Thursday, June 20, 2024

ಸತ್ಯ | ನ್ಯಾಯ |ಧರ್ಮ

ಕಳ್ಳುಬಳ್ಳಿ – ೩ : ಮದುವೆಯ ಈ ಬಂಧ

ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು

ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ ಋಣವಿರಬೇಕು ಎನ್ನುತ್ತಾರೆ.  ಸಮಾಜ ಗಂಡು ಹೆಣ್ಣಿನ ಮನೋಕಾಮನೆಗಳ ಪೂರೈಕೆಗಾಗಿಯೇ ವಿಧಿಸೂತ್ರವಾದ ಮದುವೆ ಎಂಬ ವ್ಯವಸ್ಥೆ ಹುಟ್ಟು ಹಾಕಿತು. 

ಮದುವೆಯ ಅನುಬಂಧವೇ ಅಂಥದ್ದು.  ಕ್ಷಮೆ ಮತ್ತು ಕ್ಷಮಿಸುವ ಔದಾರ್ಯ ದೊಡ್ಡದು.  ಸುಖ ದುಃಖ ಏನೇ ಬರಲಿ ಎಲ್ಲದರಲ್ಲೂ ಈಸಬೇಕು ಇದ್ದು ಜೈಸಬೇಕು.

ಒಂದು ಗಂಡಿನ ಪುಸಲಾಯಿಸುವಿಕೆ ಇಲ್ಲದೆ ಹೆಣ್ಣೊಬ್ಬಳು ಹದ್ದು ಮೀರುವುದಿಲ್ಲ ಎನ್ನುವ ಮಾತಿದೆ.  ಗಂಡು ಹೆಣ್ಣಿನ ಆಕರ್ಷಣೆಗೆ ಬೀಳುವ ವಯಸ್ಸು ಹದಿನಾರರದ್ದು.  ಆದರೂ ಸಹ ಕಾಲದಿಂದ ಕಾಲಕ್ಕೆ ಈ ಆಕರ್ಷಣೆಯ ಬೆಂಕಿಯನ್ನು ತಾಳ್ಮೆ, ಸಂಯಮಗಳಿಂದ ನಂದಿಸುತ್ತಿರಬೇಕು.

ಗಂಡಿರಲಿ ಅಥವಾ ಹೆಣ್ಣಿರಲಿ, ಹೊಸ್ತಿಲು ದಾಟಿದವರು ಕೊಲೆಯಾಗಲೇಬೇಕೆ? ಎಡಕಲ್ಲು ಗುಡ್ಡದ ಮೇಲೆ ಎಂಬ‌ ಸಿನೆಮಾ ದಲ್ಲಿ ಯುವಕನ ಪ್ರಲೋಬನೆಗೆ ಗುರಿಯಾದ ವಿವಾಹಿತ ಸ್ತ್ರೀ ಆತನೊಂದಿಗೆ ಕೈ ಜೋಡಿಸಲಾರದೆ ಸಾವಿನ ದಾರಿ ಹಿಡಿಯುತ್ತಾಳೆ.  ಗಂಡನ ಕ್ಷಮಿಸುವ ಔದಾರ್ಯ ಆಕೆಗೆ ತೃಪ್ತಿ ನೀಡಲಿಲ್ಲ. 

ಗಂಡಾಗಲಿ ಹೆಣ್ಣಾಗಲಿ ಆಸೆಗೆ ಅಂಕುಶ  ಮಾಡಿಟ್ಟುಕೊಳ್ಳಬೇಕು.  ಸಮಾಜದ ಇತಿಮಿತಿಗಳನ್ನು ಅರಿತುಕೊಂಡು ಒಳ್ಳೆಯ ರೀತಿಯಲ್ಲಿ ಬದುಕುವ ಪ್ರಯತ್ನ ಮಾಡಬೇಕು.

ಬಂದದ್ದೆಲ್ಲಾ ಬರಲಿ, ಭಗವಂತನ ದಯವೊಂದಿರಲಿ ಎನ್ನುವ ಮನೋಭಾವ ಸ್ವಲ್ಪ ಮಟ್ಟಿಗೆ ಮಾನಸಿಕ ಸ್ಥಿತ್ಯಂತರವನ್ನು ಹಗುರ ಇರಿಸುವುದು.  ದೇವರು, ನಂಬಿಕೆ ಅವರವರ ವೈಯಕ್ತಿಕ ಜೀವನದ ವಿಚಾರ.   ಆಗುವುದು ಆಗೇ ತೀರುತ್ತದೆ.

ಒಮ್ಮೆ ಆದದ್ದು ಜೀವನಪೂರ್ತಿ ಆಗಲೇಬೇಕು ಎಂಬುದಿಲ್ಲ.  ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದ ದೋಣಿಯನ್ನು ನ್ಯಾಯಯುತವಾಗಿ ನಡೆಸಿಕೊಂಡು ಹೋಗುವ ಅಧಿಕಾರವಿದ್ದೇ ಇದೆ.  ಅದರ ಜೊತೆಗೆ ಲೀವ್ ಅಂಡ್ ಲೆಟ್ ಲೀವ್ ಎನ್ನುವ ಬಹುದೊಡ್ಡ ಮಾತನ್ನು ಸಹ ಅನುಸರಿಸಬೇಕಾದ ಅಗತ್ಯವಿದ್ದೇ ಇದೆ.  ಕೆವಲ ದೇಹ ಸುಖ ಪಡೆಯಲು ಕೊಲೆ ಮುಂತಾದವು ನಡೆಸುವುದು ಹೇಯ.

ತಮ್ಮ ಚಿತ್ತ ಚಾಂಚಲ್ಯ, ದೇಹದ ಚಪಲಕ್ಕಾಗಿ ಮತ್ತೊಬ್ಬರ ಕುಟುಂಬದ ಸದಸ್ಯರನ್ನ ಕೊಲೆ ಮಾಡುವ, ಕೊಲೆ ಮಾಡುವ ಮಟ್ಟಕ್ಕೆ ಹೋಗುವುದು ಬಹಳ ಹೀನ ಕೃತ್ಯ.

ಮನಸ್ಸನ್ನು ಹರಿಯ ಬಿಟ್ಟಷ್ಟು ಹರಿಯುತ್ತದೆ.  ಹಳ್ಳ ಕೊಳ್ಳ, ದಿಣ್ಣೆ, ತಗ್ಗು ಎಲ್ಲೆಡೆ ಹರಿದಾಗ ಮನಸ್ಸಿಗೆ ಅಣೆಕಟ್ಟಿನ   ಶಕ್ತಿ ಇರುವುದಿಲ್ಲ.

ಇಂದು ಇದ್ದು ನಾಳೆ ಇಲ್ಲವಾಗುವ ಯಕಶ್ಚಿತ್ ಬದುಕಿನಲ್ಲಿ ದೇಹ ಸುಖಗಳಿಗಾಗಿ ಹಿಂದೆಬೀಳುವುದು, ಅದನ್ನೇ ಮುಂದುವರೆಸಲು ನೋಡುವುದು ಇವೆಲ್ಲಾ ಒಂದು ಹಂತದ ಮನಸ್ಥಿತಿ.  ಸ್ವಲ್ಪ ಬೆಳೆದು ಆ ಮನಸ್ಥಿತಿ ಬಿಟ್ಟು ಹೊರಬಂದು ನೋಡಿದಾಗಲೇ ತಾವೆಲ್ಲಿ ಇದ್ದೆವು ಎಂಬುದು ಅರಿವಾಗೋದು.

ಕೇವಲ ದೇಹ ಪ್ರೀತಿಗೆ ಬಿದ್ದು ಉಳಿದ ಸಂಬಂಧ ಹಾಳು ಮಾಡಿಕೊಳ್ಳಲು ಯತ್ನಿಸುವುದು ಮೂರ್ಖತನದ ಪರಮಾವಧಿ.  ಇಂಥದ್ದರಲ್ಲೇ ಖುಷಿ ಪಡೆಯುವವರು ವಿವಾಹಕ್ಕೆ ಒಗ್ಗಿಕೊಳ್ಳುವುದು ದುಸ್ತರ.  ಆದರೆ ಅವರಿಗೆ ಸಿಗುವ ಆತ್ಮತೃಪ್ತಿ ಎಂತದ್ದೋ, ಅದನ್ನು ಅವರೇ ಅರ್ಥಮಾಡಿಕೊಳ್ಳಲು ಯತ್ನಿಸಬೇಕು.

ತೀರಾ ಪರಸಂಗಕ್ಕೆ ಎಳಸುವುದು ವಿಕೃತಿಯೇ ಸರಿ.  ಪರಸಂಗದ ಗೆಂಡೆತಿಮ್ಮ ಸಿನೆಮಾದಲ್ಲಿ ಮುಗ್ದ ವ್ಯಕ್ತಿ ಪತ್ನಿಯ ವ್ಯಭಿಚಾರ ಸಹಿಸಲಾರದೆ ಸತ್ತೆ ಹೋದ.  ಹೀಗೆ ಸತ್ತವರ ಸಂಖ್ಯೆ ದೊಡ್ಡದಿದೆ.  ತಾವು ಧರ್ಮ ಅರ್ಥ ಕಾಮ‌ ಮೋಕ್ಷಕ್ಕಾಗಿ ನಂಬಿದ್ದ ಸಂಗಾತಿಯ ದೋಖಾ ಸಹಿಸದ ಮುಗ್ದ ಮನಸ್ಸುಗಳಿಗೆ ತಕ್ಕ ಸಂಗಾತಿಯಾಗಿ ನಡೆದುಕೊಳ್ಳುವ ಅವಶ್ಯಕತೆ ಬಹಳ ಇದೆ. 

ವರ್ತಮಾನದ ತಲ್ಲಣವೆಂದರೆ ಅಪಮೌಲ್ಯಗಳನ್ನೇ ವಿಜೃಂಭಿಸುವುದು.  ಹೀಗೇ ಒಬ್ಬರು ವಿವಾಹದ ನಂತರವೂ ಮತ್ತೊಂದು ಸಂಬಂಧ ಇರಿಸಿಕೊಂಡು ಎರೆಡನೇ ಮದುವೆಯಾದರು.  ಎರಡನೇ ಪತ್ನಿಯ ವಿವಾಹ ಗುಟ್ಟಾಗಿತ್ತು.  ಆಕೆ ಬೇಕೆಂತಲೇ ಫೇಸ್‌ಬುಕ್‌ ಮೊದಲಾದವುಗಳಲ್ಲಿ ತಮ್ಮ ಪತಿಯೊಂದಿಗೆ ಇದ್ದ ಫೋಟೋಗಳನ್ನು ಹಂಚಿಕೊಂಡು ಮೊದಲ ಪತ್ನಿಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದರು. 

ಭಾರತೀಯ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಎಂದೋ ನಿಷೇಧಗೊಂಡಿದೆ.  ಕಾನೂನು ಬೆಂಬಲವೂ ಇದ್ದಕ್ಕಿದೆ.  ಹೀಗಿರುವಾಗ ಕಾನೂನಿನ ಚೌಕಟ್ಟು ಮೀರಿ ಬೇಷರತ್ತು ಸಂಬಂಧ ಇರಿಸಿಕೊಂಡು ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದು ಅದೆಷ್ಟು ಸರಿ?

ಕಾನೂನು ಲೀವ್ ಇನ್‌ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ಪಾಲಕರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಿದೆ.  ಮಕ್ಕಳು ಹೇಳಿ ಕೇಳಿ ಹುಟ್ಟುವುದಿಲ್ಲ.‌‌  ಹುಟ್ಡಿದ ಮೇಲೆ ಎಲ್ಲರೂ ಮಕ್ಕಳೇ., 

ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು.

ಒಂದು‌ ಗಂಡು ಮತ್ತೊಂದು ಹೆಣ್ಣು ವಿವಾಹದ ಪರಮಾರ್ಥಕ್ಕಾಗಿ ಸೇರುವುದು, ಬದುಕುವುದು ಅತ್ಯಂತ ಗೌರವಿಸಲ್ಪಡುವ ಮದುವೆ ಎಂಬ ವ್ಯವಸ್ಥೆಗೆ ತನ್ನದೇ ಆದ ಅಸ್ತಿತ್ವ ಇದೆ.  ಅದನ್ನು ಕಾನೂನು ಮಾನ್ಯ ಮಾಡಿದೆ.  ಉಳಿದದ್ದೆಲ್ಲಾ ಕಾನೂನಿನ ಮೂಲಕ ಶೂನ್ಯ ಅಥವಾ ಅನೂರ್ಜಿತ ಎನಿಸುವುದು. 

ನಳಿನಾ ಚಿಕ್ಕಮಗಳೂರು

Related Articles

ಇತ್ತೀಚಿನ ಸುದ್ದಿಗಳು