Friday, January 17, 2025

ಸತ್ಯ | ನ್ಯಾಯ |ಧರ್ಮ

ತನ್ನ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ನ್ಯಾ.ಯಾದವ್

ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ತರಾಟಗೆ ಒಳಗಾಗಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನ್ಯಾಯಾಂಗ ನಡವಳಿಕೆಯ ಯಾವುದೇ ತತ್ವವನ್ನು ಉಲ್ಲಂಘಿಸದ ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಜಸ್ಟಿಸ್ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರಿಗೆ ಪ್ರತಿಕ್ರಿಯೆಯಾಗಿ ಬರೆದ ಪತ್ರದಲ್ಲಿ ತಮ್ಮ ಭಾಷಣವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳ ಚಿಂತನೆಯ ಅಭಿವ್ಯಕ್ತಿಯಾಗಿದೆ ಮತ್ತು ಯಾವುದೇ ಸಮುದಾಯದ ಬಗ್ಗೆ ದ್ವೇಷವನ್ನು ಉಂಟುಮಾಡುವುದಿಲ್ಲ ಎಂದು ಬರೆದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಡಿಸೆಂಬರ್ 17 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭೇಟಿ ಮಾಡಿದ ನಂತರ ಮುಖ್ಯ ನ್ಯಾಯಮೂರ್ತಿ ಬನ್ಸಾಲಿ ಅವರು ನ್ಯಾಯಮೂರ್ತಿ ಯಾದವ್ ಅವರ ಪ್ರತಿಕ್ರಿಯೆಯನ್ನು ಕೇಳಿದ್ದರು.

ಯಾದವ್ ಅವರ ಪ್ರತಿಕ್ರಿಯೆಯನ್ನು ಕೋರಿದ ಪತ್ರದಲ್ಲಿ ಕಾನೂನು ವಿದ್ಯಾರ್ಥಿ ಮತ್ತು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಅವರ ಭಾಷಣದ ವಿರುದ್ಧ ಸಲ್ಲಿಸಿದ ದೂರನ್ನೂ ಉಲ್ಲೇಖಿಸಿದ್ದಾರೆ. ಅಲ್ಲದೇ ಗೋಸಂರಕ್ಷಣೆಗೆ ಸಂಬಂಧಿಸಿದ ತನ್ನ ಆದೇಶಗಳಲ್ಲಿ ಒಂದನ್ನು ಮತ್ತು ಸಾಮಾಜಿಕ ಕಾರ್ಯಕರ್ತರು ಎತ್ತಿರುವ ಪ್ರಶ್ನೆಗಳನ್ನು ಕೂಡ ಉಲ್ಲೇಖಿಸಿದ್ದಾರೆ.

ಗೋಸಂರಕ್ಷಣೆಯು ಸಮಾಜದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಾನೂನಿಗೆ ಅನುಗುಣವಾಗಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿಸೆಂಬರ್ 8 ರಂದು ಅಲಹಾಬಾದ್ ಹೈಕೋರ್ಟ್‌ನ ಲೈಬ್ರರಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆಯ ವಿಷಯದ ಕುರಿತು ವಿವಾದಾತ್ಮಕ ಭಾಷಣ ಮಾಡಿದ ನ್ಯಾಯಮೂರ್ತಿ ಯಾದವ್ ಅವರು ” ಕಠ್ಮುಲ್ಲಾ ” ಎಂಬ ಅವಹೇಳನಕಾರಿ ಪದವನ್ನು ಬಳಸಿದರು ಮತ್ತು ಆರಂಭಿಕ ಹಂತದಿಂದಲೇ “ಪ್ರಾಣಿಗಳ ವಧೆ”ಯನ್ನು ನೋಡಿರುವ ಮುಸ್ಲಿಂ ಮಕ್ಕಳು “ಉದಾರಿಗಳು” ಮತ್ತು “ಸಹಿಷ್ಣುಗಳಾಗುವುದನ್ನು” ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇವರೊಂದಿಗೆ ಹೋಲಿಸುತ್ತಾ, ಹಿಂದೂಗಳಿಗೆ ಬಾಲ್ಯದಿಂದಲೂ ದಯೆಯ ಬಗ್ಗೆ ಕಲಿಸಲಾಗುತ್ತಿತ್ತು ಮತ್ತು ಅವರ ಮಕ್ಕಳಲ್ಲಿ ಅಹಿಂಸೆ ಮತ್ತು ಸಹಿಷ್ಣುತೆ ಬೇರೂರಿದೆ ಎಂದು ಯಾದವ್ ಹೇಳಿದ್ದರು. ಹಿಂದೂ ಸಮುದಾಯವನ್ನು ಉಲ್ಲೇಖಿಸಿ, ಭಾರತವು “ಬಹುಸಂಖ್ಯಾತರ” ಇಚ್ಛೆಯಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಈ ಹೇಳಿಕೆಗಳು ರಾಷ್ಟ್ರವ್ಯಾಪಿ ದೊಡ್ಡ ಮಟ್ಟದ ಟೀಕೆಗಳಿಗೆ ಕಾರಣವಾದವು. ಇದನ್ನು ಖಂಡಿಸಿ ಭಾರತೀಯ ವಕೀಲರ ಸಂಘ ಹೇಳಿಕೆಯನ್ನೂ ನೀಡಿತ್ತು. “ಈ ಟೀಕೆಗಳು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿವೆ, ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಪ್ರಮಾಣವಚನವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಮತ್ತು ಕಾನೂನಿನ ನಿಯಮವನ್ನು ಸಮರ್ಥಿಸುವ ನ್ಯಾಯಯುತ ಮತ್ತು ನಿಷ್ಪಕ್ಷಪಾತ ನ್ಯಾಯಾಂಗದ ತಳಹದಿಯ ಮೇಲೆ ಮಾಡಿದ ಅಪಚಾರ,” ಬಾರ್ ಅಸೋಸಿಯೇಷನ್‌ ಆಫ್‌ ಇಂಡಿಯಾ ಹೇಳಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page