Home ಅಂಕಣ ನಾಯಿಗಿರುವ ಬೆಲೆ ಮನುಷ್ಯರ ಜೀವಕ್ಕಿಲ್ಲವೇ? ಏನಿದು ಜನರ ನಾಯಿ ಪಾಡು?

ನಾಯಿಗಿರುವ ಬೆಲೆ ಮನುಷ್ಯರ ಜೀವಕ್ಕಿಲ್ಲವೇ? ಏನಿದು ಜನರ ನಾಯಿ ಪಾಡು?

0

“‘ಮೂಕ ಪ್ರಾಣಿಗಳಿಗೂ ಬದುಕುವ ಹಕ್ಕಿದೆ, ಅವುಗಳನ್ನು ಸಮಾಜದಿಂದ ಬೇರ್ಪಡಿಸಬಾರದು ಎಂದು ವಾದಿಸುತ್ತಾರೆ’, ನಾಯಿಗಳಿಂದ ಆಗುವ ಅನಾಹುತಗಳಿಗೆ ಇವರಿಂದ ಉತ್ತರವಿಲ್ಲ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಒಂದು ತಿಂಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಎಚ್ಎಸ್ಆರ್ ಲೇಔಟ್ ನಲ್ಲಿ ಒಬ್ಬ ಮಹಿಳೆಯ ಮೇಲೆ ಮಾಲೀಕನ ನಿರ್ಲಕ್ಷದಿಂದ ನಾಯಿಯು ದಾಳಿ ಮಾಡಿದ ಘೋರ ಘಟನೆ ನಡೆದಿದೆ.

ಸಾಮಾನ್ಯವಾಗಿ ನಾಯಿ ದಾಳಿ ಮಾಡಿದೆ ಎಂದರೆ ಜನ ಚಿಕ್ಕ ಪುಟ್ಟ ಗಾಯಗಳಾಗುತ್ತವೆ ಎಂಬ ಮನೋಭಾವ ಹೊಂದಿರುತ್ತಾರೆ, ಆದರೆ ಈ ಘಟನೆ ಘೋರ. ಬೆಳಗಿನ ಸಮಯದಲ್ಲಿ ದಿನನಿತ್ಯದಂತೆ ಬೆಳಗಿನ ನಡಿಗೆ ಮುಗಿಸಿ ಮನೆಗೆ ಹಿಂತಿರುವಾಗ ಪಕ್ಕದ ಮನೆಯ ರಾಟ್ ವಿಲರ್ ಸಾಕು ನಾಯಿ ಆಕೆಯ ಮೇಲೆ ದಾಳಿ ಮಾಡಿದೆ. ನಾಯಿ ದಾಳಿಗೆ ಒಳಪಟ್ಟ ಹೆಂಗಸು 31 ವರ್ಷದ ಶಾಲಿನಿ ದುಬೆ ಅಂತ, ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು. ನಾಯಿ ಪದೇ ಪದೇ ಕಡಿದ ಕಾರಣ ಮುಖ, ಗಂಟಲು, ತಲೆಯಲ್ಲೆಲ್ಲ ಗಾಯಗಳಾಗಿವೆ ಮತ್ತು 7 ಸೆಂಟಿಮೀಟರ್ ತನಕ ಆಳವಾದ ಗಾಯವಾಗಿದೆ. ಆದ್ದರಿಂದ ಆಕೆಗೆ 8 ಗಂಟೆಗಳ ಕಾಲ ಸರ್ಜರಿ ಆಗಿದೆ, 80 ಹೊಲಿಗೆಗಳನ್ನು ಹಾಕಲಾಗಿದೆ.  ಆ ಗಾಯಗಳೆಲ್ಲಾ ಮಾಗಲು ವರ್ಷಗಳೇ ಬೇಕು, ಆಕೆಗೆ ದೈಹಿಕವಾಗಿ ಆಗಿರುವ ನೋವುಗಳು ಅಲ್ಲದೆ ಮಾನಸಿಕವಾಗಿ ಭಯಭೀತಳಾಗಿಯೂ ಕುಗ್ಗಿರುತ್ತಾಳೆ. ಆ ಹೆಂಗಸಿಗೆ ಮದುವೆಯಾಗಿದ್ದು 17 ತಿಂಗಳ ಪುಟ್ಟ  ಮಗುವಿದೆ, ಆ ಪಾಪುವಿನ ಲಾಲನೆ – ಪಾಲನೆ ಹೇಗೆ?

