ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಜಗಳ ಮತ್ತೊಂದು ಹಂತ ತಲುಪಿದ್ದು ಆರೋಪ-ಪ್ರತ್ಯಾರೋಪಗಳ ನಂತರ ಈಗ ಭಾಷಾ ಬಳಕೆಯತ್ತ ಉಭಯ ಪಕ್ಷಗಳ ತಿರುಗಿದೆ.
ಈ ಕುರಿತು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿರುವ ಜೆಡಿಎಸ್ “ಸಿಎಂ ಹಾಗೂ ಕಾಂಗ್ರೆಸ್ ನಾಯಕರ ಹತಾಶೆ ರಾಜ್ಯದ ಜನರಿಗೆ ಈಗಾಗಲೇ ಗೊತ್ತಾಗಿದೆ. ಗೌರವಾನ್ವಿತ ರಾಜ್ಯಪಾಲರ ಬಗ್ಗೆ, ವಿಪಕ್ಷ ನಾಯಕರ ಕುರಿತು ಹಾದಿಬೀದಿಯಲ್ಲಿ ನೀವು ಬಳಸುತ್ತಿರುವ ಕೊಳಕು ಭಾಷೆ ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ನಿಮ್ಮ ವೈಟ್ನರ್ ವಿದ್ಯೆ ದೇಶ ರಾಜಕಾರಣದಲ್ಲಿಯೇ ಕುಪ್ರಸಿದ್ಧ” ಎಂದು ಹೇಳಿದೆ.
ಮುಂದುವರೆದು ಜೆಡಿಎಸ್ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದೆ. ಅವುಗಳು ಈ ಕೆಳಗಿನಂತಿವೆ:
* 2016ರಲ್ಲೇ ಕೇತಗಾನಹಳ್ಳಿಯ ಭೂಮಿಯ ಬಗ್ಗೆ ತನಿಖೆ ನಡೆಸುವಂತೆ ಅಂದಿನ ಮಜಾವಾದಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು.
* ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ 2017ರಲ್ಲೇ ಎಸ್ಐಟಿ 3 ತಿಂಗಳ ಒಳಗೆ ತನಿಖೆ ಮುಗಿಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು. ನಿಮ್ಮ ಕೈ ಸರ್ಕಾರ ಕಿಸಿಯುತ್ತಿರುವುದೇನು?
* ತನಿಖೆ ಮುಗಿಸಿದ್ದರೂ ಎಸ್ಐಟಿ ಇಲ್ಲಿ ತನಕ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿಲ್ಲ ಯಾಕೆ? ಅಲ್ಲೇನಾದರೂ ವೈಟ್ನರ್ ಬಳಕೆ ಬಗ್ಗೆ ಆಲೋಚನೆ ಇದೆಯೇ?
* ಜಿಂದಾಲ್ ಕಂಪನಿಗೆ ಭೂಮಿ ಕೊಟ್ಟ ಕಾಂಗ್ರೆಸ್ ಗೆ ಎಷ್ಟು ನಾಲಿಗೆಗಳಿವೆ? ವಿರೋಧ ಪಕ್ಷದಲ್ಲಿದ್ದಾಗ ಒಂದು ನಾಲಿಗೆ, ಆಡಳಿತದಲ್ಲಿ ಇದ್ದಾಗ ಇನ್ನೊಂದು ನಾಲಿಗೆ.. ಅಬ್ಬಾ..!! ಇದೆಂಥಾ ಸಂಸ್ಕೃತಿ?
* ಕಲ್ಲು ಕಳ್ಳನ ಆಡಂಬೋಲ, ಸಿಡಿ ತಯಾರಿಕೆಯ ಅಡ್ಡೆ.. ಶತಮಾನದ ಸಚ್ಚಾರಿತ್ರ್ಯ ಇದೆ ಎಂದು ಕೊಚ್ಚಿಕೊಳ್ಳುವ ಪಕ್ಷದ ಮಾನ ಬೆಂಗಳೂರಿನ ರಸ್ತೆಗುಂಡಿಗಳ ಕೊಚ್ಚೆಯಲ್ಲಿ ಕೊಚ್ಚಿ ಹೋಗುತ್ತಿದೆ.
ಕೊನೆಗೆ ಭಾಷಾ ಬಳಕೆಯ ಕುರಿತು ಮಾತನಾಡಿರುವ ಪಕ್ಷವು “ನಿಮ್ಮ ಪಾರ್ಟಿ ಅಧ್ಯಕ್ಷರ ಭಾಷೆ, ವರ್ತನೆ, ಅಬ್ಬರ, ಆಡಂಬರವನ್ನೊಮ್ಮೆ ನೋಡಿ.. ನಿಮ್ಮ ಭಾಷೆಯ ಭವ್ಯತೆ, ದಿವ್ಯತೆ ದರ್ಶನವಾಗುತ್ತದೆ” ಎಂದು ಆಡಳಿತ ಪಕ್ಷವನ್ನು ಕೆಣಕಿದೆ.
ಒಟ್ಟಿನಲ್ಲಿ ಆರಂಭದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿದ್ದ ಮುಡಾ ಹಗರಣದ ವಿಚಾರ ಈಗ ಪೂರ್ತಿಯಾಗಿ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಆಗಿದ್ದು ಬಿಜೆಪಿ ಆಟದಲ್ಲೇ ಇಲ್ಲ ಎನ್ನುವಂತಾಗಿದೆ.
ನೂರು ಸಿದ್ಧರಾಮಯ್ಯನವರ ಕತೆ ಅತ್ತಗಿರಲಿ, ಮೊದಲಿ ಒಬ್ಬ ಜಮೀರನನ್ನು ಎದುರಿಸಿ ನೋಡಿ: ಎಚ್‌ಡಿಕೆಗೆ ಸಚಿವ ಜಮೀರ್ ಸವಾಲ್