ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಇದೀಗ ಬೆಂಗಳೂರಿನಲ್ಲೂ ಬನಾರಸ್‌ನ ಸದ್ದು ಕೇಳಿಸುತ್ತಿದೆ. ಇದೇ ಹೊತ್ತಿನಲ್ಲಿ ಝೈದ್ ಖಾನ್ ಭಕ್ತಿ ಭಾವಗಳಿಂದ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ, ಈ ಹಬ್ಬವನ್ನು ಮನಸಾರೆ ಸಂಭ್ರಮಿಸುವ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಇದರೊಂದಿಗೆ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಮೊನ್ನೆದಿನ ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹ್ಮದ್ ಖಾನ್ ತಮ್ಮ ಕಚೇರಿಯಲ್ಲಿ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಿದ್ದರು. ಇದರಲ್ಲಿ ಅವರ ಪುತ್ರ ಝೈದ್ ಖಾನ್ ಕೂಡಾ ಉತ್ಸುಕತೆಯಿಂದ ಭಾಗಿಯಾಗಿದ್ದರು. ಮತ, ಧರ್ಮಗಳಾಚೆಗೆ ಗಣೇಶನಿಗೆ ಪೂಜೆ ಸಲ್ಲಿಸಿ, ನೆರೆದಿದ್ದ ನಾಗರಿಕರೊಂದಿಗೆ ಸೇರಿ ಕುಣಿದು ಸಂಭ್ರಮಿಸಿದ್ದಾರೆ. ಈ ಮೂಲಕ ಬನಾರಸ್ ಚಿತ್ರದ ನವನಾಯಕ ಝೈದ್ ಖಾನ್ ಧರ್ಮ ಭೇದವಿಲ್ಲದೆ ಸ್ಥಳೀಯ ಜನರೆಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ಹೀಗೆ ಗಣೇಶನ ಪೂಜೆಯೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುವ ಝೈದ್ ಖಾನ್ ಬನಾರಸ್ ಚಿತ್ರದ ನಾಯಕನಾಗಿ ಈಗಾಗಲೇ ಒಂದಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿರುವ ಬನಾರಸ್, ಇದೇ ನವೆಂಬರ್ ನಾಲ್ಕನೇ ತಾರೀಕಿನಂದು ತೆರೆಕಾಣೋದೂ ಪಕ್ಕಾ ಆಗಿದೆ. ಈಗಾಗಲೇ ಮಾಯಗಂಗೆ ಎಂಬೊಂದು ಹಾಡಿನ ಮೂಲಕ ಅಗಾಧ ನಿರೀಕ್ಷೆ ಮೂಡಿಸಿರುವ ಬನಾರಸ್ ಐದು ಭಾಷೆಗಳಲ್ಲಿ ಏಕಕಾಲಕ್ಕೆ ರೂಪುಗೊಂಡಿರುವ ಪ್ಯಾನ್ ಇಂಡಿಯಾ ಚಿತ್ರ. ಈ ಮೂಲಕ ಝೈದ್ ಖಾನ್ ನಾಯಕನಾಗಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲಿದ್ದಾರೆಂಬ ಭರವಸೆ ಗಟ್ಟಿಗೊಂಡಿದೆ.