Saturday, June 15, 2024

ಸತ್ಯ | ನ್ಯಾಯ |ಧರ್ಮ

ಈಶ್ವರಪ್ಪರ ಗುಂಡಿನ ಬೆದರಿಕೆಗೆ ಹೆದರುವ ರಕ್ತ ನಮ್ಮದಲ್ಲ: ಡಿಕೆಶಿ

ಬೆಂಗಳೂರು: ಈಶ್ವರಪ್ಪ ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ. ಅವರ ಹೇಳಿಕೆಗೆ ನಡುಗುವ ನನ್ನ ಅಥವಾ ರಕ್ತ ಡಿ. ಕೆ. ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಶ್ವರಪ್ಪ ಅವರ ಹೇಳಿಕೆಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು.ನಗರದ ದಿ ಕ್ಯಾಪಿಟಲ್ ಹೋಟೇಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಯಾರಿ ಸಮಿತಿ ಸಭೆ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು.


ಡಿಕೆ ಸುರೇಶ್ ಗೆ ಗುಂಡಿಕ್ಕುವ ಸಂಬಂಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವಂತೆ ಈಶ್ವರಪ್ಪ ಅವರನ್ನು ಯಾರೂ ಕೇಳಿಲ್ಲದಿರುವುದು ಬೇಸರದ ಸಂಗತಿ. ಹಿಂದೆ ಸದನದಲ್ಲಿ ನಮ್ಮ ತಂದೆ ಬಗ್ಗೆ ಕೂಡ ಹೀಗೆಯೇ ಮಾತನಾಡಿದ್ದರು. ಅದಕ್ಕೆ ಒಂದು ಸುತ್ತಿನ ಸೆಟ್ಲಮೆಂಟ್ ಮಾಡಿದ್ದೇವೆ. ಈಶ್ವರಪ್ಪ ಈಗ ಎಲ್ಲಿದ್ದಾರೆ? ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ. ನಮ್ಮ ಪೂರ್ವಜರಾದ ಕೆಂಪೇಗೌಡರ ಇತಿಹಾಸ ಈಶ್ವರಪ್ಪರಿಗೆ ಗೊತ್ತಿರಬೇಕಿತ್ತು. ನಮಗೆ ನಮ್ಮದೇ ಆದ ಇತಿಹಾಸವಿದೆ. ನಾವು ಕಿವಿ ಮೇಲೆ ಹೂವ ಇಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.


ಕಾರ್ಯರೂಪಕ್ಕೆ ತರವುಂಥ ಯೋಜನೆಗಳು ಮಾತ್ರ ಪ್ರಣಾಳಿಕೆಗೆ ಸೇರ್ಪಡೆ
ಇಂದು ಕಾಂಗ್ರೆಸ್ ಪಕ್ಷದ ಕೇಂದ್ರ ಪ್ರಣಾಳಿಕೆ ಸಮಿತಿ ಸಭೆ ನಡೆಯುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಈ ಸಮಿತಿ ಸದಸ್ಯರಾಗಿದ್ದಾರೆ.‘ಇಂದಿನ ಸಭೆಗೆ ಸುಮಾರು 150 ಜನರು ಹಾಗೂ ಸಂಘ ಸಂಸ್ಥೆಗಳಿಗೆ ಆಹ್ವಾನ ನೀಡಿದ್ದೆವು. ಬಹುತೇಕ ಎಲ್ಲರೂ ಸಭೆಗೆ ಬಂದು ಸಲಹೆ ನೀಡುತ್ತಿದ್ದಾರೆ. ನಾವು ರಾಷ್ಟ್ರದ ಭದ್ರತೆ, ಎಲ್ಲ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಮಾಡುತ್ತೇವೆ ಎಂದರು.


ಈ ಹಿಂದೆ ನಮ್ಮ ಪಕ್ಷದಿಂದ ಮಾಡಿದ ಗ್ಯಾರಂಟಿ ಪ್ರಣಾಳಿಕೆ ದೇಶಕ್ಕೆ ಮಾದರಿಯಾಗಿತ್ತು. ಅದನ್ನು ನಾವು ಕಾರ್ಯರೂಪಕ್ಕೆ ತಂದಿದ್ದೇವೆ. ನಾವು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಯೋಜನೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
‘ಇಂಡಿಯಾ’ ಒಕ್ಕೂಟ ಕೂಡ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಿದೆ. ಎಲ್ಲರೂ ಒಟ್ಟಾಗಿ ದೇಶದಲ್ಲಿ ಬದಲಾವಣೆ, ಕ್ರಾಂತಿ ತರಲು ಹೋರಾಟ ಮಾಡುತ್ತೇವೆ. ಭಾವನೆ ಬಿಟ್ಟು ಜನರು ಬದುಕಿನತ್ತ ಸರ್ಕಾರದ ಬಂಡಿಯನ್ನು ಸಾಗಿಸುವುದು ನಮ್ಮ ಉದ್ದೇಶ. ಇಂದಿನ ಸಭೆಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಪಿ. ಚಿದಂಬರಂ ಬರಬೇಕಿತ್ತು. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪ್ರಣಾಳಿಕೆ ಸಿದ್ದಪಡಿಸುತ್ತೇವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು