Saturday, August 17, 2024

ಸತ್ಯ | ನ್ಯಾಯ |ಧರ್ಮ

ವಾಸ ದೃಢೀಕರಣ ಆಧಾರದ ಮೇಲೆ ಉದ್ಯೋಗ ಸೃಷ್ಟಿಸಿದರೆ ಕನ್ನಡಿಗರಿಗೆ ಚೊಂಬೇ ಗತಿ – ವಿ.ಆರ್.ಕಾರ್ಪೆಂಟರ್

ಬೆಂಗಳೂರು ಗ್ರಾಮಾಂತರ ಪ್ರದೇಶದ ಡಿಸಿ ಆಫೀಸ್ ಇರುವ ಚಪ್ಪರಕಲ್ಲಿಗೆ (ಕುಂದಾಣ ಸಮೀಪ) ಮೊನ್ನೆ ಹಂದಿ ಬಾಡು ತಿನ್ನಲು ಹೋಗಿದ್ದೆ.

ಸಂಜೆಯಾಗಿದ್ದರಿಂದ ಕೆಲಸದಿಂದ ಕಾರ್ಮಿಕರು ರಸ್ತೆಯಲ್ಲಿ ಹೆಚ್ಚಿದ್ದರು. ಅವರಲ್ಲಿ 90 ಪರ್ಸೆಂಟ್ ಜನ ಉತ್ತರ ಭಾರತದವರೇ ಆಗಿದ್ದರು. ವೈಟ್ ಫೀಲ್ಡ್, ಇಂದಿರಾನಗರದ ಕಡೆಗಳಲ್ಲಿ ಉತ್ತರ ಭಾರತದ ಐಟಿ ಬಿಟಿ ಉದ್ಯೋಗಿಗಳು ಯಥೇಚ್ಛವಾಗಿ ಕಾಣಿಸುವಂತೆ, ದೇವನಹಳ್ಳಿಯ ಒಂದು ಸಣ್ಣ ಪಟ್ಟಣದಲ್ಲಿ ಎತ್ತ ನೋಡಿದರತ್ತ ಉತ್ತರ ಭಾರತದವರು.
*
ನಮ್ಮ ಆಫೀಸಿನ ಮುಂದೆ ದಿನಕ್ಕೆ 15ರಿಂದ 20 ಟ್ರೈನುಗಳು ಓಡಾಡುತ್ತವೆ. ಅದರಲ್ಲೂ ಉತ್ತರದವರೇ ತುಂಬಿ ತುಳುಕುತ್ತಾರೆ. ನಮ್ಮೂರು ಮತ್ತು ಅದರ ಆಸುಪಾಸಿನಲ್ಲಿ ಒಡಿಶಾ, ಯುಪಿ, ಗುಜರಾತಿ ಮತ್ತು ಬಿಹಾರಿಗಳೇ ತುಂಬಿದ್ದಾರೆ.

ಬಹುಶಃ ಇದು ಕೇವಲ ಬೆಂಗಳೂರಿನ ಸಮಸ್ಯೆಯೋ, ಕರ್ನಾಟಕದ ಸಮಸ್ಯೆಯೋ ಅಲ್ಲ. ಇಡೀ ದಕ್ಷಿಣ ಭಾರತದ ಸಮಸ್ಯೆ. ತೀರಾ ಮೊನ್ನೆ ನಾನು ಕ್ಯಾಲಿಕಟ್‌ಗೆ ಹೋಗಿದ್ದಾಗಲೂ ಇದೇ ಉತ್ತರದವರನ್ನು ಕಂಡೆ.

ಅಸಲಿಗೆ ಇದು ಆ ಪಾಪದ ಕಾರ್ಮಿಕರ ತಪ್ಪಲ್ಲ; ಜಿಎಸ್‌ಟಿ ಹಣವನ್ನು ಧಾರ್ಮಿಕ ಕಾರ್ಯಗಳಿಗೂ, ಅದೇ ಸಮಯದಲ್ಲಿ ಕುಕೃತ್ಯಗಳಿಗೂ ಉಡಾಯಿಸುವ ಅಲ್ಲಿನ ಸರ್ಕಾರಗಳ ತಪ್ಪು. ಮಂದಿರ ಕಟ್ಟಿ ಜನರನ್ನು ಧಾರ್ಮಿಕವಾಗಿ ಬ್ಲಾಕ್‌ಮೇಲ್ ಮಾಡುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ, ಯಾರದೋ ಮನೆಯ ಮೇಲೆ ಬುಲ್ಡೋಜರ್ ಹರಿಸುವುದರಿಂದ ಕಾರ್ಮಿಕರ ಜೇಬಿಗೆ ಕಾಸು ಇಳಿಯುವುದಿಲ್ಲ, ದಲಿತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಜೀವಕ್ಕೆ ಕುತ್ತು ತರುವುದರಿಂದ ಮನೆಯ ಒಲೆಯಲ್ಲಿ ತುತ್ತು ಬೇಯುವುದಿಲ್ಲ ಎಂಬುದನ್ನು ಅರಿತ ಜನಗಳೇ ಉದ್ಯೋಗ, ಅನ್ನ ಕೊಡುವ ದಕ್ಷಿಣ ರಾಜ್ಯಗಳತ್ತ ಗುಳೇ ಬರುತ್ತಿದ್ದಾರೆ.

ಅದಕ್ಕೆ ಪೂರಕವಾಗಿ ಉತ್ತರ ದಕ್ಷಿಣದ ರೈಲ್ವೇ ವ್ಯವಸ್ಥೆ ದಿನೇ ದಿನೇ ಉತ್ತಮವಾಗುತ್ತಿದೆ. ಹೊಟ್ಟೆ ತುಂಬಿದ ಉತ್ತರ ಭಾರತೀಯ ಜನ ಥರ್ಡ್ ಗ್ರೇಡ್, ಸೆಕ್ಸಿಯೆಸ್ಟ್ ರೀಲ್ಸ್ ಮಾಡುತ್ತಾ, ಬಲಪಂಥೀಯ ಪಕ್ಷಗಳು ಕೊಡುವ‌ ಎಂಜಲು ಕಾಸಿಗೆ ತಕ್ಕಂತೆ, ಆ ಪಕ್ಷಗಳ ಐಟಿ ವಿಭಾಗ ಕೊಡುವ ಸ್ಕ್ರಿಪ್ಟ್‌ಗಳ ಕಂಟೆಂಟಿಗೆ ನಟಿಸುತ್ತಾ ಉತ್ತರ ಭಾರತ ಸಮೃದ್ಧವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಬಿಲಿಯನೇರ್ ಒಬ್ಬನ ಮಗನ ಮದುವೆಯನ್ನು ತಿಂಗಲಾನುಗಟ್ಟಲೆ ಮೇನ್‌ಸ್ಟ್ರೀಮ್ ಮಾಧ್ಯಮಗಳಲ್ಲಿ ಬಿತ್ತರಿಸುತ್ತಾ, ನೀಟ್, ನೆಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಗೋಳನ್ನು ಮರೆಮಾಚುತ್ತಿವೆ.

ಒಂದು ಅಂದಾಜಿನ ಪ್ರಕಾರ ಕರ್ನಾಟಕವೊಂದರಲ್ಲೇ ಉತ್ತರ ಭಾರತದ ವಿದ್ಯಾರ್ಥಿಗಳೇ ಶೇ 45 ಪರ್ಸೆಂಟ್ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಸಪೋರ್ಟ್ ಮಾಡಿದ್ದು, ರಾಷ್ಟ್ರೀಯ ಭಾಷೆ ಎಂಬ ಸೋಗಿನಲ್ಲಿರುವ ಹಿಂದಿ! ಹೌದು, ಕನ್ನಡ, ತೆಲುಗಿನ, ತಮಿಳಿನ, ಮಲಯಾಳಿಯ ಮಕ್ಕಳು ಇಂಗ್ಲಿಷಿನಲ್ಲಿ ಪರೀಕ್ಷೆ ಬರೆದರೆ, ಉತ್ತರದವರ ಮಕ್ಕಳಿಗೆ ಹಿಂದಿಯಲ್ಲಿ ಬರೆಯುವ ಸುವರ್ಣ ಅವಕಾಶ. ಅಷ್ಟಾಗಿಯೂ ನೀಟ್ ಸ್ಕ್ಯಾಮಿನಲ್ಲಿ ಸಿಕ್ಕಿ ಹಾಕಿಕೊಂಡವರು ಉತ್ತರ ಭಾರತೀಯರು!

ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಕರ್ನಾಟಕ ಸರ್ಕಾರ ಸ್ಥಳೀಯರಿಗೆ (15 ವರ್ಷಗಳಿಂದ ಕರ್ನಾಟದಲ್ಲಿ ವಾಸಿಸುತ್ತಿರುವವರಿಗೆ) ಖಾಸಗಿಯಲ್ಲೂ 50 ಪರ್ಸೆಂಟ್ ಮೀಸಲಾತಿ ಮಸೂದೆಯನ್ನು ಜಾರಿ ಮಾಡುವ ಹಂತದಲ್ಲಿದೆ. ಖಂಡಿತವಾಗಿಯೂ ಇದರಿಂದ ಕನ್ನಡಿಗರಿಗೆ ಅನ್ಯಾಯವೇ ಹೊರತು ಲಾಭವಿಲ್ಲ! ಯಾಕೆ ಗೊತ್ತಾ? 15 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಇಲ್ಲೇ ಬದುಕುತ್ತಿರುವ ಅದೆಷ್ಟೋ ಜನಕ್ಕೆ ‘ಕನ್ನಡ್ ಗೊತ್ತಿಲ್ಲ’ ಪದ ಬಿಟ್ಟು ಬೇರೇನೂ ಗೊತ್ತಿಲ್ಲ. ವಾಸ ದೃಢೀಕರಣ ಆಧಾರದ ಮೇಲೆ ಉದ್ಯೋಗ ಕಲ್ಪಿಸುವುದಕ್ಕಿಂತ, ಕನ್ನಡ ಜ್ಞಾನದ ಆಧಾರಮೇಲೆ ಉದ್ಯೋಗ ಮೀಸಲುಪಡಿಸಬೇಕು. ಮೀಸಲಾತಿ ಕಲ್ಪಿಸುವದಕ್ಕೆ ಸರಳ ಕನ್ನಡ ಪರೀಕ್ಷೆ ಕಡ್ಡಾಯಗೊಳಿಸಬೇಕು, ಅದು ಲಿಖಿತ ಅಥಾವ ಮೌಖಿಕವಾಗಿಯಾದರೂ ಪರೀಕ್ಷೆ ಮಾಡಲೇಬೇಕು.

ಜಾತಿಗಣತಿಯ ರೀತಿಯಲ್ಲೇ ರಾಜ್ಯದಲ್ಲಿ ಉದ್ಯೋಗಗಣತಿ ನಡೆಸಬೇಕು. ಪ್ರತಿಯೊಂದು ಕುಟುಂಬದ ಉದ್ಯೋಗ, ವ್ಯವಹಾರದ ಮಾಹಿತಿ ಸರ್ಕಾರದ ಬಳಿ‌ ಇರಬೇಕು. ಅವಶ್ಯಕತೆ ಇರುವವರಿಗೆ ಸರ್ಕಾರವೇ ಮುಂದೆ ನಿಂತು ಉದ್ಯೋಗ ಕಲ್ಪಿಸಬೇಕು. ವಿದ್ವಂಸಕ ಸಂಘಟನೆಗಳಲ್ಲಿ ಕಾಲಾಳುಗಳಾಗಿ ದುಡಿದು ಹೊಟ್ಟೆ ಹೊರೆಯುತ್ತಾ, ಅಪರಾಧ ಮಾಡುವವರನ್ನು ಪತ್ತೆಹಚ್ಚಿ ಅವರಿಗೆ ಕೌನ್ಸೆಲಿಂಗ್ ಮಾಡಿ, ಉದ್ಯೋಗ ಕೊಡಿಸುವುದೋ, ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಡ್ಡಿರಹಿತ ಸಾಲ ಕೊಡುವ ಕೆಲಸವನ್ನು ಸರ್ಕಾರವೇ ಮಾಡಬೇಕು.

ಆಗ ಇಲ್ಲಿಗೆ ಬಂದು ಸಂಪಾದಿಸಿ, ಅನ್ನ ತಿಂದು ಎಲೆಕ್ಷನ್ ಸಮಯದಲ್ಲಿ ಅದೇ ವಿದ್ವಂಸಕರಿಗೆ ಓಟು ಹಾಕಲು ಹೋಗುವ ಉತ್ತರ ಭಾರತದ ಜನಕ್ಕೆ ಬುದ್ದಿ ಬರುತ್ತದೆ, ಜನವಿರೋಧಿಗಳನ್ನು ಮನೆಗೆ ಕಳಿಸುವ ತೀರ್ಮಾನವನ್ನು ಅವರೇ ತೆಗೆದುಕೊಂಡು, ಅವರ ರಾಜ್ಯಗಳ ಉದ್ಧಾರಕ್ಕೆ ಅವರೇ ಕಾರಣರಾಗುತ್ತಾರೆ. ವಲಸೆಯಿಂದ ಆಗುತ್ತಿರುವ ಸಮಸ್ಯೆ ತೀರುತ್ತದೆ, ಕುಟುಂಬಗಳು ನೆಮ್ಮದಿಯಿಂದ ಇರುತ್ತವೆ.

-ವಿ.ಆರ್.ಕಾರ್ಪೆಂಟರ್.

Related Articles

ಇತ್ತೀಚಿನ ಸುದ್ದಿಗಳು

You cannot copy content of this page