Monday, June 17, 2024

ಸತ್ಯ | ನ್ಯಾಯ |ಧರ್ಮ

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಡಿ.ಆರ್.ರಾಜಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ

ಮಾಲೂರು: ಗಡಿ ನಾಡ ಸಾಂಸ್ಕೃತಿಕ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಖ್ಯಾತ ಜಾನಪದ ಹಿನ್ನೆಲೆ ಗಾಯಕರು ಹಾಗೂ ಮಾಜೀ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಶುರುವಾದ ‘ಸಾರಂಗ ರಂಗ’ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಇಂದಿನ ‘ದೇಸಿ ದರುವು’ ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವಂತಹ ಡಿ.ಆರ್.ರಾಜಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಜಿಎಫ್ ನ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಾಹಿತಿಗಳಾದ ಡಾ. ಧರಣಿದೇವಿ ಮಾಲಗತ್ತಿ ರವರು ಜಾನಪದ ಗೀತೆಗಳ ಇತಿಹಾಸದೊಂದಿಗೆ ಮಾತನಾಡುತ್ತಾ ಜಾನಪದ ಗಾಯನ ಯಾವತ್ತಿಗೂ ಸಮೂಹ ಗಾಯನ, ಅದು ವೈಯಕ್ತಿಕವಾದದ್ದಲ್ಲ. ಜಾನಪದ ಗಾಯನದಲ್ಲಿ ವೈಯಕ್ತಿಕ ಮೇಲುಗೈ ಇಲ್ಲವೇ ಇಲ್ಲ ಇದೊಂದು ಸಮೂಹದಲ್ಲೇ ಹಾಡುವಂತದ್ದು ಮತ್ತು ಇದು ಸಂಕೇತಿಸುವಂತದ್ದು ಸಮೂದಲ್ಲೇ ಹಾಡುವಂತವರು, ಕೆಲಸ ಮಾಡುವಂತವರು ಮತ್ತು ಸಮೂಹಕ್ಕಾಗಿ ಬದುಕುವಂತವರು ಎಂದು ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಂತರ ಡಿ.ಆರ್.ರಾಜಪ್ಪ ಅವರನ್ನ ಸನ್ಮಾನಿಸಿದ ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ತಮ್ಮ ಜಾನಪದ ಹಾಡುಗಾರರೊಟ್ಟಿಗೆ ಬೆಳೆದ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನ ಹಂಚಿಕೊಂಡಿದ್ದಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಂಬಲವಾಗಿ ಇರುವುದಾಗಿ ತಿಳಿಸಿದರು.

ಗಾಯಕರಾದ ಡಾ.ಕೆ.ಆನಂದ್ ಮಾಲೂರು , ದೊಡ್ಡಮಲ್ಲೆ ರವಿ, ಜಿ. ಮುನಿರೆಡ್ಡಿ, ಮಾರುತಿ ಪ್ರಸಾದ್, ರತ್ನ ಸಕಲೇಶ್ವರ, ಸೊಣ್ಣೂರು ಗೋವಿಂದ್, ಯಡಹಳ್ಳಿ ಶ್ರೀನಿವಾಸ್ ರವರು ತಮ್ಮ ಗಾಯನದ ಮೂಲಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಡಿ.ಆರ್.ರಾಜಪ್ಪ ರವರನ್ನ ಅಭಿನಂದಿಸಿದರು.

ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿರೂಪಿಸಿದ ಪಿಚ್ಚಳ್ಳಿ ಶ್ರೀನಿವಾಸ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ವಂದಿಸಿ ತಮ್ಮ ಹಾಡುಗಾರಿಕೆಯ ಆರಂಭದ ಕುರಿತು ಮೆಲುಕು ಹಾಕಿದ್ದಲ್ಲದೆ ಒಂದು ಹಾಡನ್ನ ಹಾಡುವುದರ ಮುಖಾಂತರ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Related Articles

ಇತ್ತೀಚಿನ ಸುದ್ದಿಗಳು