Wednesday, August 14, 2024

ಸತ್ಯ | ನ್ಯಾಯ |ಧರ್ಮ

ಒಳಮಿಸಲಾತಿ: ಪರಿಶಿಷ್ಟ ಜಾತಿ ಬಲಗೈ ಸಮುದಾಯ ಸಂಘಟಿತವಾಗಲು ಇದು ಸಕಾಲ

ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳ ಮೀಸಲಾತಿ ನೀಡಬಹುದು ಎಂದು ಇದೀಗ ತೀರ್ಪಿತ್ತಿದೆ. ಇದರ ಹಿನ್ನೆಲೆಯಲ್ಲಿ ಈ ಬಗ್ಗೆ ಹೋರಾಟ ಮಾಡುತ್ತಿದ್ದ ಕರ್ನಾಟಕದ ಪರಿಶಿಷ್ಟ ಜಾತಿಯ ಒಂದು ಜಾತಿ ಸಂಭ್ರಮಿಸುತ್ತಿದೆ. ದುರಂತ ಎಂದರೆ ಅದೇ ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ ಬಲಗೈ ಅಥವಾ ಹೊಲೆಯ ಅಥವಾ ಛಲವಾದಿ ಸಮುದಾಯ ಒಳ ಮೀಸಲಾತಿ ಸಂಬಂಧ ತನ್ನ ಯಾವುದೇ ಅಭಿಪ್ರಾಯವನ್ನು ಎಲ್ಲಿಯೂ ಮುಕ್ತವಾಗಿ ಹಂಚಿಕೊಳ್ಳುತ್ತಿಲ್ಲ! ಸ್ವಾಗತಿಸುತ್ತಿಲ್ಲ ಅಥವಾ ತಿರಸ್ಕತಿಸುತ್ತಿಲ್ಲ!
ಇಡೀ ಸಮುದಾಯ ಒಂದು ರೀತಿಯ ಮೌನದ ಮೊರೆ ಹೋಗಿದೆ.

ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಇಂತಹ ನಡೆಗೆ ಸಾಕಷ್ಟು ಕಾರಣವು ಇದ್ದಿದೆ. ಮುಖ್ಯವಾಗಿ ಇದೊಂದು ಸೈದ್ಧಾಂತಿಕ ಸಮುದಾಯ. ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಯಲ್ಲಿ ಸಮುದಾಯ ಅಚಲ ನಂಬಿಕೆ ಇಟ್ಟಿದೆ‌. ಅಂಬೇಡ್ಕರರ ಚಿಂತನೆ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತದೆ. ಜಾತಿಯ ಯಾವುದೇ ಬಗೆಯ ಆಚರಣೆಯನ್ನು ಅದು ಬೆಂಬಲಿಸುವುದಿಲ್ಲ. ಮುಖ್ಯವಾಗಿ ಪರಿಶಿಷ್ಟ ಜಾತಿಗಳು ಒಂದು ಅಥವಾ ಏಕ ಎಂದು ಅಂಬೇಡ್ಕರ್ ವಾದ ಹೇಳುತ್ತದೆ. ಈ ಎಲ್ಲ ಕಾರಣಗಳಿಗಾಗಿ ಬಲಗೈ ಸಮುದಾಯ ಜಾತಿ ವ್ಯವಸ್ಥೆಯನ್ನು ಎತ್ತಿ ಆಡುವ, ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವ ಜಾತಿ ಆಧಾರಿತ ಒಳ ಮೀಸಲಾತಿ ಈ ತೀರ್ಪಿನ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೆ ಸರಿಯುತ್ತಿದೆ.

ಇನ್ನೂ ಮುಂದುವರಿದ ಕಾರಣ, ಪರಿಶಿಷ್ಟ ಎಲ್ಲಾ ಜಾತಿಗಳು ಒಂದು, ಹಾಗೂ ಇತರೆ ತಳ ಸಮುದಾಯಗಳನ್ನು ಸೇರಿಸಿಕೊಂಡು ಬಲಗೈ ಸಮುದಾಯ ಆ ಕಾಲದಿಂದಲೂ ದಲಿತ ಸಂಘರ್ಷ ಸಮಿತಿ ಹೋರಾಟವನ್ನು ಹಮ್ಮಿಕೊಂಡು ಬಂದಿದೆ. ಇದೇ ಆಧಾರದಲ್ಲಿ ಬಲಗೈ ಸಮುದಾಯ ಬಹುಜನ ಚಳುವಳಿಯಲ್ಲು ಅಲ್ಪಸಂಖ್ಯಾತ ರು ಮತ್ತು ಓಬಿಸಿಗಳನ್ನು ಒಳಗೊಂಡಂತೆ ಅದರಲ್ಲೂ ಪಾಲ್ಗೊಂಡು ಅದನ್ನೂ ಪ್ರಬಲವಾಗಿ ಕಟ್ಟಿದೆ. ಈ ಕಾರಣಕ್ಕಾಗಿಯು ತನ್ನ ಇಂತಹ ವಿಶಾಲ ಸೈದ್ಧಾಂತಿಕ ಹೋರಾಟಗಳನ್ನು ಬಿಟ್ಟು ಕೊಡಬೇಕಾಗುತ್ತದೆಯಲ್ಲ ಎಂಬ ಸಂದಿಗ್ಧತೆಯಲ್ಲಿಯೂ ಬಲಗೈ ಸಮುದಾಯ ಒಳ ಮೀಸಲಾತಿ ಬಗ್ಗೆ ತನ್ನ ಅಭಿಪ್ರಾಯ ಮುಕ್ತವಾಗಿ ಹಂಚಿಕೊಳ್ಳಲು ಹಿಂದೆ ಸರಿಯುತ್ತಿದೆ.

ಆದರೆ ಕಾಲ ಬದಲಾಗುತ್ತಿದೆ. ಒಳ ಮೀಸಲಾತಿ ಅನುಕೂಲ ತರುತ್ತದೊ ಬಿಡುತ್ತದೊ ಅಥವಾ ಅದು ಮತ್ತು ಅದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿರುವ ಕೆನೆಪದರ ಇಡೀ ಮೀಸಲಾತಿ ವ್ಯವಸ್ಥೆಯನ್ನೇ ರದ್ದು ಮಾಡುತ್ತದೊ…. ಆದರೆ ಆ ಹಿನ್ನೆಲೆಯಲ್ಲಿ ಜಾತಿಗಳ ಜನಸಂಖ್ಯೆ ಈಗ ಮಂಚೂಣಿಗೆ ಬರುತ್ತದೆ. ಇಂಥ ಜಾತಿ ಇಂತಿಷ್ಟು ಎಂಬ ಅಂಶ ಮಂಚೂಣಿಗೆ ಬರುತ್ತದೆ. ಪ್ರಮುಖವಾಗಿ ಕೇಂದ್ರದಲ್ಲಿ ವಿರೋಧಪಕ್ಷವಾದ “ಇಂಡಿಯಾ ಮೈತ್ರಿಕೂಟ” ಜಾತಿ ಜನಗಣತಿಯನ್ನು ಈಗಾಗಲೇ ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಖಂಡಿತ ಅಂತಹ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಯಾಕೆಂದರೆ ಯಾರ ಜನಸಂಖ್ಯೆ ಎಷ್ಟಿದೆಯೊ ಅಷ್ಟು ಅವರ ಪ್ರಾತಿನಿಧ್ಯ. ಈ ನಿಟ್ಟಿನಲ್ಲಿ ಜನಸಂಖ್ಯೆ ಕಡಿಮೆ ಬಂದರೆ? ಪರಿಶಿಷ್ಟ ಜಾತಿಯಲ್ಲಿಯೇ ಬಲಗೈ ಸಮುದಾಯ ತನ್ನ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಅಥವಾ ಅಪ್ರಸ್ತುತವಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇದಕ್ಕೆ ಉದಾಹರಣೆ ಇಲ್ಲವೆಂದಲ್ಲ,. ಹಿಂದೆ 2009 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾರಣ 2009 ರ ಪೂರ್ವ ಮೀಸಲು ಕ್ಷೇತ್ರವಾಗಿದ್ದ ಬೀದರ್ ಲೋಕಸಭಾ ಕ್ಷೇತ್ರ ತದನಂತರ ಸಾಮಾನ್ಯ ಕ್ಷೇತ್ರವಾಯಿತು. ಮೀಸಲು ಕ್ಷೇತ್ರ ಪಕ್ಕದ ವಿಜಯಪುರಕ್ಕೆ ಶಿಫ್ಟ್ ಆಯಿತು. ಪರಿಣಾಮ ಬೀದರ್ ನಲ್ಲಿ ಗೆಲ್ಲುತ್ತಿದ್ದ ಬಲಗೈ ಸಮುದಾಯ ಒಂದು ಲೋಕಸಭಾ ಸ್ಥಾನ ಕಳೆದುಕೊಳ್ಳುವಂತಾಯಿತು. ಅಂದಹಾಗೆ ಇದಕ್ಕೆ ಕಾರಣ? 2001 ರ ಜನಗಣತಿ. 2001 ರ ಜನಗಣತಿ ಯಲ್ಲಿ ಬೀದರ್ ಜಿಲ್ಲೆಯಲ್ಲಿ ಬಲಗೈ ಸಮುದಾಯದ ಬಹುತೇಕ ಮಂದಿ ಜನಗಣತಿಯಲ್ಲಿ ಬೌದ್ಧ ಎಂದು ಬರೆಸಿದರು. ಪರಿಣಾಮ ಆ ಕ್ಷೇತ್ರದಲ್ಲಿ ಪರಿಶಿಷ್ಟರ ಜನಸಂಖ್ಯೆ ಕಡಿಮೆ ಯಾಗಿ ಮೀಸಲು ಕ್ಷೇತ್ರ ಪಕ್ಕದ ವಿಜಯಪುರಕ್ಕೆ ಶಿಫ್ಟ್ ಆಯಿತು!

ಯಾವುದೇ ಒಂದು ಸಮುದಾಯ ತಾನು ಒಂದು ಸಮುದಾಯವಾಗಿ ಯೋಚಿಸದಿದ್ದರೆ ಏನಾಗುತ್ತದೆ ಅದರ ಸಾಧಕ ಬಾಧಕಗಳು ಏನು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ.

ಒಂದು ವಾಸ್ತವ, ಜಾತಿ ವ್ಯವಸ್ಥೆಯ ಭಾರತದಲ್ಲಿ ಜಾತಿ ಪ್ರಮುಖ ವಾಸ್ತವ. ನಾವು ನಂಬುತ್ತೇವೆಯೊ ಬಿಡುತ್ತೇವೆಯೊ ಅದು ನಂತರದ ಪ್ರಶ್ನೆ. ಭಾರತದ ಸಂವಿಧಾನ ಕೂಡ ಜಾತಿಯನ್ನು ನಿಷೇಧಿಸಿಲ್ಲ. ಜಾತಿ ಆಧಾರದ ಮೇಲೆ ಎಲ್ಲಾ ನಿರ್ಧರಿಸಲ್ಪಡುತ್ತದೆ. ರಾಜಕೀಯ ಪಕ್ಷಗಳ ಟಿಕೆಟ್ ಹಂಚಿಕೆಯಿಂದ ಹಿಡಿದು ಅಭ್ಯರ್ಥಿಗಳು ಗೆಲ್ಲುವವರೆಗೆ ಎಲ್ಲವೂ ಜನಸಂಖ್ಯೆ ಆಧಾರದ ಮೇಲೆ ನಿರ್ಧಾರ. ಈ ನಿಟ್ಟಿನಲ್ಲಿ ಹೊಲೆಯ ಸಮುದಾಯ ತನ್ನ ಸಮುದಾಯದ ಐಕ್ಯತೆಯನ್ನು ಕಾಪಾಡಿಕೊಳ್ಳದಿದ್ದರೆ ಅದಕ್ಕೆ ಸಂಬಂಧಿಸಿದ ಮೀಸಲಾತಿ ಒಳಮೀಸಲಾತಿ ಮತ್ತಿತರ ವಿಷಯಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸದಿದ್ದರೆ, ಸಂಘಟಿತವಾಗಿ ಚರ್ಚೆ ನಡೆಸದಿದ್ದರೆ ಖಂಡಿತ ಅದು ತನ್ನ ಹಕ್ಕು ಮತ್ತು ಅಧಿಕಾರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇನ್ನೊಂದು ಜಾತಿಯನ್ನು ಅಥವಾ ಜಾತಿಗಳನ್ನು ವಿರೋಧಿಸಲು ಅದು ಸಂಘಟಿತವಾಗಬೇಕಿಲ್ಲ. ಬದಲಿಗೆ ತನ್ನ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ತಾನು ಸಂಘಟಿತವಾಗಬೇಕಿದೆ. ಸುಪ್ರೀಂಕೋರ್ಟ್ ನ ಮೀಸಲಾತಿ ವರ್ಗೀಕರಣ ಮತ್ತು ಕೆನೆಪದರ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಬಲಗೈ ಸಮುದಾಯ ಹಾಗೆ ಸಂಘಟಿತವಾಗಬೇಕಾದ ಅತಿ ತುರ್ತು ಈಗ ನಮ್ಮ ಮುಂದಿದೆ.

-ಕಾನಿಷ್ಕ ಹೊ.ಬ

Related Articles

ಇತ್ತೀಚಿನ ಸುದ್ದಿಗಳು

You cannot copy content of this page