Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕಕ್ಕೆಪದವು ಸರ್ಕಾರಿ ಶಾಲೆಯ ಮಕ್ಕಳ ಸಾಧನೆ: ಗ್ರಾಮಸ್ಥರಿಗೆ ಸಂಭ್ರಮವೋ ಸಂಭ್ರಮ

ಬಂಟ್ವಾಳ/ ದ.ಕ: ಹಳ್ಳಿಯ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಪ್ರೋತ್ಸಾಹ ಸಿಕ್ಕಿದರೆ ಎಂತಹ ಅದ್ಭುತ ಸಂಭವಿಸಬಲ್ಲದು ಎಂಬುದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಕ್ಕೆಪದವು ಗ್ರಾಮದ ಸರ್ಕಾರಿ ಶಾಲೆಯ ಐವರು ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಮೊನ್ನೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿ ಇಡೀ ಊರು ಅಥವಾ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲದೇ ಮೈಸೂರು ವಿಭಾಗಕ್ಕೇ ಹೆಮ್ಮೆ ತಂದಿದ್ದಾರೆ. ಸಾಬಿಕ್, ಶೋಭಿತ್, ಹೇಮಂತ್, ಚಿಂತನ್ ಮತ್ತು ಸಫ್ವಾನ್ – ಇವರೇ ಎಲ್ಲರೂ ಹೆಮ್ಮೆಪಡುವ ಸಾಧನೆ ಮಾಡಿರುವ ಬಾಲಕರು. ಇವರಲ್ಲಿ ಇಬ್ಬರು ದಲಿತ ಕುಟುಂಬ ಹಾಗೂ ಇಬ್ಬರು ಮುಸ್ಲಿಂ ಕುಟುಂಬಗಳ ವಿದ್ಯಾರ್ಥಿಗಳು ಎನ್ನುವುದು ವಿಶೇಷ ಇದರಲ್ಲಿ ಸಫ್ವಾನ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಡೀ ರಾಜ್ಯವೇ ಸಂಭ್ರಮಪಡುವಂತ ಸಾಧನೆ ಮಾಡಿದ್ದಾನೆ. ಚಿಂತನ್ ಬಂಟ್ವಾಳದ ಅಳಕೆ ಸತ್ಯಸಾಯಿ ಶಾಲೆಯ ವಿದ್ಯಾರ್ಥಿಯಾಗಿದ್ದು ಜಿಲ್ಲಾ ಮಟ್ಟದಿಂದ ಈ ಐವರೂ ಪ್ರತಿನಿಧಿಸುತ್ತಾ ಬಂದಿದ್ದಾರೆ.

ಇದೀಗ ಕಕ್ಕೆ ಪದವು ಗ್ರಾಮದಲ್ಲಿ ಊರವರ ಸಂಭ್ರಮಕ್ಕೆ ಪಾರವೇ ಇಲ್ಲ. ವಿಜಯಿಗಳಾಗಿ ಊರಿಗೆ ಮರಳಿದ ಈ ವಿದ್ಯಾರ್ಥಿಗಳನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡ ಗ್ರಾಮಸ್ಥರು ಹೂವಿನ ಹಾರಗಳನ್ನು ಹಾಕಿ, ತೆರೆದ ಜೀಪ್‌ ಮೇಲೆ ಮೆರವಣಿಗೆ ಮಾಡಿ ತಮ್ಮ ಖುಶಿಯನ್ನು ವ್ಯಕ್ತಪಡಿಸಿದ್ದಾರೆ.

ಧೈರ್ಯ ಇರಲಿಲ್ಲ

ಆರಂಭದಲ್ಲಿ ವಲಯ ಮಟ್ಟದಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಈ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಗಳಿಸಿದ್ದರು. ಹೀಗಾಗಿ ಮಕ್ಕಳನ್ನು ತಾಲೂಕು ಮಟ್ಟಕ್ಕೆ ಕಳಿಸುವ ಧೈರ್ಯವಿಲ್ಲದೆ ಹಿಂಜರಿಕೆಯಿಂದಲೇ  ದೊಡ್ಡ ಮನಸ್ಸು ಮಾಡಿ ತಾಲೂಕು ಮಟ್ಟದಲ್ಲಿ ಆಡಿಸಿದ್ದರು. ಮಕ್ಕಳ ನಿಜವಾದ ಆಟ ಗೊತ್ತಾಗಿದ್ದು ಅಲ್ಲೇ.  ಎಲ್ಲಾ ಎದುರಾಳಿ ತಂಡಗಳನ್ನೂ \ಸೋಲಿಸಿ ಕಕ್ಕೆಪದವು ಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿಬಿಟ್ಟರು. ಆಗ ತನ್ನ ವಿದ್ಯಾರ್ಥಿಗಳ ಸಾಮರ್ಥ್ಯ ಅರಿತ ಶಾಲಾ ದೈಹಿಕ ಶಿಕ್ಷಕಿ ವಿಶಾಲಾಕ್ಷಿ ಮಕ್ಕಳಿಗೆ ಮತ್ತಷ್ಟು ತಾಲೀಮು ಕೊಟ್ಟು ಜಿಲ್ಲಾ ಮಟ್ಟದಲ್ಲೂ ಆಡಿಸಿದರು. ಅಲ್ಲೂ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಎಲ್ಲರ ಸಹಕಾರ

ಇದೀಗ ಈ ಮಕ್ಕಳ ಸಾಧನೆಗೆ ಇಂಬು ನೀಡಿದ ದೈಹಿಕ ಶಿಕ್ಷಕರು ಮತ್ತು ಶಾಲೆಯ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಶ್ರಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಬಡ್ಡಿ ತಂಡದ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಟ್ಟ ಆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಆಸಿದ್ ,ಮಕ್ಕಳಿಗೆ ಕಬಡ್ಡಿ ಕೋಚ್ ಕೊಡುತ್ತಿದ್ದ ಕಾರ್ತಿಕ್ ಹಾಗೂ ಗಣೇಶ್  ವಸತಿ ಶಾಲೆಯಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಿ ಕೊಟ್ಟ ತಾಲೂಕು ನೌಕರ ಸಂಘದ ಅಧ್ಯಕ್ಷರು ಶ್ರೀ ಉಮಾನಾಥ ರೈ ,ಮೇರವು ಹಾಗೂ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ ಟ್ರಾಕ್ ಶೂಟ್ ವ್ಯವಸ್ಥೆ ಮಾಡಿಸಿದ ಅಳಿಕೆಯ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ ಶ್ರೀ ರೂಪಿತ್ ಎಲ್ಲರೂ ತಮ್ಮ ಅಳಿಲು ಸೇವೆಯ ಮೂಲಕ ಈ ಮಕ್ಕಳ ಸಾಧನೆಗೆ ಸಹಕರಿಸಿದ್ದಾರೆ.

ಭೇಷ್‌ ಮಕ್ಕಳೇ ಭೇಷ್‌

ನಿಮ್ಮ ಊರಿನ ವಿಶೇಷ ಸುದ್ದಿ ಇದ್ದಲ್ಲಿ- 9108715078 ಸಂಖ್ಯೆಗೆ ಸಂಪರ್ಕಿಸಿ.

Related Articles

ಇತ್ತೀಚಿನ ಸುದ್ದಿಗಳು