ಟೆಲ್ ಅವೀವ್: ಇಸ್ರೇಲ್ ಪಡೆಗಳು ಗಾಜಾದಲ್ಲಿ ಪ್ಯಾಲೆಸ್ತೀನ್ ಜನರೊಂದಿಗೆ ಅಮಾನುಷವಾಗಿ ವರ್ತಿಸುತ್ತಿರುವ ಸಮಯದಲ್ಲಿ, ಇಸ್ರೇಲ್ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ದೇಶದ ಜೈಲುಗಳಲ್ಲಿರುವ ಪ್ಯಾಲೆಸ್ತೀನ್ ಕೈದಿಗಳಿಗೆ ಅಗತ್ಯ ಆಹಾರ ಒದಗಿಸದಿರುವ ಕುರಿತು ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕೈದಿಗಳಿಗೆ ನೀಡುವ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.
ಸಾಮಾನ್ಯವಾಗಿ, ಸರ್ಕಾರದ ನೀತಿಗಳ ಮೇಲೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪವು ಸಲಹೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದಾಗ್ಯೂ, ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದೇ ಮೊದಲ ಬಾರಿಗೆ ಈ ವಿಷಯದ ಕುರಿತು ಪ್ರತಿಕ್ರಿಯಿಸಿದೆ.
ಪ್ಯಾಲೆಸ್ತೀನ್ ಕೈದಿಗಳಿಗೆ ಕನಿಷ್ಠ ಆಹಾರವನ್ನೂ ನೀಡದಿರುವುದು ಒಂದು ನೀತಿಯಾಗಿ ಜಾರಿಯಲ್ಲಿದೆ ಎಂದು ಇಸ್ರೇಲ್‌ನ ಮಾನವ ಹಕ್ಕುಗಳ ಸಂಸ್ಥೆಗಳು ನೀಡಿದ ದೂರಿನ ಮೇಲೆ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಮೂವರು ನ್ಯಾಯಾಧೀಶರ ನ್ಯಾಯಪೀಠವು ಸರ್ವಾನುಮತದ ತೀರ್ಪು ನೀಡಿದ್ದು, “ಕೈದಿಗಳ ಮೂಲಭೂತ ಬದುಕಿಗಾಗಿ ದಿನಕ್ಕೆ ಮೂರು ಬಾರಿ ಊಟ ಒದಗಿಸುವುದು ಸರ್ಕಾರದ ಕಾನೂನುಬದ್ಧ ಕರ್ತವ್ಯ” ಎಂದು ಹೇಳಿದೆ. ಈ ಆದೇಶಗಳನ್ನು ಅಧಿಕಾರಿಗಳು ತಕ್ಷಣ ಜಾರಿಗೆ ತರಬೇಕು ಎಂದು ಸೂಚಿಸಿದೆ.
ಕಳೆದ ವರ್ಷ ಅಸೋಸಿಯೇಷನ್ ಫಾರ್ ಸಿವಿಲ್ ರೈಟ್ಸ್ ಇನ್ ಇಸ್ರೇಲ್ (ACRI) ಮತ್ತು ಇಸ್ರೇಲಿ ರೈಟ್ಸ್ ಗ್ರೂಪ್ ಗಿಶಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಹ ಕೋರ್ಟ್ ಕೈಗೆತ್ತಿಕೊಂಡಿದೆ. ಇಸ್ರೇಲ್ ಜೈಲುಗಳಲ್ಲಿರುವ ಕೈದಿಗಳಿಗೆ ಸರ್ಕಾರ ಉದ್ದೇಶಪೂರ್ವಕವಾಗಿ ಆಹಾರ ನಿರ್ಬಂಧಗಳನ್ನು ವಿಧಿಸುತ್ತಿದೆ ಮತ್ತು ಅವರನ್ನು ಉಪವಾಸದಿಂದ ಸಾಯುವಂತೆ ಮಾಡುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಇದಕ್ಕೆ ಸುಪ್ರೀಂ ಕೋರ್ಟ್, “ನಾವು ಸುಖಭೋಗದ ಅಥವಾ ಐಷಾರಾಮಿ ಜೀವನದ ಬಗ್ಗೆ ಮಾತನಾಡುತ್ತಿಲ್ಲ. ಕಾನೂನಿನ ಪ್ರಕಾರ ಮನುಷ್ಯನ ಬದುಕುಳಿಯಲು ಅಗತ್ಯವಿರುವ ಮೂಲಭೂತ ಪರಿಸ್ಥಿತಿಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ” ಎಂದು ಹೇಳಿದೆ. “ನಮ್ಮ ಅತ್ಯಂತ ದುಷ್ಟ ಶತ್ರುಗಳಂತೆ ನಾವು ವರ್ತಿಸಬಾರದು” ಎಂದು ಸಹ ಅಭಿಪ್ರಾಯಪಟ್ಟಿದೆ.
ಅಕ್ಟೋಬರ್ 7, 2023ರಿಂದ ಗಾಜಾದಲ್ಲಿ ಹಮಾಸ್ ಗುಂಪುಗಳ ಮೇಲೆ ಇಸ್ರೇಲ್ ದಾಳಿಗಳು ಆರಂಭವಾದ ನಂತರ, ಇಸ್ರೇಲ್ ಜೈಲುಗಳಲ್ಲಿ ಕನಿಷ್ಠ 61 ಪ್ಯಾಲೆಸ್ತೀನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಮಾರ್ಚ್‌ನಲ್ಲಿ 17 ವರ್ಷದ ಪ್ಯಾಲೆಸ್ತೀನ್ ಯುವಕ ಉಪವಾಸದಿಂದ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ರಕ್ಷಣಾ ಸಚಿವರಿಂದ ತೀವ್ರ ಟೀಕೆ
ಸುಪ್ರೀಂ ಕೋರ್ಟ್‌ನ ಈ ಆದೇಶದ ಮೇಲೆ ಇಸ್ರೇಲ್‌ನ ರಕ್ಷಣಾ ಸಚಿವ ಇಟಮರ್ ಬೆನ್ ಗ್ವಿರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ನ್ಯಾಯಾಧೀಶರು ನಿಜವಾಗಿಯೂ ಇಸ್ರೇಲಿಗಳೇ?” ಎಂದು ಪ್ರಶ್ನಿಸಿದ್ದಾರೆ. ಗಾಜಾದಲ್ಲಿ ಇಸ್ರೇಲಿ ಪ್ರಜೆಗಳು ಹಮಾಸ್‌ನಿಂದ ಒತ್ತೆಯಾಳಾಗಿ ಇರುವಾಗ, ಸುಪ್ರೀಂ ಕೋರ್ಟ್ ಹಮಾಸ್‌ಗೆ ಬೆಂಬಲ ನೀಡುವುದು ನಾಚಿಕೆಗೇಡಿನ ವಿಷಯ ಎಂದಿದ್ದಾರೆ. ಜೈಲುಗಳಲ್ಲಿ ಕಾನೂನಿನ ಪ್ರಕಾರವೇ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸಿಆರ್‌ಐ ಸಂಸ್ಥೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಇಸ್ರೇಲ್ ಜೈಲುಗಳು ಹಿಂಸೆ ಶಿಬಿರಗಳಾಗಿ ಪರಿವರ್ತನೆಯಾಗಬಾರದು ಎಂದು ಹೇಳಿದೆ. “ಸರ್ಕಾರ ಜನರನ್ನು ಉಪವಾಸದಿಂದ ಬಳಲುವಂತೆ ಮಾಡಬಾರದು. ಜನರು ಜನರನ್ನು ಕೊಲ್ಲಬಹುದೆ? ಅವರು ಎಂತಹ ಅಪರಾಧ ಎಸಗಿದ್ದಾರೆ ಎಂಬುದು ನಂತರದ ವಿಷಯ” ಎಂದು ಎಸಿಆರ್‌ಐ ಸ್ಪಷ್ಟಪಡಿಸಿದೆ.