Home ಜನ-ಗಣ-ಮನ ಕಲೆ – ಸಾಹಿತ್ಯ ಪತ್ರಕರ್ತೆ ಶ್ವೇತಾ ದಂಡಪಾಣಿ ಅವರ ‘ಮೊಲೆಗಳು’  (ಅನುವಾದ ಬಿ.ವಿ.ಭಾರತಿ)  ಕವಿತೆಯಾದರೂ ನಿಮ್ಮ ಕಣ್ತೆರಸಲಿ

ಪತ್ರಕರ್ತೆ ಶ್ವೇತಾ ದಂಡಪಾಣಿ ಅವರ ‘ಮೊಲೆಗಳು’  (ಅನುವಾದ ಬಿ.ವಿ.ಭಾರತಿ)  ಕವಿತೆಯಾದರೂ ನಿಮ್ಮ ಕಣ್ತೆರಸಲಿ

0

ಮೊಲೆಗಳು

ಇವುಗಳಿರುವುದು ನನ್ನ ಗಮನಕ್ಕೆ ಬಂದಿದ್ದು ಕೆಟ್ಟ ಅಳತೆಯ ಬ್ರಾ ನನ್ನ ಮೇಲೆ ಹೇರಲ್ಪಟ್ಟಾಗ,
ಅವು ಇಲ್ಲವಾಗಲೆಂದು ತಿಂಗಳುಗಟ್ಟಳೆ ಪ್ರಾರ್ಥಿಸುವಾಗ,
ಏಕೆಂದರೆ ಅವು ನನಗೆ ಅಡ್ಡಗಾಲಾಗುತ್ತಿದ್ದವು, ಆಟ, ಬಟ್ಟೆ ಮತ್ತು ಮಾಮೂಲಿನಂತೆ ಆರಾಮವಾಗಿ ಇರುವುದಕ್ಕೆ
ಇದ್ದಕ್ಕಿದ್ದಂತೆ ಪ್ರತಿದಿನವೂ ಅವುಗಳು ತಮ್ಮ ಇರುವನ್ನು ಗಮನಕ್ಕೆ ತರುತ್ತಿದ್ದವು,
ಏಕೆಂದರೆ ಅತ್ಯದ್ಭುತ ಸುಖ ಕೊಡುವ ಚಂದ್ರನಾಡಿ,
ಒಳಗೆಲ್ಲೋ ಅಡಗಿರುವ ಸ್ವಗತವಾಡಿಕೊಳ್ಳುವ ಯೋನಿ,
ಬಲಿಷ್ಠವಾಗಿ ಪ್ರಯೋಗಿಸಲ್ಪಡಬಹುದಾದ ಶಿಶ್ನ ,
ಅತಿ ಸೂಕ್ಷ್ಮವಾದರೂ ಶೌರ್ಯದ ಸಂಕೇತವೆಂದು ತಪ್ಪಾಗಿ ಅರ್ಥೈಸಲ್ಪಟ್ಟ ವೃಷಣಗಳು ಇವುಗಳಂತಲ್ಲದೇ
ತಡವಲು, ಸ್ಪರ್ಶಿಸಲು, ಚಿವುಟಲು, ಸವರಲು ಲಭ್ಯವಾಗುವಂತೆ ಮೊಲೆಗಳು ದೇಹದ ಹೊರಗೇ ಕಾಣಿಸಲ್ಪಡುತ್ತವೆ
ಅವು ದೊಡ್ಡವು ಅಥವಾ ಪೀಚಲು,
ಚಿಕ್ಕವು ಅಥವಾ ಸಮೃದ್ದ ಹೀಗೆ ವಿಂಗಡಿಸಲು ಆಗುವಂತೆ ಗೋಚರಿಸುತ್ತವೆ,
ಮೊಲೆಗಳು ಎಲ್ಲರಿಗೂ ಸೇರಿದ ಆಸ್ತಿ,
ಸಾರ್ವಜನಿಕವಾಗಿ ಸರಿಯಾಗಿ ಮುಚ್ಚಲ್ಪಟ್ಟಾಗ ಸ್ವೀಕಾರಾರ್ಹವೆಂದೂ,
ಮಗುವೊಂದರ ಎಳೆಯ ತುಟಿಗಳು ಹೀರಲು ನಗ್ನವಾಗಿರುವಾಗ ಸುಂದರವೆಂದೂ,
ಅಸಮರ್ಪಕ ವಸ್ತ್ರ ವಿನ್ಯಾಸದಿಂದಾಗಿ ಅಕಸ್ಮಾತ್ತಾಗಿ ಕಾಣಿಸಿಬಿಡುವ
ಒಂದು ಮೊಲೆತೊಟ್ಟು ನಾಚಿಕೆಗೇಡೆಂದೂ,
ತೋಳಿಲ್ಲದ ಬ್ಲೌಸಿನಲ್ಲಿ ಕಂಕುಳಿನಿಂದ ಹೊರಗಿಣುಕುವ ಹೆಚ್ಚುವರಿ ಮಾಂಸವು
ಅಸಹ್ಯವೆಂದೂ ಪರಿಗಣಿಸಲ್ಪಡುತ್ತದೆ
ಬೇಕೆಂದೋ ಅಥವಾ ಗೊತ್ತಿಲ್ಲದೆಯೋ
ಹೊರಗಿಣುಕುವ ಬ್ರಾ ಪಟ್ಟಿಯನ್ನು ಯಾರ ಗಮನಕ್ಕೂ ಬಾರದಂತೆ ಒಳತಳ್ಳುವ ಹುಡುಗಿಯರೊಡನೆ ಇದ್ದಕ್ಕಿದ್ದಂತೆ
ಸಹೋದರಿತ್ವ ನಿರ್ಮಾಣಗೊಳ್ಳುತ್ತದೆ.
ನಾನು ಸ್ವಲ್ಪ ದೊಡ್ಡವಳಾದ ಮೇಲೆ ಅವುಗಳು ಹೆಚ್ಚು ಇಷ್ಟವಾಗತೊಡಗಿದವು.
ನನ್ನ ಮೊಲೆಗಳ ಗಾತ್ರ ಜೊತೆಗೆ ಮಲಗುವವನನ್ನು ಉತ್ತೇಜಿಸುತ್ತಿತ್ತು ಮತ್ತು ಹಾಗೆ ಆಕರ್ಷಕವಾಗಿರುವುದು ನನಗೂ ಖುಷಿಯೆನ್ನಿಸುತ್ತಿತ್ತು.
ಆದರೆ ಇದ್ದಕ್ಕಿದ್ದಂತೆ ಅವರಲ್ಲೊಬ್ಬ ನನ್ನ ಪ್ರಿಯಕರನಾದಾಗ ಮಾತ್ರ
ಅವುಗಳನ್ನು ಮುಚ್ಚಿಕೊಳ್ಳುವಂತೆ ಆದೇಶಿಸುತ್ತಿದ್ದ,
ಆಗಲೇ ನನಗೆ ಮೊಲೆಗಳ ಹಿಂದಿನ ರಾಜಕೀಯ ಅನಾವರಣಗೊಂಡಿದ್ದು
ಮೊಲೆಗಳು – ಪುಟ್ಟದಾಗಿದ್ದರೆ ಅವುಗಳಿಗೊಂದು ಘನತೆ ಇರುತ್ತದೆ
ಆದರೆ ನೀರಸವಾಗಿಯೂ ತೋರುತ್ತವೆ,
ದಪ್ಪವಾಗಿದ್ದರೆ – ಅವು ಅಶ್ಲೀಲವಾಗಿಯೂ,
ಉತ್ತೇಜಕವಾಗಿಯೂ ತೋರುತ್ತವೆ,
ಆದರೆ ಹೇಗೇ ಇದ್ದರೂ ಅವುಗಳನ್ನು ಎಂದಿಗೂ ನಿರ್ಲಕ್ಷಿಸಲಂತೂ ಆಗದು
ಮೊಲೆಗಳು – ಸಂದರ್ಭಕ್ಕೆ ತಕ್ಕಂತೆ ಮಾತ್ರ
ಮುಚ್ಚಿಕೊಳ್ಳಬೇಕು ಅಥವಾ ತೆರೆದಿಡಬೇಕು.
ಆಗಲೇ ನಾನು ನೀತಿಗೆಟ್ಟ ಹೆಂಗಸಾಗಲು ನಿರ್ಧರಿಸಿದ್ದು –
ಏಕೆಂದರೆ ನೀತಿಗೆಟ್ಟವಳು ಮಾತ್ರ
ಸಮಾಜದ, ಸಂಸ್ಕೃತಿಯ ಲೆಕ್ಕವಿಲ್ಲದೆ,
ಅಥವಾ ಅಮ್ಮ, ಅಪ್ಪ, ಸಹೋದರ, ಸಹೋದರಿಯರ ಇರುವಿಕೆಯಲ್ಲೂ
ಎದೆಯ ಸೀಳನ್ನು ಪ್ರದರ್ಶಿಸಬಹುದು.
ಹಾಗಿದ್ದಾಗ ಮಾತ್ರ ಅವುಗಳನ್ನು ತೆರೆಯ ಮೇಲೆ ಕಾಮುಕ ಗಂಡಸರೆದುರು ತೆರೆದಿಡುವುದು ಒಪ್ಪಿತವಾಗುವುದು, ಪತ್ರಿಕೆಗಳಲ್ಲಿ ಅಚ್ಚಿಸಿದರೂ ಒಪ್ಪಿತವಾಗುವುದು,
ಟಿವಿಯಲ್ಲಿ ತೋರಿಸಿದರೂ ಸಹ ಒಪ್ಪಿತವಾಗುವುದು,
ನಮ್ಮ ಜೊತೆಗಾತಿ
ಮಾತ್ರ ತೋರಿಸದೆ ಮುಚ್ಚಿಕೊಂಡರಾಯಿತಷ್ಟೇ
ಆದರೆ ಇತ್ತೀಚೆಗೆ ಎದೆಯ ಸೀಳನ್ನು ಪಾರ್ಟಿಯಲ್ಲೋ ಅಥವಾ ಸೀರೆ ಉಟ್ಟಿರುವಾಗಲೋ ತುಸುವೇ ತೋರಿಸಬಹುದು,
ಆದರೆ ಎಚ್ಚರ! ಬ್ರಾ ಮಾತ್ರ ಎಂದಿಗೂ ಕಾಣಬಾರದು, ಕಂಡರೆ ಮತ್ತೆ ನೀವು   ಹಗರಣದ ಜಗತ್ತಿಗೆ ಎಳೆಯಲ್ಪಡುತ್ತೀರಿ
ಬೂಬ್ ಅಥವಾ ರ್ಯಾಕ್ ಎಂದೆಲ್ಲ
ಕರೆಯಲ್ಪಡುವ ಮೊಲೆಗಳು,
ಕ್ಯಾನ್ಸರ್‌ ಪೀಡಿತವಾದಾಗ ಮಾತ್ರ ಸ್ತನಗಳೆಂದು ಕರೆಯಲ್ಪಡುತ್ತವೆ.
ವಿಚಿತ್ರವಲ್ಲವೇ, ಮೊಲೆಗಳಿಗೆ ಸಮಾಜ ಯಾವತ್ತೂ ಕೊಡಲು ನಿರಾಕರಿಸುವ ಘನತೆಯನ್ನು,
ಕ್ಯಾನ್ಸರ್ ತಂದುಕೊಡುತ್ತದೆನ್ನುವುದು….
ಆದರೆ, ಈಗ ನಾನು ಅವುಗಳನ್ನು
ಕಣ್ಣುಗಳಂತೆ, ಕೈಗಳಂತೆ ಅಥವಾ ಭಾರತೀಯ ಸೀರೆಯುಟ್ಟಾಗ ಕಾಣಿಸುವ ನಗ್ನ ಸೊಂಟದಂತೆಯೂ ಕಾಣುತ್ತೇನಷ್ಟೇ.
ನಲವತ್ತು ಡಿಗ್ರಿಯ ಉರಿ ಬಿಸಿಲಿನಲ್ಲಿ ಎತ್ತಿ ಬಿಗಿಯಲು ಬಯಸದ,
ರಾತ್ರಿಯ ಕತ್ತಲಿನಲ್ಲಿ ಹೊದಿಕೆಯ ಪದರದಡಿ
ಮರೆತು ಬಿಡಬಹುದಾದ,
ಜನಜಂಗುಳಿಯಲ್ಲಿ ನನ್ನ ಮೊಣಕೈಗಳನ್ನು ಅಡ್ಡವಿಟ್ಟು ಸಂರಕ್ಷಿಸಲ್ಪಡದೆ ಉಳಿಯಬಹುದಾದ ಬರಿಯ ಮೊಲೆಗಳಷ್ಟೇ
ಆದರೆ ಕೆಟ್ಟದಾಗಿ ಹೊಲೆಯಲ್ಪಟ್ಟ ಟೀ ಶರಟಿನ ಅಡಿಯಲ್ಲಿನ ಕಪ್ಪು ಬ್ರಾ ಇಣುಕಿದಾಗ ಎಂಥ ಅಸಭ್ಯವಾಗಿರುತ್ತದೆಂಬ
ಸ್ವೇಚ್ಛೆಯಾದ ಟೀಕೆಯೊಂದು ಕಿವಿಗೆ ಬಿದ್ದಾಗ ಮತ್ತದು ನೆನಪಿಗೆ ಬಂದಿತು.
ಆದರೆ ಇನ್ನುಮುಂದೆ ಅದು ಹೀಗೆಯೇ ಉಳಿಯುತ್ತದೆ,
ನಾನು ನನ್ನ ಬ್ರಾವನ್ನು ತುಣುಕಾಗಿಯೋ, ಅಥವಾ ಇಡಿಯಾಗಿಯೋ ತೋರಿಸುತ್ತೇನೆ,
ಅದರೊಡನೆ ಮಾಂಸಲ ಭಾಗಗಳನ್ನೂ ಪ್ರದರ್ಶಿಸುತ್ತೇನೆ,
ನೋಡಿ ಬೇಕಿದ್ದರೆ, ಯಾವತ್ತೋ ಒಂದು ದಿನ ನಾನು ಬೆತ್ತಲೆ ಎದೆಯನ್ನು ತೆರೆದಿಟ್ಟು ಬೀದಿಯಲ್ಲಿ ನಡೆದಾಡಿ ಬಿಡುತ್ತೇನೆ…
ನಿಮಗೊಂದು ವಿಷಯ ಗೊತ್ತೇ?
ಕಾಲುಗಳನ್ನು ತೋರುವುದೂ ಕೆಲವು ಕಾಲದ ಹಿಂದೆ ಒಪ್ಪಿತವಾಗುತ್ತಿರಲಿಲ್ಲ

You cannot copy content of this page

Exit mobile version