ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ವಾಗ್ದಂಡನೆ (Impeachment) ತನಿಖೆಗಾಗಿ ಲೋಕಸಭಾ ಸ್ಪೀಕರ್ ಸಮಿತಿ ರಚಿಸಿರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ನ್ಯಾಯಾಧೀಶರ ಕಾಯ್ದೆಯಡಿ ತಮ್ಮ ವಿರುದ್ಧ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸುವಂತೆ ಸ್ಪೀಕರ್ ಆದೇಶಿಸಿದ್ದರು. ಇದನ್ನು ರದ್ದುಗೊಳಿಸಬೇಕೆಂದು ವರ್ಮಾ ಕೋರಿದ್ದರು. ಆದರೆ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯನ್ನು ಮಾನ್ಯ ಮಾಡಿಲ್ಲ.
ಕಳೆದ ವರ್ಷ ಮಾರ್ಚ್ 14 ರಂದು ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಸಿಬ್ಬಂದಿಗೆ ಅಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟುಗಳು ಪತ್ತೆಯಾಗಿದ್ದವು. ಇದು ಅವರ ಮೇಲೆ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆಯ ಗಂಭೀರ ಆರೋಪಗಳಿಗೆ ಕಾರಣವಾಯಿತು.
ಈ ಘಟನೆಯ ನಂತರ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅಲ್ಲದೆ, ಮುಂದಿನ ಕ್ರಮದವರೆಗೆ ಯಾವುದೇ ನ್ಯಾಯಾಂಗ ಕೆಲಸಗಳನ್ನು ನಿರ್ವಹಿಸದಂತೆ ಅವರಿಗೆ ಸೂಚಿಸಲಾಗಿದೆ. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆಗೂ ಆದೇಶ ನೀಡಲಾಗಿದೆ.