ಇದಕ್ಕೆಲ್ಲ ಯಾರು ಹೊಣೆ? ಶಾಲಿನಿ ದುಬೆಯವರ ಗಂಡ ಸತ್ಯ ಪ್ರಕಾಶ್ ದುಬೆರವರು ನಾಯಿ ಮಾಲೀಕನ ಮೇಲೆ ‘ಭಾರತೀಯ  ನ್ಯಾಯ ಸಂಹಿತೆ’ ಅಡಿಯಲ್ಲಿ- ಸೆಕ್ಷನ್ 173 (3), 125, 291 ರ ಪ್ರಕಾರ ದೂರು ದಾಖಲಾಗಿದೆ.

ಈ ತರಹದ ಘಟನೆಗಳು ಹಿಂದೆಯೂ ಸಾಕಷ್ಟ ನಡೆದಿದೆ – ಮೇ 2025 ರಲ್ಲಿ ಗುಜರಾತ್ನ ಅಹಮದಾಬಾದ್ ನಲ್ಲಿಯ ರಾಧೆ ರೆಸಿಡೆನ್ಸಿ ಯಲ್ಲಿ ಇದೇ ತರಹ ಒಂದು ಘಟನೆ ನಡೆದಿತ್ತು, ಅಪಾರ್ಟ್ಮೆಂಟ್ ನಿವಾಸಿ ರಿಷಿಕಾ ಎಂಬ ಮಹಿಳೆ ತನ್ನ ನಾಲ್ಕು ತಿಂಗಳ ಮಗುವಿನ ಜೊತೆ ಅಪಾರ್ಟ್ಮೆಂಟ್ ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದರು. ಅದೇ ಸಮಯದಲ್ಲಿ ರಾಟ್ ವೀಲರ್ ನಾಯಿ ಮತ್ತದರ ಮಾಲಕಿ ಆ ಜಾಗಕ್ಕೆ ಬಂದಿದ್ದಾರೆ. ತಕ್ಷಣವೇ ಆ ನಾಯಿ ನಾಲ್ಕು ತಿಂಗಳ ಮಗುವಿನ ಮೇಲೆ ದಾಳಿ ಮಾಡಿ ಕಚ್ಚಿ ಎಳದಿದೆ. ಈ ಭೀಕರ ದೃಶ್ಯ ಅಪಾರ್ಟ್ಮೆಂಟ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಯಿಯನ್ನು ನಿಯಂತ್ರಿಸಲು ಆಗಲಿಲ್ಲ. ಕೊನೆಗೂ ನಾಯಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದೊಯ್ದರು ಫಲಕಾರಿಯಾಗದೆ ಮಗು ಸಾವನಪ್ಪಿತ್ತು. ಆ ಎಳೆಗೂಸಿನ ಸಾವಿಗೆ ಆ ನಾಯಿ ಮತ್ತದರ ಮಾಲಕಿಯೇ ನೇರ ಕಾರಣ.

