Monday, June 17, 2024

ಸತ್ಯ | ನ್ಯಾಯ |ಧರ್ಮ

ಪ್ರಳಯಕ್ಕೆ ಮೊದಲು ಎಚ್ಚರಾಗುವ ಕಾಲವಿದು

ದೊಡ್ಡ ದೊಡ್ಡ ಕವಿಗಳು, ವಿದ್ವಾಂಸರು ಬರೆದ ಮಾತ್ರದಿಂದಲೇ ಕನ್ನಡ ಸಾಹಿತ್ಯ ಮೇರು ಕೀರ್ತಿಯನ್ನು ಗಳಿಸಿದ್ದಲ್ಲ. ಈ ಮಣ್ಣಿನ ಬಹುಜನರ ಸಾಹಿತ್ಯವೂ ತಾಯಿ ಬೇರು ಅನ್ನೋದನ್ನ ಮರೆಯುವಂತಿಲ್ಲ. ಇದನ್ನು  ಸಮಕಾಲೀನವಾಗಿ ಉಳಿಸಿ ಕೊಳ್ಳಬೇಕಾಗಿದೆ. ಹೀಗೆ, ಜನಸಾಹಿತ್ಯವನ್ನು ಸಮಕಾಲೀನ ಗೊಳಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ  ಅಗತ್ಯವನ್ನು ಪ್ರತಿಪಾದಿಸುವುದೇ ’ಜನಸಾಹಿತ್ಯ ಸಮ್ಮೇಳನ’ದ ಜೀವದ್ರವ್ಯ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್‌.  

ಪ್ರತಿನಾಯಕತ್ವ, ಪ್ರತಿಕಾವ್ಯ. ಪ್ರತಿ ಸಂಸ್ಕೃತಿ..ಇವುಗಳು ಹುಟ್ಟುವುದು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬಂಡಾಯದ ಬಗೆ ಎಂಬುದು  ಗೊತ್ತಿರುವ ಸಂಗತಿ.  ಈ ಮಣ್ಣಿನೊಳಗೆ ಇಂತಹ ’ಪ್ರತಿತನ’ಗಳಿಗೆ ಅಥವಾ ’ಪರ್ಯಾಯ’ ಗಳಿಗೆ ಬಹುದೊಡ್ಡ ಪರಂಪರೆಯಿದೆ. ಇದರ ಮುಂದುವರೆದ  ಕಾಲದ ಕರೆಯಾಗಿ ಇದೀಗ  “ಜನಸಾಹಿತ್ಯ ಸಮ್ಮೇಳನ” ನಡೆಯುತ್ತಿದೆ.

ಈ ಜನಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿರುವ ೮೬ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿ ಸಮ್ಮೇಳನವಾಗಿಯೂ, ಪ್ರತಿರೋಧವಾಗಿಯೂ ನಡೆಯುತ್ತಿದೆ ಎಂಬುದು ಮುಖ್ಯವಾದ ಸಂಗತಿ. ಈ ಪ್ರತಿರೋಧವನ್ನು ಉಪೇಕ್ಷಿಸಲಾಗದು.   ಯಾವುದೇ ಒಂದು ವರ್ಗ   ಸಾಹಿತ್ಯ, ಸಂಸ್ಕೃತಿಯ ಹೆಸರಿನಲ್ಲಿ  ಯಜಮಾನಿಕೆ ಧೋರಣೆಗಳಿಂದ ಪ್ರಭುತ್ವ ಸಾಧಿಸಲು ಹೊರಟಾಗ ಬಹುಜನರ ಸಾಹಿತ್ಯ ಬಡವಾಗಿಬಿಡುತ್ತದೆ ಅಥವಾ ಅದು ಅಂಚಿಗೆ   ತಳ್ಳಲ್ಪಡುತ್ತದೆ. ಈ  ಅಪಾಯವನ್ನು ಗ್ರಹಿಸಿ ಇಂತಹ ಸಂದರ್ಭದಲ್ಲಿ ಬಹುಜನರು ಎಚ್ಚೆತ್ತುಕೊಳ್ಳಬೇಕು. ಹಾಗೆ ಎಚ್ಚರಗೊಳ್ಳುವ ಪ್ರಕ್ರಿಯೆಯೇ ಪ್ರತಿರೋಧವಾಗಿಯೂ ಪ್ರತಿತನಗಳಾಗಿಯೂ ಹುಟ್ಟುತ್ತವೆ.

