ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ತೀವ್ರ ಮುಖಭಂಗ ಎದುರಿಸಿದ್ದಾರೆ. ನೇತಾನ್ಯಹು ಭಾಷಣಕ್ಕೆ ಬರುತ್ತಿದ್ದಂತೆಯೇ ಪ್ರಪಂಚದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಸಭಾಂಗಣ ತೊರೆದು, ಇನ್ನೂ ಕೆಲವರು ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗವನ್ನು ಇಸ್ರೇಲ್ ಪ್ರಧಾನಿ ಅನುಭವಿಸಬೇಕಾಯಿತು.
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ನ ಸೈನಿಕ ಕಾರ್ಯಾಚರಣೆಗಳ ವಿರುದ್ಧ ವಿಶ್ವಸಂಸ್ಥೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರಪಂಚದ ಬಹುತೇಕ ದೇಶಗಳ ಪ್ರತಿನಿಧಿಗಳು ಒಡ್ಡಿದ ಪ್ರತಿರೋಧಕ್ಕೆ ಬಹುತೇಕ ಸಭಾಂಗಣ ಖಾಲಿ ಹೊಡೆದಂತಾಯಿತು. ಈ ಒಂದು ದೃಶ್ಯ ಜಾಗತಿಕ ವೇದಿಕೆಯಲ್ಲಿ ಇಸ್ರೇಲ್ಗೆ ಭಾರಿ ಹಿನ್ನೆಡೆಯಂತೆ ಕಂಡುಬಂದಿದೆ.
ವರದಿಗಳ ಪ್ರಕಾರ, ನೆತನ್ಯಾಹು ಭಾಷಣದ ಸಮಯದಲ್ಲಿ ಅರಬ್ ಹಾಗೂ ಮುಸ್ಲಿಂ ರಾಷ್ಟ್ರಗಳ ಪ್ರತಿನಿಧಿಗಳು ಬಹುತೇಕ ಹೊರನಡೆದರು. ಇವರ ಜೊತೆ ಹಲವಾರು ಆಫ್ರಿಕನ್ ರಾಷ್ಟ್ರಗಳು ಮತ್ತು ಕೆಲವು ಯುರೋಪಿಯನ್ ರಾಜ್ಯಗಳ ಪ್ರತಿನಿಧಿಗಳು ಸಹ ಸಭಾತ್ಯಾಗ ಮಾಡಿದರು. ಈ ಬೆಳವಣಿಗೆ ಇಸ್ರೇಲ್ ಜಾಗತಿಕ ವೇದಿಕೆಯಲ್ಲಿ ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಎತ್ತಿ ಹಿಡಿಯುವಂತಿತ್ತು.
ಸಭಾಂಗಣದಲ್ಲಿ ಕೂಗಾಟ, ಧಿಕ್ಕಾರದ ಘೋಷಣೆ ಮೊಳಗಿತು. ಇನ್ನೂ ಕೆಲವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಇಷ್ಟಾಗಿಯೂ ಅವರನ್ನು ಬೆಂಬಲಿಸಿದ ಯುಎಸ್ ನಿಯೋಗವು ಅಲ್ಲಿತ್ತು. ಕೆಲವು ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳು ಹಾಜರಿದ್ದರು.
ಗಾಜಾದಲ್ಲಿ ಹಮಾಸ್ ನಿರ್ಮೂಲನೆ ಮಾಡುವ ಇಸ್ರೇಲ್‌ನ ನಿರ್ಣಯವನ್ನು ಬೆಂಜಮಿನ್ ನೇತಾನ್ಯಹು ತಮ್ಮ ಭಾಷಣದಲ್ಲಿ ಪುನರುಚ್ಚರಿಸಿದರು. ಇಸ್ರೇಲ್ ಕೆಲಸ ಇನ್ನೂ ಮುಗಿದಿಲ್ಲ. ಗಾಜಾ ನಗರದಿಂದ ಉಗ್ರಗಾಮಿ ಗುಂಪನ್ನು ಬೇರುಸಹಿತ ಕಿತ್ತೊಗೆಯುವ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ನೇತಾನ್ಯಹು ಘೋಷಿಸಿದರು.
ಈ ನಡುವೆ ತಮ್ಮ ಭಾಷಣದ ಮಧ್ಯೆ ಮಧ್ಯೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳಿ ಮಾತನಾಡಿದ್ದಾರೆ. ಈ ನಡುವೆ ನೆತನ್ಯಾಹು ಅವರ ಭಾಷಣವನ್ನು ಅಂತಾರಾಷ್ಟ್ರೀಯ ಸಮುದಾಯ ಸೂಕ್ಷ್ಮವಾಗಿ ವೀಕ್ಷಿಸಿತು. ಇತ್ತೀಚಿಗೆ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರರು ಸ್ವತಂತ್ರ ಪ್ಯಾಲೇಸ್ಟಿನಿಯನ್ ರಾಷ್ಟ್ರವಾಗಿ ಗುರುತಿಸುವುದಾಗಿ ಘೋಷಿಸಿವೆ.
ಯುರೋಪಿಯನ್ ಒಕ್ಕೂಟವು ಇಸ್ರೇಲ್ ಮೇಲೆ ಸುಂಕಗಳು ಮತ್ತು ನಿರ್ಬಂಧಗಳನ್ನು ಪರಿಗಣಿಸುತ್ತಿದೆ. ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೆತನ್ಯಾಹು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಉಲ್ಲೇಖಿಸಿ ಬಂಧನ ವಾರಂಟ್ ಹೊರಡಿಸಿದೆ. ಗಾಜಾದಲ್ಲಿ ಇಸ್ರೇಲ್ ನರ ಮೇಧ ನಡೆಸಿದೆ ಎಂಬ ದಕ್ಷಿಣ ಆಫ್ರಿಕಾದ ಆರೋಪವನ್ನು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯ ಪರಿಶೀಲಿಸುತ್ತಿದೆ.