Wednesday, December 24, 2025

ಸತ್ಯ | ನ್ಯಾಯ |ಧರ್ಮ

ಡಿಕೆಶಿ ನಿರ್ಲಕ್ಷ್ಯದಿಂದ ಕಾಂಗ್ರೆಸ್‌ ಕೆಲವು ಸ್ಥಾನಗಳನ್ನು ಕಳೆದುಕೊಂಡಿತು: ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಗಂಭೀರ ದೂರು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ಬೀದಿಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯ ವಿರುದ್ಧ ಕೆ.ಎನ್. ರಾಜಣ್ಣ ಹೈಕಮಾಂಡ್ ಮೆಟ್ಟಿಲೇರಿದ್ದು, ಇದು ಪಕ್ಷದೊಳಗೆ ಸಂಚಲನ ಮೂಡಿಸಿದೆ.

ಚುನಾವಣಾ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಮತಗಳ್ಳತನ ನಡೆದಿದೆ ಎನ್ನಲಾದ ಗಂಭೀರ ವಿಷಯದ ಕುರಿತು ಡಿ.ಕೆ. ಶಿವಕುಮಾರ್ ಅವರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ರಾಜಣ್ಣ ತಿಳಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರು ಈ ಮಾಹಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂಬುದು ರಾಜಣ್ಣ ಅವರ ಪ್ರಮುಖ ಆರೋಪ. ಕಳೆದ ನವೆಂಬರ್ 17 ರಂದು ಎಐಸಿಸಿ ನಾಯಕ ರಾಹುಲ್ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ರಾಜಣ್ಣ ಈ ಎಲ್ಲಾ ಅಂಶಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ.

ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರು ಅಂದೇ ಎಚ್ಚೆತ್ತುಕೊಂಡು ಈ ಮತಗಳ್ಳತನದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದರೆ ಅಥವಾ ಪಕ್ಷದ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದರೆ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಿತ್ತು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರ ಬೇಜವಾಬ್ದಾರಿತನದಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವುದು ಅವರ ವಾದ.

ರಾಹುಲ್ ಗಾಂಧಿಯವರಿಗೆ ಬರೆದಿರುವ ಈ ಪತ್ರ ಈಗ ಸಾರ್ವಜನಿಕವಾಗಿ ಬಹಿರಂಗವಾಗಿದ್ದು, ಕೈ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಸರ್ಕಾರದ ಸಚಿವರೊಬ್ಬರೇ ನೇರವಾಗಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ದೂರು ನೀಡಿರುವುದು ಹಿರಿಯ ನಾಯಕರ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಪತ್ರದ ರಾಜಕೀಯ ಪರಿಣಾಮಗಳು ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page