ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಇರಾನ್ ವಿರುದ್ಧ ಮತ್ತೆ ಯುದ್ಧಕ್ಕೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸಜ್ಜಾಗುತ್ತಿದೆ ಎಂದು ಇಸ್ರೇಲ್‌ನ ಮೂರು ಪ್ರಮುಖ ಹಿಬ್ರೂ ಟಿವಿ ವಾಹಿನಿಗಳು ಸೋಮವಾರ ವರದಿ ಮಾಡಿವೆ.
ಇಸ್ರೇಲ್‌ನ ರಕ್ಷಣಾ ಇಲಾಖೆಯ ಅಧಿಕಾರಿಗಳೇ ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೇವಲ ಒಂದು ವಾರದೊಳಗೆ ಈ ಮಹತ್ವದ ಬೆಳವಣಿಗೆ ನಡೆದಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಉದ್ದೇಶದಿಂದ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಸುದೀರ್ಘ ಚರ್ಚೆ ವಿಫಲವಾಗಿ 48 ಗಂಟೆಗಳಲ್ಲೇ ಇಸ್ರೇಲ್ ಈ ನಿರ್ಧಾರಕ್ಕೆ ಬಂದಿದೆ.
ಸೇನಾ ಮುಖ್ಯಸ್ಥರ ಆದೇಶ: ಇರಾನ್ ವಿರುದ್ಧ ಮತ್ತೆ ಯುದ್ಧ ಕಾರ್ಯಾಚರಣೆ ಪುನರಾರಂಭಿಸಲು ಸಿದ್ಧತೆ ನಡೆಸುವಂತೆ ಐಡಿಎಫ್ ಚೀಫ್ ಆಫ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಎಯಾಲ್ ಜಮೀರ್ ಅವರು ಸೇನೆಗೆ ಆದೇಶಿಸಿದ್ದಾರೆ ಎಂದು ‘ವೈನೆಟ್ ನ್ಯೂಸ್ ಸೈಟ್’ ವರದಿ ಮಾಡಿದೆ. ಇರಾನ್‌ನಿಂದಲೂ ಅನಿರೀಕ್ಷಿತ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಜಾಗರೂಕತೆ ವಹಿಸುವಂತೆ ಅವರು ಸೂಚಿಸಿದ್ದಾರೆ ಎಂದು ‘ಚಾನೆಲ್ ನ್ಯೂಸ್’ ತಿಳಿಸಿದೆ.
ಅಮೆರಿಕದ ನಿಲುವು: ಇನ್ನೊಂದೆಡೆ, ಹೊರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಇರಾನ್ ಮೇಲೆ ಸೀಮಿತ ಪ್ರಮಾಣದ ಮಿಲಿಟರಿ ದಾಳಿಗಳನ್ನು ಪುನರಾರಂಭಿಸುವ ಬಗ್ಗೆ ತಮ್ಮ ಸಲಹೆಗಾರರು ಪರಿಶೀಲಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಟ್ರಂಪ್ ಅವರು ಯುದ್ಧಗಳ ಬಗ್ಗೆ ಅಸಮಾಧಾನ ಹೊಂದಿದ್ದು, ಇರಾನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
