Thursday, June 13, 2024

ಸತ್ಯ | ನ್ಯಾಯ |ಧರ್ಮ

ಹೆಣ್ಣಿನ ಮೇಲಿನ ಜಂಗೀ ಕುಸ್ತಿ – ಭಾಗ 2

ಈಗ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಗೆ ಮಹಿಳೆಯರೇ ತುತ್ತಾಗಿದ್ದು, ಇದು ಒಂದು ಬುಡಕಟ್ಟಿನ ಗಂಡಸುತನಕ್ಕೆ ಮತ್ತೊಂದು ಬುಡಕಟ್ಟು ತೋರಿದ ಗಂಡಸುತನ. ಪಿತೃಪ್ರಧಾನತೆಯು ಪುರುಷರಿಗೆ ಹೇರಿರುವ ಕಾಯುವ ಕೆಲಸ. ರಕ್ಷಿಸಿಕೊಳ್ಳಬೇಕಾದ ಮಹಿಳೆಯನ್ನು ದಮನ ಮಾಡುವ ಮೂಲಕವೇ ತನ್ನ ಪೌರುಷದ ಪುರುಷತ್ವವನ್ನು ಸಾಬೀತು ಪಡಿಸಲು ಹೋಗುವ ಕ್ರಮ ಇಂದು ನೆನ್ನೆಯದಲ್ಲ –ಪ್ರೊ.ಆರ್.ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು.

ಭಾರತದಲ್ಲಿ ಪ್ರತಿವರ್ಷ ಮೂವತ್ತು ಸಾವಿರಕ್ಕೂ ಹೆಚ್ಚು ಅತ್ಯಾಚಾರದ ಪ್ರಕರಣಗಳು ಕಂಡು ಬರುತ್ತವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಅತ್ಯಾಚಾರವು ನಾಲ್ಕನೆಯ ಸ್ಥಾನದಲ್ಲಿದೆ. ಪ್ರತಿನಿತ್ಯ ಎಂಬತ್ತಕ್ಕೂ ಹೆಚ್ಚು ಪ್ರಕರಣಗಳು ರಾಷ್ಟ್ರದಲ್ಲಿ ದಾಖಲಾಗುತ್ತವೆ. ಆದರೆ ದಾಖಲಾಗದ, ಅತ್ಯಾಚಾರವೆಂದು ಗುರುತಿಸಿದ ಕೊಲೆ ಪ್ರಕರಣಗಳೂ ಇವೆ. ಮಹಿಳೆಯರ ಮೇಲಿನ ಹಿಂಸೆ ನಿರಂತರ ಮತ್ತು ನಿತ್ಯ. ಇದಕ್ಕೆ ಸಮಯ, ಜಾಗ, ಒಳ, ಹೊರ ಎಂಬ ಬೇಧವಿಲ್ಲ. ನೆಂಟರಿಂದ ಹಿಡಿದು ಅಪರಿಚಿತರೂ ಸೇರಿದಂತೆ ಅತ್ಯಾಚಾರಗಳು ನಡೆಯುತ್ತವೆ. ಅಲ್ಲದೆ ಪುರುಷ ಪುರುಷರ ನಡುವಿನ ದ್ವೇಷಕ್ಕೂ ಮಹಿಳೆಯರೇ ತುತ್ತಾಗುತ್ತಾರೆ.

ಈಗ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಗೆ ಮಹಿಳೆಯರೇ ತುತ್ತಾಗಿದ್ದು, ಇದು ಒಂದು ಬುಡಕಟ್ಟಿನ ಗಂಡಸುತನಕ್ಕೆ ಮತ್ತೊಂದು ಬುಡಕಟ್ಟು ತೋರಿದ ಗಂಡಸುತನ. ಪಿತೃಪ್ರಧಾನತೆಯು ಪುರುಷರಿಗೆ ಹೇರಿರುವ ಕಾಯುವ ಕೆಲಸ. ರಕ್ಷಿಸಿಕೊಳ್ಳಬೇಕಾದ ಮಹಿಳೆಯನ್ನು ದಮನ ಮಾಡುವ ಮೂಲಕವೇ ತನ್ನ ಪೌರುಷದ ಪುರುಷತ್ವವನ್ನು ಸಾಬೀತು ಪಡಿಸಲು ಹೋಗುವ ಕ್ರಮ ಇಂದು ನೆನ್ನೆಯದಲ್ಲ. ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದ ಎರಡು ಘಟನೆಗಳನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಸೋತ ಗಂಡಂದಿರನ್ನು ಮತ್ತಷ್ಟು ಕುಗ್ಗಿಸಲು ದ್ರೌಪದಿಯ ವಸ್ತ್ರ ಸೆಳೆಯುವ ಮೂಲಕ ಅವರ ಅಧೀನತೆಯನ್ನು ಎತ್ತಿ ತೋರಿಸುವುದು ಹಾಗೂ ಅವರ ಪುರುಷತ್ವಕ್ಕೆ ಘಾತ ಮಾಡುವ ಮೂಲಕ ಪಿತೃಪ್ರಧಾನತೆ ಒಡ್ಡುವ ಅಧಿಕಾರವನ್ನು ಬಳಸುವುದು, ಇಲ್ಲಿ ಆಳುವವರೆಂದ ಪುರುಷರನ್ನು ಕುಗ್ಗಿಸಲು ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಹಿಂಸೆ, ಅತ್ಯಾಚಾರದ ಜೊತೆ ಅವರನ್ನು ಅಪಹರಿಸುವುದು, ರಾವಣ ತನ್ನ ತಂಗಿಯ ಮೇಲೆ ರಾಮ ಲಕ್ಷ್ಮಣರು ಮಾಡಿದ ಹಿಂಸೆಯ ಸೇಡಾಗಿ ಸೀತೆಯ ಮೇಲೆ ಪ್ರತಿಹಿಂಸೆಯನ್ನು ಜಾರಿ ಇಡಲು ಆಕೆಯನ್ನು ಎತ್ತಿಕೊಂಡು ಹೋಗುವುದು, ಆಕೆಯನ್ನು ಬಿಡಿಸಿ ತರುವ ಮನಸ್ಸು ನಿಜದಲ್ಲಿ ಹೆಂಡತಿಯ ಮೇಲಿನ ಪ್ರೀತಿಯಾಗಿರದೆ ಪಿತೃಪ್ರಧಾನತೆ ಹೇರುವ ವಂಶದ ಗೌರವ ಮುಖ್ಯವಾಗುವುದು ಮುಂತಾದುವು. ಅಲ್ಲದೆ ಅಗ್ನಿಪರೀಕ್ಷೆಯ ಅಧ್ಯಾಯದಲ್ಲಿ ಸೀತೆ ರಾಮನನ್ನು ಸಂಧಿಸಲು ಬಂದಾಗ ರಾಮನು ಸೀತೆಗೆ ಹೇಳುವ ಮಾತುಗಳು ಪಿತೃಪ್ರಧಾನತೆಯಲ್ಲಿ ಹೆಣ್ಣಿನ ಮೇಲಿನ ಹಿಂಸೆ ಹೇಗೆ ಎರಡೂ ಕಡೆಯಿಂದ ಚಾಲ್ತಿಯಲ್ಲಿರುತ್ತದೆ ಎಂಬುದನ್ನು ತಿಳಿಸುತ್ತದೆ. “ಎಲೆ ಸೀತೆ, ನಾನು ರಾವಣನೊಡನೆ ಯುದ್ಧ ಹೂಡಿದುದು ನಿನಗಾಗಿ ಅಲ್ಲ; ನನ್ನ ಚರಿತ್ರೆಯನ್ನು ಕಾಪಾಡಿಕೊಂಡು ಅಪವಾದವನ್ನು ನಿವಾರಿಸಿಕೊಳ್ಳುವುದಕ್ಕಾಗಿ” (ವಾಲ್ಮೀಕಿ ರಾಮಾಯಣ)!

ಗೋದ್ರಾದ ಘಟನೆಯಲ್ಲೂ ಹಿಂದುಗಳು ಮುಸ್ಲಿಂ ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರವೂ ಮುಸ್ಲಿಂ ಪುರುಷರ ಪುರುಷತ್ವದ ಮೇಲೆ ಮಾಡುವ ದಾಳಿಯೇ ಆಗಿದೆ. ಪುರುಷ ಪುರುಷರ ನಡುವಿನ ದ್ವೇಷ, ಅಸೂಯೆ ಮತ್ತು ಅವರು ಕಾಯುವವರೆಂಬ ಪುರುಷತ್ವದ ಅಂಧ ಮೌಲ್ಯಗಳು ಶತ ಶತಮಾನಗಳಿಂದಲೂ ಮಹಿಳೆಯರ ಮೇಲೆ ಹಿಂಸೆಯನ್ನು ಚಾಲ್ತಿಯಲ್ಲಿ ಇಟ್ಟಿವೆ. ಎಲ್ಲಿಯವರೆಗೆ ಲಿಂಗತ್ವದ ವ್ಯವಸ್ಥೆ ಲಿಂಗತ್ವದ ಸಮನ್ಯಾಯದ ಕಡೆ ಚಲಿಸುವುದಿಲ್ಲವೋ ಅಲ್ಲಿಯವರೆಗೆ ಈ ಪಿತೃಪ್ರಧಾನತೆ ಹೇರುವ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಲಾಗದು. ಅದು ಬುಡಕಟ್ಟು ಇರಲಿ, ನಾಗರಿಕ ಸಮಾಜವಿರಲಿ ಅಥವಾ ಯಾವುದೇ ಧರ್ಮವಿರಲಿ ಪಿತೃಪ್ರಧಾನತೆ ಸ್ಥಾಪಿತ ಅಧಿಕಾರ ಕೇಂದ್ರದಲ್ಲಿ ಮಹಿಳೆ ಹಲವು ಮೂಲಗಳಿಂದ ದಾಳಿಗೆ ಒಳಗಾಗುತ್ತಾಳೆ. ಆ ಕಾರ್ಯವನ್ನು ಕೊನೆಗಾಣಿಸಲು ಸಮಾನತೆಯೆಡೆಗೆ ನಮ್ಮ ನಡಿಗೆ ನಿತ್ಯ ನಿರಂತರ. ಆಳ್ವಿಕೆಯನ್ನು ನಿರಂತರ ಎಚ್ಚರದಲ್ಲಿ ಇಡುತ್ತಾ ಪಿತೃತ್ವದ ಅಧಿಕಾರಶಾಹಿ ಹಿಂಸೆಯನ್ನು ನಿರಚನಗೊಳಿಸಬೇಕಾಗಿದೆ.

ಪ್ರೊ.ಆರ್.ಸುನಂದಮ್ಮ

ನಿವೃತ್ತ ಪ್ರಾಧ್ಯಾಪಕರು.

ಇದನ್ನೂ ಓದಿಮಣಿಪುರ: ಲೈಂಗಿಕ ಹಿಂಸಾಚಾರದ ವಿಷಯದಲ್ಲಿ ಮಹಿಳೆಯರೂ ಶಾಮೀಲು, ಸಂತ್ರಸ್ಥೆಯ ಹೇಳಿಕೆ

Related Articles

ಇತ್ತೀಚಿನ ಸುದ್ದಿಗಳು