ಬೆಂಗಳೂರು: ಇತ್ತ ಬಿಜೆಪಿಯೊಳಗಿನ ಗೊಂದಲ ಮುಂದುವರೆದಿರುವಂತೆ ಅತ್ತ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಂತೆ ಕಾಣುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಈಗ ಬಿಜೆಪಿಯೊಡನೆ ಮೈತ್ರಿಯ ಸಿದ್ಧತೆಯಲ್ಲಿರುವ ಸುದ್ದಿಗಳು ಓಡಾಡುತ್ತಿವೆ.
ಇದೇ ಜುಲೈ 18ರಂದು ದೆಹಲಿಯಲ್ಲಿ ನಡೆಯಲಿರುವ NDA ಮಿತ್ರಕೂಟದ ಚುನಾವಣಾ ಪೂರ್ವ ಸಭೆಯಲ್ಲಿ ಜೆಡಿಎಸ್ ಕೂಡಾ ಭಾಗವಹಿಸುವ ಸಾಧ್ಯತೆಯಿದ್ದು, ಈ ಕುರಿತು ಮಾತುಕತೆಗಾಗಿ HDK ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಈ ಮೈತ್ರಿ ಯಶಸ್ವಿಯಾದಲ್ಲಿ ಕುಮಾರಸ್ವಾಮಿ ಕರ್ನಾಟಕ ಎನ್‌ಡಿಎ ಮೈತ್ರಿಕೂಟದ ನಾಯಕನಾಗಲಿದ್ದಾರೆ ಎನ್ನಲಾಗಿದೆ. ಎನ್‌ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಬಹುತೇಕ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಸೋಮವಾರ ಅಥವಾ ಮಂಗಳವಾರ ಹೆಚ್ಡಿ ಕುಮಾರಸ್ವಾಮಿ ಅವರು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸನ್ನು ಲೋಕಸಭಾ ಚುನಾವಣೆಯಲ್ಲಿ ಕಟ್ಟಿ ಹಾಕಲು ಜೆಡಿಎಸ್ ಜೊತೆಗಿನ ಮೈತ್ರಿ ಸಹಾಯ ಮಾಡಬಹುದೆನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಆದರೆ ರಾಷ್ಟ್ರ ರಾಜಕಾರಣದ ವಿಷಯ ಬಂದಾಗ ಜೆಡಿಎಸ್ ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆಯೂ ಇದೆ. ಈ ಮೈತ್ರಿಯಿಂದ ಯಾರಿಗೆ ಲಾಭವೆನ್ನುವುದನ್ನು ಕಾಲವೇ ಹೇಳಬೇಕಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಈಗಾಗಲೇ ಶಿವಸೇನಾ ಮತ್ತು ಎನ್‌ಸಿಪಿ ಪಕ್ಷಗಳನ್ನು ಒಡೆದು ಇಬ್ಭಾಗವಾಗಿಸುವಲ್ಲಿ ಯಶಸ್ವಿಯಾಗಿದ್ದು, ಆ ಪಕ್ಷಗಳು ಪ್ರಸ್ತುತ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಹೊತ್ತಿನಲ್ಲಿ ಕುಮಾರಸ್ವಾಮಿಯವರ ಈ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ. ತಮಿಳುನಾಡಿನಲ್ಲಿಯೂ ಜಯಲಲಿತಾ ಸಾವಿನ ನಂತರ AIDMK ಪಕ್ಷವನ್ನು ಅದು ಅಪ್ರಸ್ತುತ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಅದೇ ಸಮಯಕ್ಕೆ ದಕ್ಷಿಣದಲ್ಲಿ ರಾಜ್ಯ ರಾಜಕಾರಣದ ವಿಷಯದಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಈ ಮೈತ್ರಿ ಸಹಾಯ ಮಾಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಲಿಂಗಾಯತ – ಬ್ರಾಹ್ಮಣ ನಾಯಕರ ಕಚ್ಚಾಟದಿಂದ ನಲುಗಿರುವ ಬಿಜೆಪಿಗೆ ಒಕ್ಕಲಿಗ ನಾಯಕರೊಬ್ಬರ ಪ್ರವೇಶ ಅಲ್ಲಿನ ಒಳಗ ಜಗಳವನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.
ಒಕ್ಕಲಿಗ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಕಳಪೆ ಪ್ರದರ್ಶನ ನೀಡಿತ್ತು.