ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ – ಪತ್ರಕರ್ತರ ಬಳಗದಿಂದ ಮನವಿ

ಬೆಂಗಳೂರು: ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸಿ “ಪೌರಕಾರ್ಮಿಕರಿಗಾಗಿ ಪತ್ರಕರ್ತರು” ಬಳಗದ ನಿಯೋಗವು ಸರ್ಕಾರಕ್ಕೆ ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಎನ್. ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ. ಗುರುರಾಜ್, ಮಹಾಂತೇಶ ಹಿರೇಮಠ ಹಾಗೂ ಸೋಮಶೇಖರ್ ಕವಚೂರು ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಅಸ್ಪೃಶ್ಯತೆಯ ಕೊನೆ ಹಾಡಲು ಕರೆ

ನಾಗರಿಕ ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಅತ್ಯಂತ ಅಪೂರ್ವವಾದದ್ದು. ತಮ್ಮ ಸ್ವಂತ ಆರೋಗ್ಯವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುವ ಈ ವಲಯವನ್ನು ಸರ್ಕಾರಗಳು ಆದ್ಯತೆಯಿಂದ ಕಾಣದಿರುವುದು ವಿಪರ್ಯಾಸ. ನಾಗರಿಕ ಸಮಾಜವೂ ಇವರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ಅತ್ಯಂತ ಅಮಾನವೀಯ. ಇಂತಹ ಶ್ರಮಿಕ ವರ್ಗದ ಹಿತಾಸಕ್ತಿ ಕಾಯುವುದು ಸಮಾಜದ ಹೊಣೆಗಾರಿಕೆ ಮತ್ತು ಋಣ ಸಮರ್ಪಣೆಯಾಗಿದೆ ಎಂದು ಪತ್ರಕರ್ತರ ಬಳಗ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಮುಖ ಬೇಡಿಕೆಗಳು:

  1. ಸೇವೆ ಖಾಯಂಗೊಳಿಸುವಿಕೆ: ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ತಕ್ಷಣವೇ ಖಾಯಂಗೊಳಿಸಬೇಕು.
  2. ಸರ್ಕಾರಿ ನೌಕರರೆಂದು ಘೋಷಣೆ: ಪೌರಕಾರ್ಮಿಕರು ಮತ್ತು ಇತರ ಇಲಾಖೆಗಳ ಸರ್ಕಾರಿ ನೌಕರರ ನಡುವಿನ ತಾರತಮ್ಯ ನಿವಾರಿಸಿ, ಇವರನ್ನು ‘ಸರ್ಕಾರಿ ನೌಕರರು’ ಎಂದು ಘೋಷಿಸಬೇಕು.
  3. ಪ್ರತ್ಯೇಕ ವೇತನ ಮಂಡಳಿ: ಪೌರಕಾರ್ಮಿಕರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ, ಮೂಲವೇತನವನ್ನು ಹೆಚ್ಚಿಸಬೇಕು.
  4. ಆರೋಗ್ಯ ಹಾಗೂ ಚಿಕಿತ್ಸಾ ಸೌಲಭ್ಯ: ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣೆ, ಸೂಕ್ತ ಚಿಕಿತ್ಸೆ ಮತ್ತು ನಗದು ರಹಿತ (Cashless) ಆರೋಗ್ಯ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಬೇಕು.
  5. ಎಲ್ಲಾ ಸಿಬ್ಬಂದಿಗಳ ಸೇರ್ಪಡೆ: ಕಸ ತುಂಬುವ ಲೋಡರ್ಸ್‌, ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಸಹಾಯಕರು, ಆಪರೇಟರ್‌ಗಳು ಮತ್ತು ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನೂ ಪೌರಕಾರ್ಮಿಕರೆಂದೇ ಪರಿಗಣಿಸಿ ಖಾಯಂಗೊಳಿಸಬೇಕು.
  6. ಶಿಕ್ಷಣ ಪ್ರೋತ್ಸಾಹ: ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಪ್ರೋತ್ಸಾಹಕ ಅನುದಾನ ಮೀಸಲಿಡಬೇಕು.
  7. ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ: ಸೇವಾ ಅವಧಿಯಲ್ಲಿ ಪೌರಕಾರ್ಮಿಕರು ಮೃತಪಟ್ಟರೆ, ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು.
  8. ಸಾಮಾಜಿಕ-ಆರ್ಥಿಕ ಅಧ್ಯಯನ: ರಾಜ್ಯದ ಪೌರಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ತಕ್ಷಣವೇ ಸಮಿತಿಯೊಂದನ್ನು ರಚಿಸಿ, 3 ತಿಂಗಳ ಕಾಲಮಿತಿಯೊಳಗೆ ವರದಿ ಪಡೆದು ಜಾರಿಗೊಳಿಸಬೇಕು.

ಈ ಸಂಧರ್ಭದಲ್ಲಿ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಶಿವಾನಂದ ತಗಡೂರು, ಎನ್. ರವಿಕುಮಾರ್ ಟೆಲೆಕ್ಸ್, ರುದ್ರಪ್ಪ ಸಿ., ಮೂರ್ತಿ ಜಿ.ಆರ್., ಡಾ. ವಿಜಯಾ, ಯಶೋಧ, ಚೀ. ಉಮಾಶಂಕರ್ ಲಕ್ಷ್ಮೀಪುರ, ಜಾನ್ ಮಥಾಯಿಸ್, ಶಾಂತಲಾ ಧರ್ಮರಾಜ್, ಶ್ಯಾಮ್ ಹೆಬ್ಬಾರ್ ಎಸ್., ಮೀನಾ ಮೈಸೂರು, ಟಿ.ಎನ್. ಸೀತಾರಾಮ್, ಮಂಜುನಾಥ್ ತುರುವನೂರು, ಚೀ. ಜ. ರಾಜೀವ್, ಆರ್.ಎಸ್. ಹಾಲಸ್ವಾಮಿ, ದೇಶಾದ್ರಿ ಹೊಸಮನಿ, ಮಂಜುನಾಥ್ ಚಾಂದ್, ಎಸ್.ಆರ್. ವೆಂಕಟೇಶ್ ಪ್ರಸಾದ್, ಕೆ.ಹೆಚ್. ಸಾವಿತ್ರಿ, ಸಿ.ಆರ್. ಬೋಪಯ್ಯ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಬೆಂಬಲ ಸೂಚಿಸಿದ್ದಾಸಿ ಇನ್ನಿತರು ಉಪ‍್ಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು