Monday, June 17, 2024

ಸತ್ಯ | ನ್ಯಾಯ |ಧರ್ಮ

ಅಧಿಕಾರಿಗಳು ರಾತ್ರಿ ವೇಳೆ‌ ಹೋರಾಟಗಾರರ ಮನೆಗೆ ಹೋಗಿ ನೋಟಿಸ್‌ ನೀಡಿದ್ದರೆ ಅದು ತಪ್ಪು: ಕಟೀಲ್

ಮಂಗಳೂರು : ಟೋಲ್‌ ಹೋರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ತಡ ರಾತ್ರಿ ಮನೆಗೆ ತೆರಳಿ ನೋಟಿಸ್‌ ನೀಡಿದ್ದು ನಮ್ಮ ಗಮನಕ್ಕೆ ಬಂದಿಲ್ಲ, ಹಾಗೊಂದು ವೇಳೆ ಅವರು ಆ ರೀತಿ ನೀಡಿದ್ದರೆ ಅದು ತಪ್ಪೆಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ನಗರದಲ್ಲಿ ಇಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಟೋಲ್ಗೇಟ್‌ ತೆರವುಗೊಳಿಸುವುದು ಕೆಲವು ತಾಂತ್ರಿಕ ಕಾರಣಗಳಿಂದ ತಡವಾಗಿದೆ. ಆದರೆ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟವರ ಜೊತೆ ಮಾತನಾಡಲಾಗುತ್ತಿದೆ ಎಂದ ಅವರು, ಹೋರಾಟಗಾರರ ಹೋರಾಟಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ನಾವು ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುವುದಿಲ್ಲ ಎಂದಿದ್ದಾರೆ.

ತಾಂತ್ರಿಕ ಕಾರಣಗಳಿಂದಾಗಿ ನಮಗೆ ಟೋಲ್‌ಗೇಟ್‌ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟಗಾರರು ನಮ್ಮನ್ನು ಅರ್ಥಮಾಡಿಕೊಂಡು ನಮ್ಮೊಡನೆ ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ನಳಿನ್‌ ಕುಮಾರ್‌ ಕಟೀಲ್‌ ಅವರ ಮಾತುಗಳಿಗೆ ಪ್ರತಿಕ್ರಿಯೆಯಾಗಿ, ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ನಾಯಕರಾದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಅವರು “ಪೀಪಲ್‌ ಮೀಡಿಯಾ“ದೊಂದಿಗೆ ಮಾತನಾಡುತ್ತಾ, “ನಳಿನ್‌ ಕುಮಾರ್‌ ಅವರು ಹಿಂದೆಯೂ ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಿಲ್ಲ, ಮುಂದೆಯೂ ಉಳಿಸಿಕೊಳ್ಳುತ್ತಾರೆನ್ನುವ ನಂಬಿಕೆಯೂ ನಮಗಿಲ್ಲ. ಅವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಿದರು. ನಿನ್ನೆ ಹದಿನೈದು ದಿನಗಳಲ್ಲಿ ತೆರವುಗೊಳಿಸುವುದಾಗಿ ಹೇಳಿದ್ದ ಅವರು, ಇವತ್ತು ಇಪ್ಪತ್ತು ದಿನ ಎನ್ನುತ್ತಿದ್ದಾರೆ. ನಾಳೆ ಅವರು ಇಪತ್ತು ವಾರ ಆಗುತ್ತದೆ ಎಂದರೂ ಅಚ್ಚರಿಯಿಲ್ಲ. ಇಂತಹ ಗಳಿಗೆಗೆ ಒಂದನ್ನು ಹೇಳುವವರ ಮಾತನ್ನು ನಂಬಲು ಸಾಧ್ಯವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, “ಬಿಜೆಪಿ ಪಕ್ಷದ ನಾಯಕ ನಮಗೆ ಶಾಂತಿಯ ಪಾಠ ಮಾಡುವುದು ಅತಿ ದೊಡ್ಡ ವ್ಯಂಗ್ಯವಾಗಿದೆ, ನಾವು ಎಂದೂ ಶಾಂತಿಗೆ ಭಂಗ ಬರುವಂತಹ ಹೋರಾಟ ಮಾಡುವವರಲ್ಲ, ಅದೇನಿದ್ದರೂ ಬಿಜೆಪಿಯ ಕೆಲಸ,” ಎಂದು ಕಟಕಿಯಾಡಿದರು.

ನವಯುಗ ಕಂಪನಿ ಒಪ್ಪಂದಕ್ಕಿಂತಲೂ ಹೆಚ್ಚು ಟೋಲ್ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದೆ.‌ ಈ ಟೋಲ್‌ ತೆಗೆದರೆ ಅವರಿಗೆ ಆದಾಯ ಕಡಿಮೆಯಾಗುವ ಆತಂಕವಿದೆ ಹೀಗಾಗಿ ಅವರು ಟೋಲ್‌ ತೆರವಿಗೆ ಸಹಕರಿಸುತ್ತಿಲ್ಲ. ಇಂತಹ ದೈತ್ಯ ಕಂಪನಿಯಾದ ನವಯುಗವನ್ನು ನಿಯಂತ್ರಿಸಲಾಗದ ಅಸಹಾಯಕ ನಳಿನ್‌ ಕುಮಾರ್‌ ಅವರ ಮಾತುಗಳನ್ನು ಕಟ್ಟಿಕೊಂಡು ನಾವು ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ನಡೆದೇ ನಡೆಯುತ್ತದೆ. ಟೋಲ್‌ಗೇಟ್‌ ತೆರವುಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲವೆಂದು ಅವರು ಪುನರುಚ್ಛರಿಸಿದರು.

Related Articles

ಇತ್ತೀಚಿನ ಸುದ್ದಿಗಳು