ಇರಾನ್ ಶಾಲೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ: 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವು

ತೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ವಿಕೋಪಕ್ಕೆ ಹೋಗಿದ್ದು, ಇರಾನ್‌ನ ಮಿನಾಬ್‌ನಲ್ಲಿರುವ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಇಸ್ರೇಲ್ ಸೇನೆಯು ಇರಾನ್ ಮೇಲೆ ಏಕಾಏಕಿ ನಡೆಸಿದ ವೈಮಾನಿಕ ದಾಳಿಯಿಂದ ಈ ದುರಂತ ಸಂಭವಿಸಿದೆ.

ಇರಾನ್‌ನ ಹಲವಾರು ಭಾಗಗಳ ಮೇಲೆ ಇಸ್ರೇಲ್ ಸರಣಿ ದಾಳಿಗಳನ್ನು ನಡೆಸುತ್ತಿದ್ದು, ಪರಿಸ್ಥಿತಿ ಅತ್ಯಂತ ಭಯಾನಕವಾಗಿದೆ. ದಾಳಿಯ ಬೆನ್ನಲ್ಲೇ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಈ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಡೊನಾಲ್ಡ್ ಟ್ರಂಪ್, ಇರಾನ್ ಮತ್ತೆ ಅಣ್ವಾಯುಧಗಳನ್ನು ತಯಾರಿಸುತ್ತಿದೆ ಮತ್ತು ಅಮೆರಿಕದ ಮಿಲಿಟರಿ ನೆಲೆಗಳಿಗೆ ಸಂಚಕಾರ ತಂದಿದೆ, ಹಾಗಾಗಿ ಅಮೆರಿಕದ ರಕ್ಷಣೆಗಾಗಿ ಈ ದಾಳಿಗಳು ಅನಿವಾರ್ಯ ಎಂದು ಹೇಳಿದ್ದಾರೆ.

ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಬಲವಾದ ಪ್ರತಿರೋಧ ತೋರಿದೆ. ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆಯುತ್ತಿದ್ದು, ಏಕಕಾಲದಲ್ಲಿ 10ಕ್ಕೂ ಹೆಚ್ಚು ದೇಶಗಳ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಇಸ್ರೇಲ್ ಮತ್ತು ಅಮೆರಿಕದ ಈ ನಡೆಯ ಬಗ್ಗೆ ರಷ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕವು ಜಾಗತಿಕ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ ಎಂದು ಕಿಡಿಕಾರಿದೆ.

ಯುದ್ಧದ ತೀವ್ರತೆಯಿಂದಾಗಿ ಪಶ್ಚಿಮ ಏಷ್ಯಾದ ವಿಮಾನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹೈದರಾಬಾದ್‌ನ ಶಂಷಾಬಾದ್ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಇಂಡಿಗೋ ಮತ್ತು ಏರ್ ಇಂಡಿಯಾದ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪಶ್ಚಿಮ ಏಷ್ಯಾದತ್ತ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಅರ್ಧ ಹಾದಿಯಲ್ಲೇ ವಾಪಸ್ ಮರಳಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಏರ್‌ಲೈನ್ಸ್‌ಗಳು ಆ ಭಾಗದ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು