Friday, January 9, 2026

ಸತ್ಯ | ನ್ಯಾಯ |ಧರ್ಮ

ಮಲಯಾಳಿ ಭಾಷಾ ಮಸೂದೆ ಕಾಸರಗೋಡು ಕನ್ನಡಿಗರಿಗೆ ಮಾರಕವೇ? ಲಾಭವೇ? ಸಿದ್ದರಾಮಯ್ಯ ರಾಜಕೀಯ ಏನು?

“ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ? ‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5, 6, 7, 8 ರಲ್ಲಿ ಏನು ಹೇಳುತ್ತದೆ? ಸಿದ್ದರಾಮಯ್ಯ ರಾಜಕೀಯ ಏನು?” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ, ತಪ್ಪದೇ ಓದಿ

ಕೇರಳ ಸರ್ಕಾರದ ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಕಾಸರಗೋಡು ಕನ್ನಡಿಗರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಸಿದ್ದಾರೆ. ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯನವರ ಈ ನಿಲುವು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆಯು ಕನ್ನಡದ ವಿರುದ್ಧವಾಗಿಲ್ಲ. ಬಹುಶಃ ಕೋಗಿಲು ಸಂತ್ರಸ್ತರ ಪರವಾಗಿ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ತಿರುಗೇಟು ಕೊಡಲು ಮಲಯಾಳಿ ಭಾಷಾ ಮಸೂದೆಯನ್ನು ಸಿದ್ದರಾಮಯ್ಯ ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಮಲಯಾಳ ಕೇರಳದ ರಾಜ್ಯ ಭಾಷೆ. ರಾಜ್ಯಭಾಷೆಯೊಂದನ್ನು ‘ಅಧಿಕೃತ ಆಡಳಿತ ಭಾಷೆ’ ಎಂದು ಘೋಷಿಸಿ, ಶಾಲೆಗಳಲ್ಲಿ ಅದನ್ನು ಕಡ್ಡಾಯ ಮಾಡುವುದು ಆಯಾ ರಾಜ್ಯಗಳ ಭಾಷಾ ಬದ್ಧತೆಯನ್ನು ತೋರಿಸುತ್ತದೆ. ಕೇರಳ ಸರ್ಕಾರದ ಈ ಭಾಷಾ ಬದ್ಧತೆಯು ಕರ್ನಾಟಕಕ್ಕೆ ಮಾದರಿಯಾಗಬೇಕಿದೆ. ಹಾಗಾದರೆ, ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ ? ಖಂಡಿತವಾಗಿಯೂ ಇಲ್ಲ ! ಬಹುಶಃ ಸಿದ್ದರಾಮಯ್ಯನವರು ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಪೂರ್ತಿಯಾಗಿ ಓದಿಲ್ಲವೆಂದು ಕಾಣುತ್ತದೆ.

‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5 ರಲ್ಲಿ ಹೀಗೆ ಹೇಳುತ್ತದೆ.

ಸೆಕ್ಷನ್ 5

(1) ಭಾರತ ಸಂವಿಧಾನದ ವಿಧಿ 346 ಮತ್ತು ವಿಧಿ 347ಗಳಿಗೆ ಒಳಪಟ್ಟಂತೆ, ಕೇರಳ ರಾಜ್ಯದಲ್ಲಿ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಬಳಸಬೇಕಾದ ಭಾಷೆ ಮಲಯಾಳಂ ಆಗಿರುತ್ತದೆ.

ಸೆಕ್ಷನ್ 5(2) ಉಪವಿಧಿ (1) ರಾಜ್ಯ ಸರ್ಕಾರದ ಅಧೀನದಲ್ಲಿರುವ ಈಗಿರುವ ಎಲ್ಲಾ ಇಲಾಖೆಗಳಿಗೂ ಹಾಗೂ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗುವ ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ. ಇದಲ್ಲದೆ ಸ್ಥಳೀಯ ಸಂಸ್ಥೆಗಳು, ಅರೆ-ಸರ್ಕಾರಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಸಂಸ್ಥೆಗಳು ಹಾಗೂ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆ.

ಆದರೆ ಭಾರತ ಸರ್ಕಾರದೊಂದಿಗೆ, ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳೊಂದಿಗೆ, ವಿದೇಶಗಳೊಂದಿಗೆ, ಇತರ ರಾಜ್ಯಗಳೊಂದಿಗೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮುಂತಾದವರೊಂದಿಗೆ ನಡೆಯುವ ಪತ್ರವ್ಯವಹಾರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು. ಹಾಗೆಯೇ ಕಾನೂನಿನ ಪ್ರಕಾರ ಇಂಗ್ಲಿಷ್ ಬಳಸುವುದು ಅನಿವಾರ್ಯವಾಗಿರುವ ಇತರ ಸಂದರ್ಭಗಳಲ್ಲಿ ಹಾಗೂ ತಮಿಳು ಮತ್ತು ಕನ್ನಡ ಭಾಷೆ ಮಾತನಾಡುವವರೊಂದಿಗೆ (ರಾಜ್ಯದ ಅಲ್ಪಸಂಖ್ಯಾತ ಭಾಷೆಗಳಾದ ತಮಿಳು ಮತ್ತು ಕನ್ನಡ ಹೊರತುಪಡಿಸಿ) ಸಂವಹನ ನಡೆಸುವ ಸಂದರ್ಭಗಳಲ್ಲೂ ಇಂಗ್ಲಿಷ್ ಬಳಸಬಹುದಾಗಿದೆ.

‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 6 ರಲ್ಲಿ ಹೀಗೆ ಹೇಳುತ್ತದೆ.

ಸೆಕ್ಷನ್ 6(1) ಕೇರಳದಲ್ಲಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿರುತ್ತದೆ.

ಸೆಕ್ಷನ್ 6(2) ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಭಾಷೆಯ ಪ್ರಸಾರ ಮತ್ತು ಪ್ರಚಾರವನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸೆಕ್ಷನ್6(3) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ, ತಮ್ಮ ಮಾತೃಭಾಷೆಯ ಜೊತೆಗೆ ಮಲಯಾಳಂ ಭಾಷೆಯನ್ನು ಅಧ್ಯಯನ ಮಾಡುವ ಅವಕಾಶ ನೀಡಲಾಗುತ್ತದೆ.

ಹಾಗಾಗಿ ‘ಮಲಯಾಳಿ ಭಾಷಾ ಮಸೂದೆ -2025’ರ ಸೆಕ್ಷನ್ 6(3) ಪ್ರಕಾರ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಮಲಯಾಳ ಭಾಷೆ ಕಲಿಯಬಹುದು. ಕನ್ನಡ ಭಾಷೆಗೆ ಇಲ್ಲಿ ಯಾವುದೇ ಅಪಾಯ ಇರುವುದಿಲ್ಲ.

ಇವೆಲ್ಲಕ್ಕಿಂತ ಮುಖ್ಯವಾಗುವುದು ‘ಮಲಯಾಳಿ ಭಾಷಾ ಮಸೂದೆ -2025’ಯ ಸೆಕ್ಷನ್ 7.. ಇದು ಕೇರಳ ಸರ್ಕಾರವು ದ್ರಾವಿಡ ಭಾಷೆಗಳ ಬಗ್ಗೆ ಹೊಂದಿರುವ ಉದಾರತೆಯನ್ನು ತೋರ್ಪಡಿಸುತ್ತದೆ. ಬಹುಶಃ ಯಾವ ರಾಜ್ಯದಲ್ಲೂ ಇಷ್ಟು ಭಾಷಾ ಉದಾರತೆ ಇರುವುದಿಲ್ಲವೇನೋ!

ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಹೀಗೆ ಹೇಳುತ್ತದೆ.

