ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖಾ ವರದಿ ಪ್ರಕಟಿಸಿದ್ದ ಪತ್ರಕರ್ತ ಹಾಗೂ ‘ದಿ ಫೈಲ್’ (TheFile.in) ಜಾಲತಾಣದ ಸಂಪಾದಕ ಜಿ. ಮಹಾಂತೇಶ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸದೆ ಕೇವಲ ಎನ್‌ಸಿಆರ್ (ಅಸಂಜ್ಞೇಯ ಅಪರಾಧ ವರದಿ) ದಾಖಲಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ಜಿ. ಮಹಾಂತೇಶ್ ಅವರು ಸೆಪ್ಟೆಂಬರ್ 8 ಮತ್ತು 9ರಂದು ತಮ್ಮ ಜಾಲತಾಣ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಸಿದ್ಧಾರ್ಥ ಟ್ರಸ್ಟ್‌ಗೆ ಸಂಬಂಧಿಸಿದ ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿದ್ದ ದುಷ್ಕರ್ಮಿಗಳು, ಅಸಂವಿಧಾನಿಕ ಭಾಷೆ ಬಳಸಿ ನಿಂದಿಸಿದ್ದಲ್ಲದೆ, ವರದಿಗಳನ್ನು ಹಿಂಪಡೆಯದಿದ್ದರೆ ದೈಹಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಲ್ಲೂ ಅವಾಚ್ಯ ಶಬ್ದಗಳಿಂದ ಕಮೆಂಟ್ ಮಾಡಲಾಗಿತ್ತು.
ಈ ಬಗ್ಗೆ ಜೀವ ರಕ್ಷಣೆ ಮತ್ತು ಆರೋಪಿಗಳ ವಿರುದ್ಧ ಕ್ರಮ ಕೋರಿ ಮಹಾಂತೇಶ್ ಅವರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಈ ದೂರನ್ನು ಪರಿಶೀಲಿಸಿ, ಇದು ಅಸಂಜ್ಞೇಯ ಅಪರಾಧ (Non-cognizable offence) ಎಂದು ನಮೂದಿಸಿ ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯದಿಂದ ಅನುಮತಿ ಪಡೆದು ತಂದರೆ ಮುಂದಿನ ತನಿಖೆ ಕೈಗೊಳ್ಳುವುದಾಗಿ ಹಿಂಬರಹ ನೀಡಿ ಕಳುಹಿಸಿದ್ದಾರೆ.
ಪೊಲೀಸರ ಈ ನಿಲುವನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದಾಖಲೆ ಸಮೇತ ತನಿಖಾ ವರದಿ ಪ್ರಕಟಿಸಿದ ಪತ್ರಕರ್ತನಿಗೆ ಜೀವ ಬೆದರಿಕೆ ಬಂದಾಗ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್‌ಐಆರ್ ದಾಖಲಿಸಬೇಕಿತ್ತು. ಅದನ್ನು ಬಿಟ್ಟು ಕೋರ್ಟ್‌ಗೆ ಹೋಗಿ ಅನುಮತಿ ತರುವಂತೆ ಹಿಂಬರಹ ನೀಡಿರುವುದು ಖಂಡನೀಯ ಎಂದಿದ್ದಾರೆ. ವರದಿಯಲ್ಲಿ ಲೋಪಗಳಿದ್ದರೆ ಅದನ್ನು ಕಾನೂನಾತ್ಮಕವಾಗಿ ಎದುರಿಸಬೇಕೇ ಹೊರತು ಇಂತಹ ಬೆದರಿಕೆ ತಂತ್ರಗಳಿಂದಲ್ಲ ಎಂದು ಹೇಳಿರುವ ಅವರು, ಪತ್ರಕರ್ತ ಜಿ. ಮಹಾಂತೇಶ್ ಹಾಗೂ ‘ದಿ ಫೈಲ್’ ಸಂಸ್ಥೆಗೆ ಸರ್ಕಾರ ತಕ್ಷಣ ಪೊಲೀಸ್ ರಕ್ಷಣೆ ಒದಗಿಸಬೇಕು ಮತ್ತು ಬೆದರಿಕೆ ಹಾಕಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
