ನಾಡಿನ ಹೆಸರಾಂತ ಆಹಾರ ತಜ್ಞ, ಆಹಾರ ವಿಜ್ಞಾನಿ, ಲೇಖಕ, ಕೆ ಸಿ ರಘು ಅವರು ಕಳೆದ ಹದಿನೈದು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದು ಅಕ್ಟೋಬರ್ 15 ರಂದು ಉಸಿರು ನಿಲ್ಲಿಸಿದರು. ಅಕ್ಟೋಬರ್ 15 ‘ಮಹಿಳಾ ಕಿಸಾನ್ ದಿವಸ್’ ಮತ್ತು ಅಕ್ಟೋಬರ್ 16 ‘ವಿಶ್ವ ಆಹಾರ ದಿನ’. ‘ಗ್ರಾಮೀಣ ಮಹಿಳೆಯರು ಅನ್ನ ಸಂಸ್ಕೃತಿಯ ಮೂಲಕ ಆರೋಗ್ಯವನ್ನು ಮರಳಿ ತರಬಲ್ಲರು’ ಎಂದು ನಂಬಿದ್ದ ರಘು, ಕೃಷಿ ಮಹಿಳಾ ದಿನಾಚರಣೆಯ ದಿನವೇ ಮಾತು ನಿಲ್ಲಿಸಿದ್ದು ವಿಷಾದಕರ- ಜಿ ಕೃಷ್ಣಪ್ರಸಾದ್, ನಿರ್ದೇಶಕರು, ‘ಸಹಜ ಸಮೃದ್ಧ’
2000 ನೇ ಇಸವಿಯ ಆರಂಭದ ದಿನಗಳು.
‘ಸಹಜ ಸಮೃದ್ಧ’ ಪ್ರತಿ ತಿಂಗಳು ಸಾವಯವ ರೈತರೊಬ್ಬರ ತೋಟವೊಂದರಲ್ಲಿ ಸಭೆ ನಡೆಸುತ್ತಿತ್ತು. ಸಭೆಗೆ ನಿರಂತರವಾಗಿ ಬರುತ್ತಿದ್ದ ಪತ್ರಕರ್ತ ಗೆಳೆಯ ಮಂಜುನಾಥ್ ‘ಡೆಕ್ಕನ್ ಹೆರಾಲ್ಡ್ ಗೆ ಸಾವಯವ ರೈತರ ತಿಂಗಳ ಸಭೆಯ ಬಗ್ಗೆ ಲೇಖನವೊಂದನ್ನು ಬರೆದರು. ಆಗ ಮೊಬೈಲ್ ಇಲ್ಲದ ಕಾಲ.
ಲೇಖನದಲ್ಲಿದ್ದ ದೂರವಾಣಿಯ ಜಾಡು ಹಿಡಿದು ಕೆ.ಸಿ.ರಘ ರೂಪೇನ ಅಗ್ರಹಾರದ ನಮ್ಮ ಮನೆಗೆ ಬಂದರು. ಬಂದವರು ಬರೋಬ್ಬರಿ ಎರಡು ಘಂಟೆಗಳಿಗೂ ಹೆಚ್ಚು ಹೊತ್ತು ಚರ್ಚಿಸಿದರು. ಕೃಷಿ, ಆರ್ಯುವೇದ, ಅನ್ನದ ರಾಜಕೀಯ, ತತ್ವಶಾಸ್ತ್ರ ಹೀಗೆ ಹತ್ತಾರು ವಿಷಯಗಳು ಚರ್ಚೆಗೆ ಬಂದವು. ಮೊದಲ ಭೇಟಿಯಲ್ಲೇ ಆತ್ಮೀಯರಾದರು. ಈ ಆತ್ಮೀಯತೆ 22 ವರ್ಷ ಅವರ ಜೊತೆ ಒಡನಾಡುವ ಅವಕಾಶ ಕಲ್ಪಿಸಿತು.
ರಘು ಎಂದಾಕ್ಷಣ ನೆನಪಿಗೆ ಬರುವುದು ಅವರ ನಗು. ಕಬ್ಬಿಣದ ಕಡಲೆ ಎನಿಸಿದ ಆಹಾರ ವಿಜ್ಞಾನದ ವೈಜ್ಞಾನಿಕ ಸಂಗತಿಗಳನ್ನು ಸರಳ ಗೊಳಿಸಿ, ಅದಕ್ಕೆ ಹಾಸ್ಯದ ಲೇಪ ಹಚ್ಚಿ ಕೇಳುಗರು ತಲೆದೂಗುವಂತೆ ಮಾಡುವುದು ರಘುರವರಿಗೆ ಸಿದ್ದಿಸಿತ್ತು.
100 ಕೋಟಿ ವಹಿವಾಟಿನ ಪ್ರಿಸ್ಟೀನ್ ಆರ್ಗಾನಿಕ್ಸ್ ಕಂಪನಿ ಕಟ್ಟಿ, ಮಕ್ಕಳ ಆಹಾರವನ್ನು ದೇಶೀಯ ಮತ್ತು ಅಂತರರಾಷ್ರೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದರು. ಉದ್ಯಮ ನಡೆಸುವ ಜಂಜಾಟದ ನಡುವೆಯೇ ಸುತ್ತಾಟ, ಓದು, ಬರವಣಿಗೆ, ಮಾತುಕತೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಪ್ರಿಸ್ಟೀನ್ ಆರ್ಗಾನಿಕ್ಸ್ ನ ಉತ್ಪನ್ನಗಳ ಗುಣಮಟ್ಟ ಯಾವ ಅಂತರರಾಷ್ಟ್ರೀಯ ಬ್ರಾಂಡ್ ಗೂ ಕಡಿಮೆ ಇಲ್ಲದಂತೆ ರೂಪಿಸಿದ್ದರು.
ಸಹಜ ಸಮೃದ್ಧದ ಸಂಪರ್ಕಕ್ಕೆ ಬಂದ ರಘು, ನಮ್ಮ ಸಭೆ ಸಮಾರಂಭಗಳಿಗೆ ತಪ್ಪದೆ ಬರುತ್ತಿದ್ದರು. ದೇಶೀಯ ಆಹಾರದ ಮಹತ್ವವನ್ನು ವೈಜ್ಞಾನಿಕ ಪುರಾವೆಗಳ ಮೂಲಕ ಕಟ್ಟಿಕೊಡುತ್ತಿದ್ದ ರಘು ಮಾತು ಮುಗಿಸುತ್ತಿದ್ದದ್ದು ‘ನಿಮ್ಮ ಅಜ್ಜಿ ನಿಜವಾದ ಆಹಾರ ತಜ್ಞೆ. ಅವರ ಅನ್ನ-/ಆಹಾರದ ಅನುಭವದ ಮುಂದೆ ಆಧುನಿಕ ಆಹಾರ ತಜ್ಞರ ಜ್ಞಾನ ಏನೇನು ಅಲ್ಲ’ ಎಂದು.
ಸಾವಯವ ಜಗತ್ತಿನ ಒಡನಾಟಕ್ಕೆ ಬರಲು ಸಹಜ ಸಮೃದ್ಧದ ಜೊತೆಗಿನ ಬಾಂಧವ್ಯ ಪ್ರೇರಣೆಯಾಯಿತು. ಕೆ.ಸಿ. ರಘುರವರ ಜೊತೆಗೂಡಿ ನಾವು ನಡೆಸಿದ ಪ್ರಯೋಗ, ಪುಸ್ತಕ, ಮೇಳ, ಸುತ್ತಾಟಗಳಿಗೆ ಲೆಕ್ಕವಿಲ್ಲ. ಸಮಯಕ್ಕೆ ಸರಿಯಾಗಿ ಬಂದು ತಮ್ಮ ಮಾತು ಮುಗಿಸಿ ಮಕ್ಕಳಂತೆ ಮೂಲೆಯಲ್ಲಿ ಕೂರುತ್ತಿದ್ದರು. ಯಾವುದೇ ಹಮ್ಮು – ಬಿಮ್ಮು ಇಲ್ಲದ ಸರಳತೆ ಅವರದ್ದು.
ಸಾಂಪ್ರದಾಯಿಕ ಬೆಳೆಗಳನ್ನು ಮುಖ್ಯವಾಹಿನಿಗೆ ತರುವ ನಮ್ಮ ಎಲ್ಲ ಪ್ರಯತ್ನಗಳ ಹಿಂದೆ ರಘುರವರ ಮಾರ್ಗದರ್ಶನ ಇರುತ್ತಿತ್ತು. ಕೆಂಪಕ್ಕಿ, ಸಿರಿಧಾನ್ಯ, ಬಣ್ಣದ ಮುಸುಕಿನ ಜೋಳ, ಗೆಡ್ಡೆ ಗೆಣಸುಗಳನ್ನು ಮಾರುಕಟ್ಟೆಗೆ ಯಶಸ್ವಿಯಾಗಿ ಪರಿಚಯಿಸಲು ಇವರು ನೀಡಿದ ಮಾರ್ಗದರ್ಶನವೇ ಕಾರಣ.
ನಮ್ಮ ಯಾವುದೇ ಹೊಸ ಮಳಿಗೆ, ಮೇಳಗಳಿಗೆ ರಘು ಮುಖ್ಯ ಭಾಷಣಕಾರರು. ಹೊಸ ಚಿಂತನೆ, ಬೆಚ್ಚಿ ಬೀಳಿಸುವ ಅಂಕಿ ಅಂಶಗಳ ಮೂಲಕ ತಮ್ಮ ಅರಿವಿನ ತಿಳಿವನ್ನು ಗ್ರಾಹಕರ ಮುಂದಿಡುತ್ತಿದ್ದರು.
‘ಅರಿವು ಮತ್ತು ಬದುಕು ಬೇರೆ ಅಲ್ಲ ಅನ್ನುವುದುಂಟು. ಇಂದು ಜ್ಞಾನ ಯುಗ, ವಿಜ್ಞಾನ ಯುಗ ಎಲ್ಲಾ ಸರಿಯೆ, ಅದರೆ ಹೊಟ್ಟೆಗೆ ಏನು ತಿನ್ನಬೇಕು ಅನ್ನುವುದರಲ್ಲಿ ಗೊಂದಲ, ಗಾಬರಿ, ಗೋಳು ಕೇಳಿಬರುತ್ತದೆ. ಇದೇ ಸರಿಯಾದ ಸಮಯವೆಂದು ಅನೇಕರು ತಮ್ಮ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಪಾರಂಪರಿಕ ಆಹಾರ ಪದ್ಧತಿ ಮರೆಯಾಗುತ್ತಿದಂತೆ, ಉಳಿಸಿಕೊಳ್ಳುವ ಪ್ರಯತ್ನ ಮತ್ತು ಜವಾಬ್ದಾರಿ ಕೈ ಬಿಟ್ಟಂತೆ, ಸಮಾಜ ಸ್ವಾಸ್ಥ್ಯ ಕಳೆದುಕೊಂಡು ಕಾಯಿಲೆಗಳ ಅಗರವಾಗುತ್ತಿದೆ. ಉತ್ತಮ ಆಹಾರದಿಂದ ತಡೆಗಟ್ಟಬಹುದಾದ ರೋಗಗಳಿಗೆ ಗಳಿಸಿದ, ಉಳಿಸಿದ, ಸಾಲ ಮಾಡಿದ ಹಣ ಸುರಿಯುತ್ತಿದ್ದೇವೆ’ ಸಹಜ ಸಮೃದ್ಧ ಪ್ರಕಟಿಸಿದ ‘ಅನ್ನ ತಿನ್ನಿ’ ಪುಸ್ತಕಕ್ಕೆ ರಘು ಬರೆದ ಮುನ್ನುಡಿಯ ಸಾಲುಗಳಿವು.
2007 ರಲ್ಲಿ ಸಹಜ ಸಮೃದ್ಧ ‘ ಭತ್ತ ಉಳಿಸಿ ಆಂದೋಲನ’ ಆರಂಭಿಸಿದಾಗ ದೊಡ್ಡ ಪ್ರಮಾಣದಲ್ಲಿ ರೈತರು ದೇಸಿ ಭತ್ತ ಬೆಳೆಯಲು ಆರಂಭಿಸಿದರು. ಆ ಕಾಲಕ್ಕೆ ಈಗಿನಂತೆ ಸಾವಯವ ಮಾರುಕಟ್ಟೆ ಇರಲಿಲ್ಲ. ಒಂದು ಕ್ವಿಂಟಾಲ್ ಅಕ್ಕಿ ಮಾರಲು ನಾವು ಇನ್ನಿಲ್ಲದ ಸರ್ಕಸ್ ಮಾಡಬೇಕಿತ್ತು. ಶಿಕಾರಿಪುರದ ಚುರ್ಚುಗುಂಡಿಯ ಸಹಜ ಕೃಷಿಕ ನಂದೀಷ್ ಪ್ರತಿವರ್ಷ ಒಂದೆರೆಡು ಲಾರಿ ಲೋಡ್ ಭತ್ತ ಬೆಳೆಯುತ್ತಿದ್ದರು. ಅದನ್ನು ಮಾರಲಾಗದೆ ನಾವು ಕಂಗಾಲಾದಾಗ ರಘು ನೆರವಿಗೆ ಬಂದರು. ತಮ್ಮ ಪ್ರಿಸ್ಟೀನ್ ಆರ್ಗಾನಿಕ್ಸ್ ಗೆ ಲಾರಿಗಟ್ಟಲೆ ಅಕ್ಕಿ, ರಾಗಿ ಕೊಳ್ಳಲು ಆರಂಭಿಸಿದರು.
ವಿಶೇಷ ಎಂದರೆ ರಘು ಯಾವತ್ತೂ ರೈತರ ಉತ್ಪನ್ನಕ್ಕೆ ಬೆಲೆ ಕಟ್ಟಲಿಲ್ಲ. ಸಹಜ ಸಮೃದ್ಧ ರೈತರ ಜೊತೆ ಚರ್ಚಿಸಿ ಒಂದು ನ್ಯಾಯಯುತವಾದ ಬೆಲೆಯೊಂದನ್ನು ನಿಗದಿಪಡಿಸುತ್ತಿತ್ತು. ರಘು ಅದಕ್ಕೆ ಬದ್ಧರಾಗಿರುತ್ತಿದ್ದರು.
2009 ರಲ್ಲಿ ನಾವು ಕರ್ನಾಟಕದ ಮೊದಲ ರೈತ ಕಂಪನಿ ಸಹಜ ಆರ್ಗಾನಿಕ್ಸ್ ಕಟ್ಟಿದ ಸಂದರ್ಭದಲ್ಲಿ ರಘು ಸಂಸ್ಥಾಪಕ ನಿರ್ದೇಶಕರಾಗಿ ನಮ್ಮ ಜೊತೆಗಿದ್ದರು. 50 ಸಾವಿರ ಷೇರು ಹಣ ಕೊಟ್ಟು ನಮ್ಮನ್ನು ಪ್ರೋತ್ಸಾಹಿಸಿದ್ದರು.
2010 ರಲ್ಲಿ, ಸಿರಿಧಾನ್ಯಗಳ ಬಗ್ಗೆ ಯಾರಿಗೂ ಅಷ್ಟು ಗೊತ್ತಿಲ್ಲದ ಕಾಲದಲ್ಲೇ ಸಹಜ ಸಮೃದ್ಧ ಮತ್ತು ಪ್ರಿಸ್ಟೀನ್ ಆರ್ಗಾನಿಕ್ಸ್ ಜೊತೆಗೂಡಿ ಬೆಂಗಳೂರಿನ ಗಾಂಧಿಭವನದಲ್ಲಿ ‘ಸಿರಿಧಾನ್ಯಗಳ ಮೇಳ’ ವನ್ನು ಆಯೋಜಿಸಿದ್ದೆವು. ಈ ಮೇಳಕ್ಕಾಗಿ ರಘು ಇಂಗ್ಲೀಷಿನಲ್ಲಿ ಸಿರಿಧಾನ್ಯಗಳ ಪುಸ್ತಕವೊಂದನ್ನು ಸಿದ್ಧ ಮಾಡಿದ್ದರು. ಈ ಪುಸ್ತಕ ಬಹಳಷ್ಟು ವರ್ಷಗಳ ಕಾಲ ಆಕರ ಗ್ರಂಥವಾಗಿ, ಸಿರಿಧಾನ್ಯಗಳ ಪ್ರಚಾರಕ್ಕೆ ಮುನ್ನುಡಿ ಬರೆಯಿತು.
ಮುಂದೆ ರಘು ಪ್ರಿಸ್ಟೀನ್ ಆರ್ಗಾನಿಕ್ಸ್ ಮೂಲಕ ಸಿರಿಧಾನ್ಯಗಳ ಹೊಸ ಬ್ರಾಂಡ್ ಹೊರತಂದರು. ಸಕ್ಕರೆಯನ್ನು ಕಡಿಮೆ ಬಳಸಿ ರೂಪಿಸಿದ್ದ ಇವರ ಸಿರಿಧಾನ್ಯ ಉತ್ಪನ್ನಗಳು ಹೊಸ ತಲೆಮಾರಿನ ಉದ್ಯಮಿಗಳಿಗೆ ದಾರಿ ತೋರಿತ್ತು. ಬಹುಶಃ ಇಡೀ ಭಾರತದಲ್ಲಿ ಸಿರಿಧಾನ್ಯಗಳ ಬ್ರಾಂಡ್ ನ್ನು ಮಾರುಕಟ್ಟೆಗೆ ಪರಿಚಯಿಸಿದವರಲ್ಲಿ ರಘು ಮೊದಲಿಗರು.
ದೇಸಿ ಅಕ್ಕಿ ಕ್ಯಾಲೆಂಡರ್, ಸಿರಿಧಾನ್ಯ ಕ್ಯಾಲೆಂಡರ್, ಕೆಂಪಕ್ಕಿ ಸಂತೆ….ಸಹಜ ಸಮೃದ್ಧದ ಹತ್ತಾರು ಕನಸುಗಳನ್ನು ರಘು ನನಸು ಮಾಡಿದರು. ‘ಎಷ್ಟು ಹಣ ಬೇಕು’ ಎಂದಷ್ಟೇ ಕೇಳಿ, ನಾವು ಕೇಳಿದಷ್ಟನ್ನು ಪ್ರಿಸ್ಟೀನ್ ಆರ್ಗಾನಿಕ್ಸ್ ಕಡೆಯಿಂದ ಕೊಡಿಸುತ್ತಿದ್ದರು. ಅದಕ್ಕೊಂದು ಬಿಲ್, ಖರ್ಚಿನ ವಿವರಗಳನ್ನೂ ಕೇಳುತ್ತಿರಲಿಲ್ಲ.
ದೇಸಿ ಅಕ್ಕಿ, ಸಿರಿಧಾನ್ಯ, ಬಣ್ಣದ ಮುಸುಕಿನ ಜೋಳದ ತಳಿಗಳ ಪೋಷಕಾಂಶಗಳ ಲ್ಯಾಬ್ ಟೆಸ್ಟ್ ಭಾರತದಲ್ಲಿ ಅದುವರೆಗೂ ಯಾರೂ ಮಾಡಿದ್ದಿಲ್ಲ. ಅದಕ್ಕೆ ದೊಡ್ಡ ಪ್ರಮಾಣದ ಹಣ ಬೇಕಿತ್ತು. ರಘು ತಮ್ಮ ಪ್ರಿಸ್ಟೀನ್ ಲ್ಯಾಬೋರೇಟರಿ ಯ ಮೂಲಕ ಕೈಗೆಟುಕುವ ದರದಲ್ಲಿ ದೇಸಿ ತಳಿಗಳ ಲ್ಯಾಬ್ ಟೆಸ್ಟ್ ಮಾಡಿಸಿಕೊಟ್ಟರು. ದೇಸಿ ಧಾನ್ಯಗಳ ಪ್ರಚಾರಕ್ಕೆ ಇದು ದೊಡ್ಡ ಮಟ್ಟದಲ್ಲಿ ನಮಗೆ ನೆರವಿಗೆ ಬಂತು. ಒಡಿಶಾ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ರೈತರ ಸಾಂಪ್ರದಾಯಿಕ ತಳಿಗಳ ಪೋಷಕಾಂಶ ವಿಶ್ಲೇಷಣೆಯನ್ನು ಚಿಕ್ಕಾಸು ಪಡೆಯದೆ ಮಾಡಿಸಿಕೊಟ್ಟರು.