ಸೆಕ್ಷನ್ 7  : ಇತರ ರಾಜ್ಯ–ಭಾಷಿಕ ಅಲ್ಪಸಂಖ್ಯಾತರ ಕುರಿತು ವಿಶೇಷ ಕ್ರಮಗಳು
ಸೆಕ್ಷನ್ 5 ಅಥವಾ ಸೆಕ್ಷನ್ 6ರಲ್ಲಿ ಯಾವುದೇ ಅಂಶಗಳಿದ್ದರೂ ಸಹ,

(1) ಕೇರಳ ರಾಜ್ಯದಲ್ಲಿರುವ ತಮಿಳು ಹಾಗೂ ಕನ್ನಡ ಭಾಷಿಕ ಅಲ್ಪಸಂಖ್ಯಾತರು, ಈ ಉದ್ದೇಶಕ್ಕಾಗಿ ಸರ್ಕಾರದಿಂದ ಭಾಷಿಕ ಅಲ್ಪಸಂಖ್ಯಾತ ಪ್ರದೇಶಗಳೆಂದು ಘೋಷಿಸಲಾದ ಪ್ರದೇಶಗಳಲ್ಲಿ ರುವ ರಾಜ್ಯ ಸರ್ಕಾರದ ಕಾರ್ಯಾಲಯ, ಇಲಾಖೆಗಳ ಮುಖ್ಯಸ್ಥರು ಮತ್ತು ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ತಮ್ಮ ಭಾಷೆಗಳಲ್ಲಿ ನಡೆಸಬಹುದು. ಅಂತಹ ಸಂದರ್ಭಗಳಲ್ಲಿ ಕಳುಹಿಸಲಾಗುವ ಉತ್ತರಗಳೂ ಅವರವರ ಅಲ್ಪಸಂಖ್ಯಾತ ಭಾಷೆಗಳಲ್ಲಿಯೇ ಇರಬೇಕು.

(2) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳು, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನುಸಾರವಾಗಿ, ರಾಜ್ಯದ ಶಾಲೆಗಳಲ್ಲಿ ಲಭ್ಯವಿರುವ ತಮ್ಮ ಇಚ್ಛೆಯ ಭಾಷೆಗಳಲ್ಲಿ ಅಧ್ಯಯನ ಮುಂದುವರಿಸಬಹುದು.

(3) ಕೇರಳದಲ್ಲಿ ಅಧ್ಯಯನ ಮಾಡುತ್ತಿರುವ ಇತರ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ, ಮಾತೃಭಾಷೆ ಮಲಯಾಳಂ ಅಲ್ಲದವರಿಗೆ, 9ನೇ ತರಗತಿ, 10ನೇ ತರಗತಿ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಪರೀಕ್ಷೆಗಳಲ್ಲಿ ಮಲಯಾಳಂ ಭಾಷೆಯಲ್ಲಿ ಪರೀಕ್ಷೆ ಬರೆಯುವ ಕಡ್ಡಾಯದಿಂದ ವಿನಾಯಿತಿ ನೀಡಲಾಗುತ್ತದೆ.

ಕೇರಳದಲ್ಲಿ ಕನ್ನಡಕ್ಕೆ ಇದಕ್ಕಿಂತ ಇನ್ನೇನು ಬೇಕು? ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ರ ಪ್ರಕಾರ ಕೇರಳದ ಉತ್ತರಭಾಗದ ಕಾಸರಗೋಡು ಕನ್ನಡ ಪ್ರದೇಶದಲ್ಲಿ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಕನ್ನಡ ಕಡ್ಡಾಯವಾಗಿರುತ್ತದೆ. ಕನ್ನಡಿಗರ ಜೊತೆ ಕೇರಳದ ಉತ್ತರ ಭಾಗದ ಸರ್ಕಾರಿ ಕಚೇರಿ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡಿಗರ ಕನ್ನಡದ ಅರ್ಜಿ, ಉತ್ತರಗಳನ್ನು ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳು ಸ್ವೀಕರಿಸುವುದನ್ನು, ಕನ್ನಡದಲ್ಲೇ ವ್ಯವಹರಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ.

ಸೆಕ್ಷ 7(2) ಪ್ರಕಾರ, ಕನ್ನಡದ ಮಕ್ಕಳು ಕೇರಳದ ಉತ್ತರ ಭಾಗದಲ್ಲಿ ಕನ್ನಡದಲ್ಲೇ ಅಧ್ಯಯನ ಮುಂದುವರೆಸುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸೆಕ್ಷನ್ 7(3) ಪ್ರಕಾರ, ಕನ್ನಡದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವರಿಗೆ ಪ್ರಶ್ನೆ ಪತ್ರಿಕೆಯನ್ನೂ ಕನ್ನಡದಲ್ಲೇ ನೀಡಿ, ಉತ್ತರವನ್ನೂ ಕನ್ನಡದಲ್ಲೇ ಬರೆಯವ ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಪ್ರಾಥಮಿಕ ಶಾಲೆಯಲ್ಲೂ ಕನ್ನಡದಲ್ಲೇ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.

ಸೆಕ್ಷನ್ 9 ರ ಪ್ರಕಾರ ಕೇರಳದ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಆದೇಶಗಳನ್ನು, ತೀರ್ಪುಗಳನ್ನು ಮಲಯಾಳದಲ್ಲೇ ಪ್ರಕಟಿಸಬೇಕು. ಆದರೆ ಭಾಷಾ ಅಲ್ಪಸಂಖ್ಯಾತರಾಗಿರುವ ಪ್ರದೇಶದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲೀಷ್ ನಲ್ಲಿ ಆದೇಶ, ತೀರ್ಪುಗಳನ್ನು ಪ್ರಕಟಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಬೋರ್ಡ್, ಜಾಹೀರಾತುಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಸರಿಸಬೇಕು ಎಂದು ಮಲಯಾಳಿ ಭಾಷಾ ಮಸೂದೆ-2025 ಹೇಳುತ್ತದೆ. ಇದು ಕರ್ನಾಟಕದಲ್ಲಿ ಬೇಡಿಕೆಯಲ್ಲಿದೆ. ಕರ್ನಾಟಕ ಸರ್ಕಾರ ಇನ್ನೂ ದ್ವಿಭಾಷಾ ನೀತಿಯನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲ. ಕೇರಳ ದ್ವಿಭಾಷಾ ನೀತಿಯನ್ನು ಈ ಕಾಯ್ದೆಯಲ್ಲಿ ಸ್ಪಷ್ಟಪಡಿಸುತ್ತಲೇ, ಕನ್ನಡಿಗರು ಇರುವ ಪ್ರದೇಶದಲ್ಲಿ ಕನ್ನಡದಲ್ಲಿ ಜಾಹೀರಾತು, ಬೋರ್ಡ್ ಗಳನ್ನು ಪ್ರದರ್ಶಿಸಬಹುದು ಎಂದು ಕಾಯ್ದೆ ಹೇಳುತ್ತದೆ. ಇದು ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಕೇರಳ ಸರ್ಕಾರ ಕೊಟ್ಟ ಗೌರವ ಎಂಬುದು ನಾವ್ಯಾಕೆ ಹೆಮ್ಮೆಪಡಬಾರದು?

ಕೇರಳದ ಕಾಸರಗೋಡಿನಲ್ಲಿ ಈವರೆಗೂ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳು ಆತಂಕದಲ್ಲಿದ್ದವು. ನಿಧಾನಕ್ಕೆ ಕಾಸರಗೋಡಿನಲ್ಲಿ ಕನ್ನಡ ನಾಶವಾಗುತ್ತಿದೆ ಎಂಬ ಭಯ ಇತ್ತು. ಆದರೆ ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಮೂಲಕ ಕಾಸರಗೋಡಿನಲ್ಲಿ ಕನ್ನಡ ಈಗ ಕನ್ನಡಿಗರ ಕಾನೂನು ಬದ್ಧ ಹಕ್ಕು ಆಗಿ ಮಾರ್ಪಾಟಾಗಿದೆ. ಕೇರಳ ಸರ್ಕಾರದ ಈ ಮಸೂದೆಯನ್ನು ಕನ್ನಡಿಗರು ವಿರೋಧಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆ-2025ಯನ್ನು ಕನ್ನಡಿಗರು ಸ್ವಾಗತಿಸಬೇಕು ಮಾತ್ರವಲ್ಲ, ಅದೇ ಮಾದರಿಯ ‘ಕನ್ನಡ ಭಾಷಾ ಮಸೂದೆ -2026’ ರನ್ನು ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಜಾರಿಗೆ ತರಬೇಕು ಎಂದು ಕನ್ನಡಿಗರು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page