Saturday, April 19, 2025

ಸತ್ಯ | ನ್ಯಾಯ |ಧರ್ಮ

ಜಾತಿಯಿಂದ ಜ್ಞಾನಿಯಾಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಮೈಸೂರು : ಇಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ʼನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ, ಇದು ಹುಟ್ಟಿದ್ದು ಯಾವಾಗ? ಹೇಗೆ ಹುಟ್ಟಿದೆ? ಇದು ಯಾಕೆ ಜೀವಂತವಾಗಿದೆ ಎಂಬ ಬಗ್ಗೆ ತಮ್ಮೆಲ್ಲರಿಗೂ ತಿಳಿದಿದೆ. ನಾವೆಲ್ಲ ಮನುಷ್ಯರು, ಮನುಷ್ಯರಾಗಿ ಬಾಳಬೇಕು. ಈ ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿದೆ. ಇದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸಮಾನತೆ ನಿರ್ಮಾಣ ಮಾಡಿದೆ. ನಮ್ಮ ದೇಶದಲ್ಲಿ ನೂರಾರು ವರ್ಷಗಳ ಕಾಲ ರಾಜಪ್ರಭುತ್ವ ಇತ್ತು, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ, ಈ ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ನೀಡಿದೆ, ಇಷ್ಟಾದರೂ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಈ ಜಾತಿ ವ್ಯವಸ್ಥೆಯಿಂದ ಅನ್ಯಾಯ, ಶೋಷಣೆಗೆ ಒಳಗಾಗಿರುವ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿ. ಆಗ ಮಾತ್ರ ಸಮಾನತೆ, ಸಮಾನ ಅವಕಾಶ, ಸಮಾನ ಬೆಳವಣಿಗೆ ಕಾಣಲು ಸಾಧ್ಯʼ ಎಂದು ಜಾತಿವ್ಯವಸ್ಥೆಯ ಬಗ್ಗೆ ಮಾತನಾಡಿದರು.

ʼಒಬ್ಬ ರೈತನಿಗೆ ವ್ಯವಸಾಯದಲ್ಲಿ ಇರುವ ಜ್ಞಾನ ಒಬ್ಬ ವಿಜ್ಞಾನಿಗೆ ಇರಲಾರದು, ಅದೇ ರೀತಿ ವಿಶ್ವಕರ್ಮ ಸಮಾಜದವರು ಮಾಡುವ ಕಾಯಕದಲ್ಲಿ ವಿಶೇಷ ಜ್ಞಾನ ಸಂಪಾದನೆ ಮಾಡಿದ್ದಾರೆ. ಆದರೆ ಈ ವಿಶ್ವಕರ್ಮ ಸಮಾಜ ತನ್ನ ಕಾಯಕದಲ್ಲಿ ತಲ್ಲೀನವಾದ ಪರಿಣಾಮ ಶಿಕ್ಷಣದಿಂದ ವಂಚಿತವಾಯಿತು. ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ಣಗಳನ್ನು ಬಿಟ್ಟರೆ ಇತರರಿಗೆ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. 100 ರಲ್ಲಿ 70% ಜನ ಶಿಕ್ಷಣದಿಂದ ವಂಚಿತರಾದರು. ದೇಶದಲ್ಲಿ ಬ್ರಿಟೀಷರ ಆಗಮನದ ನಂತರ ಅವರಿಗೆ ಕಾರಕೂನರ ಅಗತ್ಯವಿದ್ದುದ್ದರಿಂದ ಎಲ್ಲಾ ಸಮಾಜದ ಜನರಿಗೆ ಶಿಕ್ಷಣ ಅವಕಾಶ ಸಿಕ್ಕಿತ್ತು. ಮೊದಲಿನಿಂದಲೂ ಬ್ರಾಹ್ಮಣ, ಕ್ಷತ್ರಿಯ, ಶೂದ್ರರಂತೆ ಶಿಕ್ಷಣದ ಅವಕಾಶ ಸಿಕ್ಕಿದ್ದರೆ ಇಂದು ವಿಶ್ವಕರ್ಮ ಸಮಾಜ ಶಿಕ್ಷಣದಲ್ಲಿ ಹಿಂದುಳಿಯುವಂತಹ ಸ್ಥಿತಿ ಬರುತ್ತಿರಲಿಲ್ಲʼ ಎಂದರು.

ʼವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಮೀಸಲಾತಿ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲ ಮಕ್ಕಳಿಗೂ ಉಚಿತವಾಗಿ ಹಾಲು ನೀಡುವ, ಬಿಸಿಯೂಟ ನೀಡುವ, ಸಮವಸ್ತ್ರ, ಶೂ ನೀಡುವ ಕಾರ್ಯಕ್ರಮ ಜಾರಿಗೆ ತಂದೆ. ಹಿಂದೆ ಹೀಗಿತ್ತಾ? ಬರೀ ಶ್ರೀಮಂತರ ಮಕ್ಕಳು ಶೂ, ಸಾಕ್ಸ್‌ ಹಾಕಿಕೊಂಡು ಬಂದರೆ ಸಾಕ? ಬಡವರ ಮಕ್ಕಳು ಅವರಂತೆ ಬರಬಾರದಾ? ಈ ಎಲ್ಲಾ ಮಕ್ಕಳಲ್ಲೂ ಸಮಾನತೆ ಕಾಣಬೇಕು. ಆ ಮೂಲಕ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನನ್ನ ಉದ್ದೇಶವಾಗಿತ್ತುʼ ಎಂದು ತಿಳಿಸಿದರು.

ʼವಿಶ್ವಕರ್ಮ ಸಮಾಜದ ಎಲ್ಲರೂ ಶಿಕ್ಷಿತರಾಗಬೇಕು, ಈ ಸಮಾಜದಲ್ಲಿ ಬುದ್ದಿವಂತರಿಗೆ ಬರವಿಲ್ಲ, ಆದರೆ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಿದೆ. ಮತ್ತೆ ಅಪ್ಪ ಹಾಕಿದ ಆಲದ ಮರಕ್ಕೆ ನೇತುಬಿದ್ದಿರಬೇಕು ಎಂಬ ನಿಯಮವಿಲ್ಲ, ನೀವೂ ಕೂಡ ಡಾಕ್ಟರ್‌, ಎಂಜಿನಿಯರ್‌, ಕೈಗಾರಿಕೋದ್ಯಮಿಗಳಾಗಬೇಕು. ನಾನೂ ಹಿಂದೆ ಕಾನೂನು ಪದವಿ ಓದಬೇಕು ಎಂದುಕೊಂಡಾಗ ನನ್ನಪ್ಪ ಶಾನುಭೋಗರ ಬಳಿ ಹೋಗಿ ಮಗ ಕಾನೂನು ಓದಬೇಕು ಅಂದುಕೊಂಡಿದ್ದಾನೆ, ಏನು ಮಾಡೋದು ಅಂತ ಕೇಳಿದ್ರಂತೆ, ಅದಕ್ಕೆ ಆ ಶಾನುಭೋಗರು ಕುರುಬರು ಯಾರಾದ್ರೂ ಲಾಯರ್‌ ಆಗೋಕಾಗುತ್ತಾ? ಸುಮ್ಮನೆ ಕೆಲಸಕ್ಕೆ ಕಳಿಸು ಎಂದು ಹೇಳಿದ್ರಂತೆ. ಒಂದು ವೇಳೆ ನಾನೂ ಆ ಶಾನುಭೋಗರ ಮಾತು ಕೇಳಿ ಕಾನೂನು ಓದದೆ ಇದ್ದರೆ ಏನಾಗುತ್ತಿತ್ತು ನೀವೆ ಹೇಳಿ. ವಿದ್ಯೆ ಯಾರಪ್ಪನ ಮನೆ ಸ್ವತ್ತು ಅಲ್ಲ. ದಲಿತ ಜಾತಿಯಲ್ಲಿ ಹುಟ್ಟಿದ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿಲ್ವಾ? ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಜಾತಿಯಿಂದ ಜ್ಞಾನಿಯಾಗಲು ಸಾಧ್ಯವಿಲ್ಲ. ಅವಕಾಶಗಳು ಸಿಕ್ಕರೆ ಎಲ್ಲರೂ ಬುದ್ದಿವಂತರಾಗಲೂ, ಎಲ್ಲ ರೀತಿಯ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆʼ ಎಂದು ಹೇಳಿದರು.

ʼ1994-95 ರಲ್ಲಿ ರಾಜೀವ್‌ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದರು. ಆ ವರೆಗೆ ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ಇರಲಿಲ್ಲ. ಇಲ್ಲಿ ಸೇರಿರುವ ಬಹಳಷ್ಟು ಜನ ಬಿಸಿಎಂ(ಎ), ಬಿಸಿಎಂ(ಬಿ) ಮೀಸಲಾತಿ ಅಡಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ, ನಗರಪಾಲಿಕೆ ಮುಂತಾದ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದರೆ ಅದಕ್ಕೆ ಈ ತಿದ್ದುಪಡಿ ಕಾರಣ. ಮೊದಲು ಬಹಳಷ್ಟು ಜನರಿಗೆ ರಾಜಕೀಯ ಅಧಿಕಾರ ಸಿಕ್ಕಿರಲಿಲ್ಲ, ರಾಜಕೀಯ ಅಧಿಕಾರ ಬಹಳ ಪ್ರಬಲವಾದ ಅಸ್ತ್ರ. ಈ ಸಮುದಾಯದ ರಘು ಆಚಾರ್‌, ಕೆ.ಪಿ ನಂಜುಂಡಿ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದಾರೆ, ಇದು ಇಷ್ಟಕ್ಕೆ ಸೀಮಿತವಾಗಬಾರದು, ಸಂಸದರು, ಶಾಸಕರು ಆಗಬೇಕು. ಆಗ ನಿಮ್ಮ ಧ್ವನಿ ಸದನದಲ್ಲಿ, ಸಂಸತ್ತಿನಲ್ಲಿ ಕೇಳಲು ಸಾಧ್ಯವಾಗುತ್ತದೆʼ ಎಂದು ತಿಳಿಸಿದರು.

ಇಲ್ಲಿ ಸಂಘಟನೆ ಬಹಳ ಮುಖ್ಯ, ನಿಮ್ಮ ಧ್ವನಿ ಜೋರಾಗಬೇಕಾದರೆ ಸಂಘಟನೆ ಮುಖ್ಯವಾಗುತ್ತದೆ. ಇಂದು ಹೆಗ್ಗಡದೇವನಕೋಟೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಘಟನೆ ಆಗಿರುವುದು ಸಂತಸದ ವಿಚಾರ. ಬಹಳಷ್ಟು ಜನ ಹಿಂದುಳಿದ ಜಾತಿಯವರು ಒಟ್ಟಾಗುತ್ತಿದ್ದಾರೆ, ಅವರು ಜಾತಿ ಸಮಾವೇಶಗಳ ಮೂಲಕ ಒಟ್ಟಾಗುತ್ತಿದ್ದಾರೆ ಎಂದು ಯಾರೂ ಹೇಳುತ್ತಾರೆ ಅವರು ಮಹಾನ್‌ ಜಾತಿವಾದಿಗಳು. ಇದೇ ಕಾರಣಕ್ಕೆ ಹಿಂದುಳಿದ ಜಾತಿಗಳು ಜಾತಿ ಸಮಾವೇಶ ಮಾಡಿದರೆ ಅದು ಸಂಘಟನೆ ಆಗುತ್ತದೆ, ಅದೇ ಮುಂದುವರೆದ ಜಾತಿಗಳು ಜಾತಿಗಳು ಸಮ್ಮೆಳನಗಳನ್ನು ಮಾಡಿದರೆ ಅದು ಜಾತಿಯತೆ ಎಂದು ಲೋಹಿಯಾ ಅವರು ಹೇಳಿದ್ದಾರೆ. ನಿಮ್ಮಲ್ಲಿ ಸಂಘಟನೆ ಇಲ್ಲದೆ ಹೋದರೆ ಯಾರೂ ನಿಮ್ಮನ್ನು ಕೇಳುವುದಿಲ್ಲ ಎಂದು ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂಪಾಯಿ ನೀಡಿದ್ದೆ. ಅದನ್ನು ಈಗಿನ ಸರ್ಕಾರಗಳು ಇನ್ನೂ ಹೆಚ್ಚು ಮಾಡುತ್ತಾ ಹೋಗಬೇಕಿತ್ತು. ಈ ಬಗ್ಗೆ ಸಮುದಾಯದ ರಾಜಕೀಯ ನಾಯಕರು ಒತ್ತಾಯ ಮಾಡಿ ಕನಿಷ್ಠ 200 ರಿಂದ 300 ಕೋಟಿ ಮಾಡಬೇಕಿತ್ತು. ಇದರಿಂದ ಈ ಸಮಾಜಕ್ಕೆ ಆರ್ಥಿಕವಾಗಿ ಸಹಾಯವಾಗಲಿದೆ. ಒಂದು ವೇಳೆ ರಾಜ್ಯದ ಜನ ನನಗೆ ಮತ್ತೆ ಅವಕಾಶ ನೀಡಿದ್ರೆ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುತ್ತೇನೆ. ಕುಲಶಾಸ್ತ್ರ ಅಧ್ಯಯನ ಮುಗಿದು ವರದಿ ಬರಲಿ ಆಮೇಲೆ ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡೋಣ. ಎಸ್‌.ಟಿ ಗೆ ಸೇರಬೇಕು ಎಂಬ ಒತ್ತಾಯ ಇದೆ. ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಸಮುದಾಯವನ್ನು ಎಸ್‌,ಟಿ ಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಾನು. ಈ ಸಮಾಜದ ಮೀಸಲಾತಿ ಹೆಚ್ಚು ಮಾಡಬೇಕು ಎಂದು ನಾನು ಹಿಂದೆಯೇ ಹೇಳಿದ್ದೆ. ಗಂಗಮತಸ್ಥರನ್ನು ಎಸ್‌,ಟಿ ಗೆ ಸೇರಿಸಬೇಕು ಎಂದು 1998ರಲ್ಲಿ ಶಿಫಾರಸು ಮಾಡಿದ್ದೆ. ಕಾಡುಗೊಲ್ಲರನ್ನು ಎಸ್‌,ಟಿ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಾನೆ. ಇದು ಕುಲಶಾಸ್ತ್ರ ಅಧ್ಯಯನ ನಡೆದು ವರದಿ ಬಂದಿದೆ. ನನ್ನ ಮುಖ್ಯ ಉದ್ದೇಶ ಸಂವಿಧಾನದ ಧ್ಯೇಯೋದ್ದೇಶಗಳು ಜಾರಿಯಾಗಬೇಕು ಎಂಬುದು ಎಂದು ಹೇಳಿದರು.

ಮುಂದೆ ನಮಗೆ ಅವಕಾಶ ಸಿಕ್ಕರೆ ವಿಶ್ವಕರ್ಮ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಸಮುದಾಯ ಭವನ ಪೂರ್ಣಗೊಳ್ಳಲು ಅಗತ್ಯವಿರುವ ಹಣವನ್ನು ಕೊಡುತ್ತೇವೆ. ಇಂದಿನ ಸಮಾವೇಶದಲ್ಲಿ ವಿಶ್ವಕರ್ಮ ಸಮಾಜದ ನಾಯಕರು ಇಟ್ಟಿರುವ ಎಲ್ಲಾ ಬೇಡಿಕೆಗಳು ಸಾದ್ಯವಾಗುವಂತವೇ ಆಗಿರುವುದರಿಂದ ಎಲ್ಲವನ್ನೂ ಮಾಡಿಕೊಡಲು ನಾನು ಬದ್ಧನಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page