Tuesday, June 18, 2024

ಸತ್ಯ | ನ್ಯಾಯ |ಧರ್ಮ

ಆರ್ಥಿಕ ಅಭಿವೃದ್ಧಿಗಿಂತ ಗ್ರಾಮೀಣ ಸಾಮಾಜಿಕ ಅನಿಷ್ಠಗಳ ವಿರುದ್ಧ ಅರಿವು ಮೂಡಿಸುವುದು ಅಗತ್ಯ: ಪ್ರೊ. ಟಿ.ಎಚ್. ಮೂರ್ತಿ

ರಾಮನಗರ: ದೇಶವು ಆರ್ಥಿಕ ಪ್ರಗತಿಯ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ, ಗ್ರಾಮೀಣ ಪ್ರದೇಶದ ಜಾತಿಯತೆ ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅನಾಚಾರಗಳ ವಿರುದ್ಧ ಸಮಗ್ರವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಗ್ರಾಮೀಣಾಭಿವೃದ್ಧಿ ವಿಭಾಗದ ಪ್ರಾಧ್ಯಾಪಕರಾದ ಪ್ರೊಫೆಸರ್ ಟಿ.ಎಚ್. ಮೂರ್ತಿಯವರು ತಿಳಿಸಿದರು.

ಮೂರ್ತಿಯವರು ಇತ್ತೀಚೆಗೆ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದ ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಗ್ರಾಮೀಣಾಭಿವೃದ್ಧಿ ಅಧ್ಯಯನ ಸಂಸ್ಥೆ ಮತ್ತು ಜಿಲ್ಲಾ ಪಂಚಾಯಿತಿ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ ಗ್ರಾಮೀಣ ಅಭಿವೃದ್ಧಿ ಕುರಿತ ವಿಶೇಷ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜಾಗತಿಕವಾಗಿ ಚಿಂತಿಸಿ ಪ್ರಾದೇಶಿಕವಾಗಿ ಅನುಷ್ಠಾನಗೊಳಿಸಬೇಕಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮಹಮ್ಮದ್ ಯೂನಿಸ್ ಅವರು, ಮಹಿಳಾ ಸ್ವಸಹಾಯ ಸಂಘಗಳ ಮಹತ್ವಕ್ಕೆ ಒತ್ತು ನೋಡುವುದರ ಮೂಲಕ ನೋಬೆಲ್ ಪ್ರಶಸ್ತಿಗೆ ಭಾಜನರಾದರು ಎಂದು ಹೇಳಿದರು.

ದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಮಾಡಿರುವ ಒಟ್ಟು ಉಳಿತಾಯ 47 ಲಕ್ಷ ಕೋಟಿ ರೂಪಾಯಿಗಳು ಇದು ಸಾಮಾನ್ಯವಾದ ಬೆಳವಣಿಗೆಯಲ್ಲ. ಅಭಿವೃದ್ಧಿಯ ವಿಷಯದಲ್ಲಿ ಸ್ವಾತಂತ್ರ‍್ಯ ಮುಖ್ಯ ಎಂಬುದನ್ನು ಪ್ರತಿಪಾದಿಸಿದ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ಅಭಿಪ್ರಾಯವನ್ನು ಇಂದು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ 1984 -85ರಲ್ಲಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ರವರು ಗ್ರಾಮೀಣ ಸಮುದಾಯದಲ್ಲಿ ನೀರಿಗಾಗಿ ಪಡುತ್ತಿದ್ದ ಸಂಕಷ್ಟಗಳಿಗೆ ಪರಿಹಾರವನ್ನು ಸ್ಥಳೀಯವಾಗಿ ರೂಪಿಸಿದ ಶ್ರೇಯಸ್ಸು ಅಬ್ದುಲ್ ನಜೀರ್ ಸಾಬ್ ಅವರದ್ದು ಎಂದರು.

ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ತೇಜ ರವರು ಮಾತನಾಡಿ, ಶಿಬಿರದ ಯಶಸ್ಸಿಗೆ ಪೂರಕವಾಗಿ ಗ್ರಾಮ ಪಂಚಾಯತಿಯವರು ಸಹಕಾರ ನೀಡಲಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಸ್ಥಳೀಯ ಜನತೆಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಯ್ಯನವರು, ನಿರಂತರ ಓದು ಯಶಸ್ಸಿಗೆ ದಾರಿಯಾಗಬಲ್ಲದು ಎಂದು ತಿಳಿಸಿದರು.

ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಕೆ ರಾಮಕೃಷ್ಣಯ್ಯ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ವಿಭಾಗ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಕೇಂದ್ರದ ಎಲ್ಲ ವಿಭಾಗಗಳ ಆಧ್ಯಾಪಕರು ಆಸಕ್ತಿ ಮತ್ತು ನಿರಂತರ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕೇಂದ್ರಕ್ಕೆ ಹೆಚ್ಚಿನ ಗ್ರಾಮೀಣ ಮಕ್ಕಳು ಪ್ರವೇಶ ಪಡೆಯಲು ಸಹಕಾರಿಯಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ವಿಭಾಗದ ಸಂಯೋಜಕರಾದ ಎಂಪಿ ಶ್ರೀರಂಗನಾಥ ಅವರು, ಬಹಳ ದಿನಗಳಿಂದ ಹಿಂದೆಯೇ ನಡೆಯಬೇಕಿದ್ದ ಈ ಶಿಬಿರವು, ಪ್ರಕೃತಿಯ ವೈಪರಿತ್ಯದಿಂದಾಗಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಶಿಬಿರ ನಡೆಸಲು ಸಹಕಾರ ನೀಡಿದ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು , ಬೆಂಗಳೂರು ವಿಶ್ವವಿದ್ಯಾಲಯ ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಗ್ರಾಮೀಣಾಭಿವೃದ್ಧಿ ವಿಭಾಗ ಮತ್ತು ಸೂಕ್ತ ಮಾರ್ಗದರ್ಶನ ಸಹಕಾರ ನೀಡಿದ ಜಿಲ್ಲಾ ಪಂಚಾಯತಿಯ ಅಧಿಕಾರಿಗಳನ್ನು ಸ್ಮರಿಸಿದರು.

ಸಮಾರಂಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ನೀಮಾ ಜ್ಞಾನದೇವ, ಪಿಡಿಒ ಕೃಷ್ಣಯ್ಯ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಸಂಯೋಜಕರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು