Friday, September 13, 2024

ಸತ್ಯ | ನ್ಯಾಯ |ಧರ್ಮ

ಯೆಚೂರಿ ಪ್ರಯಾಣ: ಕಾಕಿನಾಡ ಟು ಡೆಲ್ಲಿ

ಸೀತಾರಾಮ್ ಯೆಚೂರಿ ಅವರು 1952ರ ಆಗಸ್ಟ್ 12ರಂದು ಮದ್ರಾಸಿನ ತೆಲುಗು ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಮತ್ತು ತಾಯಿ ಕಲ್ಪಕಂ ಯೆಚೂರಿಯವರು. ಇವರು ಆಂಧ್ರಪ್ರದೇಶದ ಕಾಕಿನಾಡದವರು.

ಯೆಚೂರಿಯವರ ತಂದೆ APSRTC ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಸರ್ಕಾರಿ ಉದ್ಯೋಗಿ. ಅವರು ಇತ್ತೀಚೆಗೆ ತೀರಿಕೊಂಡರು. ಮದ್ರಾಸಿನಲ್ಲಿ ಹುಟ್ಟಿದರೂ ಯೆಚೂರಿ ಬೆಳೆದದ್ದು ಹೈದರಾಬಾದ್‌ನಲ್ಲಿ. 10ನೇ ತರಗತಿವರೆಗೆ ಆಲ್ ಸೇಂಟ್ಸ್ ಹೈಸ್ಕೂಲಿನಲ್ಲಿ ಓದಿದ ಅವರು 1969ರಲ್ಲಿ ತೆಲಂಗಾಣ ಚಳವಳಿಯ ಸಮಯದಲ್ಲಿ ದೆಹಲಿ ತಲುಪಿದರು. ಅಲ್ಲಿ ಪ್ರೆಸಿಡೆಂಟ್ ಎಸ್ಟೇಟ್ ಶಾಲೆಗೆ ಸೇರಿ ಸಿಬಿಎಸ್ ಇ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ ್ಯಾಂಕ್ ಗಳಿಸಿದರು.

ಅದರ ನಂತರ, ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎಂಎ ಅಧ್ಯಯನ ಮಾಡಿದರು. ಎರಡರಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಅವರು ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಲು ಜೆಎನ್‌ಯು ಸೇರಿದರು. ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಯಿತು ಮತ್ತು ಓದು ಮಧ್ಯದಲ್ಲಿಯೇ ನಿಂತುಹೋಯಿತು.

ರಾಜಕೀಯ ಜೀವನ

1974ರಲ್ಲಿ ಯೆಚೂರಿ ಎಸ್‌ಎಫ್‌ಐ ಸೇರಿದ್ದರು. ಮುಂದಿನ ವರ್ಷ ಸಿಪಿಎಂ ಸೇರಿದರು. 1975ರಲ್ಲಿ ಜೆಎನ್‌ಯು ವಿದ್ಯಾರ್ಥಿಯಾಗಿದ್ದಾಗ ಅವರನ್ನು ಬಂಧಿಸಲಾಗಿತ್ತು. ಬಂಧನಕ್ಕೂ ಮುನ್ನ ಯೆಚೂರಿ ತಲೆಮರೆಸಿಕೊಂಡಿದ್ದರು. ಆ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಕೆಲಸ ಮಾಡಿದ್ದರು. ತುರ್ತು ಪರಿಸ್ಥಿತಿಯ ನಂತರ 1977-78ರಲ್ಲಿ ಮೂರು ಅವಧಿಗೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಆ ಸಮಯದಲ್ಲಿ ಅವರು ಪ್ರಕಾಶ್ ಕಾರಟ್ ಜೊತೆಗೂಡಿ ಜೆಎನ್‌ಯುನಲ್ಲಿ ಎಡಪಂಥೀಯರ ಅಜೇಯ ಕೋಟೆಯನ್ನು ನಿರ್ಮಿಸಲು ಶ್ರಮಿಸಿದರು. 1978ರಲ್ಲಿ ಯೆಚೂರಿ ಎಸ್‌ಎಫ್‌ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆ ನಂತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. 1984ರಲ್ಲಿ ಸಿಪಿಎಂನ ಕೇಂದ್ರ ಸಮಿತಿಗೆ ಆಯ್ಕೆಯಾದರು. ಅವರು 1985ರಲ್ಲಿ ರಚನೆಯಾದ ಪಕ್ಷದ ಕೇಂದ್ರ ಕಾರ್ಯದರ್ಶಿಯ ಸದಸ್ಯರಾಗಿದ್ದರು. ಯೆಚೂರಿ, ಕಾರಟ್, ಸುನಿಲ್ ಮೊಯಿತ್ರಾ, ಪಿ.ರಾಮಚಂದ್ರನ್ ಮತ್ತು ಎಸ್.ರಾಮಚಂದ್ರನ್ ಪಿಳ್ಳೈ ಅವರು ರಚಿಸಿದ ಕೇಂದ್ರ ಕಚೇರಿಯು ಪಾಲಿಟ್‌ಬ್ಯೂರೋ ನಿರ್ದೇಶನದಲ್ಲಿ ಕೆಲಸ ಮಾಡಿದೆ.

1986ರವರೆಗೆ ಯೆಚೂರಿ ಎಸ್‌ಎಫ್‌ಐನಲ್ಲಿ ಮುಂದುವರಿದಿದ್ದರು. ಅವರು 1992ರಲ್ಲಿ ನಡೆದ ಸಿಪಿಎಂನ 14ನೇ ಅಖಿಲ ಭಾರತ ಕಾಂಗ್ರೆಸ್‌ನಲ್ಲಿ ಪಕ್ಷದ ಪಾಲಿಟ್‌ಬ್ಯೂರೋಗೆ ಆಯ್ಕೆಯಾದರು. 19 ಏಪ್ರಿಲ್ 2015ರಂದು, ಅವರು ವಿಶಾಖಪಟ್ಟಣದಲ್ಲಿ ನಡೆದ ಪಕ್ಷದ 15 ನೇ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸಿಪಿಐ(ಎಂ) ನ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರು ಏಪ್ರಿಲ್ 2018ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಿಪಿಎಂನ 22ನೇ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು. ಏಪ್ರಿಲ್ 2022ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಪಕ್ಷದ 23ನೇ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಯೆಚೂರಿ ಅವರನ್ನು ಮೂರನೇ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಸಮ್ಮಿಶ್ರ ರಾಜಕಾರಣದಲ್ಲಿ ಸಿಪಿಐ(ಎಂ)ನ ಮಾಜಿ ಪ್ರಧಾನ ಕಾರ್ಯದರ್ಶಿ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ನಿರ್ವಹಿಸಿದ ಪಾತ್ರ ಅಗಣಿತ. ಯೆಚೂರಿ ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದರು. 1996ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರಕ್ಕಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಜೊತೆಗೂಡಿ, ಜಂಟಿ ಕನಿಷ್ಠ ಕಾರ್ಯಕ್ರಮವನ್ನು ರಚಿಸಲಾಯಿತು. 2004ರಲ್ಲಿ ಯುಪಿಎ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಒಕ್ಕೂಟ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಜನರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅವಿರತ ಹೋರಾಟ ನಡೆಸಿದರು. ‘ವಿವಿಧತೆಯಲ್ಲಿ ಏಕತೆ’ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಅವರು ದೇಶದಲ್ಲಿ ಎಲ್ಲಿ ಹಿಂಸೆ ನಡೆದರೂ ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು.

ಯೆಚೂರಿ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಅನೇಕ ಸಮಾಜವಾದಿ ದೇಶಗಳಲ್ಲಿ ಪಕ್ಷದ ಕಾಂಗ್ರೆಸ್‌ಗಳಲ್ಲಿ ಸ್ನೇಹಪರ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದರು.

ರಾಜ್ಯಸಭಾ ಸದಸ್ಯರಾಗಿ

2005ರಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಯೆಚೂರಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ಅವರು ಅನೇಕ ಪ್ರಮುಖ ವಿಷಯಗಳನ್ನು ಸಂಸತ್ತಿನ ಗಮನಕ್ಕೆ ತಂದರು. ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಸಂಸತ್ತಿನ ಕಲಾಪಕ್ಕೆ ಆಗಾಗ ಅಡ್ಡಿಪಡಿಸುತ್ತಿದ್ದಾರೆಂದು ಆಡಳಿತ ಪಕ್ಷ ಟೀಕಿಸಿದಾಗ, ‘ಅಧಿವೇಶನಕ್ಕೆ ಅಡ್ಡಿಪಡಿಸುತ್ತಿವೆ ಎಂದು ಪ್ರತಿಪಕ್ಷಗಳ ಮೇಲೆ ಆರೋಪ ಹೊರಿಸಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿ‍ಕೊ‍ಳ್ಳುವಂತಿಲ್ಲ’ ಎಂದು ಉತ್ತರಿಸಿದ್ದರು. ಸಂಸತ್ತಿಗೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವದಲ್ಲಿ ಕಾನೂನುಬದ್ಧ ಪ್ರಕ್ರಿಯೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ವೈಯಕ್ತಿಕ ಜೀವನ

ಯೆಚೂರಿ ಪತ್ನಿ ಸೀಮಾ ಚಿಸ್ತಿ ಪತ್ರಕರ್ತೆ. ಅವರು ‘ದಿ ವೈರ್’ ಪೋರ್ಟಲ್‌ನ ಸಂಪಾದಕರಾಗಿದ್ದರು ಮತ್ತು ಮೊದಲು ಬಿಬಿಸಿ ಹಿಂದಿ ಸೇವೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ದೆಹಲಿ ನಿವಾಸಿ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಯೆಚೂರಿ ಅವರ ಪುತ್ರಿ ಅಖಿಲಾ ಯೆಚೂರಿ ಅವರು ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಯೆಚೂರಿ ಅವರ ಪುತ್ರ ಆಶಿಶ್ ಯೆಚೂರಿ ಅವರು ಕೋವಿಡ್‌ನಿಂದಾಗಿ ಏಪ್ರಿಲ್ 22, 2021ರಂದು ನಿಧನರಾದರು.

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಯೆಚೂರಿ, ಯೋಗೇಂದ್ರ ಯಾದವ್ ಮತ್ತು ಇತರರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಯೆಚೂರಿ, ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸಿದ್ದರು.

ಯೆಚೂರಿ ಅವರು ಲೇಖಕರಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ವಾಟ್‌ ಈಸ್‌ ದಿಸ್‌ ಹಿಂದೂ ರಾಷ್ಟ್ರ?: ಆನ್ ಗೋಲ್ವಾಲ್ಕರ್ ಫ್ಯಾಸಿಸ್ಟ್ ಐಡಿಯಾಲಜಿ ಎಂಡ್ ‌ಸಫ್ರನ್ ಬ್ರಿಗೇಡ್ಸ್ ಪ್ರಾಕ್ಟೀಸ್, ಸೂಡೋ ಹಿಂದೂಯಿಸಂ ಎಕ್ಸ್‌ಪೋಸ್ಡ್:‌ ಸ್ಯಾಫ್ರನ್‌ ಬ್ರಿಗೇಡ್‌ ಮಿಥ್ಸ್‌ ಎಂಡ್‌ ರಿಯಾಲಿಟಿ, ಕ್ಯಾಸ್ಟ್‌ ಎಂಡ್‌ ಕ್ಲಾಸ್‌ ಇನ್‌ ಇಂಡಿಯನ್‌ ಪಾಲಿಟಿಕ್ಸ್‌ ಟುಡೇ, ಆಯಿಲ್‌ ಪೂಲ್‌ ಡೆಫಿಸಿಟ್‌ ಆರ್ ಸೆಸ್ ಪೂಲ್ ಆಫ್ ಡಿಸಿಟ್, ಸೋಷಿಯಲಿಸಂ ಇನ್‌ ಚೇಂಜಿಂಗ್‌ ವರ್ಲ್ಡ್, ಲೆಫ್ಟ್‌ ಹ್ಯಾಂಡ್‌ ಡ್ರೈವ್: ಕಾಂಕ್ರೀಟ್‌ ಅನಾಲಿಸಿಸ್‌ ಆಫ್‌ ಕಾಂಕ್ರೀಟ್‌ ಕಂಡೀಷನ್ಸ್, ಮೋದಿ ಗವರ್ನಮೆಂಟ್: ನ್ಯೂ ಸರ್ಜ್ ಆಫ್ ಕಮ್ಯುನಲಿಸಂ, ಕಮ್ಯುನಲಿಸಂ ವರ್ಸಸ್ ಸೆಕ್ಯುಲರಿಸಂ, ಗ್ರಿನಾ ಕಿ ರಾಜನೀತಿ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಪೀಪಲ್ಸ್ ಡೈರಿ ಆಫ್ ಫ್ರೀಡಂ ಸ್ಟ್ರಗಲ್, ದಿ ಗ್ರೇಟ್ ರಿವಾಲ್ಟ್ ಎ ಲೆಫ್ಟ್ ಅಪ್ರೈಸಲ್, ಗ್ಲೋಬಲ್ ಎಕನಾಮಿಕ್ ಕ್ರೈಸಿಸ್: ಎ ಮಾರ್ಕ್ಸ್‌ಸ್ಟ್ ಪರ್ಸ್ಪೆಕ್ಟಿವ್ ಎಂಬ ಪುಸ್ತಕಗಳು ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ಇದೆಲ್ಲದರ ಜೊತೆಗೆ ಅವರು ದೀರ್ಘಕಾಲ ಸಿಪಿಎಂನ ಅಧಿಕೃತ ವಾರಪತ್ರಿಕೆ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕರಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page