Home ರಾಜಕೀಯ ಟಿಎಂಸಿ ಬಂಡಾಯ ಬಣದ ಆಶ್ರಯ ತಾಣ NCPI ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ನೂತನ ಅಧ್ಯಕ್ಷ: ಅವರಾರೋ...

ಟಿಎಂಸಿ ಬಂಡಾಯ ಬಣದ ಆಶ್ರಯ ತಾಣ NCPI ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ನೂತನ ಅಧ್ಯಕ್ಷ: ಅವರಾರೋ ನನಗೇ ಗೊತ್ತಿಲ್ಲ ಎಂದ ಪಕ್ಷದ ಪ್ರಧಾನ ಕಾರ್ಯದರ್ಶಿ!

0

ದೆಹಲಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ಲೋಕಸಭಾ ಸಂಸದರ ವಿಲೀನ ಪ್ರಕ್ರಿಯೆಯ ಬೆನ್ನಲ್ಲೇ ರಾಷ್ಟ್ರೀಯ ರಾಜಕಾರಣದಲ್ಲಿ ಭಾರಿ ಸುದ್ದಿಯಲ್ಲಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡ್ಲಾ’ (NCPI) ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜ್ಯೋತಿಪ್ರಕಾಶ್ ಚಟರ್ಜಿ ಅವರನ್ನು ನೇಮಕ ಮಾಡಲಾಗಿದೆ.

ಬಂಡಾಯ ಸಂಸದರ ಮುಂಚೂಣಿಯ ನಾಯಕಿಯಾಗಿರುವ ಕಕೋಲಿ ಘೋಷ್ ದಸ್ತಿದಾರ್ ಈ ಹೊಸ ನೇಮಕಾತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಎನ್‌ಸಿಪಿಐ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ಶೇವ್ಲಿ ಕುಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಶೇವ್ಲಿ ಕುಂದು ಅವರ ರಾಜೀನಾಮೆಯಿಂದಾಗಿ ಖುದ್ದಾಗಿ ಕಕೋಲಿ ಘೋಷ್ ಅವರೇ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಭಾರಿ ಊಹಾಪೋಹಗಳು ಎದ್ದಿದ್ದವು. ಆದರೆ, ಸದ್ಯಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಜ್ಯೋತಿಪ್ರಕಾಶ್ ಚಟರ್ಜಿ ಯಾರು ಮತ್ತು ಅವರ ರಾಜಕೀಯ ಹಿನ್ನೆಲೆ ಏನು ಎಂಬುದು ಸ್ವತಃ ಈ ಪಕ್ಷದ ಇತರ ನಾಯಕರಿಗೇ ತಿಳಿಯದ ರಹಸ್ಯವಾಗಿದೆ.

ಈ ಗೊಂದಲದ ನಡುವೆಯೇ ಪಿಟಿಐ (PTI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎನ್‌ಸಿಪಿಐ ಪ್ರಧಾನ ಕಾರ್ಯದರ್ಶಿ ಶಾಂತನು ಡೇ, ಪಕ್ಷದ ಈ ಹೊಸ ಅಧ್ಯಕ್ಷರ ನೇಮಕದ ಕುರಿತು ತಮಗೆ ಯಾವುದೇ ಅಧಿಕೃತ ಮಾಹಿತಿಯೇ ಇಲ್ಲ ಎಂದು ಭಾರಿ ಬಾಂಬ್ ಸಿಡಿಸಿದ್ದಾರೆ. “ಈ ಜ್ಯೋತಿಪ್ರಕಾಶ್ ಚಟರ್ಜಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ರಕ್ತ ಸವರಿ ಕಟ್ಟಿ ಬೆಳೆಸಿದ ಎನ್‌ಸಿಪಿಐ ಪಕ್ಷದ ಒಳಗಡೆ ಪ್ರಸ್ತುತ ಏನು ನಡೆಯುತ್ತಿದೆ ಎಂಬ ಕನಿಷ್ಠ ಸುಳಿವು ಕೂಡ ನನಗಿಲ್ಲ. ದೇಶದ ಪ್ರಭಾವಿ ಮತ್ತು ದೊಡ್ಡ ನಾಯಕರು ನಮ್ಮ ಪಕ್ಷವನ್ನು ಸೇರುತ್ತಿರುವುದು ನಮಗೆ ಸಂತೋಷದ ವಿಷಯವೇ ಹೌದು, ಆದರೆ ಅವರು ಇದುವರೆಗೆ ನಮ್ಮನ್ನು ಯಾವುದೇ ವಿಷಯದಲ್ಲೂ ಸಂಪರ್ಕಿಸಿಲ್ಲ. ಪಕ್ಷದ ಪ್ರಮುಖ ಪದಾಧಿಕಾರಿಯಾಗಿರುವ ನನ್ನನ್ನೇ ಕತ್ತಲಲ್ಲಿ ಇಟ್ಟಿರುವುದು ನನಗೆ ತೀವ್ರ ಆಘಾತ ಮತ್ತು ಬೇಸರ ಮೂಡಿಸಿದೆ,” ಎಂದು ಅವರು ತಮ್ಮ ಆಂತರಿಕ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಚುನಾವಣಾ ಆಯೋಗದ (ECI) ಅಧಿಕೃತ ದಾಖಲೆಗಳ ಪ್ರಕಾರ, ಎನ್‌ಸಿಪಿಐ ಅತ್ಯಂತ ಸಣ್ಣ ಮತ್ತು ಪ್ರಾದೇಶಿಕ ಪಕ್ಷವಾಗಿದ್ದು, ಕೇವಲ 2023 ರಲ್ಲಿ ಮಾತ್ರ ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಂಡಿತ್ತು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂಕರೆಲ್ ಎಂಬಲ್ಲಿನ ಸಣ್ಣ ಕಟ್ಟಡವೊಂದರ ವಿಳಾಸವನ್ನು ಈ ಪಕ್ಷದ ಮುಖ್ಯ ಕಚೇರಿ ಎಂದು ಆಯೋಗದ ದಾಖಲೆಗಳಲ್ಲಿ ನಮೂದಿಸಲಾಗಿದೆ.

ವಿಶೇಷವೆಂದರೆ, ಈ ಪಕ್ಷವು 2023 ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ “ರಾಜಕೀಯ ಪಕ್ಷಾಂತರಿಗಳನ್ನು ತಿರಸ್ಕರಿಸಿ” ಎಂಬ ವಿಶಿಷ್ಟ ಘೋಷಣೆಯೊಂದಿಗೆ ಒಟ್ಟು ನಾಲ್ಕು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ನಾಲ್ವರ ಪೈಕಿ ಇಬ್ಬರು ಪಕ್ಷದ ಅಧಿಕೃತ ಚಿಹ್ನೆಯಡಿ ಸ್ಪರ್ಧಿಸಿದ್ದರೆ, ಮತ್ತೊಬ್ಬರು ಪಕ್ಷೇತರರಾಗಿ ಕಣದಲ್ಲಿದ್ದರು ಮತ್ತು ನಾಲ್ಕನೇ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿತ್ತು.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ 2022-23 ರ ಪಕ್ಷದ ವಾರ್ಷಿಕ ಆಡಿಟ್ (ಲೆಕ್ಕಪರಿಶೋಧನೆ) ವರದಿಯ ಪ್ರಕಾರ, ಈ ಪಕ್ಷದ ಆರ್ಥಿಕ ಸ್ಥಿತಿಯೂ ಅತ್ಯಂತ ಆಶ್ಚರ್ಯಕರವಾಗಿದೆ. ತನ್ನ ಹಿತೈಷಿಗಳಿಂದ ದೇಣಿಗೆಯ ರೂಪದಲ್ಲಿ ಪಡೆದ ಒಟ್ಟು 1,13,075 ರೂಪಾಯಿಗಳ ಪೈಕಿ 1.13 ಲಕ್ಷ ರೂಪಾಯಿಗಳನ್ನು ಪಕ್ಷದ ಚಟುವಟಿಕೆಗಳಿಗೆ ಖರ್ಚು ಮಾಡಲಾಗಿದ್ದು, ಸದ್ಯ ಎನ್‌ಸಿಪಿಐ ಬ್ಯಾಂಕ್ ಖಾತೆಯಲ್ಲಿ ಉಳಿದಿರುವ ಒಟ್ಟು ನಗದು ಬಾಕಿ ಕೇವಲ 75 ರೂಪಾಯಿಗಳು ಮಾತ್ರ! ಇಂತಹ ಅತ್ಯಂತ ಸಣ್ಣ ಮತ್ತು ಸಂಪನ್ಮೂಲ ರಹಿತ ಪಕ್ಷವನ್ನೇ ಈಗ ಟಿಎಂಸಿಯ ಬಂಡಾಯ ಸಂಸದರು ಪಕ್ಷಾಂತರ ಕಾಯ್ದೆಯಿಂದ ಪಾರಾಗಲು ತಮ್ಮ ರಾಜಕೀಯ ಆಶ್ರಯ ತಾಣವನ್ನಾಗಿ (Transit Home) ಬಳಸಿಕೊಳ್ಳುತ್ತಿದ್ದಾರೆ.

You cannot copy content of this page

Exit mobile version