ ಸೇತುವೆ ಹೆಚ್ಚು ಹೆಚ್ಚಾಗಿ ಬ್ಯಾರಿಕೇಡ್‌ನಂತೆ ಕಾಣಲು ಪ್ರಾರಂಭಿಸಿದೆ. ಚೆನ್ನೈನ ರಾಜಭವನದಿಂದ ಕೋಲ್ಕತ್ತಾದವರೆಗೆ ಮತ್ತು ಬೆಂಗಳೂರಿನಿಂದ ಚಂಡೀಗಢದವರೆಗೆ, ರಾಜ್ಯಪಾಲರ ಕಚೇರಿಯು ಸಾಂವಿಧಾನಿಕ ಕಾವಲುಗಾರನ ಪಾತ್ರದಿಂದ- ಕೇಂದ್ರ ಪಕ್ಷಪಾತಿ ಮತ್ತು ವಿವಾದ ಪ್ರಚೋದಕನ ಪಾತ್ರಕ್ಕೆ ರೂಪಾಂತರಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಾವು ಈಗ ನೋಡುತ್ತಿರುವುದು ಕೇವಲ ವ್ಯಕ್ತಿತ್ವಗಳ ಘರ್ಷಣೆಯಲ್ಲ. ಅದು “ಕೇಂದ್ರದ ಏಜೆಂಟ್” ಅಂತಿಮವಾಗಿ ತನ್ನ ಮುಸುಕನ್ನು ಕಳಚಿ ನೇರವಾಗಿ ವಿರೋಧ ಪಕ್ಷಗಳು ಆಳುತ್ತಿರುವ ರಾಜ್ಯಗಳ ಜೊತೆ ನಡೆಸುತ್ತಿರುವ ನೇರ ಸಂಘರ್ಷ. ಇದು ಒಕ್ಕೂಟವಾದದ ಬುಡಮೇಲಿಗಾಗಿ ನಡೆಯುತ್ತಿರುವ ವ್ಯವಸ್ಥಿತ ಸಂಚಿನಂತೆ ಗೋಚರಿಸುತ್ತಿದೆ.

ಸಾಂವಿಧಾನಿಕ ಚಿತ್ರಕತೆ ಮೀರಿದ ರಾಜಕೀಯ ನಾಟಕ
ಸಂವಿಧಾನದ ವಿಧಿ 154ರ ಅಡಿಯಲ್ಲಿ, ರಾಜ್ಯದ ಸಾಂಕೇತಿಕ ಕಾರ್ಯನಿರ್ವಾಹಕ ಅಧಿಕಾರವನ್ನು ರಾಜ್ಯಪಾಲರಿಗೆ ವಹಿಸಲಾಗಿದೆ, ಆದರೆ, 163ನೇ ವಿಧಿಯು ರಾಜ್ಯಪಾಲರ ಪಾತ್ರವನ್ನು ಸ್ಪಷ್ಟಪಡಿಸುತ್ತದೆ: ಈ ಅಧಿಕಾರವನ್ನು ಮಂತ್ರಿ ಮಂಡಳಿಯ “ಸಹಾಯ ಮತ್ತು ಸಲಹೆ”ಯ ಮೇಲೆ ಚಲಾಯಿಸಬೇಕು.  ರಾಜ್ಯದಲ್ಲಿ ರಾಜ್ಯಪಾಲರು ರಾಷ್ಟ್ರಪತಿಯವರ ಕಣ್ಣುಗಳಾಗಿರಬೇಕು (ಕೇಂದ್ರ ಸರಕಾರ ಅಥವಾ ಪ್ರಧಾನಿಯ ಕಣ್ಣುಗಳಲ್ಲ!) ಮತ್ತು ಸರಕಾರದ ಯಂತ್ರವು ಸಂವಿಧಾನಕ್ಕೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಉದ್ದೇಶ ಸ್ಪಷ್ಟ: ರಾಜ್ಯಗಳು ಸಂವಿಧಾನ ಮೀರಿ ಹೋಗದಂತೆ ನೋಡಿಕೊಳ್ಳಬೇಕು; ತಾವೇ ಸಂವಿಧಾನ ಉಲ್ಲಂಘಿಸಿ, ರಾಜ್ಯಗಳಿಗೆ ಅಡಚಣೆ ಉಂಟುಮಾಡಿ, ಕೇಂದ್ರದ ತಮ್ಮ ಧಣಿಗಳನ್ನು ಕುಶಿಪಡಿಸುವುದು ಅಲ್ಲ.

ಹೀಗಿದ್ದರೂ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಪಾಲರ “ವಿವೇಚನೆ” ಎಂಬುದು “ಅಡಚಣೆ” ಎಂಬ ಪದಕ್ಕೆ ಬದಲಿ ಪದವಾಗಿಬಿಟ್ಟಿದೆ. ರಾಜ್ಯಪಾಲರು ನಿರ್ಣಾಯಕ ಮಸೂದೆಗಳನ್ನು ಅಡಿಗೆ ಹಾಕಿ ಕುಳಿತುಕೊಳ್ಳುವುದನ್ನು ಈಗ ನಾವು ವರ್ಷಗಳಿಂದ ನೋಡುತ್ತಿದ್ದೇವೆ – ಸುಪ್ರೀಂ ಕೋರ್ಟ್ ಇತ್ತೀಚೆಗೆ ತಮಿಳುನಾಡು ರಾಜ್ಯ vs ತಮಿಳುನಾಡು ರಾಜ್ಯಪಾಲರು (2025) ಪ್ರಕರಣದಲ್ಲಿ ಈ ಪರಿಪಾಠವನ್ನು ಟೀಕಿಸಿತು. ರಾಜ್ಯಪಾಲರು ಸಾಮಾನ್ಯ ಕಾನೂನು ರಚನೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಶಾಸನವೊಂದನ್ನು (ಶಾಸನ ಸಭೆಯಲ್ಲಿ ಅಂಗೀಕೃತವಾದ ಮಸೂದೆ) ಅನಿರ್ದಿಷ್ಟವಾಗಿ ತಡೆಯಲು ಸಂವಿಧಾನದ 200ನೇ ವಿಧಿಯನ್ನು “ಪಾಕೆಟ್ ವೀಟೋ”ದಂತೆ ಬಳಸಲಾಗುತ್ತಿದೆ ಅಥವಾ 356ನೇ ವಿಧಿಯನ್ನು ಬಳಸಿಕೊಂಡು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವ ಮೂಲಕ (2016ರಲ್ಲಿ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಕಂಡುಬಂದಂತೆ), ವಿರೋಧ ಪಕ್ಷದ ನೇತೃತ್ವದ ಜನಾದೇಶಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲ ಕಚೇರಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ.

ಹಾಗೆಂದು ಈ ಪರಿಪಾಠ ತುರ್ತುಪರಿಸ್ಥಿತಿಯ ಆರಂಭಕ್ಕೆ ಮಂಚಿನ ದಿನಗಳಲ್ಲಿಯೇ ಆರಂಭವಾಗಿತ್ತು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಸಿದ್ಧಾರ್ಥ ಶಂಕರ ರಾಯ್ ತನ್ನ ಅಹಂಕಾರದ ನಡವಳಿಕೆ ಮತ್ತು ಕೇಂದ್ರದ ಏಜೆಂಟರಾಗಿ ಕುಖ್ಯಾತಿ ಪಡೆದಿದ್ದರು. ಆದರೂ, ಅಂದಿನ ದಿನಗಳಲ್ಲಿ ನೇರಾನೇರವಾಗಿ ಸಂವಿಧಾನಕ್ಕೆ ಸವಾಲು ಎಸೆಯುವ ಕೆಲಸಗಳನ್ನು ಮಾಡಲಾಗುತ್ತಿರಲಿಲ್ಲ. ಕಳೆದ ದಶಕದಿಂದ ಅದು “ರಾಜ್ಯಪಾಲಾರೋಷ”ದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ ಕೇಂದ್ರದ ಏಜೆಂಟನಾಗಿ ರಾಜ್ಯದೊಂದಿಗೆ ನಿರಂತರವಾಗಿ ಬೀದಿಜಗಳಕ್ಕಿಳಿದು ಕುಖ್ಯಾತಿ ಪಡೆದು, ಉಡುಗೊರೆಯಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರೂ ಬಿಜೆಪಿ ಮತ್ತು ಕೇಂದ್ರ ಸರಕಾರದ ವಕೀಲರಂತೆ ವರ್ತಿಸುತ್ತಿದ್ದ ಜಗದೀಪ್ ಧನ್ಕರ್- ಸರಕಾರದ ವಿರುದ್ಧ ಮಾಡಿದ ಒಂದೇ ಒಂದು ಟೀಕೆಗಾಗಿ ಮನೆಗೆ ಹೋಗಿ, ಅಜ್ಞಾತವಾಸ ಅನುಭವಿಸಬೇಕಾದ ಘಟನಾ ಸರಣಿಯನ್ನು ನೆನಪಿಸಬೇಕು.

ಹಿಂದಿನ ಉಪಕಾರಕ್ಕೆ “ಉಡುಗೊರೆ”
ಈ ದಶಕದಲ್ಲಿ ರಾಜ್ಯಪಾಲರಾಗಿ ನೇಮಕರಾದವರ ವ್ಯಕ್ತಿ ಹಿನ್ನೆಲೆಗಳು ಬಹುಶಃ ಹೆಚ್ಚು ಆತಂಕಕಾರಿಯಾಗಿವೆ. ರಾಜಭವನವು ಹಿಂದಿನಂತೆ ಹಿರಿಯ ರಾಜಕಾರಣಿಗಳಿಗೆ ಮಾತ್ರವೇ ನಿವೃತ್ತಿ ಮನೆಯಾಗಿಲ್ಲ; ಇದು ತಾವು ಅಧಿಕಾರದಲ್ಲಿ ಇರುವಾಗ ಸರಕಾರಕ್ಕೆ, ಆಡಳಿತ ಪಕ್ಷಕ್ಕೆ ಸಲ್ಲಿಸಿದ “ಸೇವೆ”ಗಳಿಗೆ, ಮಾಡಿದ ಉಪಕಾರಗಳಿಗೆ ಸರಕಾರ ಉಡುಗೊರೆಯಾಗಿ ನೀಡುತ್ತಿರುವ ನಿವೃತ್ತರ “ಪ್ರತಿಫಲ ಕೇಂದ್ರ”ವಾಗಿದೆ.

ನ್ಯಾಯಮೂರ್ತಿ ಪಿ. ಸದಾಶಿವಂ (ಕೇರಳ) ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ (ಆಂಧ್ರಪ್ರದೇಶ) ಅವರಂತಹ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇಮಕವು ನ್ಯಾಯಾಂಗಕ್ಕೆ ಒಂದು ಭಯಾನಕ ಸಂದೇಶವನ್ನು ರವಾನಿಸುತ್ತದೆ. ಅಯೋಧ್ಯೆ ಮತ್ತು ರಫೆಲ್ ಹಗರಣದಂತ ಹಲವಾರು ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪುಗಳ ನಂತರ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಯಿತು. ಅವರೂ ಯಾವುದೇ ಸಂಕೋಚಗಳಿಲ್ಲದೆ ಅದನ್ನು ಒಪ್ಪಿಕೊಂಡರು. ರಾಜಕೀಯ ಚೌಕಾಸಿಯ ಬಲಿಪೀಠದಲ್ಲಿ ನೈತಿಕತೆಯನ್ನು ಬಲಿಕೊಟ್ಟಾಗ, ನಮ್ಮ ಪ್ರಜಾಪ್ರಭುತ್ವದ ಆತ್ಮವಾದ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಾಜಿ ಮಾಡಿಕೊಂಡಂತಾಗುತ್ತದೆ. ನ್ಯಾಯಾಧೀಶರು ರಾಜ್ಯಪಾಲರ ನಿವಾಸವನ್ನು “ಪಿಂಚಣಿ ಯೋಜನೆ”ಯಾಗಿ ಎದುರು ನೋಡಬಹುದಾದರೆ, ಸಾಮಾನ್ಯ ನಾಗರಿಕರು ತಮ್ಮ ರಾಜ್ಯಪಾಲರ ನಿಷ್ಪಕ್ಷಪಾತತೆಯನ್ನು ನಿಜವಾಗಿಯೂ ನಂಬಬಹುದೇ?

ಪಕ್ಷಪಾತದ ನಡವಳಿಕೆಯ ಮೂರು ಪ್ರಕರಣಗಳು
ಸಾಂವಿಧಾನಿಕ ಸಿದ್ಧಾಂತ ಮತ್ತು ರಾಜಭವನದ ವಾಸ್ತವತೆಯ ನಡುವಿನ ಅಂತರವನ್ನು ರಾಜ್ಯಪಾಲರು ರಾಜ್ಯಸರಕಾರಗಳ ಒಡೆಯರಂತೆ, ಕೇಂದ್ರದ ಏಜೆಂಟರಂತೆ ಕಾರ್ಯನಿರ್ವಹಿಸಿದಂತೆ ಕಂಡುಬಂದ ಮೂರು ಪ್ರಕರಣಗಳನ್ನು ಉದಾಹರಣೆಗಾಗಿ ನೋಡಬಹುದು.

1. ಕರ್ನಾಟಕ ಬಿಕ್ಕಟ್ಟು: ರಾಜ್ಯಪಾಲ ಗೆಹ್ಲೋಟ್ vs. ರಾಜ್ಯ ಸರಕಾರ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಸಿದ್ದರಾಮಯ್ಯ ಸರಕಾರವನ್ನು ಒಳಗೊಂಡ ಇತ್ತೀಚಿನ ಘರ್ಷಣೆಯು ರಾಜ್ಯಪಾಲರ ಹಸ್ತಕ್ಷೇಪದ ಆಧುನಿಕ ಪಠ್ಯಪುಸ್ತಕದಲ್ಲಿ  ಪಾಠವಾಗಿ ಸೇರಬಲ್ಲ ಅರ್ಹತೆ ಹೊಂದಿದೆ.  ​

ಪ್ರಾಸಿಕ್ಯೂಷನ್‌ಗೆ ಅನುಮತಿ: ಪ್ರಮಾಣಿತ ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಮೀರಿದ ಕ್ರಮದಲ್ಲಿ, ರಾಜ್ಯಪಾಲ ಗೆಹ್ಲೋಟ್ ಅವರು ಖಾಸಗಿ ದೂರುಗಳ ಆಧಾರದ ಮೇಲೆ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದರು. ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ನೆಪದಲ್ಲಿ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ “ಆತುರದಿಂದ” ಕೈಗೊಳ್ಳಲಾದ “ವಿವೇಚನಾ ಕ್ರಮ”ವಾಗಿತ್ತು. ನಂತರ ನ್ಯಾಯಾಲಯವೇ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಕೈಬಿಟ್ಟದ್ದೇ ಇದಕ್ಕೆ ಸಾಕ್ಷಿ.

​ಶಾಸಕಾಂಗ ಅಡೆತಡೆಗಳು: ಇತ್ತೀಚೆಗೆ, 2026ರ ಆರಂಭದಲ್ಲಿ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ ರಾಜ್ಯಪಾಲರ ನಿರ್ಧಾರವನ್ನು ರಾಜ್ಯಮಟ್ಟದ ಸಾಮಾಜಿಕ ಸುಧಾರಣೆಗಳನ್ನು ತಡೆಯುವ ತಂತ್ರವೆಂದು ಪರಿಗಣಿಸಲಾಗಿದೆ. ಕೇಂದ್ರವನ್ನು ಟೀಕಿಸುವ ಭಾಗಗಳನ್ನು ಓದಬೇಕಾಗುತ್ತದೆ ಎಂದು ರಾಜ್ಯ ಸಂಪುಟ ಅನುಮೋದಿಸಿದ ಭಾಷಣವನ್ನು ನಿಯಮದಂತೆ ವಿಧಾನ ಮಂಡಲದಲ್ಲಿ ಓದರೆ, ಎರಡು ಸಾಲು ಓದಿ ಅವಸರದಲ್ಲಿ ರಾಷ್ಟ್ರಗೀತೆಗೂ ಕಾಯದೇ ಹೊರನಡೆಯುವ ಮೂಲಕ- “ರಾಜ್ಯಪಾಲರು ರಾಜ್ಯ ಸರ್ಕಾರದ ಧ್ವನಿ”ಯೇ ಹೊರತು, ರಾಜ್ಯದ ಭಾಷಣಕ್ಕೆ, ಕಾಯಿದೆಗಳಿಗೆ ಕತ್ತರಿ ಹಾಕುವ ಕೇಂದ್ರದ  ಸೆನ್ಸಾರ್ ಮಂಡಳಿ ಅಲ್ಲ ಎಂಬ ಮೂಲ ತತ್ವವನ್ನೇ ಪ್ರಶ್ನಿಸಿದರು.

2. ಮಹಾರಾಷ್ಟ್ರದ ಮಧ್ಯರಾತ್ರಿ ದಂಗೆ (2019)
​ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಕ್ರಮಗಳು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಅಧ್ಯಾಯಗಳಲ್ಲಿ ಒಂದಾಗಿ ಉಳಿದಿವೆ. ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಬಂದ ನಂತರ, ರಾಜ್ಯಪಾಲರು ಬೆಳಿಗ್ಗೆ 5:47ಕ್ಕೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆದುಹಾಕಲು ಶಿಫಾರಸು ಮಾಡಿ, ಸೂರ್ಯ ಸಂಪೂರ್ಣವಾಗಿ ಉದಯಿಸುವ ಮೊದಲೇ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸುವ ನಾಚಿಕೆಗೇಡಿನ ಕ್ರಮ ಅನುಸರಿಸಿದರು. ಈ “ಮಾನಗೇಡಿ” ಪ್ರಮಾಣ ವಚನವನ್ನು ಅಂತಿಮವಾಗಿ ಸುಪ್ರೀಂ ಕೋರ್ಟ್ ತಡೆಹಿಡಿದು, ಬಹುಮತ ಪರೀಕ್ಷೆಗೆ ಆದೇಶಿಸಿತು. ರಾಜಭವನವನ್ನು “ಕತ್ತಲೆಯ ಹೊದಿಕೆಯಡಿಯಲ್ಲಿ ರಾಜಕೀಯ ಎಂಜಿನಿಯರಿಂಗ್” ನಡೆಸಲು ಬಳಸಬಾರದು ಎಂದು ಕೋರ್ಟ್ ತಾಕೀತು ಮಾಡಿತು.

​3. ಅರುಣಾಚಲ ಪ್ರದೇಶ ಪುನಃಸ್ಥಾಪನೆ (2016)
ಅರುಣಾಚಲ ಪ್ರದೇಶದ ನಬಮ್ ರೆಬಿಯಾ ವಿರುದ್ಧ ಉಪ ಸ್ಪೀಕರ್ ಪ್ರಕರಣದಲ್ಲಿ, ಸ್ಪೀಕರ್ ಮತ್ತು ಸರಕಾರವನ್ನು ಒಂದೇ ಏಟಿಗೆ ಕಿತ್ತುಹಾಕಲು ಅನುಕೂಲವಾಗುವಂತೆ ವಿಧಾನಸಭೆಯ ಅಧಿವೇಶನವನ್ನು ಏಕಪಕ್ಷೀಯವಾಗಿ ಮುಂದಕ್ಕೆ ತಂದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆ ಸಂದರ್ಭದಲ್ಲಿ ನೀಡಲಾದ ಮೈಲಿಗಲ್ಲು ತೀರ್ಪು ಒಂದು ತೀಕ್ಷ್ಣವಾದ ಛೀಮಾರಿಯಾಗಿತ್ತು. “ಸಚಿವ ಸಂಪುಟದ “ಸಹಾಯ ಮತ್ತು ಸಲಹೆ” ಇಲ್ಲದೆ ರಾಜ್ಯಪಾಲರು ಸದನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿಲ್ಲ” ಎಂದು ಅದು ಹೇಳಿತ್ತು.  ಸಮಾನಾಂತರ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುವ ರಾಜ್ಯಪಾಲರ ವಿರುದ್ಧ ಈ ಪ್ರಕರಣವು ಈಗಲೂ ಒಂದು ನಿರ್ಣಾಯಕ ಕಾನೂನು ರಕ್ಷಣೆಯಾಗಿ ಉಳಿದಿದೆ.

ಇದರ ಜೊತೆಗೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಂತ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಈಗಿನ ರಾಜ್ಯಪಾಲರ ಉದ್ದೇಶಪೂರ್ವಕವಾಗಿ ಕಾಣುವ ವಿವಾದಾಸ್ಪದ ನಡವಳಿಕೆಗಳನ್ನು ನೀವು ನಿರಂತರವಾಗಿ ನೋಡಬಹುದು.

ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪೂರ್ವನಿದರ್ಶನ
​ಗೆಹ್ಲೋಟ್ ಅಥವಾ ಕೊಶ್ಯಾರಿಯಂತಹ ರಾಜ್ಯಪಾಲರು ರಾಜ್ಯದ ನೀತಿ ಅಥವಾ ರಾಜಕೀಯ ಉಳಿವಿನ ವಿಷಯಗಳಲ್ಲಿ ಕ್ಯಾಬಿನೆಟ್‌ನ ಸಲಹೆಯನ್ನು ಲೆಕ್ಕಿಸದೆ ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ, ಅವರು ರಾಜ್ಯಪಾಲರ “ವಿಧ್ಯುಕ್ತ ಕಚೇರಿ”ಯನ್ನು “ರಾಜಕೀಯ ಕಚೇರಿ”ಯಾಗಿ ದುರುಪಯೋಗಪಡಿಸಿಕೊಂಡಂತಾಗುತ್ತದೆ

​ಯಾವ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಅನುಮತಿ ನೀಡಬೇಕು (ಸಾಮಾನ್ಯವಾಗಿ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು) ಅಥವಾ ರಾಜ್ಯದಲ್ಲಿ ಯಾವ ಕಾನೂನುಗಳನ್ನು ಜಾರಿಗೆ ತರಲು ಅನುಮತಿ ನೀಡಬೇಕು ಎಂಬುದನ್ನು ನಿರ್ಧರಿಸಲು ಕೇಂದ್ರ ಸರಕಾರವು “ಗೇಟ್ ಕೀಪರ್” ಆಗಿ ರಾಜ್ಯಪಾಲರ ಕಚೇರಿಯನ್ನು ಬಳಸಿದರೆ, ಅದು ರಾಜ್ಯದ ಸ್ವಾಯತ್ತತೆಯ ಕತ್ತು ಹಿಸುಕಿ, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಏಕಪಕ್ಷೀಯ ಕೇಂದ್ರೀಕರಣವನ್ನು  ಸೃಷ್ಟಿಸುತ್ತದೆ. ನಾವು ಕೇಳಲೇಬೇಕು: ಇಂದು ರಾಜಭವನವು ಸಂವಿಧಾನದ ರಕ್ಷಣೆಯ ತಾಣವೇ? ಅಥವಾ ಆಡಳಿತ ಪಕ್ಷದ ರಾಷ್ಟ್ರೀಯ ಹಿತಾಸಕ್ತಿಗಳಿಗಳನ್ನು ಕಾಯುವ ಹೊರಠಾಣೆಯೇ?

ಸಹಕಾರಿ ಒಕ್ಕೂಟದ ಸಾವು?
​ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದಾಗ- “ರಾಜ್ಯಪಾಲರು ಸ್ಥಳೀಯ ರಾಜಕೀಯದಲ್ಲಿ ಭಾಗಿಯಾಗದ ‘ಪ್ರತ್ಯೇಕ ವ್ಯಕ್ತಿ’ ಆಗಿರಬೇಕು” ಎಂಬ ಸರ್ಕಾರಿಯಾ ಆಯೋಗದ ಶಿಫಾರಸನ್ನು ಉಲ್ಲಂಘಿಸಿದಂತಾಗುತ್ತದೆ. ಈ ಪಕ್ಷಪಾತದ ನಡವಳಿಕೆಯು “ಕೇಂದ್ರ-ರಾಜ್ಯ ಸಂಘರ್ಷ”ದ ಶಾಶ್ವತ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಲ್ಲಿ  ಜನಾಡಳಿತವು ಮೊದಲ ಬಲಿಪಶುವಾಗುತ್ತದೆ.

​ನಾವು ಒಕ್ಕೂಟದ ವೇಷದಲ್ಲಿ “ಕೇಂದ್ರೀಕೃತ ದೇಶ”ವಾಗುವತ್ತ ಸಾಗುತ್ತಿದ್ದೇವೆಯೇ? ರಾಜ್ಯಪಾಲರು ಸಮಾನಾಂತರ ಅಧಿಕಾರ ಕೇಂದ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ, ರಾಜ್ಯ ವಿಧಾನಸಭೆಯ ಮೂಲಕ ವ್ಯಕ್ತಪಡಿಸಲಾಗುವ “ಜನರ ಆಶಯ”, “ಜನಾದೇಶ” ಮತ್ತು ಪ್ರಜಾಪ್ರಭುತ್ವದಲ್ಲಿ ಉಳಿಯುವುದಾದರೂ ಏನು?

ಆತಂಕಕಾರಿ ಪ್ರಶ್ನೆಗಳು
​ಮುಂದಿನ ದಶಕದತ್ತ ಸಾಗುವಾಗ ನಾವು ಈ ಪ್ರಶ್ನೆಗಳನ್ನು ಕೇಳಲೇಬೇಕು:

​ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳು ರಾಜಭವನವನ್ನು ಆಕ್ರಮಿಸಿಕೊಳ್ಳುವ ಮೊದಲು ಅವರಿಗೆ ಕನಿಷ್ಟ ಐದು ವರ್ಷಗಳ “ಕೂಲಿಂಗ್-ಆಫ್” ಅವಧಿ ಕಡ್ಡಾಯವಾಗಬೇಕೇ?

​ಮಸೂದೆಗಳಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿ ಒಪ್ಪಿಗೆ ನೀಡಲು ಕಟ್ಟುನಿಟ್ಟಾದ ಕಾಲಮಿತಿಯನ್ನು ವಿಧಿಸುವಂತೆ ಸಂವಿಧಾನದ 200ನೇ ವಿಧಿಯನ್ನು ತಿದ್ದುಪಡಿ ಮಾಡುವ ಸಮಯ ಬಂದಿದೆಯೇ? (ಈ ವಿಧಿಯು ಕಾಲಮಿತಿ ವಿಧಿಸಿಲ್ಲ. ಆದರೆ, ಇದರ ಅರ್ಥ ಅವರು ಸಹಿ ಹಾಕದೇ ಅನಿರ್ದಿಷ್ಟಾವಧಿ ಮಸೂದೆಗಳನ್ನು ಇಟ್ಟುಕೊಳ್ಳಬಹುದು ಎಂದು ಅರ್ಥವಲ್ಲ ಎಂದು ತಮಿಳುನಾಡು ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.)

​ರಾಜ್ಯಪಾಲರ ಪಾತ್ರಗಳ ಬಗ್ಗೆಯೇ ನೇಮಿಸಲಾಗಿದ್ದ ಸುಪ್ರೀಂ ಕೋರ್ಟಿನ ನಿವೃತ್ತ  ನ್ಯಾಯಾಧೀಶ ಎಂ.ಎಂ. ಪುಂಚಿ ಆಯೋಗವು 2010ರ ತನ್ನ ವರದಿಯಲ್ಲಿ 272 ಶಿಫಾರಸುಗಳನ್ನು ಮಾಡಿತ್ತು. ಅವುಗಳಲ್ಲಿ ಒಂದಾದ ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಮುಖ್ಯಮಂತ್ರಿಯ ಔಪಚಾರಿಕ ಒಪ್ಪಿಗೆಯ ಅಗತ್ಯ ಎಂಬ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆಯೇ? ಈ ಕುರಿತು ಗಂಭೀರ ಚಿಂತನೆ ನಡೆಯಬೇಕು.

​ರಾಜ್ಯಪಾಲರ ಕಚೇರಿಯು ರಾಜ್ಯಗಳಲ್ಲಿ  ಕೇಂದ್ರದ ಪ್ರಾಬಲ್ಯ ಸ್ಥಾಪನೆಗೆ ಒಂದು ಸಾಧನವಾಗಿ ಮುಂದುವರಿದರೆ, ಅದು ಕೇವಲ “ವಿವಾದಾತ್ಮಕ ಪಾತ್ರ”ವಾಗುವುದಿಲ್ಲ – ಅದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸಮಾಧಿಯಾಗಿರುತ್ತದೆ.

You cannot copy content of this page

Exit mobile version