ಮುಂಬೈ: ಯಾರ ಸಮಾಧಿಗೂ ಹಾನಿ ಮಾಡುವುದು ಸರಿಯಲ್ಲ, ಇದರಿಂದ ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆಯುಂಟಾಗಲಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಮತ್ತು ಆ ಬಳಿಕ ನಡೆದ ಘರ್ಷಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ಯಾರ ಸಮಾಧಿಗೂ ಹಾನಿ ಮಾಡುವುದು ಅಥವಾ ಒಡೆಯುವುದು ಸರಿಯಲ್ಲ. ಏಕೆಂದರೆ ಇದು ಪರಸ್ಪರ ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳುಮಾಡುತ್ತದೆ. ಅಂತಹ ಅಶಿಸ್ತಿನ ನಡೆಗಳ ವಿರುದ್ಧ ವಿಶೇಷವಾಗಿ ನಾಗ್ಪುರದಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉದ್ಧವ್ ನೇತೃತ್ವದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ, ಅಸ್ಥಿರತೆ ಸೃಷ್ಟಿ ಮಾಡಲಾಗುತ್ತಿದೆ. ಆರ್ಥಿಕ ಸಂಕಷ್ಟ, ಹೆಚ್ಚಿದ ಸಾಲದ ಹೊರೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆ ಬಗ್ಗೆ ಪ್ರಶ್ನೆ ಉದ್ಭವಿಸಿದಾಗ ನಾಗರಿಕರನ್ನು ಇತಿಹಾಸಗಳ ಬಗ್ಗೆ ಗಮನಹರಿಸುವಂತೆ ಮಾಡಲಾಗುತ್ತಿದೆ. ನೆರೆಯ ರಾಜ್ಯಕ್ಕೆ ಸಹಾಯ ಮಾಡಲು(ಗುಜರಾತನ್ನು ಉಲ್ಲೇಖಿಸಿ) ಮಹಾರಾಷ್ಟ್ರದಿಂದ ಹೂಡಿಕೆದಾರರನ್ನು ದೂರ ಸೆಳೆಯಲು ವ್ಯೂಹಾತ್ಮಕವಾಗಿ ತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.