Home ಬ್ರೇಕಿಂಗ್ ಸುದ್ದಿ ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಐದು ಮಂದಿ ದುರ್ಮರಣ

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಐದು ಮಂದಿ ದುರ್ಮರಣ

ಹಮಾಸ್ (Hamas) ಇಸ್ರೇಲ್ (Israel) ಮೇಲೆ ದಾಳಿ ನಡೆಸಿ ಮೂರು ವರ್ಷಗಳು ಪೂರೈಸಿದ ಸಂದರ್ಭದಲ್ಲೇ, ಇಸ್ರೇಲ್ ಸೇನೆಯು ಗಾಜಾ ಪಟ್ಟಿಯ (Gaza Strip) ಮೇಲೆ ಹೊಸದಾಗಿ ವೈಮಾನಿಕ ದಾಳಿಗಳನ್ನು (Airstrike) ನಡೆಸಿದೆ. ಬುಧವಾರ ನಡೆದ ಈ ದಾಳಿಗಳಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ಟೀನ್ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ನೋವಾ ಸಂಗೀತ ಉತ್ಸವ ನಡೆದ ಸ್ಥಳದಲ್ಲಿ ಮೃತಪಟ್ಟ ಸುಮಾರು 300ಕ್ಕೂ ಹೆಚ್ಚು ಜನರ ನೆನಪಿನಲ್ಲಿ ಅವರ ಕುಟುಂಬಸ್ಥರು ಮುಂಜಾನೆ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದ ವೇಳೆಯಲ್ಲೇ, ಗಡಿಯಾಚೆಗಿನ ಗಾಜಾ ಪ್ರದೇಶದಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದವು.

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ವರದಿಯ ಪ್ರಕಾರ, ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರಲ್ಲೊಬ್ಬರನ್ನು ಮೊಹಮ್ಮದ್ ತಮೌಸ್ ಎಂದು ಗುರುತಿಸಲಾಗಿದ್ದು, ಇವರು ತುರ್ತು ರಕ್ಷಣಾ ಸೇವೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ನಾಗರಿಕ ರಕ್ಷಣಾ ಪಡೆ ತಿಳಿಸಿದೆ. ಆದರೆ, ಕಮಾಲ್ ಅದ್ವಾನ್ ಆಸ್ಪತ್ರೆಯ ಬಳಿ ಇಸ್ರೇಲಿ ಪಡೆಗಳ ಮೇಲೆ ದಾಳಿ ನಡೆಸಲು ಸ್ಫೋಟಕಗಳನ್ನು ಜೋಡಿಸುತ್ತಿದ್ದ ಇಬ್ಬರು ಉಗ್ರರನ್ನು ತಾನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಇದಲ್ಲದೆ, ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 60 ವರ್ಷದ ಹಿರಿಯ ನಾಗರಿಕ ಹಾಗೂ ಇನ್ನೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಅಲ್-ಬುರಾಕ್ ಶಿಬಿರದ ಮೇಲಿನ ದಾಳಿಯಲ್ಲೂ ಒಬ್ಬರು ಜೀವ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕಣಿವೆಯಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ, ಗಾಜಾದಲ್ಲಿ ಜನರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಲಕ್ಷಾಂತರ ಜನರು ತಂಬುಗಳಲ್ಲಿ ಮತ್ತು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಯುದ್ಧ ಮತ್ತು ಆಹಾರದ ಅಭಾವದಿಂದಾಗಿ ಜನಜೀವನ ತೀವ್ರ ಸಂಕಷ್ಟಕ್ಕೆ ಈಡಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

You cannot copy content of this page

Exit mobile version