ಇದೇ ತರಹ ಘಟನೆ ಸೆಪ್ಟೆಂಬರ್ 2017ರಲ್ಲಿ ಮೈಸೂರಿನಲ್ಲಿಯೂ ನಡೆದಿತ್ತು. ಮೈಸೂರಿನ ದಟ್ಟಗಳ್ಳಿಯ ಯುನಿವರ್ಸಿಟಿ ಲೇಔಟ್ ನ ನಿವಾಸಿ ಅಜಯ್ ಅವರು ಸಾಕಿದ್ದ ರಾಟ್ ವಿಲರ್ ನಾಯಿ ಅವರ ಮಗನ ಮೇಲೆಯೇ ದಿಡೀರ್ ದಾಳಿ ನಡೆಸಿತ್ತು. ಐದಾರು ನಿಮಿಷಗಳ ಕಾಲ ನಾಯಿ ಮಗುವಿನ ತಲೆಯನ್ನು ಕಚ್ಚಿ ಹಿಡಿದಿತ್ತು. ಆಗ ಮಗುವಿನ ತಲೆಯ ಚರ್ಮ ಕಿತ್ತು ಹೋಗಿ ಅಧಿಕ ರಕ್ತಸ್ರಾವವಾಗಿತ್ತು. ಆ ಸಮಯದಲ್ಲಿ ಮಗುವಿನ ತಾಯಿ ನಾಯಿಯ ದಿಡೀರ್ ದಾಳಿಯಿಂದ ಗಾಬರಿಗೊಂಡು ಕಿರುಚಿಕೊಂಡಿದ್ದಾರೆ. ಆಗ ಸುತ್ತಮುತ್ತಲಿನ ಮನೆಯವರು ದೊಣ್ಣೆಯಿಂದ ಹೊಡೆದು ನಾಯಿಯ ಕಡಿತದಿಂದ ಬಿಡಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂತಹ ಹೃದಯವಿದ್ರಾವಕ ಘಟನೆಗಳು ಸಾಕಷ್ಟು ನಡೆದಿದೆ ಇವುಗಳಿಗೆ ಕೊನೆ ಯಾವಾಗ?

ನಾಯಿ ಸಾಕುವವರು ಸದಾ ಎಚ್ಚರಿಕೆಯಿಂದ ನಾಯಿಯನ್ನು ಬೋನ್ ನಲ್ಲಿ ಇರಿಸಬೇಕು ಅಥವಾ ಸರಪಳಿಯಿಂದ ಕಟ್ಟಿರಬೇಕು. ಕಣ್ಣು ಮಿಟುಕಿಸುವಷ್ಟುರ ಸಮಯದಲ್ಲಿ ನಡೆದ ಈ ಮೇಲಿನ ಘಟನೆಗಳಿಂದ ಆ ಮನೆಯವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೊಂದು ನೋವಾಗಿರುತ್ತದೆ? ನಾಯಿ ಸಾಕುವವರು ಅದೊಂದು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿ ನಾಯಿಯನ್ನು ನಿಯಂತ್ರಿಸುವುದನ್ನೆ ಮರೆತು ಬಿಟ್ಟಿರುತ್ತಾರೆ. ನಾಯಿ ಸಾಕುವವರು ಯಾವ ಉದ್ದೇಶಕ್ಕಾಗಿ ಸಾಕುತ್ತೀದ್ದಿವಿ‌ ಎಂಬುದು ಮುಖ್ಯ. ಸದಾ ಎಚ್ಚರಿಕೆಯಿಂದ ಇರುವುದಾದರೆ ನಾಯಿ ಸಾಕಬೇಕು. ನಾಯಿಯು ಬೇರೆಯವರಿಗೆ ಕಚ್ಚದಂತೆ ಹಾನಿ ಮಾಡದಂತೆ ಬಾಯಿಗೆ ಕ್ಯಾಪ್(ಮುಖ ಗವಸು)ಅನ್ನು ಕಡ್ಡಾಯವಾಗಿ ಹಾಕಬೇಕು.  ಕೆಲವು ತಳಿಯ ನಾಯಿಗಳು ಬಲಿಷ್ಠವಾಗಿದ್ದು ತೋಟದಲ್ಲಿ ಅಥವಾ ಎಸ್ಟೇಟ್ ನಲ್ಲಿ ಕಾವಲಿಗೆ ಸಾಕುತ್ತಾರೆ ಅಂತಹ ನಾಯಿಗಳನ್ನು ಮಕ್ಕಳಿರುವ ಮನೆಯಲ್ಲಿ. ಮಕ್ಕಳ ಸುತ್ತಮುತ್ತ ಸಾಕುವುದರಿಂದ ಈ ರೀತಿಯ ಅಹಿತಕರ ಘಟನೆಗಳು ನಡೆಯುತ್ತವೆ. ಸಾಕು ನಾಯಿಗಳು ಮತ್ತು ಬೀದಿ ನಾಯಿಗಳಿಂದ  ಮಾಲೀಕರ ಮನೆಯವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ಬಲು ಎಚ್ಚರಿಕೆಯಿಂದ ಈ ತೊಡಕನ್ನು ನಿವಾರಿಸಬೇಕು.

