Home ದೇಶ ನಜೀಬ್‌ ನಾಪತ್ತೆಯಾಗಿ 10 ವರ್ಷ: ನ್ಯಾಯಕ್ಕಾಗಿ ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ನಜೀಬ್‌ ನಾಪತ್ತೆಯಾಗಿ 10 ವರ್ಷ: ನ್ಯಾಯಕ್ಕಾಗಿ ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

0

ದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಜೀಬ್ ಅಹ್ಮದ್ ಕಣ್ಮರೆಯಾಗಿ ಬರೋಬ್ಬರಿ ಹತ್ತು ವರ್ಷಗಳು ಕಳೆದರೂ ಆತನ ಸುಳಿವು ಸಿಗದಿರುವುದನ್ನು ವಿರೋಧಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳು ಕ್ಯಾಂಪಸ್‌ನಲ್ಲಿ ಜಂಟಿ ಪ್ರತಿಭಟನಾ ಮೆರವಣಿಗೆ ನಡೆಸಿವೆ. ಬಿಎಪಿಎಸ್‌ಎ (BAPSA), ಫ್ರೆಟರ್ನಿಟಿ ಮೂವ್‌ಮೆಂಟ್ ಹಾಗೂ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (MSF) ಸಂಘಟನೆಗಳ ನೇತೃತ್ವದಲ್ಲಿ ಈ “ಜಸ್ಟಿಸ್ ಫಾರ್ ನಜೀಬ್” ಮೆರವಣಿಗೆ ಆಯೋಜಿಸಲಾಗಿತ್ತು.

೨೦೧೬ರ ಅಕ್ಟೋಬರ್ ೧೫ ರಂದು ಜೆಎನ್‌ಯು ಹಾಸ್ಟೆಲ್‌ನಲ್ಲಿ ಎಬಿವಿಪಿ (ABVP) ಕಾರ್ಯಕರ್ತರೊಂದಿಗೆ ನಡೆದ ಗಲಾಟೆಯ ಬೆನ್ನಲ್ಲೇ ಎಂಎಸ್‌ಸಿ ಬಯೋಟೆಕ್ನಾಲಜಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ನಜೀಬ್ ನಿಗೂಢವಾಗಿ ನಾಪತ್ತೆಯಾಗಿದ್ದ. “ಜೆಎನ್‌ಯು ನಜೀಬ್‌ನನ್ನು ನೆನಪಿಸಿಕೊಳ್ಳುತ್ತದೆಯೇ?” ಎಂಬ ಶೀರ್ಷಿಕೆಯ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಂಘಟನೆಗಳು, “ಹತ್ತು ವರ್ಷಗಳಾದರೂ ನಜೀಬ್ ಎಲ್ಲಿದ್ದಾನೆ? ಆತನ ಬಲವಂತದ ಕಣ್ಮರೆಗೆ ಯಾರು ಹೊಣೆ ಮತ್ತು ತಪ್ಪಿತಸ್ಥರಿಗೆ ಸಿಕ್ಕ ಶಿಕ್ಷೆಯೇನು?” ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಆಡಳಿತ ಮಂಡಳಿ ಹಾಗೂ ಎಡಪಂಥೀಯ ನಾಯಕರ ವಿರುದ್ಧ ಆಕ್ರೋಶ:

ಹಲ್ಲೆಗೊಳಗಾದ ನಜೀಬ್‌ನ ಪರ ನಿಲ್ಲುವ ಬದಲು, ಆತನನ್ನೇ ದೋಷಿ ಹಾಗೂ ಮಾನಸಿಕ ಅಸ್ವಸ್ಥನಂತೆ ಬಿಂಬಿಸಲು ಅಂದಿನ ಜೆಎನ್‌ಯು ಆಡಳಿತ ಮಂಡಳಿ ಮತ್ತು ಐಸಾ (AISA) ನೇತೃತ್ವದ ಜೆಎನ್‌ಯುಎಸ್‌ಯು ಅಧ್ಯಕ್ಷ ಮೋಹಿತ್ ಪಾಂಡೆ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕರು ಸಹಕರಿಸಿದ್ದರು ಎಂದು ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಅಲ್ಲದೆ, ಆರಂಭಿಕ ದಿನಗಳಲ್ಲಿ ಹಾಸ್ಟೆಲ್ ಆಡಳಿತ ಮಂಡಳಿ ಈ ವಿಷಯವನ್ನು ಮುಚ್ಚಿಡಲು ಯತ್ನಿಸಿತ್ತು ಎಂದೂ ಹೇಳಿಕೆಯಲ್ಲಿ ದೂರಲಾಗಿದೆ.

ತನಿಖಾ ಸಂಸ್ಥೆಗಳ ವೈಫಲ್ಯ:

ದೆಹಲಿ ಪೊಲೀಸರು ಹಾಗೂ ಸಿಬಿಐ (CBI) ನಜೀಬ್ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಹಲ್ಲೆ ನಡೆಸಿದ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಸೂಕ್ತವಾಗಿ ತಪಾಸಣೆ ನಡೆಸದೆ ಹಾಗೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸದೆ ಪ್ರಕರಣವನ್ನು ಹಳ್ಳಹಿಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸಿಬಿಐ ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್ (ತನಿಖಾ ಅಂತ್ಯದ ವರದಿ) ಅನ್ನು ದೆಹಲಿ ಕೋರ್ಟ್ ಹಾಗೂ ಹೈಕೋರ್ಟ್ ಪುರಸ್ಕರಿಸಿದ್ದರೂ, ನಜೀಬ್ ತಾಯಿ ಫಾತಿಮಾ ನಫೀಸ್ ತಮ್ಮ ಮಗನ ಪತ್ತೆಗಾಗಿ ಮತ್ತು ನ್ಯಾಯಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದಾರೆ. ಅವರ ನ್ಯಾಯದ ಪರ ಹೋರಾಟಕ್ಕೆ ಕೊನೆಯವರೆಗೂ ಬೆಂಬಲ ನೀಡುವುದಾಗಿ ವಿದ್ಯಾರ್ಥಿ ಸಂಘಟನೆಗಳು ಪುನರುಚ್ಚರಿಸಿವೆ.

You cannot copy content of this page

Exit mobile version