ಬೆಳಗಾವಿ ಚಳಿಗಾಲದ ಅಧಿವೇಶನ ಸಂದರ್ಭ ಮತ್ತು ನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ತೀವ್ರ ಅಂತರ ಕಾಯ್ದುಕೊಂಡಿದೆ. ಹಾಗೆಯೇ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಎಲ್ಲಾ ಅವಕಾಶಗಳಿದ್ದರೂ ಜೆಡಿಎಸ್ ಎಲ್ಲಾ ತಂತ್ರಗಾರಿಕೆಯಿಂದ ಹಿಂದುಳಿದದ್ದು ಪಕ್ಷದ ನಿಲುವಿನ ಬಗ್ಗೆ ಕುತೂಹಲ ಮೂಡಿದೆ.
ಪ್ರಬಲ ಪ್ರತಿಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ಸರ್ಕಾರ ವಿರುದ್ಧ ಹೋರಾಟದ ವಿಷಯದಲ್ಲಿ ಅಂತರ ಕಾಯ್ದುಕೊಂಡಿದೆ. ಯಾವುದೇ ಹೋರಾಟಗಳಲ್ಲಿ ಭಾಗಿಯಾಗದಿರುವುದು ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಅನುಮಾನಗಳು ಮೂಡಿವೆ. ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ಜೆಡಿಎಸ್ ತನ್ನ ಪಕ್ಷದ ನಾಯಕರ ಸಭೆ ಕರೆದಿದೆ.
ಜೆಡಿಎಸ್ ಪಕ್ಷದಲ್ಲಿ ಈಗ ಪಕ್ಷ ತೊರೆಯುವವರ ಸಂಖ್ಯೆ ಎದುರಾಗಿದ್ದು, ಇದಕ್ಕೆ ಮೇಜರ್ ಸರ್ಜರಿ ನಡೆಸಲು ಜೆಡಿಎಸ್ ನಾಯಕ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಧ್ಯ ಕೇಂದ್ರ ಸಚಿವರಾದ ನಂತರ ರಾಷ್ಟ್ರ ರಾಜಕಾರಣಕ್ಕೆ ಜಿಗಿದಿರುವ ಕುಮಾರಸ್ವಾಮಿ ತನ್ನ ಖಾತೆ ನಿರ್ವಹಣೆ ಜೊತೆಗೆ ಪಕ್ಷ ಮುನ್ನಡೆಸುವ ಎರಡೆರಡು ಜವಾಬ್ದಾರಿ ನಿರ್ವಹಣೆ ಕುಮಾರಸ್ವಾಮಿಗೆ ಹೊರೆಯಾಗಿದೆ. ಹೀಗಾಗಿ ಪಕ್ಷದ ಜವಾಬ್ದಾರಿಯಲ್ಲಿ ಮೇಜರ್ ಸರ್ಜರಿಗೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉನ್ನತ ಮಾಹಿತಿ ಪ್ರಕಾರ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲಿದ್ದು ಆ ಸ್ಥಾನಕ್ಕೆ ಮಗ ನಿಖಿಲ್ ಕುಮಾರಸ್ವಾಮಿ ಕೂರಿಸುವ ಸಾಧ್ಯತೆ ಇದೆ. ಈಗಿರುವ ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ಶರಣುಗೌಡ ಕುಂದಕೂರ ಅವರನ್ನು ನೇಮಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಜೆಡಿಎಸ್ ಪಕ್ಷದ ಒಳಜಗಳ ತಣ್ಣಗೆ ಮಾಡಲು ಈ ಕಸರತ್ತು ನಡೆದಿದ್ದು, ಪಕ್ಷದ ವಿವಿಧ ಹುದ್ದೆಗಳಿಗೂ ಮೇಜರ್ ಸರ್ಜರಿ ನಡೆಯಲಿದೆ.
ಈಗಾಗಲೇ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದು, ಅವರನ್ನು ಮನವೊಲಿಸುವ ಕೆಲಸವೂ ಒಂದು ಕಡೆ ನಡೆದಿದೆ ಎನ್ನಲಾಗಿದೆ.
ಈ ನಡುವೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಬಿಎಂಪಿ, ಜಿಲ್ಲಾ ಮತ್ತು ತಾಪಂ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ಇದಕ್ಕೆ ತಯಾರಿ ನಡೆಸಲು ನಾಯಕತ್ವದ ಅತ್ಯಗತ್ಯ ಇದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲಿಸಲು ಪಕ್ಷ ಸಿದ್ಧತೆ ಕೈಗೊಂಡಿದೆ. ಬಿಜೆಪಿಯೊಂದಿಗಿನ ಮೈತ್ರಿಯೊಂದಿಗೆ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಕುರಿತು ಸ್ಪಷ್ಟನೆ ಇರಬೇಕು. ಈ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ.