ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈಗೇನು ಹೆಚ್.ಡಿ.ಕುಮಾರಸ್ವಾಮಿಯವರು ರೇವಣ್ಣ ಕುಟುಂಬಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ, ಇದು ತಪ್ಪು. ಈಗಾಗಲೇ ಪ್ರಕರಣದ ಹಿನ್ನೆಲೆ ನೋಡಿದರೆ ಜೆಡಿಎಸ್ ನ ಬಹುತೇಕರಿಗೆ ಈ ಕೃತ್ಯದ ಬಗ್ಗೆ ಗೊತ್ತಿತ್ತು. ಈಗ “ಸಂಬಂಧವಿಲ್ಲ” ಎಂದು ಕೈ ತೊಳೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಈ ಮುಂಚೆಯೇ ಪೆನ್ ಡ್ರೈವ್ ನಮ್ಮ ಕೈಗೆ ಸಿಕ್ಕಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಬಿಜೆಪಿ ಮಂದಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಮಂದಿಗೆ ಈ ಹಿಂದೆಯೇ ಇದರ ಬಗ್ಗೆ ಗೊತ್ತಿತ್ತು. ಕಳೆದ ವರ್ಷವೇ ಹಾಸನ ಬಿಜೆಪಿ ನಾಯಕ ದೇವರಾಜೇ ಗೌಡ ಪ್ರೆಸ್ ಮೀಟ್ ಮಾಡಿ ಪ್ರಜ್ವಲ್ ರೇವಣ್ಣನ ಅಶ್ಲೀಲ ಪೆನ್ ಡ್ರೈವ್ ಇದೆ ಎಂದಿದ್ದರು, ಎಂದು ಹೇಳಿದ್ದಾರೆ.
ಹಾಗೆಯೇ ಈ ಪ್ರಕರಣದ ಬಗ್ಗೆ ಈಗಾಗಲೇ ಬಿಜೆಪಿ ಹಲವು ಮಂದಿ ನಮಗೆ ಮುಂಚೆಯೇ ಗೊತ್ತಿತ್ತು ಎಂಬ ಮಾತನ್ನಾಡಿದ್ದಾರೆ. ದೇವರಾಜೇ ಗೌಡ ಈಗಾಗಲೇ ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇನೆ, ಆದರೆ ಈ ಬಗ್ಗೆ ಯಾರೂ ತಲೆ ಕೆಡಿಸಿ ಕೊಳ್ಳಲಿಲ್ಲ.. ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಮೊದಲೇ ಗೊತ್ತಿತ್ತು ಎಂಬುದು ಸುಳ್ಳು ಎಂದು ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೊಳೆನರಸೀಪುರದಲ್ಲಿ ಈತ ರೇವಣ್ಣನ ಮಗ ಅಲ್ಲ, ನನ್ನ ಮಗ ಎಂದು ತಿಳಿದುಕೊಂಡು ಈತನ ಬೆಳೆಸಿ ಎಂದಿದ್ದಾರೆ. ಈಗ ನೋಡಿದರೆ ಅವರಿಗೂ ನಮಗೂ ಸಂಬಂಧ ಇಲ್ಲ ಎಂದಿದ್ದಾರೆ. ಒಳ್ಳೆಯದು ಮಾಡಿದರೆ ನನ್ನವರು, ತಪ್ಪು ಮಾಡಿದರೆ ಬೇರೆಯವರು ಎಂಬ ಮನಸ್ದಿತಿ ಯಾಕೆ ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದಾರೆ.
ಮೇಲಾಗಿ ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾಗಲೇ ಈ ಕೃತ್ಯ ನಡೆದದ್ದು. ದೆಹಲಿಯ ಗೆಸ್ಟ್ ಹೌಸ್, ಹಾಸನದ ಫಾರಂ ಹೌಸ್ ಗಳಲ್ಲಿ ಇದು ನಡೆದಿದೆ ಎನ್ನಲಾಗಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣನ ಈ ಕರ್ಮಕಾಂಡವನ್ನು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬ ಎರಡೂ ಹೊರಬೇಕು. ಈಗ ನನಗೆ ಸಂಬಂಧಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.