Wednesday, June 19, 2024

ಸತ್ಯ | ನ್ಯಾಯ |ಧರ್ಮ

‘ಜಾತಿ ಎಲ್ಲಿದೆ..?’ ಎನ್ನುವವರ ಕಣ್ಣುಗಳು ಸಾಯಲಿ.

ಭಾರತದ ಜಾತಿವಾದ ಅತ್ಯಂತ ನಿರ್ದಯಿ ಎಂಬುದು ಎಷ್ಟು ನಿಜವೋ.. ಅದು ರಮಿಸುತ್ತಲೆ ವಿಷವುಣಿಸುವ ವಂಚಕತನದ್ದೂ ಕೂಡ  ಎಂಬುದಕ್ಕೆ ಭಾರತವನ್ನು ಬಗೆದು ನೋಡಬೇಕಿಲ್ಲ. ಬರೀಗಣ್ಣುಗಳಿಂದ ನೋಡಿದರೆ ಸಾಕು ಎನ್ನುತ್ತಾರೆ ಲೇಖಕ ರವಿಕುಮಾರ್.

ಘಟನೆ 1:  ಮೊನ್ನೆ ಮೊನ್ನೆಯಷ್ಟೆ ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೇರಹಳ್ಳಿಯಲ್ಲಿ ದೇವರ ಪಲ್ಲಕ್ಕಿಯಿಂದ ಕೆಳಗೆ ಬಿದ್ದ ಗುಜ್ಜುಕೋಲು ಮುಟ್ಟಿದ ಚೇತನ್ ಎಂಬ ದಲಿತ ಬಾಲಕನನ್ನು ನಿರ್ಮಾನುಷವಾಗಿ ಬಡಿದ  ಸವರ್ಣೀಯರು 60 ಸಾವಿರ ರೂ. ದಂಡ ಕಟ್ಟಬೇಕೆಂಬ ಶಿಕ್ಷೆ ವಿಧಿಸಿದ್ದರು. ಕೂಲಿ-ನಾಲಿ ಮಾಡಿಕೊಂಡು ತುತ್ತು ಅನ್ನ ಹಂಚಿಕೊಂಡು ತಿನ್ನಲು ಪರದಾಡುತ್ತಿದ್ದ ದಲಿತ ಬಾಲಕನ ಕುಟುಂಬ 60 ಸಾವಿರ ದಂಡ ಕಟ್ಟುವ ಶಿಕ್ಷೆಯಿಂದ ಕಂಗಾಲಾಗಿತ್ತು.

ಘಟನೆ 2: ಚಿಕ್ಕಮಗಳೂರಿನಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಲು ಬಂದ ಯುವತಿಯನ್ನು ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿ ಅಡ್ಡಿ ಪಡಿಸಿದರು.

ಘಟನೆ 3: ತುಮಕೂರು ಜಿಲ್ಲೆಯ ಪೆದ್ದನಳ್ಳಿಯಲ್ಲಿ  ಇಬ್ಬರು ದಲಿತ ಯುವಕರನ್ನು ಸವರ್ಣೀಯರ ಗುಂಪು ಬಡಿದು ಬರ್ಬರವಾಗಿ ಕೊಂದು ಹಾಕಿತು. 

ಘಟನೆ 4: ಇದೇ ಮಾರ್ಚ್ ತಿಂಗಳಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಲೇನಳ್ಳಿಯಲ್ಲಿ  ಮೈಮೇಲೆರಗಿದ ದನಗಳನ್ನು ಹಿಡಿದುಕೊಳ್ಳುವಂತೆ ಸೂಚಿಸಿದ ಸುನೀಲ್ ಕುಮಾರನ ಮೇಲೆ ದನದ ವಾರಸುದಾರ ಸವರ್ಣೀಯರು ಜಾತಿ ಕಾರಣವನ್ನೇ ಮುಂದು ಮಾಡಿ ಹಲ್ಲೆ ನಡೆಸಿದ್ದರು. ಈ ದಲಿತ ಯುವಕ ಸವರ್ಣೀಯ ಚಂದ್ರೇಗೌಡನನ್ನು ದುರುಗುಟ್ಟಿಕೊಂಡು ನೋಡಿದ್ದೆ ಕ್ರೂರ ಅಪರಾಧವೆಂಬುದು ಈ ಜಾತಿವಂತರ ಸಿಟ್ಟಿಗೆ ಕಾರಣವಾಗಿತ್ತು.

ಘಟನೆ 5: ಕಳೆದ ಸೆಪ್ಟಂಬರ್ 2021 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ  2 ವರ್ಷದ ಹಸುಗೂಸು  ಅಂಬೆಗಾಲಿಡುತ್ತಾ ದೇವಸ್ಥಾನದ ಆವರಣದ ಒಳಗೆ ಪ್ರವೇಶ ಮಾಡಿದ್ದರಿಂದ ದೇವರು ಅಪವಿತ್ರಗೊಂಡು! ಊರಿನ ಜಾತಿಗ್ರಸ್ತರು ಆ ದಲಿತ  ಕುಟುಂಬಕ್ಕೆ 25 ಸಾವಿರ ರೂ. ದಂಡ ವಿಧಿಸುತ್ತಾರೆ.

ಘಟನೆ 6: ಕೊಪ್ಪಳ ಜಿಲ್ಲೆಯಲ್ಲಿ ಹೊಟೇಲ್‍ಗೆ ಟೀ ಕುಡಿಯಲು ಬಂದ ಯುವಕರ ಬೈಕ್ ಮೇಲೆ ಅಂಬೇಡ್ಕರ್ ಚಿತ್ರದ ಸ್ಟಿಕರ್ ಅಂಟಿಸಿದ್ದನ್ನು ಕಂಡ ಹೊಟೇಲ್ ಮಾಲೀಕ ಆ ಯುವಕರನ್ನು ಹಿಡಿದು ಹೊರದಬ್ಬುತ್ತಾನೆ.

ಘಟನೆ 7 : ಯಲಬುರ್ಗಾದಲ್ಲಿ ದಲಿತ ಸಮುದಾಯದವರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತದೆ.

ಘಟನೆ 8: ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಮುಸ್ಲಿಂ ಹುಡುಗಿಯನ್ನು ಮದುವೆಯಾದ ದಲಿತ ಹುಡುಗನನ್ನು  ತಲೆ ಜಜ್ಜಿ ಹತ್ಯೆ ಮಾಡಲಾಗುತ್ತದೆ. 

 ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ನಡೆದ ಜಾತಿ ಕ್ರೌರ್ಯದ  ತಾಜಾ ಘಟನೆಗಳಿವು.

‘ಜಾತಿ ಎಲ್ಲಿದೆ..?’ ಎಂದು ಕೇಳುವವರಿಗೆ  ಬಹುಶಃ ಈ ದೌರ್ಜನ್ಯಗಳು, ಕೊಲೆಗಳು, ಅವಮಾನಗಳು ಅರಿವಿಗೆ ಬಂದಿಲ್ಲದಿರಬಹುದು. ಅಥವಾ ಬಂದಿದ್ದರೂ ಅವುಗಳನ್ನು ಪ್ರಜ್ಞಾಪೂರ್ವಕವಾಗಿ  ಮರೆ ಮಾಚುವ ದೇಶಾವರಿತನ ಅವರದ್ದಾಗಿರಬಹುದು ಎಂದು ಭಾವಿಸುತ್ತೇನೆ.

 ಯಾವುದೇ ಮಾಧ್ಯಮಗಳಲ್ಲೂ  ದಲಿತ  ಜಾತಿಗಳ ಮೇಲಿನ  ಜಾತಿ ಕ್ರೌರ್ಯಗಳು ಮುಖ್ಯ ಸುದ್ದಿಯಾಗಲೇ ಇಲ್ಲ. ಅಗಿದ್ದರೂ ಒಳಪುಟಗಳ ಮೂಲೆಯಲ್ಲೆಲ್ಲೋ ಒಂದು ಕಾಲಂ ನ ಸುದ್ದಿಯಾಗಿ ಸಮಾಧಿಯಾಗಿ ಹೋಗಿರುತ್ತದೆ. ನ್ಯೂಸ್ ಚಾನಲ್‍ಗಳಲ್ಲಿ  ಪ್ಯಾನಲ್ ಡಿಸ್ಕಷನ್‍ಗೆ ಯೋಗ್ಯವಾಗಿರುವುದಿಲ್ಲ(?). ಮಾಧ್ಯಮಗಳೂ ಜಾತಿ ಪ್ರೇರಿತಗೊಂಡಿರುವುದರಿಂದ ದಲಿತರ ಸುದ್ದಿಗಳು  ದೊಡ್ಡ ತಲೆಬರಹದ  ವರದಿಗಳಾಗುವುದು ಹೇಗೆ ತಾನೆ ಸಾಧ್ಯ? ನ್ಯೂಸ್ ಚಾನಲ್‍ಗಳಿಗೆ ಟಿ ಆರ್ ಪಿ  ಬರುವುದಾದರೂ ಎಲ್ಲಿಂದ? ಈ ಕಾರಣಕ್ಕಾಗಿಯೇ ಬಾಬಾಸಾಹೇಬ್ ಅಂಬೇಡ್ಕರ್ ಅವರು  ಹಿಂದೆಯೇ ‘ಭಾರತದಲ್ಲಿ ನನ್ನ ಜನರಿಗೆ ಪತ್ರಿಕೆಗಳಿಲ್ಲ,’ (There is no news paper for my people in india) ಎಂದು ಬಿಕ್ಕಳಿಸಿದ್ದರು. ಇಂದಿಗೂ ಈ ಕಳವಳದ ಸ್ಥಿತಿ ಭಿನ್ನವಾಗಿಯೇನಿಲ್ಲ.

ಬಾಬಾಸಾಹೇಬ್ ಅಂಬೇಡ್ಕರ್

ದಲಿತರ ಮೇಲಿನ ದೌರ್ಜನ್ಯ ಸ್ವತಂತ್ರ ಭಾರತದಲ್ಲಿ ನಿಂತಿಲ್ಲ. ಬದಲಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದುದ್ದಕ್ಕಿಂತ ಇಂದು  ಭಿನ್ನ ಸ್ವರೂಪದಲ್ಲಿ ತಾಂಡವವಾಡುತ್ತಿದೆ. ‘ಜಾತಿವಂತ ಸಮಾಜ’  ದಲಿತರನ್ನು ಬಹಿಷ್ಕರಿಸುವ, ಅವಮಾನಿಸುವ, ಕೊಂದು, ಸುಟ್ಟು , ಅತ್ಯಾಚಾರವೆಸಗಿ ತಿಂದು ದಕ್ಕಿಸಿಕೊಳ್ಳಬಹುದಾದ ಕ್ರೌರ್ಯವನ್ನು ಇನ್ನಷ್ಟು ಸಲೀಸಾಗಿ ರೂಢಿಸಿಕೊಂಡು ಬದುಕುತ್ತಿದೆ. ಇದಕ್ಕೆ ರಾಜಕೀಯ ಶಕ್ತಿಯೂ ಮೈಗೂಡಿರುವುದು ಘೋರ ಅಪಾಯ. ಇದು ಚಲನಶೀಲ ಸಮಾಜದ ಲಕ್ಷಣವಲ್ಲ. ಬದಲಿಗೆ ಜಡ ಸಮಾಜದ ಜೀವಂತಿಕೆಯಷ್ಟೆ.

ಸ್ವತಂತ್ರ ಭಾರತದಲ್ಲಿ, 1968 ರಲ್ಲಿ ತಮಿಳುನಾಡಿನ ಕಿಲನ್ವೇಣಿಯಲ್ಲಿ 44 ಜನ ದಲಿತ ಕಾರ್ಮಿಕರ ಹತ್ಯಾಕಾಂಡ, ಖೈರ್ಲಾಂಜೆ, ಕಂಬಾಲಪಲ್ಲಿ ನರಮೇಧಗಳ ಮೊದಲುಗೊಂಡು ಮೊನ್ನೆ ಮೊನ್ನೆಯ ಕೋಲಾರದ ಉಳ್ಳೇರಳ್ಳಿಯಲ್ಲಿ ದೇವರ ಕೋಲು ಮುಟ್ಟಿದ  ದಲಿತ ಯುವಕನನ್ನು ಬಡಿದು ದಂಡ ಶಿಕ್ಷೆ ವಿಧಿಸುವವರೆಗೂ ಜಾತಿ ಕ್ರೌರ್ಯಗಳು ಭೀಭತ್ಸವಾಗಿ ಮುಂದುವರೆಯುತ್ತಿವೆ.  ಭಾರತದೊಳಗೆ ಇರುವ ‘ದಲಿತ ಭಾರತ’ ಭಯ, ಕಣ್ಣೀರು, ದುಃಖ, ಸಂಕಟ, ಸವಾಲುಗಳನ್ನು ಎದುರಿಸುತ್ತಲೇ ಇದೆ.

ಸತ್ತ ದನದ ಚರ್ಮ ಸುಲಿದ ತಪ್ಪಿಗೆ ಇಲ್ಲಿ ದಲಿತರನ್ನು ಐಷಾರಾಮಿ ಕಾರಿಗೆ ಕಟ್ಟಿ ನಡು ಬೀದಿಯಲ್ಲಿ ನಿರ್ಭಯವಾಗಿ ಹೊಡೆಯಲಾಗುತ್ತದೆ. ದಲಿತ ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಮರಕ್ಕೆ ನೇಣು ಬಿಗಿಯಲಾಗುತ್ತದೆ. ತಂದೆ-ತಾಯಿಗೆ ಮಗಳ ಹೆಣದ ಮುಖವನ್ನು ತೋರಿಸದೆ ರಾತ್ರೋರಾತ್ರಿ ಸುಟ್ಟು ಹಾಕಲಾಗುತ್ತದೆ. ಸಾಕ್ಷಿ ಇಲ್ಲದಂತೆ ಇಡೀ ಕುಟುಂಬವನ್ನೆ ಅಸಹಾಯಕ ಗೊಳಿಸಿ ಸಾಯುವಂತೆ ನೋಡಿಕೊಳ್ಳಲಾಗುತ್ತದೆ. ದಲಿತ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ತುತ್ತಾಗಿ ಕೊಲ್ಲಲ್ಪಟ್ಟರೂ ಅವರ ಹೆಸರಿನಲ್ಲಿ ಮೋಂಬತ್ತಿ ಹಿಡಿದು ನ್ಯಾಯ ಕೇಳುವವರೂ ಇಲ್ಲಿ ವಿರಳ. ಈ ನತದೃಷ್ಟ ಹೆಣ್ಣುಮಕ್ಕಳ ಪರವಾಗಿ ಆಧುನಿಕ ಭಾರತದ ಸಮೂಹ ಮಾಧ್ಯಮ ಯಾವ ಅಭಿಯಾನವನ್ನೂ ನಡೆಸುವುದಿಲ್ಲ. ಎಲ್ಲವೂ ಜಾತಿ ಬಗೆದು ನೋಡುವ ಪರಿಪಾಠವನ್ನು ಪಾಲಿಸಲಾಗುತ್ತಿದೆ.  

ಸ್ವಾತಂತ್ರ್ಯ ಬಂದ ನಂತರ ಜಾತಿ ಆಧಾರಿತ ಕ್ರೌರ್ಯವನ್ನು ಹಿಮ್ಮೆಟ್ಟಿಸಲು ಕಾನೂನುಗಳು ರಚನೆಯಾದವು ಸರಿಯಷ್ಟೆ. ಆದರೆ ಅವುಗಳನ್ನು ಕಟಿಬದ್ಧವಾಗಿ ಅನುಷ್ಠಾನಗೊಳಿಸಬೇಕಾದ ಶಾಸಕಾಂಗ , ಕಾರ್ಯಾಂಗಗಳಲ್ಲಿ ಜಾತಿಕೋರರೇ ಆಯಕಟ್ಟಿನ ಜಾಗಗಳಲ್ಲಿ ಇರುವುದು ಈ ಕಾನೂನಿನ ಗಂಭೀರತೆಯ ಫಲವನ್ನು ದಕ್ಕಿಸಿಕೊಳ್ಳುವಲ್ಲಿ ಹಿನ್ನಡೆಯಾಗಿದೆ. 2020 ಏಪ್ರಿಲ್ ನಿಂದ 2021 ಮಾರ್ಚ್ ವರೆಗಿನ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ದಲಿತರ ಮೇಲಿನ ಹಲ್ಲೆ, ಕೊಲೆ, ಬಹಿಷ್ಕಾರದ ಆರೋಪಗಳಡಿಯಲ್ಲಿ 2‌,327 ಕೇಸುಗಳು ದಾಖಲಾಗಿವೆ. ಇದು ಈ ಹಿಂದಿನ ವರ್ಷಕ್ಕಿಂತ ಶೇ.54 ರಷ್ಟು ಹೆಚ್ಚಳವಾಗಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ತನ್ನ ವರದಿಯಲ್ಲಿ ಹೇಳಿದೆ.

ಈ ಪ್ರಕರಣಗಳಲ್ಲಿ ಸರ್ಕಾರ 284 ಕೋ.ರೂಗಳ ಪರಿಹಾರವನ್ನು ಸಂತ್ರಸ್ತರಿಗೆ ನೀಡಿ ಕೈ ತೊಳೆದುಕೊಂಡಿದೆ ಅಷ್ಟೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರಗಳನ್ನು ನೀಡುವುದೇ ಬಹುದೊಡ್ಡ ಉದಾರತೆ ಎಂದು ಭಾವಿಸುವ ಸರ್ಕಾರಗಳು ತಪ್ಪಿತಸ್ಥರಿಗೆ  ಸಮರ್ಥ ಪ್ರಾಸಿಕ್ಯೂಷನ್ ಮೂಲಕ ಶಿಕ್ಷೆ ಕೊಡಿಸಿ ಕಾನೂನಿನ ಸಾಮರ್ಥ್ಯವನ್ನು ಮತ್ತು ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳುವಲ್ಲಿ ಹೊಣೆಗೇಡಿತನವನ್ನೆ ಪ್ರದರ್ಶಿಸುತ್ತಾ ಬಂದಿವೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ. 5 ರಷ್ಟು  ಮಾತ್ರ ಇದ್ದರೆ. ಉಳಿದ ಶೇ. 95 ಪ್ರಕರಣಗಳು  ಖುಲಾಸೆಗೊಳ್ಳುತ್ತವೆ. ಈ ಬಗ್ಗೆ ಸರ್ಕಾರಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ದಲಿತ ಸಮುದಾಯ  ಏಕಕಾಲಕ್ಕೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ  ವೈರುಧ್ಯಗಳನ್ನೆ  ಎದುರಿಸಬೇಕಾಗಿದೆ. ಮುಸಲ್ಮಾನರ ವಿರುದ್ಧ ಹಿಂದೂತ್ವದ ಹೆಸರಿನಲ್ಲಿ ದಲಿತರನ್ನು ಹಿಂಸೆಗೆ ಪ್ರಚೋದಿಸುವ ರಾಜಕೀಯ ಶಕ್ತಿಗಳು,  ಅದೇ ದಲಿತರು ಸವರ್ಣೀಯರಿಂದ  ಹಿಂಸೆ, ದೌರ್ಜನ್ಯಕ್ಕೊಳಗಾದಾಗ ತಲೆಮರೆಸಿಕೊಂಡು ಬಿಡುತ್ತವೆ. ಇನ್ನು ದಲಿತರ ಪ್ರತಿನಿಧಿ ಎಂದು ಕರೆಯಿಸಿಕೊಳ್ಳುವ ದಲಿತ ರಾಜಕಾರಣಿಗಳೇ ತನ್ನ ಸಮುದಾಯದ  ಸ್ವಾಭಿಮಾನ-ನ್ಯಾಯದ  ಪ್ರಶ್ನೆ ಬಂದಾಗ ಬಲಾಢ್ಯ ಜಾತಿಗಳ ಗುಲಾಮರಂತೆ ವರ್ತಿಸುವ ಮೂಲಕ ಒಪ್ಪಿತ ದಾಸ್ಯದ ಜೊತೆ ರಾಜಿ ಮಾಡಿಕೊಂಡಿರುತ್ತಾರೆ. ಇದು ದಲಿತ ಸಮುದಾಯ ಎದುರಿಸುತ್ತಿರುವ ಬಹುದೊಡ್ಡ ಬಿಕ್ಕಟ್ಟು.

ಭಾರತದ ಜಾತಿವಾದ ಅತ್ಯಂತ ನಿರ್ದಯಿ ಎಂಬುದು ಎಷ್ಟು ನಿಜವೋ.. ಅದು ರಮಿಸುತ್ತಲೆ ವಿಷವುಣಿಸುವ ವಂಚಕತನದ್ದೂ ಕೂಡ  ಎಂಬುದಕ್ಕೆ ಭಾರತವನ್ನು ಬಗೆದು ನೋಡಬೇಕಿಲ್ಲ. ಬರೀಗಣ್ಣುಗಳಿಂದ ನೋಡಿದರೆ ಸಾಕು. 

ದಲಿತರ ನೆತ್ತರಿಗೆ ಎಲ್ಲರೂ ಜಿಗಣೆಗಳೇ…

ಎನ್ .ರವಿಕುಮಾರ್
ಕವಿ, ಲೇಖಕ, ಪತ್ರಕರ್ತ.

🔶 ಪೀಪಲ್‌ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಹಿರಿಯ ಚಿಂತಕರಾದ ಮಂಗ್ಳೂರ ವಿಜಯ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಜಚೈತನ್ಯ ಎಂತಹದು ಎಂಬುದನ್ನು ತಮ್ಮ ಪ್ರಖರ ನುಡಿಗಳಲ್ಲಿ ತಿಳಿಸಿದ್ದಾರೆ. ಕೇಳಿ, ಕೇಳಲು ವೀಡಿಯೊವನ್ನು ನೋಡಿ: https://fb.watch/fNuhEVQr9H/

Related Articles

ಇತ್ತೀಚಿನ ಸುದ್ದಿಗಳು