ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಇಂದು ರಾಂಚಿಯಲ್ಲಿ ‘ವಿಧಾನಸಭಾ ಘೇರಾವ್’ (ವಿಧಾನಸೌಧ ಮುತ್ತಿಗೆ) ಮೆರವಣಿಗೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಜಾರ್ಖಂಡ್ ಪೋಲಿಸ್ ಮತ್ತು ಆಡಳಿತ ಮಂಡಳಿಯು ಮೆರವಣಿಗೆಗೂ ಮುನ್ನ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದು, ಜಗನ್ನಾಥ ದೇವಾಲಯದ ಬಳಿಯ ರಸ್ತೆಯಲ್ಲಿ ಮುಳ್ಳುತಂತಿಯ ಬೇಲಿಗಳನ್ನು ಅಳವಡಿಸಲಾಗಿದೆ. ರಾಜ್ಯ ವಿಧಾನಸೌಧದ 750 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 163 ಅನ್ನು ಜಾರಿಗೊಳಿಸಲಾಗಿದೆ.
ರಾಜ್ಯ ವಿಧಾನಸೌಧದ ಬಳಿ ಪ್ರಸ್ತಾವಿತ ಧರಣಿ-ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಎಲ್ಲಾ ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ವಿದ್ಯಾರ್ಥಿಗಳ ಪ್ರಸ್ತಾವಿತ ಮೆರವಣಿಗೆಯ ಸಮಯದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಪೋಲಿಸ್ ಆಡಳಿತವನ್ನು ಅಲರ್ಟ್ ಮಾಡಲಾಗಿದೆ,” ಎಂದು ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ (ಪ್ರಧಾನ ಕಚೇರಿ) ಮನೋಜ್ ಕೌಶಿಕ್ ಹೇಳಿದ್ದಾರೆ.
ಕಳೆದ ಎರಡು ವಾರಗಳಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶಿಸ್ತು ಕಾಯ್ದುಕೊಂಡಂತೆಯೇ, ಈ ಮೆರವಣಿಗೆಯಲ್ಲೂ ಶಾಂತಿಯುತವಾಗಿ ಮತ್ತು ಶಿಸ್ತಿನಿಂದ ಭಾಗವಹಿಸುವಂತೆ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಸಮಾಜಘಾತಕ ಮತ್ತು ಉಪದ್ರವಕಾರಿ ಶಕ್ತಿಗಳು ಮೆರವಣಿಗೆಯಲ್ಲಿ ಸೇರಿಕೊಳ್ಳದಂತೆ ತಡೆಯುವುದು ಅವರ ಜವಾಬ್ದಾರಿಯಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ.
ರಾಂಚಿಯ ಪ್ರಮುಖ ಸ್ಥಳಗಳಲ್ಲಿ ಪೋಲಿಸ್ ಪಡೆ ನಿಯೋಜನೆ
ಮೆರವಣಿಗೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ರಾಂಚಿಯ ಹಿರಿಯ ಪೋಲಿಸ್ ಸೂಪರಿಂಟೆಂಡೆಂಟ್ (ಎಸ್‌ಎಸ್‌ಪಿ) ರಾಕೇಶ್ ರಂಜನ್ ಹೇಳಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದರಿಂದ ಯಾವುದೇ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆಯಾಗುವುದನ್ನು ನಾವು ಬಯಸುವುದಿಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿ ಪೋಲಿಸ್ ಪಡೆಯನ್ನು ನಿಯೋಜಿಸುವುದರ ಜೊತೆಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ,” ಎಂದಿದ್ದಾರೆ. ಆಗಸ್ಟ್ 6ರಿಂದ 12ರವರೆಗೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ವಿಧಾನಸೌಧದ 750 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಎಸ್‌ಎಸ್‌ಪಿ ವಿವರಿಸಿದ್ದಾರೆ.
ಸರ್ಕಾರ ತಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂದ ವಿದ್ಯಾರ್ಥಿಗಳು
ಜೆಎಸ್‌ಎಸ್ಸಿ-ಸಿಜಿಎಲ್ (JSSC-CGL) ಪರೀಕ್ಷೆಯನ್ನು ರದ್ದುಗೊಳಿಸುವುದು, ಅಕ್ರಮಗಳ ಕುರಿತು ಸಿಬಿಐ (CBI) ತನಿಖೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂದು ಪ್ರತಿಭಟನಾನಿರತ ಜಿಪಿಎಸ್‌ಸಿ ಮತ್ತು ಜೆಎಸ್‌ಎಸ್‌ಸಿ ಅಭ್ಯರ್ಥಿಗಳು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ನಾಯಕ ರವೀಂದ್ರ ಪಾಸ್ವಾನ್, ಸರ್ಕಾರದೊಂದಿಗಿನ ಎರಡನೇ ಹಂತದ ಮಾತುಕತೆಯ ನಂತರ ತಮ್ಮ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದ್ದರೂ, ಪ್ರಮುಖ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು. ಇಂದಿನ ಮೆರವಣಿಗೆಯಲ್ಲಿ ಭಾಗವಹಿಸುವಂತೆ ರಾಜ್ಯದಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, “ಟಿಡಿಪಿಎಲ್ ಸಂಸ್ಥೆ ನಡೆಸಿದ ಪರೀಕ್ಷೆಗಳನ್ನು ರದ್ದುಗೊಳಿಸಿ ಸಿಬಿಐ ತನಿಖೆ ನಡೆಸಬೇಕೆಂದು ಹಾಗೂ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ನೀವು ಬಯಸಿದರೆ, ದಯವಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿ,” ಎಂದು ವಿನಂತಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬೇಡಿಕೆಗಳೇನು?
ಮತ್ತೊಬ್ಬ ವಿದ್ಯಾರ್ಥಿ ನಾಯಕ ಸಂಜಯ್ ಮೆಹ್ತಾ ಮಾತನಾಡಿ, ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಅಭ್ಯರ್ಥಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ ಎಂದರು. “ಸಿಜಿಎಲ್ ಪರೀಕ್ಷೆಯನ್ನು ರದ್ದುಗೊಳಿಸಬೇಕು, ಸಿಜಿಎಲ್ ಪ್ರಕರಣದ ಸಿಬಿಐ ತನಿಖೆಯಾಗಬೇಕು, ನಾವು ಪ್ರಸ್ತಾವಿಸಿರುವ ಸುಧಾರಣಾ ಮಾದರಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ನಾವು ಸೂಚಿಸಿದ ನೇಮಕಾತಿ ಕ್ಯಾಲೆಂಡರ್ ಅನ್ನು ಅನುಸರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಸರ್ಕಾರ ಈ ಯಾವುದೇ ಒಂದು ಬೇಡಿಕೆಯನ್ನು ಈಡೇರಿಸದಿದ್ದರೂ ಸಹ, ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದು ತಿಳಿಸಿದರು.
ಇನ್ನೊಂದೆಡೆ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕ ಅಮರ್ ಬೌರಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆದಿತ್ಯ ಸಾಹು ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿದ್ದಾರೆ. ಸಾಹು ಅವರ ನಿವಾಸದ ಹೊರಗೆ ಭದ್ರತಾ ಪಡೆಗಳನ್ನು ನಿಯೋಜಿಸುವುದರಿಂದ ಸರ್ಕಾರಕ್ಕೆ ಯಾವುದೇ ಯಶಸ್ಸು ಸಿಗುವುದಿಲ್ಲ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬೌರಿ ಕಿಡಿಕಾರಿದ್ದಾರೆ.
ರಾಂಚಿಯಲ್ಲಿ ನಡೆಯಲಿರುವ ಪ್ರಸ್ತಾವಿತ ಮೆರವಣಿಗೆಯ ಹಿನ್ನೆಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಜಂಶೆಡ್‌ಪುರದಲ್ಲೂ ಇದೇ ರೀತಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ರೀತಿಯ ಉಗ್ರ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಆಂದೋಲನ ನಿರತ ವಿದ್ಯಾರ್ಥಿಗಳಿಗೆ ರಾಂಚಿ ಜಿಲ್ಲಾಡಳಿತ ಮನವಿ ಮಾಡಿದೆ. ವಿಧಾನಸೌಧ ಮೆರವಣಿಗೆಯ ವೇಳೆ ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ಎಚ್ಚರಿಸಿದೆ.
ಜಾರ್ಖಂಡ್‌ನ ವಿವಿಧ ಭಾಗಗಳಿಂದ ರಾಜಧಾನಿ ರಾಂಚಿಗೆ ಆಗಮಿಸುತ್ತಿದ್ದ ನೂರಾರು ವಿದ್ಯಾರ್ಥಿಗಳನ್ನು ಪೋಲಿಸರು ಬಲವಂತವಾಗಿ ತಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ (JSSC) ನೇಮಕಾತಿ ಪರೀಕ್ಷೆಗಳ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಭಾನುವಾರ 16ನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಕೂತಿದ್ದಾರೆ.