ಒಮ್ಮೆ ತುರುವೇಕೆರೆಗೆ ಸಭೆಗೆ ಹೋಗಿದ್ದೆವು. ಹೋಗುವ ಮುನ್ನವೇ ಸಂಜೆ ಕೃಷ್ಣಮೂರ್ತಿ ಬಿಳಿಗೆರೆಯವರ ಮನೆಯಲ್ಲಿ ಉಳಿಯುವುದು ಎಂದು ಮಾತಾಗಿತ್ತು. ಸಭೆ ಮುಗಿಸಿ ಬಿಳಿಗೆರೆಯವರ ಮನೆಯಲ್ಲಿ ಪಾನಗೋಷ್ಠಿ ಆರಂಭಿಸಿದಾಗ ಸಂಜೆ 7 ಘಂಟೆ. ರಘು ಬೆಂಗಳೂರಿನಿಂದ ಒಂದು ಕೇಸ್ ಬಿಯರ್ ಬಾಟಲಿಗಳನ್ನೇ ತಂದಿದ್ದರು. ನಾವಾರೂ ದೊಡ್ಡ ಕುಡುಕರೇನಲ್ಲ. ತಂದ ಬಿಯರ್ ಬಾಟಲಿಗಳ ಕಾಲು ಭಾಗವೂ ಖರ್ಚಾಗಲಿಲ್ಲ. ಮಾತು, ಯೋಜನೆ, ಜೋಕುಗಳನ್ನೇ ಧ್ಯಾನಿಸುತ್ತ ಮೈ ಮರೆತಿದ್ದವರಿಗೆ ರಾತ್ರಿ 10 ಘಂಟೆಯಾದದ್ದು ತಿಳಿದದ್ದು ಬಿಳಿಗೆರೆಯವರ ಮಡದಿ ಮಂಜುಳ ಮೇಡಂ ಊಟಕ್ಕೆ ಕರೆದಾಗಲೇ. ಊಟ ಮುಗಿಸಿ ರಘು ಬೆಂಗಳೂರಿಗೆ ಹೊರಟು ನಿಂತರು. ನಾನು ಮತ್ತು ಅಣೆಕಟ್ಟೆ ವಿಶ್ವನಾಥ್ ಅವರ ಜೊತೆಗೂಡಿದೆವು. ತಮ್ಮ ಹೋಂಡಾ ಸಿಟಿಯನ್ನು ಹಾರಿಸುತ್ತಾ ಒಂದು ಘಂಟೆಯ ಅಂತರದಲ್ಲಿ ಬೆಂಗಳೂರು ತಲುಪಿಸಿದರು. ಅವರು ವಾಹನ ಚಾಲನೆಯ ಕೌಶಲ್ಯ ಕಂಡು ನಿಬ್ಬೆರಗಾದೆವು.
ಕುಲಾಂತರಿ ತಳಿಗಳು ಕರ್ನಾಟಕಕ್ಕೆ ಕಾಲಿಡದಂತೆ ರೂಪಿಸಿದ ‘ಕುಲಾಂತರಿ ಮುಕ್ತ ಕರ್ನಾಟಕ’ದ ಪ್ರಮುಖ ಚಿಂತಕರಾಗಿ, ರಘು ಕುಲಾಂತರಿ ಪರವಾಗಿದ್ದವರ ಬಾಯಿ ಮುಚ್ಚಿಸುತ್ತಿದ್ದರು. ಅವರ ವಾದ ಮಂಡಿಸುವ ಸೊಗಸು, ಹಾಸ್ಯದ ಮಾತುಗಳಿಗೆ ಎದುರಾಳಿಗಳು ಮನಸೋತು ಸುಮ್ಮನಾಗಿ ಬಿಡುತ್ತಿದ್ದರು.
ರಘು ಪುಸ್ತಕ ಪ್ರೇಮಿ. ಅವರ ಮನೆಯಲ್ಲಿ 30 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳ ಭಂಡಾರವೇ ಇತ್ತು. ಅವರ ಓದಿನ ದಾಹ ಅಗಾಧ. ಹಾಗಾಗೇ ಅವರ ಮಾತು, ಅಭಿಪ್ರಾಯಗಳಿಗೆ ಗಟ್ಟಿತನವಿತ್ತು.
ಬೇರೆ ಆಹಾರ ತಜ್ಞರ ರೀತಿ ಬೀಸು ಹೇಳಿಕೆಗಳು, ಒಣ ಮಾತಿನ ಲಹರಿ ಇವರದಲ್ಲ. ಪ್ರತಿಯೊಂದು ಮಾತಿಗೂ ವೈಜ್ಞಾನಿಕ ಪುರಾವೆ ಇಟ್ಟುಕೊಂಡೇ ಮಾತಾಡುತ್ತಿದ್ದರು. ಹಾಸ್ಯದ ಲೇಪ ಹಚ್ಚಿ, ತಮ್ಮ ಮಾತು ಕೇಳುಗರ ಕುತೂಹಲ ಕೆರಳಿಸುವಂತೆ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು.
ಎರಡು ದಶಕಗಳ ಹಿಂದೆಯೇ ‘Food and nutrition world’ ಎಂಬ ಇಂಗ್ಲೀಷ್ ಮಾಸ ಪತ್ರಿಕೆಯನ್ನು ಹೊರತಂದ ಸಾಹಸಿ ಕೆ.ಸಿ.ರಘು. ರಾಷ್ಟ್ರೀಯ ಪತ್ರಿಕೆಗಳ ಗುಣಮಟ್ಟಕ್ಕೆ ಸಾಟಿಯಾಗುವಂತೆ ಪತ್ರಿಕೆ ಇರುತ್ತಿತ್ತು. ತಾವೇ ಸಂಪಾದಕ, ಪ್ರಕಾಶಕರಾಗಿ ಮೂರು ವರ್ಷಗಳ ಕಾಲ ಪತ್ರಿಕೆ ಮುನ್ನಡೆಸಿದರು. ಈ ಪತ್ರಿಕೆಗೆ ಸಾಕಷ್ಟು ಫೋಟೋಗಳನ್ನು ನೀಡಿದ ಖುಷಿ ನನ್ನದು.
ಪ್ರಚಾರ ಮತ್ತು ಮಾರುಕಟ್ಟೆಯನ್ನು ಗೆಲ್ಲಲಾಗದೆ ಪತ್ರಿಕೆ ಕಣ್ಣುಮುಚ್ಚಿತು. ರಘುರವರ ಚಿಂತನೆ ಮತ್ತು ಬರವಣಿಗೆಯ ಸೊಗಸನ್ನು ನೋಡಬೇಕೆಂದರೆ ಈ ಮಾಸಿಕದ ಪ್ರತಿಗಳನ್ನು ತಿರುವಿ ಹಾಕಬೇಕು.
‘ನಿಮ್ಮ ಆಲೋಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಚೆಂದದ ಪುಸ್ತಕ ಬರೆಯಿರಿ. ಅದು ದಾಖಲಾಗಬೇಕು’ ಪ್ರತಿ ಬಾರಿ ಅವರ ಜೊತೆ ಫೋನಿನಲ್ಲಿ ಮಾತಾಡಿದಾಗಲೆಲ್ಲಾ ನಾನು ಮಾತು ಮುಗಿಸುತ್ತಿದ್ದದ್ದು ಈ ಒತ್ತಾಯದಿಂದಲೇ. ‘ಹೌದು…ಹೌದು…ಬರೀಬೇಕು’ ಎಂದು ಸೀರಿಯಸ್ ಆದಂತೆ ಮಾತನಾಡಿ ಮರೆತು ಬಿಡುತ್ತಿದ್ದರು.
ರಘು ಇದ್ದಕಡೆ ನಗುವಿನ ಬುಗ್ಗೆ ಸಾಮಾನ್ಯ. ಪ್ರತಿ ಮಾತಿಗೂ ‘ಪಂಚ್’ ಕೊಟ್ಟು ಮಾತಾಡುತ್ತಿದ್ದ ಅವರು ಹಾಸ್ಯದ ಹೊನಲು ಹರಿಸುತ್ತಿದ್ದರು. ಆತ್ಮೀಯರ ಕಿವಿಯಲ್ಲಿ ಪೋಲಿ ಜೋಕ್ ಉಸುರಿ, ಅವರ ಮುಖ ರಂಗೇರಿಸುತ್ತಿದ್ದರು.
ಯಾರೊಂದಿಗೂ ಜಗಳವಾಡದ, ಸಮಾಜ ಮುಖಿ ಕಾರ್ಯಗಳ ಜೊತೆಗಿರುತ್ತಿದ್ದ, ಅನ್ನ- ಆಹಾರದ ಬಗ್ಗೆ ಅಪಾರ ತಿಳುವಳಿಕೆಯಿದ್ದ ರಘುರವರಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಬಂದಾಗ ನಮಗೆ ನಂಬಲಾಗಲಿಲ್ಲ.
ಕಳೆದ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಮುಂದಾದಾಗ ಜನಸಾಮಾನ್ಯರಿಗೆ ಅರಿವು ಮೂಡಿಸಲು ವೆಬಿನಾರ್ ಏರ್ಪಡಿಸಿದ್ದೆವು. ಆ ಸಂದರ್ಭದಲ್ಲಿ ರಘು ಮುಖ್ಯ ಭಾಷಣಕಾರರಾಗಿದ್ದರು. ಅವರ ಜೊತೆ ಮಾತಾಡಿದ್ದು ಅದೇ ಕೊನೆ.
ಏಪ್ರಿಲ್ ನಲ್ಲಿ ಕ್ಯಾನ್ಸರ್ ಬಂದಿರುವ ಸಂಗತಿ ಗೊತ್ತಾಗುವ ಹೊತ್ತಿಗೆ ಅದು ಅದಾಗಲೇ ಮೆದುಳಿಗೆ ಹಬ್ಬಿತ್ತು. ತಮ್ಮ ಪ್ರಯೋಗಗಳಿಗೆ ತಮ್ಮನ್ನೇ ಒಡ್ಡಿಕೊಳ್ಳುತ್ತಾ, ಕ್ಯಾನ್ಸರ್ ಗೆಲ್ಲುವ ದಾರಿ ಹುಡುಕ ತೊಡಗಿದರು.
‘ವಿದೇಶದಿಂದ ತರಿಸಿದ ಔಷಧಿ ಪರಿಣಾಮಕಾರಿಯಾಗಿದೆ. ಈಗ ಮೊದಲಿನಂತಾಗಿದ್ದಾರೆ’ ಎಂಬ ಸುದ್ದಿ ಬಂದಾಗ ನಾವೆಲ್ಲಾ ನಿರಾಳವಾದೆವು. ಅವರು ಮತ್ತೆ ಮಾತುಕತೆ, ಸಭೆಗಳಿಗೆ ಹೋಗಲು ಶುರು ಮಾಡಿದರು. ಅದೆಲ್ಲಾ ಕೆಲವೇ ತಿಂಗಳು ಮಾತ್ರ. ಕಳೆದ ಹದಿನೈದು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಅಕ್ಟೋಬರ್ 15 ರಂದು ಉಸಿರು ನಿಲ್ಲಿಸಿದರು. ಅಕ್ಟೋಬರ್ 15 ‘ಮಹಿಳಾ ಕಿಸಾನ್ ದಿವಸ್’ ಮತ್ತು ಅಕ್ಟೋಬರ್ 16 ‘ವಿಶ್ವ ಆಹಾರ ದಿನ’. ‘ಗ್ರಾಮೀಣ ಮಹಿಳೆಯರು ಅನ್ನ ಸಂಸ್ಕೃತಿಯ ಮೂಲಕ ಆರೋಗ್ಯವನ್ನು ಮರಳಿ ತರಬಲ್ಲರು’ ಎಂದು ನಂಬಿದ್ದ ರಘು, ಕೃಷಿ ಮಹಿಳಾ ದಿನಾಚರಣೆಯ ದಿನವೇ ಮಾತು ನಿಲ್ಲಿಸಿದ್ದು ವಿಷಾದಕರ.
ರಘು ಅವರು ತೀರಿ ಹೋದ ಸುದ್ದಿ ಬಂದಾಗ ಅವರ ಅಂತಿಮ ದರ್ಶನಕ್ಕೆ ನಾನು ಹೋಗಬಾರದೆಂದು ನಿರ್ಧರಿಸಿದೆ. ಹಾಸ್ಯ ಚಟಾಕಿ ಹಾರಿಸುತ್ತಾ, ನಗು ಚೆಲ್ಲುತ್ತಾ ನಮ್ಮ ಜೊತೆಗಿದ್ದ ರಘು ಅವರ ನೆನಪು ನನ್ನ ಜೊತೆ ಭದ್ರವಾಗಿರಬೇಕಿತ್ತು.
ಹೋಗಿ ಬನ್ನಿ ರಘು. ಕೆಂಪಕ್ಕಿ, ಕರಿ ನವಣೆ, ಕೊರಲೆ, ಬಣ್ಣದ ಮುಸುಕಿನ ಜೋಳ ನಿಮ್ಮ ನೆನಪುಗಳನ್ನು ಸದಾ ಜೀವಂತವಾಗಿಟ್ಟಿರುತ್ತವೆ.
ಜಿ. ಕೃಷ್ಣಪ್ರಸಾದ್
ನಿರ್ದೇಶಕರು, ‘ಸಹಜ ಸಮೃದ್ಧ’
ಇದನ್ನೂ ಓದಿ – ಏಕ ಸಂಸ್ಕೃತಿಯ ಚಕ್ರವ್ಯೂಹದೊಳಗೆ ಭಾರತದ ನೈಜ ದುರ್ಬಲ ಬುಡಕಟ್ಟುಗಳು