ಬೈರೂತ್: ಇಸ್ರೇಲ್ ಮತ್ತು ಹೆಜ್ಬೊಲ್ಲಾ ಸಂಘಟನೆ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ಮತ್ತೊಮ್ಮೆ ಭೀಕರ ವೈಮಾರಿಕ ದಾಳಿ ನಡೆಸಿ ಧ್ವಂಸಗೊಳಿಸಿದೆ. ಬೈರೂತ್‌ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಯ ಮುಖ್ಯ ಕಚೇರಿಯೇ ಗುರಿಯಾಗಿಟ್ಟುಕೊಂಡು ಇಸ್ರೇಲ್ ವಾಯುಪಡೆ ಈ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಈ ಭೀಕರ ದಾಳಿಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ವಾಯುಪಡೆಯು ಭಾನುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬೈರೂತ್ ನಗರದ ಹೊರವಲಯದಲ್ಲಿರುವ ಹೆಜ್ಬೊಲ್ಲಾ ಸಂಘಟನೆಯ ಭದ್ರಕೋಟೆಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲ್ ನರವೇರಿಸಿದ ಭೀಕರ ಸ್ಫೋಟದ ತೀವ್ರತೆಗೆ ಇಡೀ ಬಹುಮಹಡಿ ಕಟ್ಟಡವೊಂದು ನೆಲಸಮವಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಲೆಬನಾನ್ ದೇಶದ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಹೆಜ್ಬೊಲ್ಲಾ ಸಂಘಟನೆಯ ಪ್ರಮುಖ ಕೇಂದ್ರವಾಗಿರುವ ದಕ್ಷಿಣ ಬೈರೂತ್ ಹೊರವಲಯದ ದಾಹಿಯಾದಲ್ಲಿನ ಘೋಬೇರಿ ಎಂಬ ಪ್ರದೇಶದ ವಸತಿ ಕಟ್ಟಡವೊಂದರ ಮೇಲೆ ಈ ಕ್ಷಿಪಣಿ ದಾಳಿ ನಡೆದಿದೆ.
ಇಸ್ರೇಲ್ ವಾಯುಪಡೆ ಬಾಂಬ್ ಹಾಕಿದ ನಿಖರ ಸಮಯದಲ್ಲಿಯೇ ಆ ಅಪಾರ್ಟ್‌ಮೆಂಟ್ ಪಕ್ಕದ ರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಈ ಸ್ಫೋಟದಿಂದಾಗಿ ಸಾರ್ವಜನಿಕ ವಾಹನಗಳಿಗೆ ಆಗಿರುವ ಹಾನಿಯ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯು ಉತ್ತರ ಇಸ್ರೇಲ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ, ತಾವು ದಕ್ಷಿಣ ಬೈರೂತ್ ಮೇಲೆ ಮತ್ತಷ್ಟು ಕಠಿಣ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಸರ್ಕಾರದ ಪ್ರಮುಖ ಅಧಿಕಾರಿಗಳು ಈಗಾಗಲೇ ಕಡಕ್ ಎಚ್ಚರಿಕೆ ನೀಡಿದ್ದರು. ಇಸ್ರೇಲ್ ಕೈಗೊಳ್ಳುತ್ತಿರುವ ಈ ಸರಣಿ ನಿರ್ಧಾರಗಳಿಗೆ ಅಮೆರಿಕದ ವಾಷಿಂಗ್ಟನ್ ಸಂಪೂರ್ಣ ಬೆಂಬಲವಿದೆ ಎಂದು ಇಸ್ರೇಲ್ ಉಲ್ಲೇಖಿಸಿದೆ.
ಉತ್ತರ ಇಸ್ರೇಲ್ ಪ್ರಾಂತ್ಯಗಳ ಮೇಲೆ ಹೆಜ್ಬೊಲ್ಲಾ ಉಡಾಯಿಸಿದ್ದ ಮೂರು ಡ್ರೋನ್‌ಗಳು ಬೇರೆ ಬೇರೆ ಕಡೆಗಳಲ್ಲಿ ದಾಳಿ ನಡೆಸಿವೆ, ಆದರೆ ಈ ಘಟನೆಗಳಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್ ಸೇನೆ ಸೋಮವಾರ ಮುಂಜಾನೆ ತಿಳಿಸಿದೆ. ಇಸ್ರೇಲ್ ದೇಶದ ಭದ್ರತೆಗೆ ಹಾಗೂ ತಮ್ಮ ಐಡಿಎಫ್ (IDF) ಯೋಧರ ಜೀವಕ್ಕೆ ಅಪಾಯವಾಗಿ ಪರಿಣಮಿಸುವ ಯಾವುದೇ ಭಯೋತ್ಪಾದಕ ಕೇಂದ್ರಗಳನ್ನಾದರೂ ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೆ ತಮ್ಮ ಮಿಲಿಟರಿ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಇಸ್ರೇಲ್ ವಾಯುಪಡೆ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ದಕ್ಷಿಣ ಲೆಬನಾನ್ ಗಡಿಯೊಳಗೆ ನುಗ್ಗಿರುವ ಇಸ್ರೇಲ್ ಪಡೆಗಳ ಮೇಲೆ ತಾವು ಸರಣಿ ಪ್ರತಿರೋಧ ದಾಳಿಗಳನ್ನು ನಡೆಸಿರುವುದಾಗಿ ಹೆಜ್ಬೊಲ್ಲಾ ಪ್ರಕಟಿಸಿದೆಯಾದರೂ, ಉತ್ತರ ಇಸ್ರೇಲ್ ಮೇಲೆ ನಡೆದ ಡ್ರೋನ್ ದಾಳಿಗಳ ಹೊಣೆಯನ್ನು ತಾನು ಹೊತ್ತುಕೊಂಡಿಲ್ಲ.
