ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ಗಾದೆ ಹುಟ್ಟಿದ್ದೇ ತಿಹಾರ್ ಜೈಲಿನ ಗಾಳಿ-ನೀರು ಕುಡಿದು ಬಂದವರಿಗಾಗಿ ಇರಬೇಕು: ಮುಖ್ಯಮಂತ್ರಿ ವಿರುದ್ಧ ಜೆಡಿಎಸ್ ಲೇವಡಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿರುವ ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತಿದರೆ, ಅದನ್ನು ರಾಜಕೀಯವಾಗಿ ತಿರುಚಿ ಎನ್‌ಡಿಎ (NDA) ಮೈತ್ರಿಯಲ್ಲಿ ಹುಳಿ ಹಿಂಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಜಾತ್ಯತೀತ ಜನತಾದಳ (ಜೆಡಿಎಸ್) ತೀವ್ರ ವಾಗ್ದಾಳಿ ನಡೆಸಿದೆ. ಅಲ್ಲದೆ, ಕೆಪಿಎಸ್‌ಸಿ ಅಕ್ರಮದ ತನಿಖೆಯನ್ನು ಸಿಬಿಐಗೆ (CBI) ವಹಿಸುವ ಧೈರ್ಯವಿದೆಯೇ ಎಂದು ಸವಾಲು ಹಾಕಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಕಿಡಿಕಾರಿರುವ ಜೆಡಿಎಸ್, “ಡಿ.ಕೆ. ಶಿವಕುಮಾರ್ ಅವರೇ, ಕೆಪಿಎಸ್‌ಸಿ ಎಂಬುದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಂಸ್ಥೆಯಾಗಿದೆ. ವಿರೋಧ ಪಕ್ಷವಾಗಿ ಅಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ, ನೀವು ಅದನ್ನು ‘ಯಡಿಯೂರಪ್ಪ-ವಿಜಯೇಂದ್ರ ವಿರುದ್ಧದ ಟಾರ್ಗೆಟ್’ ಎಂದು ತಿರುಚಿ, ನಿಮ್ಮ ಸರ್ಕಾರದ ವೈಫಲ್ಯವನ್ನು ಹಾಗೂ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ,” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೋರಾಟ ಯುವಕರ ಭವಿಷ್ಯಕ್ಕಾಗಿಯೇ ಹೊರತು, ಕಾಂಗ್ರೆಸ್‌ನಂತೆ ಒಡೆದು ಆಳುವ ರಾಜಕೀಯಕ್ಕಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ. ಕೆಪಿಎಸ್‌ಸಿಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಅಕ್ರಮ ನೇಮಕಾತಿಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್ ಎಸ್‌ಐಟಿ (SIT) ರಚಿಸಿತ್ತು. ಆದರೆ, ತಮ್ಮ ಮತ್ತು ಸಚಿವರ ಕಮಿಷನ್ ವ್ಯವಹಾರ ಬಯಲಾಗುತ್ತದೆ ಎಂಬ ಭಯದಿಂದ ಓಡಿಹೋಗಿ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದು ಏಕೆ ಎಂದು ಪ್ರಶ್ನಿಸಿರುವ ಜೆಡಿಎಸ್, ಕೆಪಿಎಸ್‌ಸಿ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸುವ ಧೈರ್ಯವಿದೆಯೇ ಎಂದು ನೇರ ಸವಾಲು ಹಾಕಿದೆ.

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರನ್ನು ವೈಯಕ್ತಿಕವಾಗಿಯೂ ಕುಟುಕಿರುವ ಜೆಡಿಎಸ್, “‘ಕಳ್ಳನ ಮನಸ್ಸು ಹುಳ್ಳುಳ್ಳಗೆ’ ಎಂಬ ಗಾದೆ ಹುಟ್ಟಿದ್ದೇ ಕಂತೆ ಕಂತೆ ನೋಟು ಎಣಿಸಿ, ತಿಹಾರ್ ಜೈಲಿನ ಗಾಳಿ-ನೀರು ಕುಡಿದವರಿಗೆ ಇರಬೇಕು. ಕೆಪಿಎಸ್‌ಸಿ ಅಕ್ರಮದ ಬಗ್ಗೆ ಪ್ರಶ್ನಿಸಿದರೆ, ಎನ್‌ಡಿಎ ಮೈತ್ರಿಯಲ್ಲಿ ಹುಳಿ ಹಿಂಡಲು ಯತ್ನಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಹತಾಶೆ ನೋಡಿದರೆ ಅಯ್ಯೋ ಎನಿಸುತ್ತಿದೆ,” ಎಂದು ವ್ಯಂಗ್ಯವಾಡಿದೆ.

KPSC Scam, DK Shivakumar, HD Kumaraswamy, JDS vs Congress, BY Vijayendra

Related Articles

ಇತ್ತೀಚಿನ ಸುದ್ದಿಗಳು