ಇನ್ನು  ಬೀದಿ ನಾಯಿಗಳ ವಿಷಯಕ್ಕೆ ಬಂದರೆ ಈಗಾಗಲೇ ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳನ್ನು ತೆರವುಗೊಳಿಸಬೇಕು. ಅನಿಮಲ್ ಬರ್ತ್ ಕಂಟ್ರೋಲ್ ಮಾಡಬೇಕೆಂದು ಆದೇಶ ನೀಡಿದ್ದರು ಯಾವುದೇ ಪ್ರಯೋಜನ ಆಗಲಿಲ್ಲ. ಪ್ರತಿ ದಿನ ಬೀದಿ ನಾಯಿಗಳ ಉಪಟಳ ಜೋರಾಗಿಯೇ ಇದೆ. ಬೀದಿ ನಾಯಿಗಳ ಸಮಸ್ಯೆ ಪರಿಹರಿಸಿ ಎಂದರೆ ಬೆಂಗಳೂರಿನಲ್ಲಿ ಬಿಬಿಎಂಪಿ ಅವರು ಬೀದಿ ನಾಯಿಗಳಿಗೆ ಬಿರಿಯಾನಿ ಆಕ್ತೀವಿ ಅಂತಾರೆ. ಇದಕ್ಕೆಲ್ಲ ಏನ್ ಹೇಳೋಣ?

ನಾಯಿಗಳಿಗಾಗಿ ಪ್ರತ್ಯೇಕ ಆಶ್ರಯ ಕೇಂದ್ರ ಸ್ಥಾಪಿಸಿ ಅಲ್ಲಿ ಅವುಗಳನ್ನು ಪೋಷಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ಬಂದಾಗ, ತಲೆಕೆಟ್ಟ ಹುಚ್ಚರು – ‘ಮೂಕ ಪ್ರಾಣಿಗಳಿಗೂ ಬದುಕುವ ಹಕ್ಕಿದೆ, ಅವುಗಳನ್ನು ಸಮಾಜದಿಂದ ಬೇರ್ಪಡಿಸಬಾರದು ಎಂದು ವಾದಿಸುತ್ತಾರೆ’, ನಾಯಿಗಳಿಂದ ಆಗುವ ಅನಾಹುತಗಳಿಗೆ ಇವರಿಂದ ಉತ್ತರವಿಲ್ಲ.

ನಾನು ನಾಯಿ ಸಾಕುವುದನ್ನೆ ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದಲ್ಲ. ಮಾನವ ಮತ್ತು ನಾಯಿಯ ಒಡನಾಟ ಸಾವಿರಾರು ವರ್ಷಗಳಿಗಿಂತಲೂ ಹಳೆಯದಾದದು. ಪರಸ್ಪರ ಪ್ರೀತಿ ನಂಬಿಕೆಯಿಂದ ಕೂಡಿದುದು. ನಾಯಿಗಳು ಮಾನವನಿಗೆ ಉತ್ತಮ ಸ್ನೇಹಿತ ಕೂಡ ಹೌದು ಮತ್ತು ನಾಯಿಗಳನ್ನು ತಮ್ಮ ರಕ್ಷಣೆಗಾಗಿ. ತಮ್ಮ ಖುಷಿಗಾಗಿ ಸಾಕುತ್ತಾರೆ, ಸಾಕಲಿ. ಆದರೆ ನಾವು ಸಾಕುವ ನಾಯಿಗಳಿಂದ, ನಾವು ತೋರಿಸುವ ನಾಯಿ ಮೇಲಿನ ಪ್ರೀತಿಯಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಹಾನಿಯಾಗಬಾರದು ಎಂಬುವುದು ನನ್ನ ಅಭಿಪ್ರಾಯ ಮತ್ತು ವಾದ.

ಸುಪ್ರೀಂ ಕೋರ್ಟ್ ನಲ್ಲಿ ಇತ್ತೀಚೆಗೆ ಒಂದು ವಿಚಾರಣೆ ನಡೆದ ಸಂದರ್ಭದಲ್ಲಿ – ‘ಬೀದಿ ನಾಯಿಗಳನ್ನು ಅವುಗಳ ವರ್ತನೆಯ ಆಧಾರದ ಮೇಲೆ ವಿಂಗಡಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳ ಮನಸ್ಸನ್ನು ಯಾರು ಓದಲು ಸಾಧ್ಯವಿಲ್ಲ. ಈ ನಾಯಿ ಕಚ್ಚಬಹುದು ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಇದಕ್ಕೆ ಅಸಮಾಧಾನ  ವ್ಯಕ್ತಪಡಿಸಿ ಚಲನಚಿತ್ರ ನಟಿ ರಮ್ಯಾ ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದರು ಅ ಹೇಳಿಕೆ –  ‘ಪುರುಷರ ಮನಸ್ಸು ಓದುವುದು ಕಷ್ಟ. ಅವರು ಯಾವಾಗ ರೇಪ್ ಮಾಡುತ್ತಾರೆ. ಯಾವಾಗ ಕೊಲೆ ಮಾಡುತ್ತಾರೆ ಗೊತ್ತಾಗುವುದಿಲ್ಲ. ಹಾಗಾಗಿ ಎಲ್ಲ ಪುರುಷರನ್ನು ಜೈಲಿನಲ್ಲಿ ಇರಿಸಿಬಿಡಿ’ ಎಂಬ ಮತಿಹೀನ, ಅಮಾನವೀಯ ಹೇಳಿಕೆನ್ನು ನೀಡಿದ್ದರು. ಇವರು ಜನಪ್ರತಿನಿಧಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಇವರೇನಾದರೂ ಜನಪ್ರತಿನಿಧಿಯಾದರೆ ಇವರು ಸಮಾಜದ ಅಭಿವೃದ್ಧಿಗೆ, ಜನರ ಹಕ್ಕುಗಳನ್ನು ಉಳಿಸಲು ಜನರಿಗಾಗಿ ದುಡಿಯುತ್ತಾರೋ ಇಲ್ಲ ನಾಯಿಗಳಿಗಾಗಿ ದುಡಿಯುತ್ತಾರೋ? ಎಂಬದು ನನ್ನ ಪ್ರಶ್ನೆ.

ಜನರ ಕಷ್ಟ ತಿಳಿಯದವರು, ಯಾವಾಗಲೂ ಕಾರಿನಲ್ಲಿ ಓಡಾಡುವವರು ತಮ್ಮ ಖುಷಿಗೋಸ್ಕರ ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಕುವುದನ್ನೆ ಸಮಾಜ ಸೇವೆ ಎಂದು ಭ್ರಮಿಸಿರುತ್ತಾರೆ. ರಸ್ತೆಯಲ್ಲಿ ಪ್ರತಿದಿನ ಬೈಕ್ ನಲ್ಲಿ ಸಂಚರಿಸುವವರು, ಪಾದಚಾರಿ ಸಂಚಾರಿಗಳು, ಅವರಲ್ಲಿ ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು, ಹೆಂಗಸರು, ವಯಸ್ಸಾದವರು ಒಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಆ  ಬೀದಿಯಲ್ಲಿ ನಾಯಿ ಇದೆ ಎಂದರೆ ಸಾಕು ನಾಯಿ ಆಗಿರಲಿ ಬೀದಿ ನಾಯಿ ಆಗಿರಲಿ ಭಯದ ವಾತಾವರಣ ಸೃಷ್ಟಿಯಾಗಿ ಜನರು ಬೀದಿಗಳಲ್ಲಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಓಡಾಡಬೇಕಾದರೆ ಇಂಡಿಯಾ-ಚೀನಾ, ಉಕ್ರೇನ್-ರಷ್ಯಾ ಗಡಿಗಳಲ್ಲಿ ಸಂಚರಿಸುತಿರುವಷ್ಟು ಭಯಭೀತರಾಗುತ್ತಾರೆ. ಕಾರಣ ಈ ಬೀದಿ ನಾಯಿಗಳು ಮತ್ತು ಸಾಕು ನಾಯಿಗಳು ಉಪಟಳಗಳಿಂದ.

ಶಾಲೆಗೆ, ಅಂಗಡಿಗೆ, ಆಫೀಸ್ಗೆ, ಕೆಲಸಕ್ಕೆ, ಪಾರ್ಕ್ ಗೆ ಹೋಗುವಾಗ, ಸೈಕಲ್ ತುಳಿಯುವಾಗ, ಬೈಕ್ ನಲ್ಲಿ ಸಂಚರಿಸುವಾಗ ಇನ್ನೂ ಹತ್ತು ಹಲವು ಕಾರಣಗಳಿಗಾಗಿ  ರಸ್ತೆಯಲ್ಲಿ ಓಡಾಡುವುದು ಅನಿವಾರ್ಯ, ಅಂತ ಸನ್ನಿವೇಶಗಳಲ್ಲಿ ಈ ಕಡೆಯಿಂದ ಆ ಕಡೆಗೆ ನಾಯಿ ದಾಳಿಗೆ ಒಳಗಾಗದೆ ಸುರಕ್ಷಿತವಾಗಿ ಹೋದರೆ ಸಾಕು ಎಂಬ ಭಯ, ಈ ರೀತಿ ಸನ್ನಿವೇಶಗಳು ಪ್ರತಿದಿನ ಅನುಭವಿಸುತ್ತಿರುವ ಎಷ್ಟೊಂದು ಜನ ಇದ್ದಾರೆ, ಈಗಾಗಲೇ ಈ ತರಹ ಭಯವನ್ನು ಅನುಭವಿಸುತ್ತಿರುವ ಜನರ ಮಾನಸಿಕ ಆರೋಗ್ಯ ಎಷ್ಟೊಂದು ಹದಗೆಟ್ಟಿರುತ್ತದೆ? ಅವರ ಮೇಲೆ ಯಾವ ತರದ ಕೆಟ್ಟ ಪರಿಣಾಮ ಬೀರಿರುತ್ತದೆ? ಒಮ್ಮೆ ಯೋಚಿಸಿ?

ಕೋವಿಡ್ ನಂತರದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿವೆ, ಉದಾಹರಣೆಗೆ 2023ರಲ್ಲಿ ಇಂಡಿಯಾದಾದ್ಯಂತ 3,50,000 ಒಂದಷ್ಟು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. 2024 ರಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ರೇಬಿಸ್ ನಿಂದ 54 ಜನ ಸಾವನಪ್ಪಿದ್ದಾರೆ.

