Home ದೇಶ ಹತ್ಯೆಯಾದ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ಹಣದ ಆಮಿಷ ಒಡ್ಡಿರುವುದು ಸುಳ್ಳು: ಮಮತಾ

ಹತ್ಯೆಯಾದ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ಹಣದ ಆಮಿಷ ಒಡ್ಡಿರುವುದು ಸುಳ್ಳು: ಮಮತಾ

0

ಕೋಲ್ಕತ್ತ: ಆರ್‌ ಜಿ.ಕರ್ ಆಸ್ಪತ್ರೆಯಲ್ಲಿ ‘ಹತ್ಯೆಯಾದ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ನಾನು ಹಣದ ಆಮಿಷ ಒಡ್ಡಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಟಷ್ಟಪಡಿಸಿದ್ದಾರೆ.

ರಾಜ್ಯ ಸಚಿವಾಲಯ ‘ನಬನ್ನಾ’ದಲ್ಲಿ ನಡೆದ ಆಡಳಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಪಿತೂರಿಯಿಂದ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲ ಎಡ ಪಕ್ಷಗಳು ಇದರಲ್ಲಿ ಭಾಗಿಯಾಗಿರುವುದು ನೋವು ತಂದಿದೆʼ ಎಂದು ಅವರು ಬೇಸರವ್ಯಕ್ತಪಡಿಸಿದ್ದಾರೆ.

‘ಹತ್ಯೆಯಾದ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ನಾನು ಹಣದ ಆಮಿಷ ಒಡ್ಡಿದ್ದೇನೆ ಎಂಬುವುದು ಸುಳ್ಳು. ಇದು ಅಪಪ್ರಚಾರವಲ್ಲದೇ ಬೇರೇನೂ ಅಲ್ಲ. ಮಗಳ ಸ್ಮರಣಾರ್ಥ ಏನಾದರೂ ಮಾಡಬೇಕೆಂದಿದ್ದರೆ ನಮ್ಮ ಸರ್ಕಾರ ನಿಮ್ಮ ಜೊತೆಗಿದೆ ಎಂದು ಪೋಷಕರಿಗೆ ಹೇಳಿದ್ದೇನೆ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂದು ನನಗೆ ಗೊತ್ತಿದೆ ಎಂದು ಮಮತಾ ಹೇಳಿದ್ದಾರೆ.

‘ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೋಲ್ಕತ್ತ ಪೊಲೀಸ್ ಆಯುಕ್ತ ವಿನಿತ್ ಗೋಯಲ್ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ. ದುರ್ಗ ಪೂಜೆಗೂ ಮೊದಲು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ತಿಳಿದಿರುವ ಯಾರನ್ನಾದರೂ ನೇಮಿಸಬೇಕಿದೆ’ ಎಂದಿರುವ ಅವರು,

‘ಸಾಧ್ಯವಾದಷ್ಟೂ ಬೇಗನೇ ಕರ್ತವ್ಯಕ್ಕೆ ಹಾಜರಾಗಿ’ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ಇದೇ ವೇಳೆ ಮನವಿ ಮಾಡಿದ್ದೇನೆ ಎಮದು ಅವರು ತಿಳಿಸಿದ್ದಾರೆ.

ಆಗಸ್ಟ್ 9ರಂದು ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದಾಗ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು.

You cannot copy content of this page

Exit mobile version