ರಾಂಚಿ: ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಜೆಎಸ್‌ಎಸ್‌ಸಿ) ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ರಾಂಚಿಯಲ್ಲಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯಲ್ಲಿ ತಿದ್ದುಪಡಿ ತರಬೇಕು ಹಾಗೂ ಪರೀಕ್ಷೆಯಲ್ಲಿ ನಡೆದ ಲೋಪಗಳ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ 103 ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗವು (ಜೆಪಿಎಸ್‌ಸಿ) ಪ್ರಕಟಣೆ ಹೊರಡಿಸಿ, ಆ ಬಳಿಕ ಮೊದಲ ಹಂತದ (ಪ್ರಿಲಿಮಿನರಿ) ಪರೀಕ್ಷೆಗಳನ್ನು ನಡೆಸಿತ್ತು. ಈ ಪರೀಕ್ಷೆಯ ಫಲಿತಾಂಶಗಳನ್ನು ಜುಲೈನಲ್ಲಿ ಪ್ರಕಟಿಸಲಾಯಿತು. ಆದರೆ, ಅರ್ಹತಾ ಅಂಕಗಳನ್ನು (ಕಟ್‌ಆಫ್) ಪ್ರಕಟಿಸಲಿಲ್ಲ. ಇದರಿಂದಾಗಿ ನೇಮಕಾತಿ ಪ್ರಕ್ರಿಯೆ ನಿಂತುಹೋಯಿತು. ಇದರ ಜೊತೆಗೆ ಒಎಂಆರ್ ಶೀಟ್‌ಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ಬೆಳಕಿಗೆ ಬಂದವು. ಹೀಗಾಗಿ ಕಳೆದ ತಿಂಗಳು ನಡೆಯಬೇಕಿದ್ದ ಮುಖ್ಯ ಪರೀಕ್ಷೆಯ ಜೊತೆಗೆ, ಇನ್ನುಳಿದ ಒಂಬತ್ತು ಪರೀಕ್ಷೆಗಳನ್ನೂ ಮುಂದೂಡುತ್ತಿದ್ದೇವೆ ಎಂದು ಜೆಪಿಎಸ್‌ಸಿ ಪ್ರಕಟಿಸಿತು.
ಈ ತೀರ್ಮಾನದಿಂದಾಗಿ ನೂರಾರು ಹುದ್ದೆಗಳ ಭರ್ತಿ ನಡುನೀರಲ್ಲೇ ಉಳಿಯಿತು. ಇದರಿಂದ ಕೆರಳಿದ ಉದ್ಯೋಗಾಕಾಂಕ್ಷಿಗಳು ‘ಕ್ಲೀನ್ ಜೆಪಿಎಸ್‌ಸಿ’ ಹೆಸರಿನಲ್ಲಿ ಚಳವಳಿ ಶುರುಮಾಡಿದ್ದಾರೆ. ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಕುರಿತು ಸಿಬಿಐ ತನಿಖೆಯಾಗಬೇಕು ಹಾಗೂ ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
ರಾಂದಿಯಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಸಿಜೆಪಿ ರವಿವಾರ ಬೆಂಬಲ ಸೂಚಿಸಿದೆ. ಈ ಕುರಿತು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳ ಪರವಾಗಿ ಸಿಜೆಪಿ ನಿಲ್ಲುತ್ತದೆ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದೇನೆ. ಅವರ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ,” ಎಂದು ದೀಪ್ಕೆ ಜಾಲತಾಣದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಗೋಡ್ಡಾ ಜಿಲ್ಲೆಯ ಬ್ಲಾಕ್ ಪೂರೈಕೆ ಅಧಿಕಾರಿ ಅಭಯ್ ತಿವಾರಿ ಅವರನ್ನು ಕಾವಲುಪಡೆ ಬಂಧಿಸಿದೆ. ಪರೀಕ್ಷೆ ನಡೆಸಿದ್ದ ಟಿಡಿಪಿಎಲ್ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಅಷ್ಟೇ ಅಲ್ಲದೆ, ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಹಾಗೂ ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಎಲ್. ಖಿಯಾಂಗ್ತೆ ಅವರನ್ನು ಸಿಐಡಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದೆ. ಇದಕ್ಕೂ ಮುನ್ನ, ಅವರು ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ವಿದ್ಯಾರ್ಥಿಗಳ ಮೇಲೆ ಕಾವಲುಪಡೆಯಿಂದ ದಾಳಿ ಮಾಡಿಸಿದ್ದ ಬಿಜೆಪಿ, ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಚಳವಳಿ ನಡೆಸುತ್ತಿರುವುದು ಗಮನಾರ್ಹವಾಗಿದೆ.