2025 ರಲ್ಲಿ ‘ಈಟಿವಿ ಭಾರತ್’ ಮಾಡಿರುವ ವರದಿ ಪ್ರಕಾರ – ಕರ್ನಾಟಕ ರಾಜ್ಯದಲ್ಲಿ 11,41,173 ನಾಯಿಗಳಿದ್ದು, ಅವುಗಳಿಂದ 7,57,565 ಜನರು ಕಡಿತಕ್ಕೊಳಗಾಗಿದ್ದಾರೆ. ಬೆಂಗಳೂರಿನಲ್ಲಿ 1.36 ಲಕ್ಷ ಬೀದಿ ನಾಯಿಗಳಿವೆ. ಪ್ರಪಂಚದಾದ್ಯಂತ ಪ್ರತಿ ವರ್ಷ 56 ಸಾವಿರ ಜನ ರೇಬಿಸ್ ಕಾಯಿಲೆಯಿಂದ ಸಾಯುತ್ತಾರೆ. ಕರ್ನಾಟಕದಲ್ಲಿ 2022-24ರಲ್ಲಿ ರೇಬಿಸ್ ನಿಂದ 35 ಸಾವು ಆಗಿದೆ. ನಿಜವಾದ ಅರ್ಥದಲ್ಲಿ ಸಾರ್ವಜನಿಕರ ಜೀವನ ನಾಯಿಗಳ ದಾಳಿಯಿಂದ ನಾಯಿ ಪಾಡಾಗಿದೆ.

ನಮ್ಮ ಕಾನೂನಿನಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ (1960) ನಾಯಿಗಳನ್ನು ಹಿಂಶಿಸದಂತೆ, ಕೊಲ್ಲದಂತೆ ರಕ್ಷಿಸುತ್ತದೆ. ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯ ನಾಯಿಗಳನ್ನು ಕೊಲ್ಲುವಂತಿಲ್ಲ. ಕೇವಲ ಸಂತಾನಹರಣ ಶಸ್ತ್ರಚಿಕಿತ್ಸೆ ಮೂಲಕ ಸಂಖ್ಯೆ ನಿಯಂತ್ರಿಸಬವುದು. ನಾಯಿಗಳ ರಕ್ಷಣೆಗೆ ಇಷ್ಟೆಲ್ಲ ಕಾಯ್ದೆ ಕಾನೂನುಗಳು ಇವೆ. ಬೀದಿ ನಾಯಿಗಳಿಂದ ಮತ್ತು ಸಾಕು ನಾಯಿಗಳಿಂದ ಆಗುತ್ತಿರುವ ಈ ಅನಾಹುತಗಳಿಗೆ ಪರಿಹಾರವೇನು? ಜನರು ತಮ್ಮ ಕರ್ಮದ ಫಲ ಅಂತ ಹೇಳಿ ನಿರ್ಲಕ್ಷಿಸಬೇಕೇ?

ನಾವು ಬದುಕುತ್ತಿರುವ ಸಮಾಜದಲ್ಲಿ ಕೌಟುಂಬಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಕೋಟ್ಯಾನುಕೋಟಿ ಸಮಸ್ಯೆಗಳಿಂದ ಕೋಟ್ಯಾನು ಕೋಟಿ ಜನ ಬಳಲುತ್ತಿದ್ದಾರೆ ಇವುಗಳ ಬಗ್ಗೆ ಮಾತನಾಡದ, ಈ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡದ ಅದಮರು ನಾಯಿಗಳ ಮೇಲೆ ತೋರಿಸುವ ಕನಿಕರ ಕಂಡು ಏನೇಳಬೇಕು ? ‘ಪ್ರಾಣಿಗಳೇ ಗುಣದಲಿ ಮೇಲು, ಮಾನವ ಅದಕ್ಕಿಂತ ಕೀಳು’ ಎಂದು ಕನ್ನಡದಲ್ಲಿ ಸುಪ್ರಸಿದ್ಧವಾದ ಹಾಡೆ ಇದೆ, ಹಾಗಂತ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲವೇ?

You cannot copy content of this page

Exit mobile version