‌ಕಳ್ಳುಬಳ್ಳಿ – 7: ಅಡುಗೆ ಮನೆಗೆ ಹುಡುಗಿಯರು ಬೇಕು

ಮದುವೆಯಾದ ಪುಟ್ಟ ವಯೋಮಾನದ ಗೆಳತಿ ವಿವಾಹವಾದಾಗಿನಿಂದ ಮನೆಯೊಳಗೆ ಕೊಳೆಯುವ ಪರಿಸ್ಥಿತಿ ಅನುಭವಿಸಿ ಕಡೆಗೆ ಮರಳಿ ಚಿಕ್ಕಮಗಳೂರಿನ ತಂದೆ ಮನೆಗೆ ಮರಳಿದ್ದಾಳೆ.  ‘ಅಕ್ಕಾ, ಮದ್ವೆಯಾದ್ವಿ ಅಂದ್ರೆ ಬರೀ ಮನೆಗೆಲಸ ಮಾಡಿಕೊಂಡು ಇರಬೇಕಾ?  ನಮ್ದು ಅಂತ ಆಸೆ ಆಕಾಂಕ್ಷೆಗಳೇ ಇರಬಾರದಾ?’ ಎಂದು‌ ಮುಗ್ಧವಾಗಿ ಕೇಳುವ ಅವಳ ಪ್ರಶ್ನೆಗೆ ಉತ್ತರವೇನೋ ಕೊಡಬಹುದು.  ಆದರೆ ಜೀವನದಲ್ಲಿ ಬೇಸತ್ತು ವಿಚ್ಛೇದನ ಪಡೆಯಲು ಕಾಯುತ್ತಿರುವ ಅವಳಿಗೆ ಸಾಂತ್ವನ ಒದಗಿಸುವುದು, ವಸ್ತುಸ್ಥಿತಿ ಬದಲಾಯಿಸುವುದೇ?

ಆಕೆ ಬಹಳ ಚಿಕ್ಕ ವಯಸ್ಸಿನಲ್ಲೇ ವಿವಾಹಿತ ಬದುಕಿಗೆ ಕಾಲಿಟ್ಟರು.  ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಪತಿ ತನ್ನಿಂದ ದೂರವೇ ಇಟ್ಟರು.  ಬ್ರಾಹ್ಮಣರಾದ ಕಾರಣ ಪೂಜೆ, ಪುರಸ್ಕಾರಗಳೂ ಅಧಿಕ. ಪ್ರತಿದಿವಸ ಒಂದು ರಾಶಿ ಪಾತ್ರೆ ತೊಳೆಯುವ ಯಂತ್ರದಂತೆ ಆಕೆಯನ್ನು ನೋಡಿಕೊಂಡರು ಎಂದು ಬಹಳಷ್ಟು ಬಾರಿ ತನ್ನ ಸಂಕಷ್ಟಗಳನ್ನು ದೂರವಾಣಿ ಮೂಲಕ ತೋಡಿಕೊಂಡಿದ್ದಳು.  ‘ಪಿರಿಯಡ್ಸ್ ಕಾರಣಕ್ಕೆ ಕೊಟ್ಟಿಗೆಯಲ್ಲಿ ಸಹ ಮಲಗಿದ್ದೆ’ ಎನ್ನುವ ಪುಟ್ಟ ಹುಡುಗಿಗೆ ಬದುಕು ಸಾಕೆನಿಸಿದೆ.  ಆದರೂ ಇರುವ ಒಬ್ಬ ತಂದೆಯನ್ನು ನೋಡಿಕೊಳ್ಳುತ್ತಾ ಸಣ್ಣ ಉದ್ಯೋಗ ಮಾಡಿಕೊಂಡಿದ್ದಾಳೆ.  ‘ಈಗ ಅದೆಷ್ಟೋ ನೆಮ್ಮದಿಯಾಗಿದ್ದೇನೆ’ ಎಂದು ಹೇಳಿದಾಗ ನನಗೂ ಕರುಳ್ ಚುರುಕ್ ಎನ್ನುವುದು. 

ಹೆಣ್ಣು ಮಕ್ಕಳ ಜೀವನದಲ್ಲಿ ವಿವಾಹ ಬಹು ಪ್ರಾಮುಖ್ಯತೆ ಹೊಂದಿದ ಘಟ್ಟ.  ಆದರೆ ಮದುವೆಗೆ ಅಂಥಲೇ, ಹೆಣ್ಣು ತರುವ ಮನೆಮಂದಿಗೆ ಆ ಹೆಣ್ಣು ಮಗಳು ಅಡುಗೆ ಮನೆಗೆ ಸೀಮಿತ ಎನ್ನುವ ಮನೋಭಾವನೆಗಳು ಇರಬಾರದಷ್ಟೇ.

ಹೆಣ್ಣು ಮಕ್ಕಳಿದ್ದರೆ ಮನೆ ಅಚ್ಚುಕಟ್ಟು ಎನ್ನುವ ಮಾತಿನ ಹಿಂದೆ ಮನೆಗೆಸಕ್ಕೆ ಹೆಣ್ಣು ಸೀಮಿತ ಎನುವ ಹೊಣೆಗಾರಿಕೆ ಸಹ ಇಲ್ಲವೆಂದಿಲ್ಲ.

ಡೆಂಟಿಸ್ಟ್ ಆಗಿದ್ದ ರಾಧಿಕಾ ಮದುವೆ ಬಳಿಕ ಮಗನ ಜವಾಬ್ದಾರಿ ನಿಭಾಯಿಸಲು ತನ್ನ ವೃತ್ತಿ ಜೀವನ ಬಿಟ್ಟುಕೊಡಬೇಕಾಯಿತು.  ಪತ್ನಿಯ ಸಾಧನೆ ಕಡೆಗೆ ನಿಕೃಷ್ಠ ಭಾವನೆ ಹೊಂದಿರುವ ಪತಿಯಿಂದಾಗಿ ಮನೆಯಿಂದ ಹೊರಗೆ ಬರುವುದೇ ಸಂಬಂಧಿಕರ ಕಾರ್ಯಕ್ರಮಗಳಿಗೆ ಮಾತ್ರ.  ಹೆಂಡತಿ ದುಡಿಯುವ ಹಣದ ಅಗತ್ಯ ನನಗಿಲ್ಲ ಎನ್ನುವ ಗಂಡನ ಬಿರುನುಡಿಗಳಿಗೆ ಪತ್ನಿ ಇನ್ನೇನು ಮಾಡಬಲ್ಲಳು.

ಹೆಚ್ಚಿನ ಹೆಣ್ಣು ಮಕ್ಕಳು ಮದುವೆಯಾಗುವ ವರೆಗೆ ಮಾಡದ ಸಾಧನೆಗಳಿಲ್ಲ.  ಪಿಜಿ ಪರೀಕ್ಷೆ ಯಲ್ಲಿ ರ್ಯಾಂಕ್, ಕ್ರೀಡೆಗಳಲ್ಲಿ ಚಾಂಪಿಯನ್ಸ್, ಎಲ್ಲದರಲ್ಲೂ ಮುಂದು, ಎಲ್ಲರ ಕಣ್ಮಣಿಯಂತೆ ಬೆಳೆದ ಮಗಳು ಮದುವೆಯ ನಂತರ ಅಡುಗೆ ಮನೆಗೆ ನಿಮಿತ್ತಳಾಗಿ ಹೋದಳೇ?

ಹಾಸನದ ಎವಿಕೆ ಮಹಿಳಾ ಕಾಲೇಜಿನಲ್ಲಿ ಪ್ರಥಮ ಬಿಎ ಇಂಗ್ಲೀಷ್ ಐಚ್ಛಿಕ ತೆಗೆದುಕೊಂಡು ಕಲಿಯುತ್ತಿರುವಾಗ ಗೆಳತಿ ಶಿಲ್ಪಾಳ ಮನೆಗೆ ಆಗಾಗ ಹೊಗುತ್ತಿದ್ದೆ.  ಗೆಳತಿಯ ತಾಯಿ ಎಂಬತ್ತರ ದಶಕದಲ್ಲಿ ಬಿಎಡ್ ಕಲಿತವರು. ಆದರೆ ಮದುವೆಯ ಸಂಬಂಧ ಬಂದಾಗ ಪತ್ನಿಯಾದ ನಂತರ ಯಾವುದೇ ಉದ್ಯೋಗ ಮಾಡಬಾರದು ಎಂಬ ಷರತ್ತು ಒಡ್ಡಲಾಗಿತ್ತು ಎಂದು ನನ್ನ ಬಳಿ ಕೆಲವು ಸಲ ನೆನಪಿಸಿಕೊಳ್ಳುತ್ತಿದ್ದರು.

ಮದುವೆ ಹೆಚ್ಚಿನ ಮಹಿಳೆಯರಿಗೆ ರೆಕ್ಕೆಗಳನ್ನು ಮುರಿದು ಹಾಕುವುದಿದೆ.  ಪತ್ನಿಯ ಆರ್ಥಿಕ ಸ್ವಾವಲಂಬನೆ ಅಗತ್ಯವಿಲ್ಲ ಎನ್ಬುವವರ ಎದುರು ಪತ್ನಿಗೂ ಇರುವ ಸಮಾಜದಲ್ಲಿ ತನ್ನದೇ ವೃತ್ತಿಪರ ಸಾಧನೆ ಮಾಡುವ ವಿಚಾರಗಳು ನೇಪಥ್ಯಕ್ಕೆ ಸರಿಯುತ್ತದೆ.

ಎಲ್ಲವನ್ನೂ ಮೀರಿ ಇತ್ತೀಚೆಗೆ ಗೆಳತಿ ಅಕ್ಷತಾ ನಾಗರಬಾವಿ ಉಳ್ಳಾಲ ಆರ್ ಟಿ ಓ ಬಳಿ  ಬಿರ್ಯಾನಿ ಫ್ಯಾಕ್ಟರಿ ತೆರೆದಿದ್ದಾಳೆ.   ನಕಲಿ ಪದಾರ್ಥಗಳಾದ ಟೇಸ್ಟ್ ಪೌಡರ್ ಮೊದಲಾದವುಗಳನ್ನು ಬಳಸದಂತೆ ರುಚಿಕರವೂ ಸ್ವಾಸ್ಥ್ಯವೂ ಆದ ಅಡುಗೆ ಪ್ರತಿ ದಿನ ಮಾರಾಟ ಮಾಡುತ್ತಾಳೆ.  ಆದರೆ ಆಕೆಗೆ ಸಿಕ್ಕ ಕುಟುಂಬದ ಬೆಂಬಲ ಎಲ್ಲರಿಗೂ ಸಿಗಬೇಕಲ್ಲ.

ಮದುವೆ ಅಂದಾಕ್ಷಣ ಅಲ್ಲಿ ವಧುವಾಗಿ ಬರುವ ಹೆಣ್ಣಿಗೆ ಜವಾಬ್ದಾರಿ ಕುಣಿಕೆ ಹೆಚ್ಚುವರಿಯಾಗಿ ಲಭಿಸುವುದು ಸಹಜ.  ಆದರೆ ಆಕೆಯನ್ನು ನೆಚ್ಚಿಕೊಂಡೇ ಎಲ್ಲರೂ ಆಕೆಯ ಸುತ್ತಾ ಸುತ್ತುತ್ತಾರೆ.  ಆದರೆ ಸಮಾಜ ತೋರಿಸಿಕೊಳ್ಳುವುದು ಹೆಣ್ಣು ಮಕ್ಕಳು ಆರ್ಥಿಕ ಸ್ವಾವಲಂಬನೆ ಸಾಧಿಸಿಲ್ಲ ಅಥವಾ ಹೀಗೆ ಆರ್ಥಿಕ ಸ್ವಾವಲಂಬನೆ ಸಾಧಿಸುವ ಅಗತ್ಯ ಏನಿದೆ ಎಂದು.

ಹಿರಿಯ ವಯೋಮಾನದ ಅತ್ತೆ ಮಾವನ ಊಟೋಪಚಾರ, ಆರೋಗ್ಯ, ಮಾತ್ರೆ, ಔಷಧ, ಗಂಡ- ಮಕ್ಕಳ ಜಬಾದಾರಿ ಆಕೆಯ ಹೆಗಲಿಗೆ ಬೀಳುತ್ತದೆ.  ಮನೆಯವರೇ ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದರೂ ಅದರ ಹೊಣೆ ಆಕೆಯದ್ದೇ.  ಈ ದೊಡ್ಡ ಪ್ರಮಾಣದ ಜಬಾದಾರಿಗಳ ಫಲವೇ ಮನೆಯ ಹೊರಗೆ ದುಡಿಯಲು ಕಳಿಸಲು, ಆಕೆಗೆ ಬೆಂಬಲಿಸಲು ಮನೆಯವರು ಸಿದ್ದರಿಲ್ಲ.  ಆದರೂ ಹೇಳಿಕೊಳ್ಳುವುದು ಮಾತ್ರ ಪತ್ನಿಯ ದುಡಿಮೆ ಅನಗತ್ಯ ಅಂತಲೇ.

ಪತ್ನಿಗೂ ಒಂದು ಮನಸ್ಸಿದೆ.  ಆಕೆಗೂ ಏನೇನೋ ಸಾಧಿಸುವ, ಸಂಭ್ರಮಿಸುವ ಹಕ್ಕಿದೆ ಎನ್ನುವುದು ಪುರುಷಪ್ರಧಾನ ಮನಸ್ಥಿತಿಗಳಿಗೆ ಅಪಥ್ಯವಾದ ವಿಚಾರ.  ಇದೆಲ್ಲದರ ನಡುವೆ ಹೆಣ್ಣಿನ ಅಂತಃಶಕ್ತಿಯಿಂದ ರೆಕ್ಕೆಗಳು ಮೂಡಿ ಅವಳು ಅಡುಗೆ ಮನೆಯಿಂದ ಹಾರುತ್ತಾ ತನ್ನದೇ ಆದ ಸಾಧನೆ, ದುಡಿಮೆ ಮಾಡುತ್ತಾ ಕುಟುಂಬ ಕಟ್ಟುವ ಶಕ್ತಿಯಾಗಿ ನಿಲ್ಲುತ್ತಾಳೆ.

– ನಳಿನಾ ಧರ್ಮರಾಜ್

Related Articles

ಇತ್ತೀಚಿನ ಸುದ್ದಿಗಳು