Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದಿನಿಂದ 48 ಲಕ್ಷ ಮಕ್ಕಳಿಗೆ ಜೆಇ ಲಸಿಕೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜಪಾನಿನ ಎನ್ಸೆಫಾಲಿಟಿಸ್ (ಜೆಇ) ವಿರುದ್ಧ 1 ರಿಂದ 15 ವರ್ಷದೊಳಗಿನ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ವಿಶೇಷ ಲಸಿಕಾ ಅಭಿಯಾನವು ಸೋಮವಾರದಿಂದ ಮೂರು ವಾರಗಳ ಕಾಲ ರಾಜ್ಯದಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಅಭಿಯಾನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಡಿಸೆಂಬರ್ ಮೊದಲ ವಾರದಲ್ಲಿ ಲಸಿಕೆಗಳನ್ನು ಪ್ರಾಥಮಿಕವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೇಲೆ ಕೇಂದ್ರೀಕರಿಸಲಾಗುವುದು. ಇದನ್ನು ಅನುಸರಿಸಿ, ಮುಂದಿನ ಎರಡು ವಾರಗಳಲ್ಲಿ, ನಾವು ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸಮುದಾಯಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ಗಳ ಮೇಲೆ ಗಮನ ಹರಿಸಲಿದ್ದೇವೆ. ಡ್ರೈವ್ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಜೆನ್ವ್ಯಾಕ್ ಲಸಿಕೆಯನ್ನು ಪೂರೈಸಲಿದೆʼ ಎಂದರು.

ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್‌ ಎನ್‌ಸೆಫಲೈಟಿಸ್‌ (ಜೆಇ) ಪಿಡುಗನ್ನು ಗುರುತಿಸಲಾಗಿದೆ. ಇದರಲ್ಲಿ ಭಾರತವು ಸೇರಿದಂತೆ ಏಷ್ಯಾದ 11 ರಾಷ್ಟ್ರಗಳು ಸಹ ಪಟ್ಟಿಯಲ್ಲಿವೆ. ಪ್ರತಿ ವರ್ಷ ಸರಾಸರಿ 68,000 ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ,20 ರಿಂದ ಶೇ,30 ರಷ್ಟಿದೆ. ಗುಣಮುಖರಾದ ಶೇ, 30 ರಿಂದ ಶೇ, 50 ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಆಂಗವಿಕಲತೆ ಉಂಟಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಜೆಇ ಮೆದುಳು ಜ್ವರದ ಮೊದಲ ಪ್ರಕರಣ 1955 ರಲ್ಲಿ ತಮಿಳುನಾಡಿನ ವೆಲ್ಲೂರ್ ನಲ್ಲಿ ವರದಿಯಾಗಿತ್ತು. ಕರ್ನಾಟಕದಲ್ಲಿ 1978 ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. 2016 ರಲ್ಲಿ 11 ಪ್ರಕರಣಗಳು, 2017 ರಲ್ಲಿ 23 ಪ್ರಕರಣಗಳು, 2018 ರಲ್ಲಿ 35 ಪ್ರಕರಣಗಳು, 2019 ರಲ್ಲಿ 33 ಪ್ರಕರಣಗಳು, 2020 ರಲ್ಲಿ 19 ಪ್ರಕರಣಗಳು, 2021 ರಲ್ಲಿ 25 ಪ್ರಕರಣಗಳು, 2022 ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ ಎಂದು ಸುಧಾಕರ್‌ ಮಾಹಿತಿ ನೀಡಿದ್ದಾರೆ.

ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಎಸ್‍ಎಸ್‍ಎಲ್‍) ಗಳನ್ನು ಸಜ್ಜುಗೊಳಿಸಲಾಗಿದೆ. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು