Saturday, August 23, 2025

ಸತ್ಯ | ನ್ಯಾಯ |ಧರ್ಮ

ನಕ್ಸಲರಿಗೆ ಜಸ್ಟಿಸ್ ಸುದರ್ಶನ್ ರೆಡ್ಡಿ ಬೆಂಬಲ: ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯ ಮೇಲೆ ಅಮಿತ್ ಶಾ ಆರೋಪ

ವಿರೋಧ ಪಕ್ಷಗಳ ಪರವಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜಸ್ಟಿಸ್ ಬಿ. ಸುದರ್ಶನ್ ರೆಡ್ಡಿ ಅವರ ಕಾರಣದಿಂದಲೇ ದೇಶದಲ್ಲಿ ನಕ್ಸಲಿಸಂ ಬಲಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಮಲಯಾಳಂ ಪತ್ರಿಕೆಯಾದ ಮನೋರಮ ನ್ಯೂಸ್ ಕಾನ್‌ಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಸಾಲ್ವಾ ಜುಡುಂ ಪ್ರಕರಣದಲ್ಲಿ ಜಸ್ಟಿಸ್ ಸುದರ್ಶನ್ ರೆಡ್ಡಿ ಆ ತೀರ್ಪು ನೀಡದೇ ಇದ್ದಿದ್ದರೆ 2020ಕ್ಕಿಂತ ಮೊದಲೇ ದೇಶದಲ್ಲಿ ಎಡಪಂಥೀಯ ಉಗ್ರಗಾಮಿತ್ವವನ್ನು ಅಂತ್ಯಗೊಳಿಸಬಹುದಿತ್ತು ಎಂದು ಹೇಳಿದರು.

ಉಪರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಸಾಧ್ಯತೆಗಳು ಇನ್ನಷ್ಟು ಕಡಿಮೆಯಾಗಿವೆ ಎಂದು ಅವರು ತಿಳಿಸಿದರು.

‘ಸುದರ್ಶನ್ ರೆಡ್ಡಿ ಎಂಬ ವ್ಯಕ್ತಿ ನಕ್ಸಲಿಸಂಗೆ ಸಹಾಯ ಮಾಡಿದ್ದಾರೆ. ಅವರು ಸಾಲ್ವಾ ಜುಡುಂ ತೀರ್ಪು ನೀಡಿದರು. ಆ ತೀರ್ಪು ನೀಡದೇ ಇದ್ದಿದ್ದರೆ 2020ರ ವೇಳೆಗೆ ನಕ್ಸಲ್ ಉಗ್ರಗಾಮಿತ್ವ ಕೊನೆಗೊಳ್ಳುತ್ತಿತ್ತು. ನಕ್ಸಲರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಅವರು ಈ ತೀರ್ಪು ನೀಡಿದ್ದಾರೆ’ ಎಂದು ಅಮಿತ್ ಶಾ ಟೀಕಿಸಿದರು.

ಮಾವೋವಾದಿಗಳ ವಿರುದ್ಧದ ಹೋರಾಟದ ಭಾಗವಾಗಿ, ಆದಿವಾಸಿ ಯುವಕರನ್ನು ಕೋಯಾ ಕಮಾಂಡೋಗಳು, ಸಾಲ್ವಾ ಜುಡುಂ ಹೆಸರಿನಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ನೇಮಕ ಮಾಡುವುದನ್ನು 2011ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಅಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸುದರ್ಶನ್ ರೆಡ್ಡಿ ಇದು ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ್ದರು. ಎಡಪಕ್ಷಗಳ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಪಕ್ಷವು ನಕ್ಸಲಿಸಂ ಅನ್ನು ಪ್ರೋತ್ಸಾಹಿಸುವ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ ಎಂದು ಶಾ ಆರೋಪಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page