ಜಾತಿ, ಧರ್ಮ ಲಿಂಗ ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡು ಶ್ರೀಮಂತ ಗೊಳ್ಳಬೇಕಾಗಿದ್ದ ೮೬ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕ್ಷುಲ್ಲಕ ರಾಜಕೀಯ, ಸೈದ್ಧಾಂತಿಕ ಕಿಡಿಗೇಡಿತನಕ್ಕೆ ಈಡಾಗಿರುವುದು ಕನ್ನಡ ನಾಡಿನ ಸಾಂಸ್ಕೃತಿಕ ಚೈತನ್ಯಕ್ಕೆ ಒದಗಿದ ದುರ್ಗತಿ.  ಧರ್ಮ, ಜಾತಿ, ಲಿಂಗ ತಾರತಮ್ಯವೆ  ಎದ್ದು ಕಾಣುತ್ತಿರುವ ಈ ಸಾಹಿತ್ಯ ಸಮ್ಮೇಳನ ಒಡ್ಡೋಲಗದಂತೆ ಕಂಡ ಕಾರಣವೇ ಅದಕ್ಕೆ ಪ್ರತಿಯಾಗಿ ಜನಸಾಹಿತ್ಯ ಸಮ್ಮೇಳನ ಅನಿವಾರ್ಯವಾಗಿದೆ. ಇದು ತಾತ್ತ್ವಿಕ ಪ್ರತಿರೋಧದ ಸಂಕೇತವೂ ಕೂಡ.

ಕನ್ನಡ ಸಾಹಿತ್ಯ ಪರಿಷತ್ತಿನ ನ ಅಧ್ಯಕ್ಷರ ಚುನಾವಣೆಯೇ ಒಂದು ರಾಜಕೀಯ ಪಕ್ಷ ಮತ್ತು ಮತೀಯ ವಿಚಾರಧಾರೆ ಆಧಾರಿತ ಸಂಘಟನೆಯ ಬೆಂಬಲದಲ್ಲಿ ನಡೆದು  ಹೋದ ದಿನವೇ ಕನ್ನಡಕ್ಕೂ ಧರ್ಮ, ಜಾತಿಯ ಗೆದ್ದಲು ಹಿಡಿದಿರುವುದು ನಿಚ್ಚಳವಾಗಿತ್ತು.  ಪ್ರಭುತ್ವದ ಮರ್ಜಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಮುಡಿಪಾಗಿಡುವ ಮೂಲಕ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರು  ತಮ್ಮ ಗೆಲುವಿಗೆ ಕೊಡುಗೆ ಕೊಟ್ಟವರ ಋಣ ಸಮರ್ಪಣೆಗೆ ನಿಂತಿರುವುದೇ  ಸಾಹಿತ್ಯ ಸಮ್ಮೇಳನದ ಅಧ್ವಾನಗಳಿಗೆ ಕಾರಣ ಎಂದರೆ ತಪ್ಪೇನು?  ಕನ್ನಡದ ಹೆಸರಿನಲ್ಲಿ  ರಾಜಕೀಯ, ಮತೀಯ ಹಿತಾಸಕ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಈ ನಡೆ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲ ಆಶಯಗಳ ಪರಂಪರೆಗೆ ಕಪ್ಪು ಚುಕ್ಕೆಯಾದಂತಾಗಿದೆ. 

ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ. ಸಂಸ್ಕೃತಿ ಮತ್ತು ಬದುಕಿನ ಜೀವಂತಿಕೆಯ ಪರಿಧಿಯನ್ನು ವಿಸ್ತರಿಸುವುದೇ ಆಗಿರುತ್ತದೆ.  ಅದು ಎಲ್ಲರನ್ನೂ ಒಳಗೊಂಡಾಗ ಮಾತ್ರ ಸಾಧ್ಯ.  ಜೀವಪರ, ಜನಪರವಿಲ್ಲದ ಯಾವುದೂ ಸಾಹಿತ್ಯವೆನಿಸಿಕೊಳ್ಳಲಾರದು. ದೊಡ್ಡ ದೊಡ್ಡ ಕವಿಗಳು, ವಿದ್ವಾಂಸರು ಬರೆದ ಮಾತ್ರದಿಂದಲೇ ಕನ್ನಡ ಸಾಹಿತ್ಯ ಮೇರು ಕೀರ್ತಿಯನ್ನು ಗಳಿಸಿದ್ದಲ್ಲ. ಈ ಮಣ್ಣಿನ ಬಹುಜನರ ಸಾಹಿತ್ಯವೂ ತಾಯಿ ಬೇರು ಅನ್ನೋದನ್ನ ಮರೆಯುವಂತಿಲ್ಲ. ಇದನ್ನು  ಸಮಕಾಲೀನವಾಗಿ ಉಳಿಸಿ ಕೊಳ್ಳಬೇಕಾಗಿದೆ.  ಹೀಗೆ ಜನಸಾಹಿತ್ಯವನ್ನು ಸಮಕಾಲೀನ ಗೊಳಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ  ಅಗತ್ಯವನ್ನು ಪ್ರತಿಪಾದಿಸುವುದೇ ’ಜನಸಾಹಿತ್ಯ ಸಮ್ಮೇಳನ’ದ ಜೀವದ್ರವ್ಯ.

