Home ರಾಜ್ಯ ಕಲ್ಬುರ್ಗಿ ಪೋಕ್ಸೊ ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆದ ಆರೋಪ: ಕಲಬುರಗಿಯಲ್ಲಿ ಎಎಸ್‌ಐ, ಮಹಿಳಾ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ!

ಪೋಕ್ಸೊ ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆದ ಆರೋಪ: ಕಲಬುರಗಿಯಲ್ಲಿ ಎಎಸ್‌ಐ, ಮಹಿಳಾ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ!

0

ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್-ಇನ್ಸ್‌ಪೆಕ್ಟರ್ (ASI) ಶಿವಶರಣಪ್ಪ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಜ್ಯೋತಿ ಅವರು ಪೋಕ್ಸೊ ಪ್ರಕರಣದ ಸಂತ್ರಸ್ತೆಯ ತಾಯಿಯಿಂದ ₹10,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿಯ ತಾಯಿಗೆ ಕಾನೂನು ನೆರವು ನೀಡುವುದು ಹಾಗೂ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ದೋಷಾರೋಪ ಪಟ್ಟಿ ಸಿದ್ಧಪಡಿಸಿಕೊಡುವ ನೆಪದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಜ್ಯೋತಿ ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೂ ಮುನ್ನ ಅವರು ಸರ್ಕಾರಿ ಅಭಿಯೋಜಕರ ಶುಲ್ಕ ಎಂಬ ನೆಪದಲ್ಲಿ ಸಂತ್ರಸ್ತೆಯ ತಾಯಿಯಿಂದ ₹1,000 ಮುಂಗಡ ಹಣವನ್ನೂ ಪಡೆದಿದ್ದರು.

ಲಂಚ ನೀಡಲು ಇಷ್ಟವಿಲ್ಲದ ಮಹಿಳೆ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಠಾಣೆಯಲ್ಲೇ ₹10,000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಕಾನ್‌ಸ್ಟೇಬಲ್ ಜ್ಯೋತಿ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎಎಸ್‌ಐ ಶಿವಶರಣಪ್ಪ ಅವರನ್ನು ಆಳಂದ ತಾಲ್ಲೂಕಿನ ಕಡಗಂಚಿ ಬಳಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಅರುಣ್‌ಕುಮಾರ್ ಮುರಗುಂದಿ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

You cannot copy content of this page

Exit mobile version