Thursday, June 13, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳಲ್ಲಿ ಜಪಾನೀಸ್ ಬಿ ಎನ್ಸೆಫಲೈಟಿಸ್

ಡಾ. ಕೆ.ಬಿ. ರಂಗಸ್ವಾಮಿ

ಇತ್ತೀಚೆಗೆ ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಜಪಾನೀಸ್ ಬಿ ಎನ್ಸೆಫಲೈಟಿಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 5ನೇ ತಾರೀಖಿನಿಂದ, ಒಂದರಿಂದ ಹದಿನೈದು ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಜೆ ಇ ಲಸಿಕಾ ಅಭಿಯಾನವನ್ನು‌ ಸರ್ಕಾರ ಹಮ್ಮಿಕೊಂಡಿದೆ. ಈ ಲಸಿಕೆಯನ್ನು ಯಾವ ಕಾರಣಕ್ಕಾಗಿ ನೀಡಲಾಗುತ್ತದೆ? ಇದನ್ನು  ಕಡ್ಡಾಯವಾಗಿ ನೀಡಲೇಬೇಕೆ? ಎಂಬಿತ್ಯಾದಿ ಪ್ರಶ್ನೆಗಳು ಅನೇಕ ಪೋಷಕರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಒಂದಿಷ್ಟು ಬೆಳಕು ಚೆಲ್ಲುವ ಸಲುವಾಗಿ ಈ ಲೇಖನ.

ಏನಿದು ಜಪಾನೀಸ್ ಬಿ ಎನ್ಸೆಫಲೈಟಿಸ್?

ವಿವಿಧ ಕಾರಣಗಳಿಂದ ಮಿದುಳಿನ ಅಂಗಾಂಶಗಳು ಉರಿಯೂತಕ್ಕೊಳಗಾಗುವುದನ್ನು ‘ಮಿದುಳಿನ ಉರಿಯೂತ’ ಎನ್ನಲಾಗುತ್ತದೆ. ಜನಸಾಮಾನ್ಯರು ಇದನ್ನು ‘ಮಿದುಳು ಜ್ವರ’ ಎಂತಲೂ ಕರೆಯುತ್ತಾರೆ. ಉರಿಯೂತಕ್ಕೊಳಗಾದ ಮಿದುಳಿನ ಅಂಗಾಂಶಗಳಲ್ಲಿ ನೀರು ತುಂಬಿಕೊಂಡು ತಲೆಬುರುಡೆಯೊಳಗೆ ಏರೊತ್ತಡ ಉಂಟಾಗುತ್ತದೆ. ಶರೀರದ ಎಲ್ಲಾ ಅಂಗಕ್ರಿಯೆಗಳು ಮಿದುಳಿನಿಂದಲೇ ನಿಯಂತ್ರಿಸಲ್ಪಡುವುದರಿಂದ ಮಿದುಳು ಉರಿಯೂತಕ್ಕೊಳಗಾದಾಗ ಗಂಭೀರ ಸ್ವರೂಪದ ದೈಹಿಕ ಸಮಸ್ಯೆಗಳುಂಟಾಗಿ, ಉಸಿರಾಟದ ವೈಫಲ್ಯದಿಂದ ಸಾವು ಸಂಭವಿಸಬಹುದು ಮತ್ತು ಬದುಕುಳಿದ ವ್ಯಕ್ತಿಗಳಲ್ಲಿ ಬುದ್ಧಿಮಾಂದ್ಯತೆ, ಅಂಧತ್ವ, ಕಿವುಡುತನ, ಪಾರ್ಶ್ವವಾಯು ಮುಂತಾದ ಅಂಗವೈಕಲ್ಯಗಳುಂಟಾಗಬಹುದು.

ಮಿದುಳಿನ ಉರಿಯೂತದ ಸರ್ವೇಸಾಮಾನ್ಯ ಕಾರಣವೆಂದರೆ ವೈರಾಣುವಿನ ಸೋಂಕು. ಆದರೆ ಅಪರೂಪಕ್ಕೊಮ್ಮೆ ಬ್ಯಾಕ್ಟೀರಿಯಾ, ಶಿಲೀಂದ್ರ, ಅಮೀಬಾ ಮುಂತಾದ ಇತರೆ ಸೂಕ್ಷ್ಮಾಣುಗಳ ಸೋಂಕೂ ಸಹ ಕಾರಣವಾಗಬಲ್ಲದು. ಮಿದುಳಿನ ಉರಿಯೂತ ಉಂಟುಮಾಡಬಲ್ಲ ವೈರಾಣುಗಳೆಂದರೆ ಜಪಾನೀಸ್ ಬಿ ಎನ್ಸೆಫಲೈಟಿಸ್, ಹರ್ಪಿಸ್, ದಡಾರ, ಗದ್ದಬಾವು(ಮಂಪ್ಸ್), ಎಚ್ ಐ ವಿ ಇತ್ಯಾದಿ.

ಜಪಾನೀಸ್ ಬಿ ಎನ್ಸೆಫಲೈಟಿಸ್ ಎಂಬುದೊಂದು ಪ್ರಾಣಿಜನ್ಯ ಕಾಯಿಲೆಯಾಗಿದ್ದು, ಭತ್ತದ ಗದ್ದೆ ಮತ್ತು ಕೆರೆಕುಂಟೆಗಳಲ್ಲಿ ಕಾಣಸಿಗುವ ಬೆಳ್ಳಕ್ಕಿ(ಆ್ಯಡ್ರಿಡ್ ಹಕ್ಕಿ)ಗಳು ಈ ವೈರಾಣುವಿನ ಮೂಲಗಳಾಗಿರುತ್ತವೆ. ನೀರು ನಿಂತಿರುವ ಸ್ಥಳಗಳಲ್ಲಿ ಸಂತಾನೋತ್ಪತ್ತಿ ಹೊಂದುವ ಕ್ಯೂಲೆಕ್ಸ್ ಗುಂಪಿಗೆ ಸೇರಿದ ಸೊಳ್ಳೆಯ ಕೆಲವು ಪ್ರಭೇದಗಳ ಮುಖಾಂತರ ವೈರಾಣುಗಳು ಬೆಳ್ಳಕ್ಕಿಗಳಿಂದ ಹಂದಿಗಳಿಗೆ ರವಾನಿಸಲ್ಪಡುತ್ತವೆ. ಹಂದಿಗಳ ಶರೀರದಲ್ಲಿ ವಂಶಾಭಿವೃದ್ಧಿ ಹೊಂದುವ ವೈರಾಣು, ಪುನಃ ಅದೇ ಸೊಳ್ಳೆಯ ಮುಖಾಂತರ ಆಕಸ್ಮಿಕವಾಗಿ ಮನುಷ್ಯನ ಶರೀರವನ್ನು ಪ್ರವೇಶಿಸಿ ಮಿದುಳಿನ ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಎಲ್ಲಾ ವಯೋಮಾನದವರು ಇದಕ್ಕೆ ತುತ್ತಾಗಬಹುದಾದ ಸಾಧ್ಯತೆಯಿದ್ದರೂ ಹದಿನೈದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಮೂರರಿಂದ ಐದು ದಿನಗಳ ಅದಿಶಯನ ಕಾಲದ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ.

ರೋಗಲಕ್ಷಣಗಳು

ಮಿದುಳಿನ ಉರಿಯೂತದಲ್ಲಿ ಕಂಡುಬರುವ ರೋಗಲಕ್ಷಣಗಳೆಂದರೆ-

* ತೀವ್ರ ಸ್ವರೂಪದ ಜ್ವರ  

* ಅತೀವ ತಲೆನೋವು

* ವಾಂತಿ

* ಫಿಟ್ಸ್

* ಮಂಕಾಗುವುದು

* ಪ್ರಜ್ಞಾಹೀನತೆ

* ಪಾರ್ಶ್ವವಾಯು

* ದೃಷ್ಟಿ ಮಂಜಾಗುವುದು

* ಅನೈಚ್ಛಿಕ ಚಲನೆಗಳು

* ಅನಿಯಂತ್ರಿತ ಮಲಮೂತ್ರ ವಿಸರ್ಜನೆ ಇತ್ಯಾದಿ.

ರೋಗನಿದಾನ

ಮಿದುಳಿನ ಉರಿಯೂತಕ್ಕೆ ಕೆಲವು ಪ್ರಯೋಗಶಾಲಾ ಪರೀಕ್ಷೆಗಳ ಅಗತ್ಯವಿರುತ್ತದೆ.

* ಮಿದುಳು ದ್ರವದ ಪರೀಕ್ಷೆ 

* ಮಿದುಳಿನ ಎಮ್ ಆರ್ ಐ

* ವೈರಾಣುಗಳ ಸೋಂಕನ್ನು ದೃಢೀಕರಿಸಲು ಕೆಲವು ರಕ್ತ ಪರೀಕ್ಷೆಗಳು ಇತ್ಯಾದಿ.

ಚಿಕಿತ್ಸಾಕ್ರಮ 

ಮಿದುಳಿನ ಉರಿಯೂತಕ್ಕೆ ಸಾಮಾನ್ಯವಾಗಿ ವೈರಾಣುಗಳು ಕಾರಣವಾಗಿರುವುದರಿಂದ ಯಾವುದೇ ನಿಗದಿತ ಚಿಕಿತ್ಸೆಗಳಿರುವುದಿಲ್ಲ. ಹರ್ಪಿಸ್ ವೈರಾಣು ದೃಢಪಟ್ಟರೆ ಮಾತ್ರ ವೈರಾಣು ನಿಯಂತ್ರಕ(ಆ್ಯಂಟಿವೈರಲ್)ಔಷಧಗಳನ್ನು ಬಳಸಬೇಕಾಗುತ್ತದೆ. ಹಾಗೆಯೇ ಎಚ್ ಐ ವಿ ಯಿಂದುಂಟಾಗುವ ಉರಿಯೂತಕ್ಕೂ ಸಹ ಔಷಧಗಳ ಅಗತ್ಯವಿರುತ್ತದೆ. ಉರಿಯೂತದಂಥ ಕಾಯಿಲೆಯಲ್ಲಿ ಅದಕ್ಕೆ ಕಾರಣವಾದ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.

ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ನೀಡಬೇಕು.

* ಜ್ವರದ ತಾಪವನ್ನು ತಗ್ಗಿಸುವುದು

* ತಲೆಬುರುಡೆಯೊಳಗಿನ ಏರೊತ್ತಡವನ್ನು ತಗ್ಗಿಸುವ ಔಷಧಗಳ ಬಳಕೆ 

* ಫಿಟ್ಸ್ ನಿಯಂತ್ರಣದ ಔಷಧಗಳ ಬಳಕೆ

* ಆಮ್ಲಜನಕದ ಪೂರೈಕೆ

* ರಕ್ತನಾಳಗಳ ಮುಖಾಂತರ ದ್ರಾವಣ ಮತ್ತು ಮೂಗಿನ ಮುಖಾಂತರ ಆಹಾರ ಪೂರೈಕೆ

* ಕಣ್ಣಿನ ಆರೈಕೆ

* ಮಲಮೂತ್ರಗಳ ಕಾಳಜಿ

* ಚರ್ಮದ ವ್ರಣಗಳಾಗದಂತೆ ಎಚ್ವರವಹಿಸುವುದು ಇತ್ಯಾದಿ.

ನಿವಾರಣೋಪಾಯಗಳು

* ಸೊಳ್ಳೆಗಳಿಂದ ರಕ್ಷಣೆ ಮತ್ತು ಸೊಳ್ಳೆಗಳ ನಿಯಂತ್ರಣ.

* ಹಂದಿಗಳ ನಿಯಂತ್ರಣ.

* ಜಪಾನೀಸ್ ಬಿ ಎನ್ಸೆಫಲೈಟಿಸ್ (ಜೆ ಇ) ವಿರುದ್ಧದ ಲಸಿಕೆ ನೀಡುವುದು‌. ಈ ಕಾಯಿಲೆಯ ಹಾವಳಿ ಹೆಚ್ಚಾಗಿರುವ ಜಿಲ್ಲೆಗಳಲ್ಲಿ, ಮಗುವಿಗೆ ಒಂಬತ್ತು ತಿಂಗಳುಗಳು ತುಂಬಿದ ನಂತರ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

ಒಟ್ಟಿನಲ್ಲಿ ಮಾರಣಾಂತಿಕವಾದ ಮಿದುಳಿನ ಉರಿಯೂತವನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಸಾವುನೋವಿನ ಪ್ರಮಾಣವನ್ನು ತಗ್ಗಿಸಬಹುದು.

ಜೆ ಇ ಲಸಿಕಾ ಅಭಿಯಾನದ ಕುರಿತು

ಬಾಗಲಕೋಟೆ, ಕಲಬುರ್ಗಿ, ಯಾದಗಿರಿ, ಗದಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ರಾಮನಗರ, ತುಮಕೂರು ಈ ಹತ್ತು ಜಿಲ್ಲೆಗಳಲ್ಲಿ ಒಂದರಿಂದ ಹದಿನೈದು ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಜೆ ಇ ವಿರುದ್ಧದ ಲಸಿಕೆ ನೀಡುವ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ. ಎಲ್ಲಾ ಶಾಲೆಗಳು, ಅಂಗನವಾಡಿಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಮಕ್ಕಳು ಶೀತ, ಕೆಮ್ಮು, ಜ್ವರಗಳಂಥ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವುಗಳಿಂದ ಗುಣಮುಖರಾದ ನಂತರ ಲಸಿಕೆ ನೀಡಲಾಗುವುದು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಿದ್ದರೆ, ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಅಂಥ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುತ್ತಾರೆ. ಇತರೆ ಲಸಿಕೆಗಳಂತೆ ಈ ಲಸಿಕೆಯಿಂದಲೂ ಕೆಲ ಮಕ್ಕಳಲ್ಲಿ ಜ್ವರ, ಮೈ ಕೈ ನೋವು ಮುಂತಾದ ಕೆಲವು ಚಿಕ್ಕ ಪುಟ್ಟ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದಾದ ಸಾಧ್ಯತೆಯಿರುತ್ತದೆ. ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಅತಿ ವಿರಳ.

————————————-  

Related Articles

ಇತ್ತೀಚಿನ ಸುದ್ದಿಗಳು