ದುರಾದೃಷ್ಟವೆಂದರೆ ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ದೊಡ್ಡರಂಗೇಗೌಡರು ಇವತ್ತಿನ ಸಂದರ್ಶನದಲ್ಲಿ “ಜನಸಾಹಿತ್ಯ ಸಮ್ಮೇಳನ ಎನ್ನುವುದಕ್ಕಿಂತ  ಅದು ಒಂದು ಪಂಥದ ಸಮ್ಮೇಳನ. ಹಾವೇರಿಯ ಸಾಹಿತ್ಯ ಸಮ್ಮೇಳನ ಆ ಪಂಥಕ್ಕೆ ಆಗುತ್ತಿಲ್ಲ. ಅದಕ್ಕೆ  ನಾವು ಬೇರೆಪಂಥ-ವರ್ಗದವರು”  ಎಂದು ಹೇಳುವ ಮೂಲಕ ಸಾಹಿತ್ಯದ ಘನತೆಯನ್ನು ಪಂಥ-ವರ್ಗಗಳ ಗೂಟಕ್ಕೆ ಕಟ್ಟುವ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ.

ದೊಡ್ಡರಂಗೇಗೌಡರು ಈ ಹಿಂದಿನ ತಮ್ಮ ಸಂದರ್ಶನವೊಂದರಲ್ಲೇ ನನಗೆ ನರೇಂದ್ರ ಮೋದಿ ಮತ್ತು ಮಹಾತ್ಮ ಗಾಂಧಿ ಇಬ್ಬರು ರೋಲ್ ಮಾಡೆಲ್ ಗಳೆಂದು ಹೇಳುವ ಮೂಲಕ ತಮ್ಮೊಳಗಿನ ವೈರುಧ್ಯ ವಿಕಲ್ಪವನ್ನು ಸಾರಿಕೊಂಡಿದ್ದರು. ಇಂತಹವರಿಗೆ  ಜನಸಾಹಿತ್ಯ ಸಮ್ಮೇಳನ ಒಂದು ಪಂಥದ ಸಮ್ಮೇಳನವಾಗಿ ಕಂಡಿದ್ದರಲ್ಲಿ ಯಾವುದೇ ದೋಷವಿಲ್ಲ .

 “ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ- ಮಂತ್ರಗಳನ್ನೇಕೆ  ಕೊರೆದಿದ್ದಾರೆ 

ಅಸತ್ಯದ ಕತ್ತಲೇಕೆ ಮನೆ ಮಾಡಿದೆ 

ಸತ್ಯದ ಬೆಳಕಿನಲ್ಲಿ

ಸೂರ್ಯನೆ ಹೇಳು ಹೆಪ್ಪುಗಟ್ಟಿದ ಮನಸ್ಸುಗಳನ್ನು ಕರಗಿಸುವುದೆಂತು

ಮೋಡಗಳೇ ತಿಳಿಸಿ ಮಳೆಯಲ್ಲಿ ಸೇರಿಲ್ಲವೆ ಬಡವರ ಕಣ್ಣೀರು

ಭವಿಷ್ಯವೇ ತಾಳು ಎಲ್ಲೆಡೆ ಆವರಿಸಿದೆ ನೋವು

ಪ್ರಳಯಕ್ಕೆ ಮೊದಲು ಎಚ್ಚರಾಗುತ್ತಾರೆ ಅವರು.

ಎಂದು ರಂಜಾನ್ ದರ್ಗಾ ಬರೆಯುತ್ತಾರೆ.

ಈಗ  ಪ್ರಳಯಕ್ಕೆ ಮೊದಲು ಎಲ್ಲರೂ ಎಚ್ಚರಗೊಳ್ಳುವ ಕಾಲ.  

ಎನ್.ರವಿಕುಮಾರ್

ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು