ಹಮಾಸ್ ಶನಿವಾರ ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತೆ ಇಸ್ರೇಲ್ 369 ಬಂಧಿತ ಪ್ಯಾಲೆಸ್ತೇನಿಯನ್ನರನ್ನು ಬಿಡುಗಡೆ ಮಾಡಿತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಮಧ್ಯವರ್ತಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಈ ವಿನಿಮಯವು ಕದನ ವಿರಾಮವನ್ನು ಉಳಿಸಿಕೊಳ್ಳಲು ಸಹಕರಿಸಿತು.
ಶನಿವಾರ ಬಿಡುಗಡೆಯಾದ ಮೂವರು ಒತ್ತೆಯಾಳುಗಳಾದ ಇಯಾರ್ ಹಾರ್ನ್, ಸಾಗುಯಿ ಡೆಕೆಲ್ ಚೆನ್ ಮತ್ತು ಸಶಾ ಟ್ರೌಫನೋವ್ ಅವರನ್ನು ಖಾನ್ ಯೂನಿಸ್‌ನಲ್ಲಿ ಒಂದು ವೇದಿಕೆಯಲ್ಲಿ ಇರಿಸಿ, ಅವರ ಸುತ್ತ ಸಶಸ್ತ್ರ ಹಮಾಸ್‌ಗಳು ನಿಂತಿರುವುದು ನೇರ ದೃಶ್ಯಗಳಲ್ಲಿ ಕಂಡುಬರುತ್ತದೆ. ನಂತರ ಅವರನ್ನು ಇಸ್ರೇಲ್‌ಗೆ ಹಿಂತಿರುಗಿಸಿದವು.
ಬಿಡುಗಡೆಯಾದ ಪ್ಯಾಲೆಸ್ತೇನಿಯನ್ ಕೈದಿಗಳನ್ನು ಹೊತ್ತ ಬಸ್‌ಗಳು ಇಸ್ರೇಲ್‌ನ ಓಫರ್ ಜೈಲಿನಿಂದ ಹೊರಟವು, ಮೊದಲ ಬಸ್‌ಗಳು ರಮಲ್ಲಾದಲ್ಲಿ ಪ್ಯಾಲೆಸ್ಟೀನಿಯನ್ ಧ್ವಜಗಳನ್ನು ಬೀಸುತ್ತಿದ್ದ ಜನಸಮೂಹದತ್ತ ಬಂದಿಳಿದವು.
“ನಾವು ಬಿಡುಗಡೆಯಾಗುತ್ತೇವೆಂದು ನಿರೀಕ್ಷಿಸಿರಲಿಲ್ಲ, ಆದರೆ ದೇವರು ದೊಡ್ಡವನು, ದೇವರು ನಮ್ಮನ್ನು ಸ್ವತಂತ್ರಗೊಳಿಸಿದನು” ಎಂದು ಬೆಥ್ ಲೆಹೆಮ್‌ನ 70 ವರ್ಷದ ಮೂಸಾ ನವರ್ವಾ ಹೇಳಿದರು, ಅವರು ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸೈನಿಕರ ಹತ್ಯೆಗಾಗಿ ಎರಡು ಜೀವಾವಧಿ ಶಿಕ್ಷೆಗಳನ್ನು ಅನುಭವಿಸುತ್ತಿದ್ದರು.
ಬಿಡುಗಡೆಯಾದ ಪ್ಯಾಲೆಸ್ತೇನಿಯನ್ ಕೈದಿಗಳನ್ನು ಹೊತ್ತ ಬಸ್‌ಗಳು ನಂತರ ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ಬಂದವು.
ಬಿಡುಗಡೆಯಾದ ಕೆಲವು ಪ್ಯಾಲೆಸ್ತೇನಿಯನ್ನರು ಎರಡನೇ ಪ್ಯಾಲೆಸ್ತೇನಿಯನ್ ದಂಗೆಯ ಸಮಯದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಇಸ್ರೇಲಿ ಸೈನಿಕರ ಹತ್ಯೆ ಸೇರಿದಂತೆ ದಾಳಿಗಳಿಗಾಗಿ ದೀರ್ಘ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು.
ಜನವರಿ 19 ರಿಂದ ಬಿಡುಗಡೆಯಾದ ಕೆಲವು ಇಸ್ರೇಲಿ ಒತ್ತೆಯಾಳುಗಳು ಆಹಾರವಿಲ್ಲದೆ, ತಿಂಗಳುಗಟ್ಟಲೆ ಸುರಂಗಗಳಲ್ಲಿ ಬಂಧಿಸಲ್ಪಟ್ಟು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆಂದು ವಿವರಿಸಿದ್ದಾರೆ.
ಕದನ ವಿರಾಮದ ಎರಡನೇ ಹಂತದಲ್ಲಿ ಉಳಿದ ಜೀವಂತ ಒತ್ತೆಯಾಳುಗಳನ್ನು ಹಿಂದಿರುಗಿಸುವ ಮತ್ತು ಗಾಜಾದಿಂದ ಇಸ್ರೇಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಮಾತುಕತೆಗಳು ನಡೆಯಲಿದ್ದು, ನಾಶವಾದ ಆಸ್ತಿಯ ಪುನರ್ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಬ್ಬ ಅಮೆರಿಕನ್ ಸೇರಿದಂತೆ ಮೂವರು ಒತ್ತೆಯಾಳುಗಳ ಬಿಡುಗಡೆಯನ್ನು ಒತ್ತಾಯಿಸಿದ್ದರು. “ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ತೋರುತ್ತದೆ!” ಅವರು ಹೇಳಿದರು.
ಶನಿವಾರದೊಳಗೆ ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಮಂಡಿಸುವುದಾಗಿ ಟ್ರಂಪ್ ಸೋಮವಾರ ಹೇಳಿದ್ದರು .
“ನನ್ನ ಮಟ್ಟಿಗೆ ಹೇಳುವುದಾದರೆ, ಎಲ್ಲಾ ಒತ್ತೆಯಾಳುಗಳನ್ನು ಶನಿವಾರ [ಫೆಬ್ರವರಿ 15] ಮಧ್ಯಾಹ್ನ 12 ಗಂಟೆಯೊಳಗೆ ಹಿಂತಿರುಗಿಸದಿದ್ದರೆ ಎಲ್ಲವನ್ನೂ ರದ್ದುಗೊಳಿಸಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ,” ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರ ಮೂಲಕ ಎಚ್ಚರವನ್ನು ನೀಡಿದ್ದಾರೆ.
ಫೆಬ್ರವರಿ 11 ರಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಶನಿವಾರ ಮಧ್ಯಾಹ್ನದೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಇಸ್ರೇಲ್ ಗಾಜಾದಲ್ಲಿ ತನ್ನ ಮಿಲಿಟರಿ ದಾಳಿಯನ್ನು ಪುನರಾರಂಭಿಸುತ್ತದೆ ಎಂದು ಹೇಳಿದರು.
ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ಆಕ್ರಮಣ ನಡೆಸಿ 1,200 ಜನರನ್ನು ಕೊಂದು 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ, ಅಕ್ಟೋಬರ್ 7, 2023 ರಂದು ಗಾಜಾ ವಿರುದ್ಧ ಇಸ್ರೇಲ್ ಮಿಲಿಟರಿ ದಾಳಿ ಪ್ರಾರಂಭವಾಯಿತು. ಅಂದಿನಿಂದ ಇಸ್ರೇಲ್ ಗಾಜಾದ ಮೇಲೆ ವಾಯು ಮತ್ತು ಭೂದಾಳಿಗಳನ್ನು ನಡೆಸುತ್ತಿದೆ, 17,400 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 47,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂಘರ್ಷದಲ್ಲಿ ಸುಮಾರು 400 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.
ಕೆಲವು ಒತ್ತೆಯಾಳುಗಳನ್ನು ನವೆಂಬರ್ 2023 ರಲ್ಲಿ ಸಂಕ್ಷಿಪ್ತ ಕದನ ವಿರಾಮ ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಯಿತು ಮತ್ತು ಕೆಲವರು ಯುದ್ಧದ ಪರಿಣಾಮವಾಗಿ ಕೊಲ್ಲಲ್ಪಟ್ಟರು.
ಈ ಒಪ್ಪಂದವು ಲಕ್ಷಾಂತರ ಸ್ಥಳಾಂತರಗೊಂಡ ಪ್ಯಾಲೆಸ್ತೇನಿಯನ್ನರು ಗಾಜಾದಲ್ಲಿರುವ ತಮ್ಮ ಪ್ರದೇಶಗಳಿಗೆ ಮರಳಲು ಅವಕಾಶ ನೀಡುತ್ತದೆ. ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆಯ ಪ್ರಕಾರ, ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಸುಮಾರು 1.9 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ , ಇಸ್ರೇಲಿ ದಾಳಿಯಲ್ಲಿ ಗಾಜಾದಲ್ಲಿರುವ 92% ವಸತಿಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ.