Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಳ್ಳುಬಳ್ಳಿ: ಜ್ಯುಲಿಯಾನಾ ಪ್ಯಾಸ್ತಾರನಾಳ ದುರಂತ ಬದುಕು-ಸಾವು

ನಳಿನಾ ಚಿಕ್ಕಮಗಳೂರು

ಅದೊಂದು ಕಾಲವಿತ್ತು, ಸ್ವಲ್ಪ ವಿಭಿನ್ನವಾಗಿ ಉದ್ದಗೆ, ಕುಳ್ಳಗೆ, ದಪ್ಪಗೆ, ಚಿತ್ರ ವಿಚಿತ್ರ, ವಿಕಾರ ಹೀಗೆ ಹೇಗೇಗೋ ದೇಹದ ನೂನ್ಯತೆಗಳಿರೋ ಜನರನ್ನು ಕೊಂಡು ಅವರ ಷೋ ನಡೆಸುತ್ತಿದ್ದವರ ಕೂಟವೇ ವಿದೇಶದಲ್ಲಿ ಚಾಲ್ತಿಯಲ್ಲಿತ್ತು.  ಇದೊಂದು ರೀತಿಯಲ್ಲಿ ಮನುಷ್ಯರ ಸರ್ಕಸ್ ಎಂಬಂತೆಯೇ ಇರುತ್ತಿತ್ತು.  ಹೆಚ್ಚು ದುಡ್ಡು ತೆತ್ತು ನೋಡುವ ದುಂದುಗಾರರು, ಸಿರಿವಂತರು ಹೆಚ್ಚಾಗಿ ಈ ಷೋಗಳಿಗೆ ಹೋಗುತ್ತಿದ್ದರು.  ಅಥವಾ ಅಂತಹ ಸಿರಿವಂತರಿಗಾಗಿಯೇ ದಲ್ಲಾಳಿಗಳು‌ ಚಿತ್ರ ವಿಚಿತ್ರ, ವಿಕಾರದ ಜನರನ್ನು ಕರೆತಂದು ಷೋ ತೋರಿಸುತ್ತಿದ್ದರು, ಚಿತ್ರ ವಿಚಿತ್ರ ಜನರನ್ನು ಇಂತಹ ಷೋಗಳಿಗೆ ಹಿಡಿದುಕೊಟ್ಟು, ಹೀಗೆ ಹಣ ಮಾಡುವ ದಲ್ಲಾಳಿಗಳು ಸಹ ಇದ್ದರು.

ಈಕೆ ಬೇರ್ಯಾರೂ ಅಲ್ಲ, ಜ್ಯುಲಿಯಾನಾ ಪ್ಯಾಸ್ತಾರನಾ ಎಂಬ ಹೆಣ್ಣು.  ಆಕೆಯನ್ನು, ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯಳು ಎಂದು ಯಾರೂ ನೋಡಲೇ ಇಲ್ಲ.  ಆಕೆ ಸತ್ತು ೧೫೦ ವರ್ಷವಾದರೂ ಸಹ ಆಕೆಯ ದೇಹ ಕೆಲವರಿಗೆ ಇನ್ನೂ ಮನೋರಂಜನೆಯ ವಸ್ತುವಾಗಿ ಬಳಸಲ್ಪಡುತ್ತದೆ ಎಂದರೆ ಸುತ್ತಲಿನವರು ನಿಜಕ್ಕೂ ಅದೆಂಥ ಶೋಚನೀಯ ವ್ಯಕ್ತಿಗಳಾಗಿದ್ದರು ಎಂಬುದಕ್ಕೆ ಸಾಕ್ಷಿ ಯಾಗಿದೆ.  ಆಕೆಯನ್ನು ಒಂದು ಷೋ ಪೀಸ್ ನಂತೆ ಬಳಸಿಕೊಳ್ಳಲಾಯಿತು.  ಕುರೂಪಿಯಾದ ಆಕೆಯೂ ಮನುಷ್ಯಳೆಂಬ ಕಿಂಚಿತ್ ಕರುಣೆ ತೋರುವವರ್ಯಾರೂ ಅಲ್ಲಿರಲಿಲ್ಲ ಎಂದೇ ಹೇಳಬೇಕು.

೧೮೩೪ರಲ್ಲಿ ಮೆಕ್ಸಿಕೋ ಬುಡಕಟ್ಟು ಜನಾಂಗದ ದಂಪತಿಗಳಿಗೆ ಜನಿಸಿದ ಹೆಣ್ಣು ಮಗು ಬಹು ವಿಭಿನ್ನ ಸ್ವರೂಪದಲ್ಲಿ ಇತ್ತು. 

ಆಕೆಯ ಮೈತುಂಬಾ ಕೂದಲು ಬೆಳೆದುಕೊಂಡಿತ್ತು.  ದೇಹದ ಆಕಾರವೂ ವಿಚಿತ್ರವಾಗಿತ್ತು.  ಹೈಪರ್ ಟ್ರಿಕೋಸಿಸ್ ಲ್ಯಾನಿಗಿನೊಸಾ ಎಂಬ ಕಾಯಿಲೆಗೆ ತುತ್ತಾದ ಶಿಶುವಿಗೆ ಸಾಮಾನ್ಯವಾಗಿ ಈ ರೀತಿಯ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುತ್ತದೆ.  ಇದಲ್ಲದೆ ಜಂಜಿ ರೊಲ್ ಹೈಪರ್‌ಪ್ಲಾಸಿಯ ಎಂಬ ಕಾಯಿಲೆ ಸಹ ಅದೇ ಮಗುವಿಗೆ ಆವರಿಸಿ ಕೊಂಡಿತು.  ಇದರ ಪರಿಣಾಮವಾಗಿ ಆ‌ ಮಗುವಿನ ತುಟಿಗಳು ದಪ್ಪನಾಗಿ ಊದಿಕೊಂಡಿದ್ದವು.  ದವಡೆ, ಹುಬ್ಬು ಹೀಗೆ ಭಿನ್ನವಾಗಿ ಬದಲಾಗಿತ್ತು.  ಹೀಗೆ ಬೆಳೆಯುತ್ತಾ ವಿಚಿತ್ರ ದೇಹ ಚಹರೆ ಉಂಟಾದ ಕಾರಣ ಬೀರ್ ವುಮೆನ್ ಅಥವಾ ಎಪ್ ವುಮೆನ್ ಎಂದೇ ಕರೆಯಲಾಗುತ್ತದೆ.

ಜ್ಯುಲಿಯಾನಾ ಪ್ಯಾಸ್ತಾರನಾಳ 19ನೇ ಶತಮಾನದ ಚಿತ್ರ

ಹುಟ್ಟಿದ ಮಗುವನ್ನು ಪಾಲಕರೇ ಅಡವಿಗೆ ಬಿಟ್ಟರೂ ಸಹ ತಾತಾ ಆ ಮಗುವನ್ನು ಸರ್ಕಸ್ ಕಂಪನಿಗೆ ಮಾರಾಟ ಮಾಡಿದ್ದರು.  ಹೀಗಾಗಿ ಆಕೆಯ ಬಾಲ್ಯ ಅನಾಥಾಲಯದಲ್ಲಿ ನಡೆಯುತ್ತದೆ.  ಮೆಕ್ಸಿಕೋದ ಗವರ್ನರ್ ಆಕೆಯನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುತ್ತಾನೆ.  ಆಕೆ ಆ ಮನೆಯಲ್ಲಿ ಜರ್ಮನ್, ಪ್ರೆಂಚ್, ಆಂಗ್ಲ ಭಾಷೆ ಮೊದಲಾದವುಗಳನ್ನು ಕಲಿತು ಸ್ವತಂತ್ರವಾಗಿ ಭಾಷೆಗಳನ್ನು ಮಾತನಾಡಬಲ್ಲವಳಾಗುತ್ತಾಳೆ.  ಜೊತೆಗೆ ಹಾಡು, ನೃತ್ಯ ಇವೂ ಸಹ ಮೈಗೂಡಿಸಿಕೊಂಡು ಬೆಳೆಯುತ್ತಾಳೆ. 

ಸಾಮಾನ್ಯವಾಗಿ ಹೀಗೆ ಯಾರನ್ನೂ ಕಾಣದವರು ಜೂಲಿಯಾಳನ್ನು ಕಂಡರೆ ಸಾಕು ತಮಾಶೆ ಮಾಡಿ ನಗುತ್ತಿದ್ದರು.  ಏಕೆಂದರೆ ಆಕೆ ಭಿನ್ನವಾದ ದೇಹ ಚಹರೆ ಹೊಂದಿದ್ದಳು.

ತನ್ನನ್ನು ಹೊರಹಾಕಿದ್ದ ಬುಡಕಟ್ಟು ಜನಾಂಗದ ಬಳಿಗೆ ಹೋಗಲಾರದೆ ಹೊರಜಗತ್ತಿನ ತಮಾಶೆಗೂ ಬೀಳಲಾರದೆ ಏಗುತ್ತಿದ್ದ ಜೂಲಿಯಾಳಿಗೆ ಅಮೇರಿಕಾದ ಸರ್ಕಸ್ ಕಂಪೆನಿಗಳಿಂದ ಬುಲಾವಾ ಬರುತ್ತದೆ.

ಅಲ್ಲಿ ಸಹ ಆಕೆ ಗೇಲಿಗೆ ಒಳಗಾಗುತ್ತಾರೆ.   ಸರ್ಕಸ್ ನವರು ಆಕೆಯನ್ನು ಓರ್ವ ಏಪ್ ವುಮೆನ್ ಎಂದೇ ಜನರಿಗೆ ಪರಿಚಯಿಸಿದರು.  ಜನರಿಗೆ ಆಕೆ ತಮಾಶೆ ಎನಿಸಿದ ಕಾರಣ ಭಾರಿ ಜನರು ಸೇರುತ್ತಿದ್ದರು.  ಸರ್ಕಸ್ ಕಂಪೆನಿಗಳು ಆಕೆಯನ್ನು ಪ್ರಾಣಿಯನ್ನು ಕೂಡಿ ಹಾಕುವ ಹಾಗೆ ಬೋನಿನಲ್ಲಿ ಇಟ್ಟು ಜನರಿಗೆ ಪ್ರದರ್ಶನ ಮಾಡುತಿತ್ತು. 

ಥಿಯಾಡರ್ ಲೆಂಟ್ ಎಂಬಾತ ಆಕೆಯನ್ನು ದುಡ್ಡಿಗೆ ಸರ್ಕಸ್ ಗೆ ಕರೆತಂದರೂ ಆಕೆಯನ್ನು ಮದುವೆಯಾಗುವುದಾಗಿ ಘೋಷಿಸುತ್ತಾನೆ.  ಅದೂ ಸಹ ಹಣಕ್ಕಾಗಿಯೇ ಎಂಬುದು ಕಹಿಸತ್ಯ.  ತನ್ನ ಕುರೂಪಿತನದಿಂದಾಗಿ ಪ್ರಸಿದ್ಧಳಾದ ಆಕೆಯನ್ನು ನೋಡಲು ತಂಡೋಪತಂಡವಾಗಿ ಬಂದು ಹಣ ನೀಡುತ್ತಿದ್ದ ಕಾರಣ ಆಕೆ ಓರ್ವ ಸೆಲೆಬ್ರಿಟಿಯೇ ಆಗಿದ್ದಳು.  ಮದುವೆಯ ನಂತರ ಆಕೆ ಚೊಚ್ಚಲ ಹೆರಿಗೆಯ ಕೆಲವೇ ಗಂಟೆಗಳಲ್ಲೇ ಸಾವನ್ನಪ್ಪುತ್ತಾಳೆ.  ಆಕೆಯನ್ನೇ ಹೋಲುತ್ತಿದ್ದ ಆ ಮಗು ಸಹ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ ಘಟನೆ ನಡೆಯುತ್ತದೆ.

ಆಕೆಯ ಪತಿ ಜೂಲಿಯಾಳ ಶವವನ್ನು ಮೆಕ್ಸಿಕೋದ ಒಂದು ಮೆಡಿಕಲ್ ಕಾಲೇಜ್ ಪ್ರೊಫೆಸರ್ ಒಬ್ಬರಿಗೆ ಒಪ್ಪಿಸುತ್ತಾನೆ.  ಆತ ಆಕೆಯ ಶವಸಂಸ್ಕಾರ ಸಹ ಮಾಡುವ ಉತ್ತಮ ಮನಸ್ಥಿತಿಯವನಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಕ್ರೂರಿ ಪತಿಯು ಆಕೆಯ ಶವವನ್ನು ಮಮ್ಮಿಯ ರೀತಿ ಸಂಗ್ರಹಿಸುವ ಹುನ್ನಾರ ಹೊಂದಿರುತ್ತಾನೆ.  ಆಕೆಯ ದೇಹಕ್ಕೆ ಮಮ್ಮಿಯ ಕ್ರಮಗಳನ್ನು ಪ್ರೊಪೇಸರ್ ಸಹಾಯದಿಂದ ನಡೆಸಿ ಆಕೆ ಮತ್ತು ಆಕೆಯ ಮಗುವನ್ನು ಅಲಂಕರಿಸಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಿ ಲಂಡನ್ ಗೆ ಸಾಗಿಸುತ್ತಾನೆ.  ಅಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗುತ್ತದೆ.  ಕಡೆಗೊಮ್ಮೆ ಆತನೂ ಸತ್ತಾಗ ಆತನ ಪತ್ನಿ ಮೇರಿ ಈ ಶವಗಳನ್ನು ನಾರ್ವೆಯ ಅಮ್ಯೂಸ್ಮೆಂಟ್ ಪಾರ್ಕ್ ಗೆ ಕೊಟ್ಟುಬಿಟ್ಟಿರುತ್ತಾಳೆ.  ಹೌಸ್ ಆಪ್ ಹಾರರ್ ಚೇಂಬರ್ ನಲ್ಲಿ ತಾಯಿ ಮಗುವಿನ ಶವ ಇಡಲಾಗಿರುತ್ತದೆ.  ಇಲ್ಲಿಗೆ ಬಂದವರಿಗೆ ಈ ಹೆಣಗಳನ್ನು ಸಹ ಪ್ರದರ್ಶಿಸಿ ಹಾರರ್ ದೃಶ್ಯಗಳನ್ನು ತೋರಿಸಲಾಗುತ್ತದೆ.

ಜೂಲಿಯಾ ಪಾಸ್ತ್ರಾನಳ ಕೆತ್ತನೆ ಚಿತ್ರ. ಕ್ರೆಡಿಟ್… ದಿ ಬ್ರಿಡ್ಜ್‌ಮ್ಯಾನ್ ಆರ್ಟ್ ಲೈಬ್ರರಿ

ಇಷ್ಟೇ ಅಲ್ಲ ಜರ್ಮನಿ, ಸ್ವೀಡನ್ ದೇಶಗಳಿಗೂ, ಯುರೋಪಿಯನ್ ದೇಶಗಳಲ್ಲಿಯೂ ಜನರ ಮನರಂಜನೆಗೆ ಈ ಶವಗಳು ಬಳಕೆಯಾಗುತ್ತದೆ.  ೧೯೭೩ರಲ್ಲಿ ಹೆಣಗಳನ್ನು ಮನೋರಂಜನೆಗೆ ಬಳಸಬಾರದೆಂಬ ಕಾನೂನು ಚಾಲ್ತಿಗೆ ಬರುತ್ತದೆ.  ಸರ್ಕಾರ ಇಂಥಾ ಮನೋರಂಜನೆಗೆ ಛೀಮಾರಿ ಹಾಕಿ ನಿಲ್ಲಿಸುತ್ತದೆ.

ಮುಂದೆ ಯುಗೊಸ್ಲಾವಿಯ ದೇಶದ ಒಂದು ಕೋಣೆ ಸೇರಿದ ಈ ಶವಗಳು ಇದ್ದಕ್ಕಿದ್ದಂತೆ ೧೯೮೪ರಲ್ಲಿ ಮಾಯವಾಗುತ್ತದೆ.  ೧೯೯೦ರಲ್ಲಿ ಈ ಶವಗಳು ಪತ್ತೆಯಾಗುತ್ತದೆ. ಲಾರಾ ಅಂಡರ್ಸನ್ ಬಾರ್ಬಟಾ ಎಂಬ ಸಂಶೋದಕಿ ಅನಾಥವಾಗಿದ್ದ ಈ ಶವದ ಸಂರಕ್ಷಣೆಗೆ ಮುಂದಾಗುತ್ತಾಳೆ.  ಜೂಲಿಯಾಳ ಚಿಂತನಾಜನಕ ಜೀವನ ಅರಿತ ಲಾರಾ, ಜೂಲಿಯಾಳ ಮುಕ್ತಿಗಾಗಿ ಹೋರಾಟ ನಡೆಸುತ್ತಾಳೆ.  ಆಕೆಯು ನ್ಯಾಷನಲ್ ಹ್ಯುಮನ್ ರೈಟ್ಸ್ ಸಂಸ್ಥೆ ಸಹಾಯದಿಂದ ಜೂಲಿಯಾಳ ಹುಟ್ಟೂರಿನಲ್ಲೇ ಕೊನೆಗೂ ಅಂತ್ಯಸಂಸ್ಕಾರ ನೆರವೇರಿಸಲಾಯಿತು.  ೨೦೧೩ರಲ್ಲಿ ಮೆಕ್ಸಿಕೋದ ಸರ್ಕಾರ ಇದಕ್ಕಾಗಿ ಅನುಮತಿ ನೀಡುತ್ತದೆ.

ಲಾರಾ ಜೂಲಿಯಾ ಊರಿನಲ್ಲೇ ಸಾರ್ವಜನಿಕವಾಗಿ ವಿಧಿಬದ್ಧವಾಗಿ ಗೌರವ ಸಮ್ಮಾನದಿಂದ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಜೂಲಿಯಾಳ ಮತ್ತು ಅವಳ ಮಗುವಿನ ಆತ್ಮಕ್ಕೆ ಶಾಂತಿ ಕೋರುತ್ತಾಳೆ.  ಇದಕ್ಕೆ ಸಂದಿದ್ದು ಒಂದೂವರೆ ಶತಮಾನ. 

ಇಷ್ಟವಿಲ್ಲದಿದ್ದರೂ ಮನೋರಂಜನಾ ಬೊಂಬೆಯಂತೆ ಬಳಕೆಯಾದ ಜೂಲಿಯಾ ಆತ್ಮ ಅದೆಷ್ಟು ನೋವು ಹಿಂಸೆ ಗಳನ್ನು ಸಾರ್ಜನಿಕರಿಂದ ಪಡೆದಿತ್ತೋ ಗೊತ್ತಿಲ್ಲ.  ಕಡೆಗೂ ಆಕೆಯ ಮತ್ತು ಆಕೆಯ ಮಗುವಿನ ದೇಹಕ್ಕೊಂದು ಮುಕ್ತಿ ಲಭಿಸಿತು.

Related Articles

ಇತ್ತೀಚಿನ ಸುದ್ದಿಗಳು