Monday, June 9, 2025

ಸತ್ಯ | ನ್ಯಾಯ |ಧರ್ಮ

ಬಿರ್ಸಾ ಮುಂಡಾನ ಬಲಿದಾನಕ್ಕೆ ಇದೀಗ 125 ವರ್ಷ..

“..ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು..” ಅರುಣ್ ಜೋಳದಕೂಡ್ಲಿಗಿ ಅವರ ಬರಹದಲ್ಲಿ

ಬಿರ್ಸಾ ಮುಂಡ ಆದಿವಾಸಿಗಳ ದನಿಯಾಗಿ ‘ಯಾರದೀ ಕಾಡು?’ ಎನ್ನುವ ಪ್ರಶ್ನೆ ಎತ್ತಿ ಬ್ರಿಟೀಷ್ ಪ್ರಭುತ್ವಕ್ಕೆ ದುಸ್ವಪ್ನವಾಗಿದ್ದ. ಮಹಾಶ್ವೇತಾದೇವಿ ಬರೆದ ‘ಯಾರದೀ ಕಾಡು?’ ಕಾದಂಬರಿಯು ಮುಂಡಾ ಬುಡಕಟ್ಟು ಜನರ ಹೋರಾಟವನ್ನು ಕುರಿತಾದದ್ದು. ಬುಡಕಟ್ಟು ಜನರ ದೈನಂದಿನ ಬದುಕು, ಅವರ ಸಮಸ್ಯೆಗಳನ್ನು ಕುರಿತದ್ದು. ಬಿರ್ಸಾ ಮುಂಡ ತನ್ನ ಜನರ ಹಕ್ಕುಗಳಿಗಾಗಿ ಬ್ರಿಟಿಷರ ಆಡಳಿತವನ್ನು ಎದುರಿಸಿ, ಅವರ ಸಂಚಿಗೆ ಬಲಿಯಾಗಿ ನ್ಯಾಯ ದೊರೆಯದೆ. ಸೆರೆಮನೆಯಲ್ಲೇ ಕೊಲೆಯಾದವನು. ಆದಿವಾಸಿ ಜನರು ಆತನನ್ನು ದೇವರ ಸ್ಥಾನಕ್ಕೆ ಏರಿಸಿದ್ದಾರೆ. ಇಂದಿನ ಆಡಳಿತ ಆತನನ್ನು ಜನ ನಾಯಕನೆಂದು ಪರಿಗಣಿಸಿ ಪ್ರತಿಮೆ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ‘ಅರಣ್ಯ ಯಾರದು?’ ಈ ಪ್ರಶ್ನೆ ಎಷ್ಟೋ ಶತಮಾನಗಳಿಂದ ಅರಣ್ಯದೊಡನೆ ಬದುಕುತ್ತಿರುವ ಜನರ ಆಳದ ಪ್ರಶ್ನೆ. ರಾಜ್ಯಾಡಳಿತದ ಲೂಟಿಕೋರರು, ಈ ಲೂಟಿಕೋರರಿಗೆ ಪೊಲೀಸರ ಕಾವಲುಗಾರಿಕೆ ಹೀಗೆ ವಿವಿಧ ಸ್ತರಗಳಲ್ಲಿ ಚರ್ಚಿತವಾಗಿರುವ ಅಂಶಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.

ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಇಂದು ಬಿರ್ಸಾಮುಂಡಾ ಬಲಿದಾನವಾದ ದಿನ
ರಾಂಚಿಯ ಬಳಿಯ ಉಳಿಹಾಟು ಎಂಬ ಬುಡಕಟ್ಟು ಹಾಡಿಯಲ್ಲಿ ನವೆಂಬರ್ 15,1875 ರಲ್ಲಿ ಜನಿಸಿದ ಬಿರ್ಸಾ ತನ್ನವರಿಗಾಗಿ ಹೋರಾಡಿ ಬಲಿದಾನವಾಗಿದ್ದು ತನ್ನ 25 ವರ್ಷದಲ್ಲಿ. ತನ್ನ ಜನಾಂಗಕ್ಕಾಗಿನ ಹೋರಾಟದಲ್ಲಿ ಆತ ಸೆರೆಮನೆಯಲ್ಲಿ ತನ್ನ ಜೀವವನ್ನು ಕಳೆದುಕೊಂಡ ದಿನ ಜೂನ್ 9, 1900 ರಂದು. ಇಂದಿಗೆ ಬಿರ್ಸಾ ಮುಂಡ ಅಗಲಿ 125 ವರ್ಷಗಳಾಯ್ತು. ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂದಾಳುವಾಗಿ ಬ್ರಿಟಿಶ್ ಸಾಮ್ರಾಜ್ಯಕ್ಕೆ ದುಃಸ್ವಪ್ನದಂತಿದ್ದ.

ಇದೀಗ ಭಾರತದ ಪಾರ್ಲಿಮೆಂಟ್ ಭವನದಲ್ಲಿರುವ ಏಕೈಕ ಆದಿವಾಸಿ ಜನಾಂಗದ ಪ್ರಾತಿನಿಧಿಕ ಭಾವ ಚಿತ್ರ ಬಿರ್ಸಾ ಮುಂಡಾನದು. ‘ಬಿರ್ಸಾ’ ಎಂಬುದು ಆತನು ಹುಟ್ಟಿದ ಮುಂಡಾ ಆದಿವಾಸಿ ಗುಂಪಿನ ಪದ್ಧತಿಗಳಂತೆ ಆತನ ಹುಟ್ಟಿದ ದಿನವಾದ ಗುರುವಾರದ ಸೂಚಕವಂತೆ.

ಬ್ರಿಟಿಷರು ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯ ಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟು, ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಇನ್ನು ಮುಂದೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆಜ್ಞೆ ಹೊರಡಿಸಿದರು. ಅದೇ ಸಮಯದಲ್ಲಿ ಈ ಆದಿವಾಸಿಗಳನ್ನು ವ್ಯಾಪಾರಸ್ಥರು ಮತ್ತು ಲೇವಾದೇವಿಗಾರರು ಸುಲಿಯಲಾರಂಭಿಸಿದರು. ಇವೆರಡರ ಮಧ್ಯೆ ಮತಾಂತರಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು, ಆದಿವಾಸಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಹೊಂಚು ಹಾಕುತ್ತಿದ್ದರು. ಈ ಬಗೆಯಲ್ಲಿ ಆದಿವಾಸಿಗಳ ಮೇಲೆ ಹಲವು ದಿಕ್ಕುಗಳಿಂದ ದಾಳಿಗಳು ಪ್ರಾರಂಭವಾದಾಗ, ವಿವಿಧ ಪ್ರದೇಶಗಳಲ್ಲಿ, ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಯಿತು.ಇಂತಹ ಸಂದರ್ಭದಲ್ಲಿ ಓರ್ವ ರೈತ ಗುತ್ತಿಗೆದಾರನ ಕುಟುಂಬದಲ್ಲಿ ಸುಗನ ಮುಂಡಾ ಮತ್ತು ಕರ್ಮಿ ಹಾತು ಅವರ ಮಗನಾಗಿ ಬಿರ್ಸಾ ಮುಂಡಾ ಜನಿಸಿದ.

ಛತ್ತೀಸಗಢದ ಜನಪದಗಳ ಪ್ರಕಾರ ಬಿರ್ಸಾನ ಬಾಲ್ಯ ಎಲ್ಲ ಮಕ್ಕಳಂತೆ ಸಹಜವಾಗಿಯೇ ಇತ್ತು. ಇತರೆ ಹುಡುಗರಂತೆ ಆಟವಾಡುತ್ತಾ ಈ ಹುಡುಗ ಬೊಹೊಂಡ ಕಾಡುಗಳಲ್ಲಿ ಕುರಿ ಕಾಯುತ್ತಿದ್ದ. ಹೀಗೆ ಆಟವಾಡಿಕೊಂಡು ಬೆಳೆಯುತ್ತಿದ್ದಾಗಲೇ ಬಿರ್ಸಾನಿಗೆ ಕೊಳಲಿನ ಬಗ್ಗೆ ಆಸಕ್ತಿ ಹೆಚ್ಚಾಯಿತು. ಅದನ್ನು ಆತ ಎಷ್ಟು ಚೆನ್ನಾಗಿ ನುಡಿಸುತ್ತಿದ್ದನೆಂದರೆ ಎಲ್ಲರೂ ಅದನ್ನು ಕೇಳಲೆಂದೇ ಮುಗಿಬೀಳುತ್ತಿದ್ದರು. ಬಡತನದ ಅಸಹಾಯಕತೆಯಿಂದ ಬಿರ್ಸಾನ ತಂದೆ ಸುಗನ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದ. ಈ ದೆಸೆಯಿಂದ ಬಿರ್ಸಾನಿಗೆ ಪ್ರಾಥಮಿಕ ಶಾಲೆ ತನಕ ಕ್ರಿಶ್ಚಿಯನರು ನಡೆಸುತ್ತಿದ್ದ ಶಾಲೆಗಳಲ್ಲಿ ವಿದ್ಯೆ ಪಡೆಯುವ ಅವಕಾಶ ಸಿಕ್ಕಿತ್ತು. ಕ್ರಿಶ್ಚಿಯನ್ನನಾಗಿದ್ದಾಗ ಬಿರ್ಸಾನಿಗೆ ದೌದ್ ಪುರ್ತಿ ಎಂದು ಮರುನಾಮಕರಣ ಮಾಡಲಾಗಿತ್ತು.

ತನ್ನದೇ ಆದಿವಾಸಿ ಧರ್ಮ ಸ್ಥಾಪನೆಯತ್ತ..
ಆಗ ಬಿರ್ಸಾನಿಗೆ 13 ವರ್ಷ ವಯಸ್ಸೂ ಆಗಿರಲಿಲ್ಲ. ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕೃತಿಯನ್ನು ಹೀಗಳೆಯುವುದರ ವಿರುದ್ದ ಆಗಲೇ ಆತ ಆಕ್ರೋಶಗೊಂಡಿದ್ದ. ಮತ್ತೊಂದೆಡೆ ಬಿಳಿಯರ ಕಾನೂನುಗಳು ಮತ್ತು ವ್ಯಾಪಾರಸ್ಥರ ಕಪಟತನಗಳ ನಡುವೆ ತನ್ನ ಜನ ತಮ್ಮ ಭೂಮಿಗಳನ್ನು ಕಳೆದುಕೊಂಡು ದಿನಗೂಲಿಗಳಾಗುತ್ತಿರುವುದನ್ನು ನೋಡಿ ಆತ ಆತಂಕ ಗೊಂಡಿದ್ದ. ಇಂಥಹ ದಿನಗಳಲ್ಲೇ ಬ್ರಿಟಿಷರ ವಿರುದ್ಧ ಆದಿವಾಸಿಗಳು ದಂಗೆ ಏಳಲಾರಂಭಿಸಿದ್ದರು.

ಬಿರ್ಸಾ ಮತ್ತು ಆತನ ಇಡೀ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನು ತಿರಸ್ಕರಿಸಿ ತಮ್ಮ ಆದಿವಾಸಿ ಸಂಸ್ಕೃತಿಗೆ ಹಿಂದಿರುಗಿತು. ಅಷ್ಟು ಹೊತ್ತಿಗೆ ಬಿರ್ಸಾ 17 ವರ್ಷ ವಯಸ್ಸಿನ ಆಕರ್ಷಕ ಹುಡುಗನಾಗಿದ್ದ. ಓರ್ವ ಆದಿವಾಸಿ ಹುಡುಗಿಯನ್ನು ಪ್ರೇಮಿಸಿ ಅವಳನ್ನು ಮದುವೆ ಆಗುವುದಾಗಿ ಆಕೆಯ ತಂದೆತಾಯಿಗೆ ಹೇಳಿ ನಿಶ್ಚಿತಾರ್ಥವನ್ನು ಮಾಡಿಕೊಂಡ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿರ್ಸಾ ತನ್ನ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃ ತಿಕ  ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದ. ಆದಿವಾಸಿಗಳ ಮಿಥ್ಯೆ ಮತ್ತು ಸಂಕೇತಗಳೆನ್ನೇ ಉಪಯೋಗಿಸಿಕೊಂಡು ಅವರಲ್ಲಿ ಮತ್ತೆ ಸ್ವಾಭಿಮಾನ ಮೂಡುವಂತೆ ಮಾಡಿದ. ಈ ಮಧ್ಯೆ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಮತ್ತು ಆದಿವಾಸಿಗಳಲ್ಲಿ ಹೊಸ ಚೆತನ್ಯವನ್ನು ಮೂಡಿಸಲಿಕ್ಕೆ ಬಿರ್ಸಾ ತನ್ನನ್ನೇ ದೇವರ ಅವತಾರ ಎಂದು ಘೋಷಿಸಿದ. ತನ್ನ ಈ ಅವತಾರದಲ್ಲಿ ಆತ ಘೋಷಿಸಿದ ಹೊಸ ಧರ್ಮದಲ್ಲಿ ಪ್ರಕೃತಿಯೇ ದೇವರೆಂದೂ, ಸಮಾನ ಸಮಾಜವೇ ನೀತಿಯೆಂದು ಹೇಳುವುದರ ಜೊತೆಗೆ, ಸುಳ್ಳು, ವ್ಯಭಿಚಾರ, ಕಳ್ಳತನ, ಭಿಕ್ಷಾಟನೆ, ಕಪಟತನ, ಸ್ವಾರ್ಥಗಳು ನಿಷೇಧ ಎಂದು ಘೋಷಿಸಿದ.

ಬಿರ್ಸಾ ಮುಂಡಾನ ಈ ಹೊಸ ಧರ್ಮದ ಎಲ್ಲಾ ನೀತಿಗಳು ಆದಿವಾಸಿಗಳ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರಿಂದ, ಆತ ಬಹುಬೇಗ ಜನಪ್ರಿಯತೆ ಪಡೆದ. ಆತನನ್ನು ‘ದೇವಮಾನವ’ ಎಂದೂ ‘ಧರ್ತಿ ಅಬ್ಬಾ’ (ಭೂಮಿಯ ತಂದೆ) ಎಂದೂ ಜನ ಕೊಂಡಾಡಲಾರಂಭಿಸಿದರು. ಇತರೆ ಬುಡಕಟ್ಟು ಸಮುದಾಯಗಳೂ ಆತನ ಹಿಂಬಾಲಕರಾದರು.

ಬ್ರಿಟಿಷರ ವಿರುದ್ಧ: ಬಿರುಸಾದ ಸೆಣಸಾಟ
1893-94 ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ದ ಬಿರ್ಸಾ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ. ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ. 1894 ರ  ಅಕ್ಟೋಬರ್ 1 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬೃಹತ್ ಮೆರವಣಿಗೆಗೆ ಕರೆ ನೀಡಿದ. ‘ಉಳುವವನೇ ಭೂಮಿಯ ಒಡೆಯನಾಗಬೇಕು’, ‘ಮಹಾರಾಣಿಯ ಆಡಳಿತವನ್ನು ಕೊನೆಗಾಣಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿದ್ದರಿಂದ ಮೆರವಣಿಗೆ ಯಶಸ್ವಿಯಾಯಿತು.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು ಹೊರಬರುತ್ತಿದ್ದಂತೆಯೇ, ಬಿರ್ಸಾ ತನ್ನ ಚಳುವಳಿಯ ರೂಪವನ್ನೇ ಬದಲಾಯಿಸಿದ. ಬಿಡುಗಡೆಯ ನಂತರ ಭೂಗತನಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ.

ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ ಅವರನ್ನು ಬೆಂಬಲಿಸುತ್ತಿದ್ದ ಜನರ ಮನೆಗಳ ಮೇಲೆ ಮತ್ತು ಪೋಲಿಸರ ತಂಡಗಳ ಮೇಲೆ ಬಿರ್ಸಾನ ಆದಿವಾಸಿಗಳ ಗೆರಿಲ್ಲಾ ಸೈನ್ಯ ದಾಳಿಗಳನ್ನು ಮಾಡಿತು. ನೂರಾರು ಪೋಲೀಸರನ್ನು ಕೊಂದು ಹಾಕಿತು. ಒಮ್ಮೆ ರಾಂಚಿ ಮತ್ತು ಕುಂತಿ ಎಂಬಲ್ಲಿ ಸುಮಾರು ನೂರಾರು ಕಟ್ಟಡಗಳನ್ನು ಭಸ್ಮ ಮಾಡಿತು. ಬಿರ್ಸಾನನ್ನು ಹಿಡಿದು ಕೊಟ್ಟವರಿಗೆ 500 ರೂಪಾಯಿಗಳ ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತು ಚೋಟಾ ನಾಗ್ಪುರ್ ಸುತ್ತಲಿನ 550 ಚದರ ಮೈಲಿ ಪ್ರದೇಶದಲ್ಲಿ ಆತನ ಹೋರಾಟ ವ್ಯಾಪಿಸಿತ್ತು. 1899 ರಲ್ಲಿ ಆತ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಕುಂತಿ, ಒಮರ್, ಬಸಿಯ, ರಾಂಚಿ ಇತ್ಯಾದಿ ಕಡೆಗಳಲ್ಲಿ ಪೋಲಿಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. 8 ಪೋಲೀಸರು ಕೊಲ್ಲಲ್ಪಟ್ಟು, 32 ಜನ ಪರಾರಿಯಾದರು. ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. 89 ಭೂಮಾಲೀಕರ ಮನೆಗಳು ಬೂದಿಯಾದವು. ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರಗೊಂಡಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ, ಕೊನೆಗೆ ಸೆನ್ಯವನ್ನು ಕರೆಯಿಸಿದ.

ಬ್ರಿಟೀಷರ ಬಂದೂಕುಗಳ ಎದುರು ಬುಡಕಟ್ಟಿನ ಬಿಲ್ಲು ಬಾಣಗಳು..
1900 ರ ಜನವರಿಯಲ್ಲಿ ಬಿರ್ಸಾ ತನ್ನ ದಂಗೆಯ ಎರಡನೇ ಅಧ್ಯಾಯಕ್ಕೆ ಚಾಲನೆ ನೀಡಿದ. ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈ ಜೋಡಿಸಿದ್ದ ಸ್ಥಳೀಯ ಲೇವಾದೇವಿಗಾರರು, ಭೂಮಾಲೀಕರು, ಗುತ್ತಿಗೆದಾರರು ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರು. ಬಹಳಷ್ಟು ಜನ ಸಾವಿಗೀಡಾದರು ಲೆಕ್ಕವಿಲ್ಲದಷ್ಟು ಕಟ್ಟಡಗಳು ದ್ವಂಸಗೊಂಡವು.

ಈ ವೇಳೆಗೆ ಬ್ರಿಟಿಷರ ಸೈನ್ಯ ರಾಂಚಿಗೆ ಆಗಮಿಸಿತು. ಅವರ ಬಂದೂಕುಗಳ ಮುಂದೆ ಬಿರ್ಸಾನ ಆದಿವಾಸಿಗಳ ಸೈನ್ಯದ ಬಿಲ್ಲು ಬಾಣಗಳು ಯಾವ ಲೆಕ್ಕಕ್ಕೂ ಇರಲಿಲ್ಲ. ದುಂಬಾರಿ ಬೆಟ್ಟದ ಹತ್ತಿರ ಬಿರ್ಸಾ ಮತ್ತು ಬ್ರಿಟಿಷರ ಸೈನ್ಯದ ಮುಖಾಮುಖಿ ಆಯಿತು. ಬ್ರಿಟಿಷರ ಬಂದೂಕುಗಳಿಗೆ ನೂರಾರು ಆದಿವಾಸಿಗಳ ಹೆಣಗಳು ಉರುಳಿದವು. ದುಂಬಾರಿ ಬೆಟ್ಟದ ಮೇಲೆ ಹೆಣಗಳ ರಾಶಿ ಬಿತ್ತು. ಈ ಹತ್ಯಾಕಾಂಡದ ನಂತರ ಜನ ಈ ಬೆಟ್ಟವನ್ನು ‘ಹೆಣಗಳ ಬೆಟ್ಟ’ ಎಂದು ಕರೆಯಲಾರಂಬಿಸಿತು. 1900 ರ ಮಾರ್ಚ್ ತಿಂಗಳಿನಲ್ಲಿ ಚಕ್ರದರ್ಪುರ್ ಎಂಬ ಕಾಡಿನಲ್ಲಿ ಬಿರ್ಸಾ ನಿದ್ರಿಸುತ್ತಿದ್ದಾಗ ಆತನನ್ನು ಬ್ರಿಟಿಷರು ಬಂಧಿಸಿದರು. ಬಿರ್ಸಾ ಮತ್ತು ಆತನ 482 ಸಂಗಡಿಗರ ವಿರುದ್ದ ಹಲವಾರು ಆರೋಪಗಳನ್ನು ದಾಖಲಿಸಿ ವಿಚಾರಣೆಗಳನ್ನು ಪ್ರಾರಂಭಿಸಲಾಯಿತು. ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗಲೇ ಬಿರ್ಸಾ ಜೈಲಿನಲ್ಲಿ ರಕ್ತವನ್ನು ವಾಂತಿ ಮಾಡಿಕೊಳ್ಳಲು ಆರಂಭಿಸಿದ.  1900 ರ ಜೂನ್ 9 ರಂದು ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆದ. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು..

ಮರೆಯಾಗದ ಮುಂಡಾ ನೆನಪು
ತನ್ನ ಜನಗಳಿಗಾಗಿ ಹೋರಾಡಿದ ಬಿರ್ಸಾ ಮುಂಡಾ ಆದಿವಾಸಿಗಳಲ್ಲಿ ಇಂದೂ ಜೀವಂತನಾಗಿದ್ದಾನೆ.
ಇಂದು ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ. ಬಿರ್ಸಾ ತಂತ್ರಜ್ಞಾನ ಕಾಲೇಜು, ಬಿರ್ಸಾ ಕೃಷಿ ಕಾಲೇಜು, ಪ್ರಸಿದ್ಧ ಆಟದ ಮೈದಾನವಿದೆ. ಪ್ರಸಿದ್ಧ ಬರಹಗಾರ್ತಿ ಮಹಾಶ್ವೇತಾ ದೇವಿ ಅವರ ‘ಅರಣ್ಯೇರ್ ಅಧಿಕಾರ್’ ಎಂಬ ಬೆಂಗಾಲಿ ಕೃತಿ ಬಿರ್ಸಾ ಮುಂಡಾ ಅವರ ಸಾಹಸಮಯ ಬದುಕನ್ನು ಆಧರಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page