Friday, June 14, 2024

ಸತ್ಯ | ನ್ಯಾಯ |ಧರ್ಮ

ನೌಕಾಪಡೆಯ ಮಾಜಿ ನೌಕರರನ್ನು ಬಿಡಿಸಿದ್ದು ಮೋದಿಯಲ್ಲ ಶಾರುಖ್‌ ಖಾನ್!: ಸುಬ್ರಹ್ಮಣ್ಯಸ್ವಾಮಿ

ಬೇಹುಗಾರಿಕೆ ಆರೋಪದಡಿ ಕತಾರ್ ನಲ್ಲಿ ಬಂಧನಕ್ಕೊಳಗಾಗಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳು ಚಿತ್ರ ನಾಯಕ ಶಾರುಖ್ ಖಾನ್ ಮಧ್ಯಸ್ಥಿಕೆಯಿಂದ ಬಿಡುಗಡೆಗೊಂಡಿದ್ದು, ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸುಬ್ರಮಣ್ಯಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಅವರು ಇಂದು ಕತಾರ್ ಗೆ ತೆರಳುತ್ತಿರುವುದಾಗಿ ಎಕ್ಸ್ ವೇದಿಕೆಯಲ್ಲಿ ಹಾಕಿರುವ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.

‘ಮುಂದಿನ ಎರಡು ದಿನಗಳ ಕಾಲ ನಾನು ಯುಎಇ ಮತ್ತು ಕತಾರ್‌ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಈ ಭೇಟಿಯು ಆ ಎರಡು ದೇಶಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಭೇಟಿಯ ಭಾಗವಾಗಿ ಯುಎಇಯಲ್ಲಿ ಮೊದಲ ಹಿಂದೂ ದೇವಾಲಯವನ್ನು ತೆರೆಯಲಿದ್ದೇನೆʼ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಪೋಸ್ಟಿಗೆ ಸುಬ್ರಹ್ಮಣ್ಯ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ನಟ ಶಾರುಖ್ ಖಾನ್ ಅವರನ್ನು ಸಹ ಮೋದಿ ಕತಾರ್ ಗೆ ಕರೆದುಕೊಂಡು ಹೋಗಬೇಕಿತ್ತು. ಏಕೆಂದರೆ ಭಾರತೀಯ ಮಾಜಿ ಸೈನಿಕರನ್ನು ಬಿಡುಗಡೆ ಮಾಡುವಂತೆ ಕತಾರಿ ಶೇಖ್‌ಗಳ ಮನವೊಲಿಸಲು ಭಾರತೀಯ ವಿದೇಶಾಂಗ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲರಾಗಿದ್ದರು. ಈ ವಿಚಾರದಲ್ಲಿ ಶಾರುಖ್ ಖಾನ್ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಶಾರುಖ್ ಮಧ್ಯಸ್ಥಿಕೆಯಿಂದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

2022ರಲ್ಲಿ, ಕತಾರ್ ಅಧಿಕಾರಿಗಳು ಬೇಹುಗಾರಿಕೆ ಆರೋಪದ ಮೇಲೆ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಯನ್ನು ಬಂಧಿಸಿದ್ದರು. ಇವರಲ್ಲಿ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಸೌರಭ್ ವಶಿಷ್ಠ್, ಕಮಾಂಡರ್‌ಗಳಾದ ಬೀರೇಂದ್ರ ಕುಮಾರ್ ವರ್ಮಾ, ಪೂರ್ಣೇಂದು ತಿವಾರಿ, ಸಂಜೀವ್ ಗುಪ್ತಾ, ಅಮಿತ್ ನಾಗ್ಪಾಲ್, ವಿಶಾಖಪಟ್ಟಣದ ಸುಗುಣಾಕರ್ ಪಾಕಲಾ, ನಾವಿಕ ರಾಗೇಶ್ ಸೇರಿದ್ದಾರೆ. ಅಲ್ಲಿನ ಪ್ರಾಥಮಿಕ ನ್ಯಾಯಾಲಯವು ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತು.

ಶಿಕ್ಷೆಯನ್ನು ರದ್ದುಗೊಳಿಸಲು ಭಾರತ ಸರ್ಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿತು. ನ್ಯಾಯಾಲಯವು ಮೇಲ್ಮನವಿಯನ್ನು ಅಂಗೀಕರಿಸಿತು. ನ್ಯಾಯಾಲಯವು ಮೇಲ್ಮನವಿಯನ್ನು ಆಲಿಸಿತು ಮತ್ತು ಡಿಸೆಂಬರ್ 28, 2023ರಂದು ಮರಣದಂಡನೆಯನ್ನು ಸರಳ ಜೈಲು ಶಿಕ್ಷೆಗೆ ಪರಿವರ್ತಿಸಿತು. ಭಾರತೀಯ ವಿದೇಶಾಂಗ ಸಚಿವಾಲಯವು ಸರಳ ಜೈಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ ಕಳೆದ ಸೋಮವಾರ ಅವರನ್ನು ಬಿಡುಗಡೆ ಮಾಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು